ಹಣ್ಣುಗಳು ನಿಸರ್ಗದ ಅಪೂರ್ವ ಕೊಡುಗೆ. ನಿಸರ್ಗ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದರ ಉಪಯೋಗವನ್ನು ನಾವು ತಿಳಿದಿರಬೇಕು ಅಷ್ಟೆ. ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಮನುಷ್ಯ ಪ್ರಕೃತಿ ಮಾತೆಯ ಮಗು. ನಿಸರ್ಗವಿಲ್ಲದೆ ಬದುಕಿಲ್ಲ. ಉಡುಗೆ, ನಿವೇಶನ, ಆಹಾರಗಳಿಗೆ ನಾವು ಪ್ರಕೃತಿಯನ್ನೇ ಅವಲಂಬಿಸಿದ್ದೇವೆ. ಬಾಯಿಗೆ ರುಚಿ, ಹೊಟ್ಟೆಗೆ ತಂಪೆನಿಸುವ ಈ ಹಣ್ಣುಗಳಲ್ಲಿ ಔಷಧೀಯ ಸತ್ವವೇ ಅಡಗಿದೆ. ಮಿತಿಯರಿತು ದಿನವೂ ಬಳಸಿದರೆ ಇವು ಕಾಯಿಲೆಯನ್ನು ಗುಣಪಡಿಸಬಲ್ಲವು.
ಪಪ್ಪಾಯಿ ಒಂದು ವಿಶಿಷ್ಟ ಹಣ್ಣು. ಇದರ ವೈಜ್ಞಾನಿಕ ಹೆಸರು carica papaya. ಮಲಯಾಳದಲ್ಲಿ ಪಪ್ಪಾಯಂ, ಕಪ್ಪಾಳಂ ಎಂದೂ ಕರೆಯಲ್ಪಡುತ್ತದೆ. ಈ ಗಿಡವು 6-7 ಅಡಿ ಎತ್ತರವಿದ್ದು ಯಾವುದೇ ರೆಂಬೆಗಳನ್ನು ಹೊಂದಿರುವುದಿಲ್ಲ. ಕಾಯಿಯು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಹೆಣ್ಣು ಮತ್ತು ಗಂಡು ಹೂಗಳು ಒಂದೇ ಗಿಡದಲ್ಲಿ ಅಥವಾ ಬೇರೆ ಬೇರೆ ಗಿಡಗಳಲ್ಲಿ ಕಂಡುಬರುತ್ತದೆ. ಹಣ್ಣಿನ ತಿರುಳು ಹಳದಿ ಅಥವಾ ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತದೆ. ಪಪ್ಪಾಯಿ ಹಣ್ಣು ಜೀರ್ಣಕಾರಿಯಾಗಿದ್ದು ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್ "ಎ' ಅಧಿಕವಾಗಿರುವುದರಿಂದ ಪಪ್ಪಾಯಿ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಸಹಕಾರಿ.
ಮಲಬದ್ಧತೆಯಿಂದ ಬಳಲುವವರು ಪ್ರತಿದಿನ ಊಟದ ನಂತರ ಪಪ್ಪಾಯಿ ಸೇವನೆ ಮಾಡಬೇಕು. ಪಪ್ಪಾಯಿ ಕಾಯಿಯಿಂದ ಪಲ್ಯ, ಸಾಂಬಾರು, ತೆಂಗಿನ ಕಾಯಿಯೊಂದಿಗೆ ಮಜ್ಜಿಗೆ ಹುಳಿಯನ್ನೂ ತಯಾರಿಸಬಹುದು.
ಪಪ್ಪಾಯಿಯಲ್ಲಿ ಪ್ರೋಟೀನು, ಕೊಬ್ಬು, ಸಸಾರಜನಕ, "ಸಿ' ಅನ್ನಾಂಗ, "ಎ' ಜೀವಸತ್ವ, ಫಾಸ್ಪರಸ್, ಕಬ್ಬಿಣ ಕಾಬೋì ಹೈಡ್ರೇಟ್, ನಿಯಾಸಿನ್ ಖನಿಜಾಂಶಗಳು ಹೇರಳವಾಗಿವೆ. ತಂಪಾದ ಈ ಹಣ್ಣು ತಿಂದೊಡನೆ
ದೇಹದಲ್ಲಿ ಹೊಸ ಲವಲವಿಕೆ ಮೂಡುತ್ತದೆ. ಕರುಳು ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ಯಾವುದೇ ತೊಂದರೆಯನ್ನು ಇದು ನಿವಾರಿಸಬಲ್ಲುದು. ಗ್ಯಾಸ್ಟ್ರಿಟಿಸ್ ಸಮಸ್ಯೆಗಿದು ಸಿದೌœಷಧ. ಪಪ್ಪಾಯಿಯು ಅದ್ಭುತವಾದ ಬೊಜ್ಜು ನಿವಾರಕ! ನಮ್ಮ ದೇಹದ ಬೆಳವಣಿಗೆಗೆ ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣಾಂಶ ಹಾಗೂ ಇತರ ಹಲವು ಬಗೆಯ ಅನ್ನಾಂಗಗಳ ಆವಶ್ಯಕತೆ ಇದೆ.
* ಪಪ್ಪಾಯಿ ಹಣ್ಣನ್ನು ರುಬ್ಬಿ. ಆ ಪೇಸ್ಟನ್ನು ಮುಖಕ್ಕೆ ಲೇಪಿಸಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ, ಮುಖಕ್ಕೆ ಹೊಳಪು ಬರುತ್ತದೆ.
* ಪಪ್ಪಾಯ ತಿರುಳನ್ನು ಜೇನಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ 15 ನಿಮಿಷದ ನಂತರ ಮುಖ ತೊಳೆದರೆ ಒರಟಾದ ಚರ್ಮ ಮದುವಾಗುತ್ತದೆ.
* ಮೊಸರು ಮತ್ತು ಪಪ್ಪಾಯ ಮಿಕ್ಸ್ ಮಾಡಿದ ಪೇಸ್ಟನ್ನು ಹೇರ್ ಪ್ಯಾಕ್ ಮಾಡಿ. ಅರ್ಧ ಗಂಟೆ ಬಳಿಕ ಕಡಲೆ ಹಿಟ್ಟು ಉಪಯೋಗಿಸಿ ತೊಳೆಯಿರಿ. ಹೊಟ್ಟು ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.
* ಕಪ್ಪು ಚಹಾವನ್ನು ಸೋಸಿ, ಆರಿಸಿ. ಅದರಲ್ಲಿ ಪಪ್ಪಾಯ ಪೇಸ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಲೇಪಿಸಿ, ನಿಧಾನವಾಗಿ ಮಸಾಜ್ ಮಾಡಿದಲ್ಲಿ, ಮುಖದ ಜಿಡ್ಡು ನಿವಾರಣೆಯಾಗುವುದು.
* ಆಗಾಗ್ಗೆ ಪಪ್ಪಾಯಿ ಸಿಪ್ಪೆಯಿಂದ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿದರೆ ಮುಖದ ಕಲೆಗಳು ನಿವಾರಣೆಯಾಗುವುದು.
* ಪಪ್ಪಾಯಿರಸಕ್ಕೆ ನಿಂಬೆ ರಸ ಹಾಗೂ ಜೇನು ಬೆರೆಸಿ ಲೇಪಿಸಿದರೆ ಮೊಡವೆಯೂ ಕಡಿಮೆಯಾಗುವುದು.
* ಪಪ್ಪಾಯಿಗೆ 1 ಚಮಚ ರವೆ, ತುಪ್ಪ ಹಾಕಿ ಪೇಸ್ಟ್ ಮಾಡಿ, ಮುಖಕ್ಕೆ ಸ್ಕ್ರಬ್ಬಿಂಗ್ ಮಾಡಿದರೆ ನಿರ್ಜೀವ ಚರ್ಮದ ಕಾಂತಿ ಹೆಚ್ಚುವುದು.
* ಪಪ್ಪಾಯಿ,ಹಸಿ ಹಾಲು, ಜೇನು ತುಪ್ಪ ಸೇರಿಸಿ ಪ್ಯಾಕ್ ಹಾಕಿಕೊಂಡರೆ ಮುಖದ ಅಂದ ಹೆಚ್ಚುವುದು.
* ಪಪ್ಪಾಯಿ ಬೀಜ ಹಾಗೂ ಸ್ವಲ್ಪ ಪಪ್ಪಾಯಿ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿ, ಅದಕ್ಕೆ ಒಂದು ಚಮಚ ಜೇನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿದರೆ ಹೊಳಪು ಮತ್ತಷ್ಟು ಹೆಚ್ಚುವುದು.
ಈ ಎಲ್ಲ ಜೀವಸತ್ವಗಳೂ ಈ ಹಣ್ಣುಗಳಲ್ಲಿ ಸಮೃದ್ಧವಾಗಿರುತ್ತವೆ. ಇಂತಹ ನಿಸರ್ಗದ ಕೊಡುಗೆಗಳಲ್ಲೊಂದಾದ ಪಪ್ಪಾಯಿಯನ್ನು ಉಳಿಸಿ ಬೆಳೆಸಬೇಕು. ಅಂತೂ ಪಪ್ಪಾಯಿ ಔಷಧೀಯ ಗುಣಗಳ ಗಣಿಯೇ ಹೌದು.
ಕೃಪೆ - ಉದಯವಾಣಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ