*ಮಂಡಿ ನೋವಿಗೆ ತುಪ್ಪ ತಿನ್ನಿ*
ಇದು ಸುಮಾರು ಐದು ವರ್ಷದ ಹಿಂದಿನ ಮಾತು. ಅದಕ್ಕೂ ಒಂದು- ಒಂದೂವರೆ ವರ್ಷದಿಂದ ಸಹಿಸಲಸಾಧ್ಯ ಮಂಡಿನೋವು ನನ್ನನ್ನು ಕಾಡುತಿತ್ತು.
ಎರಡೂ ಮಂಡಿಗಳಲ್ಲಿ ಉರಿ ಉರಿ ನೋವು. ಮೆಟ್ಟಿಲುಗಳನ್ನು ಹತ್ತುವುದು, ಇಳಿಯುವುದು ಬಹಳ ತ್ರಾಸದಾಯಕ, ನೆಲದ ಮೇಲೆ ಕೂರಲು ಸಾಧ್ಯವೇ ಇಲ್ಲ, ಅನ್ನುವ ಪರಿಸ್ಥಿತಿ. ಬಹಳಷ್ಟು ಔಷಧಿ, ಉಪಚಾರಗಳು ಆದವು. ಮೂಳೆ ಡಾಕ್ಟರ ಬಳಿ ಎಕ್ಸರೇ ತೆಗೆಸಿ ಆಯ್ತು. ಏನೇನು ಕಸರತ್ತು ಮಾಡಿದರೂ ನೋವು ಮಾತ್ರ ಕಡಿಮೆ ಆಗದು.
ನಡೆಯುವಾಗ, ಕುಳಿತುಕೊಳ್ಳುವಾಗ ಅಂತ ಅಲ್ಲ... ಆಮೇಲಾಮೇಲೆ ಸುಮ್ಮನೆ ಮಲಗಿದ್ರೂ ನೋವು.
ನನಗೂ ವಯಸ್ಸಾಯ್ತಾ?? ಎನ್ನುವ ಯೋಚನೆ ಮಂಡಿನೋವಿಗಿಂತಲೂ ಯಾತನೆ ಕೊಡುತಿತ್ತು.
ಆದರೆ ಯಾವುದೇ ಕೆಲಸಗಳನ್ನು ಮಾತ್ರ ಈ ಕಾರಣಕ್ಕೆಂದು ನಿಲ್ಲಿಸಿರಲಿಲ್ಲ. ನಮ್ಮ ಸಮಾಜದ ಪೂಜೆ ಇರುವಾಗ ಊಟ ಬಡಿಸಲು ಎಲ್ಲಾ ಓಡಾಡಿಕೊಂಡು ಯಥಾಪ್ರಕಾರ ಮಾಡುತಿದ್ದೆ.
ಒಂದು ಸಲ ಎರಡು ಪಂಕ್ತಿ ಬಡಿಸಿ ಮೂರನೇ ಪಂಕ್ತಿಗೆ ಊಟಕ್ಕೆ ಕುಳಿತುಕೊಳ್ಳುವ ವೇಳೆಯಲ್ಲಿ ನೋವಿನಿಂದ ನನ್ನ ಮುಖದ ಹಿಂಡುವಿಕೆಯನ್ನು ಗಮನಿಸಿದ್ದರು, ನಮ್ಮ ಎದುರು ಸಾಲಿನಲ್ಲಿ ಕೂತ ಮೈಸೂರಿನ ಖ್ಯಾತ ಯೋಗ ದಂಪತಿಗಳು ರಾಘವೇಂದ್ರ ಪೈ , ಭವಾನಿ ಪೈ.
ಊಟ ಮುಗಿಸಿ ಕೈ ತೊಳೆಯುವಾಗ ಭವಾನಿಜೀ ನನ್ನನ್ನು ಕೇಳಿದರು. ನನ್ನ ಸಮಸ್ಯೆಯನ್ನು ಅವರಿಗೆ ತಿಳಿಸಿದೆ.
ದಿನಾ ಊಟಕ್ಕೆ ಒಂದು ಚಮಚ ತುಪ್ಪ ತಿಂದು ನೋಡಿ, ಮಂಡಿನೋವು ವಾಸಿಯಾಗ್ತದೆ ಅಂದ್ರು.
ತೂಕ ಜಾಸ್ತಿ ಆದ್ರೆ ಮಂಡಿಗಳು ನೋಯುತ್ತವೆ ಎಂದು ಹೇಳ್ತಾರಲ್ಲ. ಇನ್ನೂ ತೂಕ ಹೆಚ್ಚಿದ್ರೆ? ಅಂದೆ.
ಇಲ್ಲ. ತುಪ್ಪದಿಂದ ಯಾವತ್ತೂ ಬೊಜ್ಜು ಬರುವುದಿಲ್ಲ.
ಬದಲಿಗೆ ಮೂಳೆಗಳಿಗೆ ಬೇಕಾದ ಪಸೆ ಉತ್ಪತ್ತಿ ಆಗೋದೇ ತುಪ್ಪದಿಂದ. ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಮಾತ್ರ ಬೊಜ್ಜು, ಕೊಬ್ಬು ಬರೋದು. ಮಾಡಿ ನೋಡಿ. ಅಂದರು.
ತೂಕ ಹೆಚ್ಚಿದ್ರೆ ಅನ್ನುವ ಕಾರಣಕ್ಕಾಗಿ ಮಾತ್ರ ನನ್ನ ಅತ್ಯಂತ ಪ್ರೀತಿಯ ಬೆಣ್ಣೆ ತುಪ್ಪಗಳನ್ನು ದೂರ ಇಟ್ಟಿದ್ದೆ.
ಅವರು ಅಷ್ಟು ಹೇಳಿದ್ದೇ ಆವತ್ತಿನಿಂದಲೇ ತುಪ್ಪ ತಿನ್ನಲು ಶುರು ಮಾಡಿದೆ. ಬಿಡದೆ ಹತ್ತು ದಿನಗಳು ಎರಡು ಸಲ ಊಟದ ಜತೆ ಒಂದು ಚಮಚ ತುಪ್ಪ ತಿಂದಿದ್ದೆ. ಅಷ್ಟರೊಳಗೆ ನನಗೆ ಹೇಳದೇ ನನ್ನ ಮಂಡಿನೋವು ನನ್ನನ್ನು ಬಿಟ್ಟು ಯಾವಾಗ ಓಡಿಹೋಯ್ತೋ ತಿಳಿಯಲೇ ಇಲ್ಲ.
ಅದರ ನಂತರ ಈಗಿನವರೆಗೆ ನೋವಿಲ್ಲ. ನನಗೆ ಮಂಡಿನೋವಿನವರಾಗಲೀ, ಬೆನ್ನು ನೋವಿನವರಾಗಲಿ ಯಾರೇ ಸಿಕ್ಕಿದ್ರೂ ತುಪ್ಪ ತಿನ್ನಲು ಹೇಳುತ್ತೇನೆ. ಭವಾನಿಜೀ ಯವರ ಹೆಸರೂ ಉಲ್ಲೇಖಿಸುತ್ತೇನೆ.
ನಿಮಗೂ ತಿಳಿದಿರುವ ಯಾರಿಗಾದರೂ ಮಂಡಿ ನೋವು ಇದ್ದರೆ ಅವರಿಗೆ ತುಪ್ಪ ಸೇವಿಸಲು ತಿಳಿಸಿ.
ಮತ್ತೊಮ್ಮೆ ಭವಾನಿಜೀಯವರಿಗೆ ಪ್ರೀತಿಯ ಧನ್ಯವಾದಗಳು 🙏🙏🙏
--ಶೀಲಾ ಭಂಡಾರ್ಕರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ