ಹಿಮ್ಮಡಿ ಒಡಕು ಎಂಬುದು ನೋಡಲು ಅತೀ ಸಣ್ಣ ಸಮಸ್ಯೆ. ಆದರೆ ಅದರ ಹಿಂಸೆ ಅನುಭವಿಸುವವರಿಗೇ ಗೊತ್ತು. ಹಿಮ್ಮಡಿ ಒಡಕಿಗೆ ಕಾರಣಗಳು ಬಹಳ. ಬರಿಗಾಲಿನಲ್ಲಿ ಧೂಳಿರುವ ಜಾಗದಲ್ಲಿ ನಡೆಯುವುದು, ಸ್ವಲ್ಪವೂ ಕೊಬ್ಬಿಲ್ಲದ ಆಹಾರ ಸೇವನೆ, ತಂಬಾಕು ಜಗಿಯುವುದು, ಚಹಾ-ಕಾಫಿಗಳ ಅತಿಯಾದ ಸೇವನೆ, ರಾತ್ರಿ ನಿದ್ದೆಗೆಡುವುದು, ಅತಿಯಾದ ಹವಾನಿಯಂತ್ರಕದ ಬಳಕೆ, ಪಾದದ ಸ್ವಚ್ಛತೆ ಮಾಡಿಕೊಳ್ಳದಿರುವುದು ಇತ್ಯಾದಿ. ಹಿಮ್ಮಡಿ ಒಡಕಿಗೆ ಎಷ್ಟೋ ಬಾರಿ ಧೂಳು ಕಾರಣವಾಗಿರುತ್ತದೆ. ಮನೆಯಲ್ಲಿ ಆದಷ್ಟು ಧೂಳು ಇಲ್ಲದಂತೆ ನೋಡಿಕೊಳ್ಳಬೇಕು.
ದೇಹದಲ್ಲಿ ವಾತದೋಷ ಹೆಚ್ಚಾದಾಗ ಕಾಲು ಒಡೆಯುವ ಸಂಭವವಿರುತ್ತದೆ. ಹಾಗಾಗಿ ವಾತ ಶಮನವಾಗಲು ಜಿಡ್ಡಿರುವ ಪದಾರ್ಥಗಳನ್ನು ಸೇವಿಸಬೇಕು. ತುಪ್ಪ, ಶುದ್ಧವಾದ ಎಣ್ಣೆ (ಕೊಬ್ಬರಿ, ಶೇಂಗಾ, ಎಳ್ಳೆಣ್ಣೆ ಇತ್ಯಾದಿ), ನಟ್ಸ್ ಹೆಚ್ಚು ಸಹಕಾರಿ. ಆದರೆ ಕರಿದ ಪದಾರ್ಥಗಳು, ಅತಿಯಾಗಿ ಖಾರ ಇರುವ ಪದಾರ್ಥಗಳು ಬೇಡ. ಚಳಿಗಾಲದಲ್ಲಿ ಕಾಲೊಡಕು ಜಾಸ್ತಿ. ಚಳಿಗಾಲವು ಕೊಬ್ಬು ಹೆಚ್ಚಿರುವ ಆಹಾರ ಸೇವನೆಗೆ ಸರಿಯಾದ ಸಮಯ. ಆದರೆ ಒಳ್ಳೆಯ ಕೊಬ್ಬನ್ನು ಮಾತ್ರ ತೆಗೆದುಕೊಳ್ಳಬೇಕು. ಆಹಾರದಲ್ಲಿ ಆದಷ್ಟು ಬೂದುಗುಂಬಳ, ತೆಂಗಿನಕಾಯಿ, ತೆಂಗಿನಕಾಯಿ ಹಾಲು, ಮನೆಯಲ್ಲೇ ತಯಾರಿಸಿದ ಬೆಣ್ಣೆ, ಸಪೋಟ (ಚಿಕ್ಕು), ಎಳನೀರು ಹೆಚ್ಚು ಸೇವಿಸುವುದು ಉತ್ತಮ. ಹೆಚ್ಚು ನೀರಿನ ಸೇವನೆ ಕೂಡ ಸಹಕಾರಿ. ಇಷ್ಟೇ ಅಲ್ಲದೆ ಮೇಲೆ ಹೇಳಿದ ಕಾಲು ಒಡಕಿನ ಮೂಲ ಕಾರಣಗಳನ್ನು ಚಿಕಿತ್ಸೆ ಪ್ರಾರಂಭಿಸಿದ ಮೊದಲ ದಿನವೇ ತ್ಯಜಿಸಬೇಕು. ಖಾರ, ಕಹಿ, ಒಗರಿರುವ ಆಹಾರಗಳನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬೇಕು.
ನಿತ್ಯವೂ ಹಾಲಿಗೆ 1/2 ಚಮಚ (3 ಗ್ರಾಂ), ಜ್ಯೇಷ್ಠಮಧು, 1/2 ಚಮಚ ಸೋಗದೆಬೇರು ಮತ್ತು ಸ್ವಲ್ಪ ತುಪ್ಪ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಬೆಲ್ಲ ಹಾಕಿ ಮಾಡಿದ ಮತ್ತು ಡ್ರೈ ಫ್ರುಟ್ಸ್ ಹಾಕಿದ ಬೂದುಗುಂಬಳಕಾಯಿಯ ಹಲ್ವಾ ತಿನ್ನಬಹುದು. ನಿತ್ಯವೂ ಶುದ್ಧ ವರ್ಜಿನ್ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಆಯಿಲ್ ಪುಲ್ಲಿಂಗ್ ಮಾಡುವುದು ಪ್ರಯೋಜಕ. ಕಾಲೊಡೆದ ಜಾಗದಲ್ಲಿ ಚೆನ್ನಾಗಿ ಎಣ್ಣೆಯ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಬಿಸಿನೀರಿನ ಬಕೆಟ್ನಲ್ಲಿ ಸ್ವಲ್ಪ ಹೊತ್ತು ಕಾಲನ್ನು ಅದ್ದಿಟ್ಟುಕೊಳ್ಳಬೇಕು. ಉರಿಯಿದ್ದರೆ ಎಣ್ಣೆಯ ಬದಲಿಗೆ ತುಪ್ಪವನ್ನು ಬಳಸಬಹುದು. ಕಾಲೊಡೆದು ರಕ್ತ ಬರುತ್ತಿದ್ದರೆ ಬೇವಿನ ಎಣ್ಣೆ ಮತ್ತು ಎಳ್ಳೆಣ್ಣೆಯ ಮಿಶ್ರಣಕ್ಕೆ ಸ್ವಲ್ಪ ಅರಿಶಿಣ ಹಾಕಿ ಮಸಾಜ್ ಮಾಡಬೇಕು. ನಂತರ ಜಾಜಿ ಮಲ್ಲಿಗೆ ಎಲೆಯ ಪೇಸ್ಟ್ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು, ಆಲ, ಅತ್ತಿ, ಅಶ್ವತ್ಥ ಮರಗಳ ತೊಗಟೆಯ (ಎಲ್ಲವೂ ಸಿಗದಿದ್ದರೆ ಯಾವುದಾದರೂ ಒಂದರ) ಕಷಾಯದಲ್ಲಿ ಕನಿಷ್ಠ 10 ನಿಮಿಷ ಕಾಲನ್ನು ಅದ್ದಿಟ್ಟುಕೊಳ್ಳಬೇಕು. ನಿತ್ಯ ಪಾದಕ್ಕೆ ಎಣ್ಣೆಯ ಮಸಾಜ್ ಮಾಡುವವರಿಗೆ ಕಾಲಿನ ಒಡಕು ಬರುವುದಿಲ್ಲ ಎಂದು ಆಯುರ್ವೆದದಲ್ಲಿ ಹೇಳಿದ್ದಾರೆ.
ನೂರು ಮಿಲಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, 20 ಗ್ರಾಂ ಜೇನುಮೇಣ ಹಾಕಿ ಕರಗಿಸಬೇಕು. ಹಿಮ್ಮಡಿಯನ್ನು ಚೆನ್ನಾಗಿ ತೊಳೆದು, ಒರೆಸಿ, ಒಣಗಿಸಿ ಹಚ್ಚಬೇಕು. ಹಿಮ್ಮಡಿ ಒಡಕು ಗಂಭೀರವಲ್ಲದ ಸಮಸ್ಯೆಯಲ್ಲವಾದರೂ ದಿನನಿತ್ಯದ ಜೀವನಕ್ಕೆ ತೊಂದರೆ ಕೊಡುವುದರಿಂದ ಮತ್ತು ಸೌಂದರ್ಯಕ್ಕೆ ಕುಂದುಂಟುಮಾಡುವುದರಿಂದ ಇದರ ಬಗ್ಗೆ ಪ್ರಾರಂಭದಲ್ಲಿಯೇ ಕಾಳಜಿ ತೆಗೆದುಕೊಳ್ಳುವುದು ಉತ್ತಮ.
ಡಾ . ವೆಂಕಟ್ರಮಣ ಹೆಗಡೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ