ಯಕಶ್ಚಿತ್ ಒಣಕೆಮ್ಮು ಎನಿಸುವ ಈ ಸಮಸ್ಯೆ ಎಷ್ಟೋ ಬಾರಿ ತಿಂಗಳುಗಳ ಕಾಲ ಕಾಡುತ್ತದೆ. ಒಣಕೆಮ್ಮು ಎಂದರೆ ಅದರಲ್ಲಿ ಕಫ ಬರುವುದಿಲ್ಲ. ಅಲರ್ಜಿಗಳಿಂದ ಅಸಿಡಿಟಿಯವರೆಗೆ ಹಲವಾರು ಕಾರಣಗಳು ಒಣಕೆಮ್ಮನ್ನು ಉಂಟುಮಾಡಬಲ್ಲವು. ಕೆಲವು ಬಾರಿ ನಿಜವಾದ ಕಾರಣ ಗೊತ್ತೇ ಆಗದು. ಕಾರಣ ಏನೇ ಇರಲಿ, ಕಫದ ಕೆಮ್ಮಿಗೆ ಹೊಲಿಸಿದರೆ ಒಣಕೆಮ್ಮು ವಿಶೇಷವಾಗಿ ರಾತ್ರಿ ಬಹುವಾಗಿ ಕಾಡುತ್ತದೆ. ಉಳಿದವರ ನಿದ್ರೆಗೂ ತೊಂದರೆ ಕೊಟ್ಟು ನಮ್ಮನ್ನು ಮುಜುಗರಕ್ಕೀಡುಮಾಡುತ್ತದೆ.ಇದಕ್ಕೆ ಸಾಮಾನ್ಯ ಕಾರಣಗಳೆಂದರೆ ಅಸ್ತಮಾ, ಅಸಿಡಿಟಿ, ಅಲರ್ಜಿ, ವೈರಸ್ ಸೋಂಕು ಇತ್ಯಾದಿ. ಇವಿಷ್ಟೇ ಅಲ್ಲದೆ ಇತರ ಕಾರಣಗಳೂ ಇರಬಹುದು. ಉದಾ: ನಮ್ಮ ಶ್ವಾಸನಾಳಕ್ಕೆ ಕಿರಿಕಿರಿ ಉಂಟುಮಾಡುವ ಧೂಳು, ಹೊಗೆ, ರಾಸಾಯನಿಕ ಘಟಕಗಳು ಇತ್ಯಾದಿ. ಕೆಲವು ಔಷಧಗಳು, ನಾಯಿಕೆಮ್ಮು, ಶ್ವಾಸಕೋಶದ ಶೈಥಿಲ್ಯ, ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ ಮುಂತಾದವು.
ಒಣಕೆಮ್ಮಿರುವಾಗ ಶ್ವಾಸನಾಳ ಮತ್ತು ಗಂಟಲನ್ನು ಸುತನಿಂಗ್ ಮಾಡುವುದರಿಂದ ಹಿತವೆನಿಸುತ್ತದೆ. ಅದಕ್ಕೆ ಜ್ಯೇಷ್ಠಮಧು ಅತ್ಯುತ್ತಮ ಆಯ್ಕೆ. ಜ್ಯೇಷ್ಠಮಧುವಿನ ಚೂರನ್ನು ಬಾಯಲ್ಲಿ ಹಾಕಿ ಚೀಪುತ್ತಿದ್ದರೆ ಒಣಕೆಮ್ಮು ಹತೋಟಿಗೆ ಬರುತ್ತದೆ. ಸ್ವಲ್ಪವೂ ಕಫವಿಲ್ಲದೆ ಕೇವಲ ಒಣಕೆಮ್ಮಿದ್ದರೆ ಬಿಸಿಹಾಲಿಗೆ ಅರಿಶಿಣ, ಜ್ಯೇಷ್ಠಮಧು ಮತ್ತು ಸ್ವಲ್ಪ ಶುಂಠಿ ಹಾಕಿ ದಿನಕ್ಕೊಮ್ಮೆ ಕುಡಿಯಬೇಕು. ಒಣಕೆಮ್ಮು ತುಂಬ ಸಲ ಬಂದು ಕೊನೆಯಲ್ಲಿ ಸ್ವಲ್ಪ ಕಫ ಬಂದ ನಂತರ ಕೆಮ್ಮು ನಿಲ್ಲುತ್ತಿದ್ದರೆ ಆಡು ಮುಟ್ಟದ ಸೊಪ್ಪಿನ ಲೇಹ್ಯವನ್ನು ಸೇವಿಸಿದರೆ ಬಹುಬೇಗ ಗುಣವಾಗುತ್ತದೆ. ಈ ಸೊಪ್ಪನ್ನು ತಂದು ತೊಳೆದು ಉಗಿಯಲ್ಲಿ ಬಿಸಿ ಮಾಡಿದಾಗ ಮೃದುವಾಗುತ್ತದೆ. ಆಗ ಹಿಂಡಿದರೆ ಅದರ ರಸ ಸಿಗುತ್ತದೆ. ಆ ರಸಕ್ಕೆ ಅದರ ಅರ್ಧದಷ್ಟು ಸಾವಯವ ಬೆಲ್ಲ/ಜೋನಿ ಬೆಲ್ಲ ಹಾಕಿ ಪಾಕ ಬರುವವರೆಗೆ ಬಿಸಿ ಮಾಡಬೇಕು. ಪಾಕ ಬರುತ್ತಿದ್ದಂತೆ ಬೆಲ್ಲದ ಕಾಲು ಭಾಗ ತುಪ್ಪ ಮತ್ತು ಹಿಪ್ಪಲಿ ಪುಡಿ ಹಾಕಿ ಕಲಸಿ ಬೆಂಕಿಯಿಂದ ಇಳಿಸಬೇಕು. ಇದು ತಣಿದ ನಂತರ ಬೆಲ್ಲದಷ್ಟೇ ಜೇನುತುಪ್ಪ ಹಾಕಿ ಅಗಲಬಾಯಿಯ ಗಾಜಿನ ಪಾತ್ರೆಯಲ್ಲಿ ಶೇಖರಿಸಿಟ್ಟು ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ ಒಂದೊಂದು ಚಮಚದಷ್ಟು ಸೇವಿಸಿ ಬಿಸಿನೀರು ಕುಡಿಯಬೇಕು. ಅದು ಕೆಮ್ಮಿನ ಮೂಲಕ್ಕೇ ಚಿಕಿತ್ಸೆ ನೀಡಿದಂತಾಗುತ್ತದೆ. ಇದು ಕಫ ಬರುವ ಕೆಮ್ಮಿಗೂ ಇದು ದಿವ್ಯೌಷಧ. ರಾತ್ರಿ ಮಲಗಿದಾಗ ತುಂಬ ಕೆಮ್ಮು ಬರುತ್ತಿದ್ದರೆ, ನೆಲ್ಲಿಕಾಯಿ, ಜ್ಯೇಷ್ಠಮಧು ಮತ್ತು ಹಿಪ್ಪಲಿಗಳ ಪುಡಿಗಳನ್ನು ಬಾಯಲ್ಲಿಟ್ಟು ಚೀಪುತ್ತ ಮಲಗುವುದು ಉತ್ತಮ. ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಸೇವಿಸಬೇಕು. ಹಗಲು ನಿದ್ರಿಸಬಾರದು. ಕೆಲವೊಮ್ಮೆ ಕಫಯುಕ್ತ ಮತ್ತು ಕೆಲವೊಮ್ಮೆ ಒಣಕೆಮ್ಮು ಬರುತ್ತಿದ್ದರೆ ಹಿಪ್ಪಲಿ, ಕಾಳುಮೆಣಸು, ಶುಂಠಿಗಳ ಸಮ ಪ್ರಮಾಣದ ಮಿಶ್ರಣದ ಸೇವನೆಯಿಂದ ಪರಿಹರಿಸಿಕೊಳ್ಳಬಹುದು. ಇವುಗಳ ಅರ್ಧ ಚಮಚ ಮಿಶ್ರಣಕ್ಕೆ ಅರ್ಧರ್ಧ ಚಮಚ ಜೇನುತುಪ್ಪ ಮತ್ತು ಜೋನಿ ಬೆಲ್ಲ ಸೇರಿಸಿ ಬೆಳಗ್ಗೆ-ರಾತ್ರಿ ಆಹಾರದ ನಂತರ ನಿಯತವಾಗಿ ಸೇವಿಸಿದರೆ ಉತ್ತಮ ಪರಿಣಾಮ ಸಿಗುತ್ತದೆ. ಹೈಪರ್ ಅಸಿಡಿಟಿ ಇದ್ದು ಇದ್ದರೆ ಈ ಮನೆಮದ್ದಿನ ಬಳಕೆ ಬೇಡ.
ಉಜ್ಜಾಯಿ ಪ್ರಾಣಾಯಾಮ ಒಣಕೆಮ್ಮಿನ ತಡೆಗೆ ರಾಮಬಾಣ. ಇವುಗಳ ಜತೆ ಕೆಲವು ಪ್ರಕೃತಿ ಚಿಕಿತ್ಸೆಗಳು ಮತ್ತು ಪಂಚಕರ್ಮ ಚಿಕಿತ್ಸೆಗಳನ್ನು ಬಳಸಿಕೊಂಡರೆ ದೀರ್ಘಕಾಲೀನ ಮತ್ತು ಆಳವಾಗಿ ಬೇರೂರಿರುವ ಒಣಕೆಮ್ಮನ್ನು ಪರಿಹರಿಸಿಕೊಳ್ಳಬಹುದು.
ವಿಜಯವಾಣಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ