ಸೋಮವಾರ, ಏಪ್ರಿಲ್ 18, 2022

*ಸನಾತನ ಧರ್ಮದಲ್ಲಿ ವಿವಾಹ- ಕೆಲವು ತಪ್ಪು ತಿಳುವಳಿಕೆಗಳು.*

*ಸನಾತನ ಧರ್ಮದಲ್ಲಿ ವಿವಾಹ- ಕೆಲವು ತಪ್ಪು ತಿಳುವಳಿಕೆಗಳು.*

ನಮ್ಮ ಸನಾತನ ಧರ್ಮದಲ್ಲಿ ವಿವಾಹ ಎಂದ ಕೂಡಲೇ ಈ ಮೂರು ಪದಗಳು ಮುಂಚೂಣಿಗೆ ಬರುತ್ತವೆ.

1. *ಕಾಶೀಯಾತ್ರೆ.*
2. *ಕನ್ಯಾದಾನ.*
3. *ವರದಕ್ಷಿಣೆ.*

          ಈಗ ಈ ಮೂರನ್ನೂ ಒಂದೊಂದಾಗಿ ವಿಶ್ಲೇಷಿಸುವಾ.

ಕಾಶಿಯಾತ್ರೆ. 

ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ ಭಾವೀ ಅಳಿಯನಿಗೆ ಕಾಲು ತೊಳೆಯುವುದು, ಹಾಗೂ ಕಾಶಿಗೆ ಹೋಗದಂತೆ ತಡೆದು ತನ್ನ ಮಗಳನ್ನು ಕೊಡುತ್ತೇನೆಂದು ಪ್ರಲೋಭಿಸುವುದು- ಇದು ನಾವು ತಿಳಿದುಕೊಂಡಿರುವುದು ಮತ್ತು ಆಚರಿಸುತ್ತಿರುವುದು.

 ಆದರೆ, ಇದು ಖಂಡಿತ ಹಾಗಲ್ಲ. ಇದಕ್ಕೆ ಬೇರೆಯೇ ಅರ್ಥವಿದೆ. 

ಪ್ರಾಚೀನ ಕಾಲದಲ್ಲಿ ಒಬ್ಬ ವಟುವಿಗೆ ಉಪನಯನ ಆದ ಕೂಡಲೇ ಆತನನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ, ಈ ಸುಮಾರು ಎಂಟು ವರ್ಷ ವಯಸ್ಸಿನ  ವಟು(ಬ್ರಹ್ಮಚಾರಿ) ತನ್ನ ಸಾಮರ್ಥ್ಯಕ್ಕನುಗುಣವಾಗಿ ಎಂಟು/ಹತ್ತು/ಹನ್ನೆರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದ. ಅಂದರೆ ಅಷ್ಟೊತ್ತಿಗೆ ಈ ಬಾಲಕ ಹದಿನಾರು/ಹದಿನೆಂಟು/ಇಪ್ಪತ್ತು ವರ್ಷ ವಯಸ್ಸಿನ ಪ್ರೌಢನಾಗಿರುತ್ತಿದ್ದ. ವಿದ್ಯೆ ಪೂರೈಸಿದ ನಂತರ ಆತ ಎಷ್ಟು ಕಲಿತಿದ್ದಾನೆ ಎನ್ನುವುದು ಪರೀಕ್ಷೆಯಾಗಬೇಕಲ್ಲವೇ?  ಆಗಿನ ಕಾಲದಲ್ಲಿ ಕಾಶಿ ನಗರದಲ್ಲಿ ಮಹಾ ಮಹಾ ಪಂಡಿತರಿದ್ದರು. ಈ ಶಿಷ್ಯನಿಗೆ ವಿದ್ಯೆ ಹೇಳಿಕೊಟ್ಟ ಗುರು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಸಲುವಾಗಿ ಕಾಶಿಗೆ ಕಳುಹಿಸಿಕೊಡುತ್ತಿದ್ದರು. 

ಅಲ್ಲಿಗೆ ಈ ಶಿಷ್ಯ  ಬ್ರಹ್ಮಚಾರಿ ಹಂತವನ್ನು ದಾಟಿ ಸ್ನಾತಕ ಎನಿಸಿಕೊಳ್ಳುತ್ತಿದ್ದ. ವಿದ್ಯಾಭ್ಯಾಸ ಪೂರೈಸಿದ ಸ್ನಾತಕ ಕೂಡಲೇ ತನ್ನ ‌ಮನೆಗೆ ಹೋಗದೆ ತನ್ನನ್ನು ತಾನೇ  ಪರೀಕ್ಷೆಗೆ ಒಡ್ಡಿಕೊಳ್ಳಲು ಕಾಶಿಗೆ ತೆರಳುತ್ತಿದ್ದ. ಕಾಶಿಯಲ್ಲಿನ ಪಂಡಿತರು ಈ ಸ್ನಾತಕನನ್ನು ಎಲ್ಲ ವಿಧದಲ್ಲಿ ಪರೀಕ್ಷಿಸಿ ಅದರಲ್ಲಿ ತೇರ್ಗಡೆ ಹೊಂದಿದರೆ ಮಾತ್ರ ಮುಂದಿನ ಜೀವನವನ್ನು ನಡೆಸಲು, ಅಂದರೆ ಗೃಹಸ್ಥನಾಗಲು ಅರ್ಹ‌ ಎಂದು ತೀರ್ಮಾನಿಸುತ್ತಿದ್ದರು. ಇಂತಹ ವ್ಯಕ್ತಿಯನ್ನು ಗುರುತಿಸಿ ಆತನ ಪಾಂಡಿತ್ಯ ವನ್ನು ಗೌರವಿಸಿ ಎಷ್ಟೋ ಕನ್ಯಾಪಿತೃಗಳು ತಮ್ಮ ಮಗಳನ್ನು ಆತನಿಗೆ ವಿವಾಹ ಮಾಡಿಕೊಡಲು ಇಚ್ಛಿಸುತ್ತಿದ್ದರು. ಅವರು ಮಾಡುತ್ತಿದ್ದ  ಪಾದಪೂಜೆ ಆತನ ಪಾಂಡಿತ್ಯಕ್ಕೇ ಹೊರತು, ಕಾಶಿಗೆ ಹೋಗದಂತೆ ತಡೆಯಲು ಅಲ್ಲ. ಇದು ಕಾಶಿಯಿಂದ ತೇರ್ಗಡೆ ಹೊಂದಿ ಬಂದವನ ಪೂಜೆ. ಹೋಗದಂತೆ ತಡೆಯಲು ಅಲ್ಲ. ಆದರೆ ಈಗಿನ ನಂಬಿಕೆ, ಆಚರಣೆ ಏನಾಗಿದೆ ನೋಡಿ. ಅರ್ಥವಿಲ್ಲದ ಆಚರಣೆಯಾಗಿದೆ ಅಲ್ಲವೇ. 

 ಕನ್ಯಾದಾನ.= ಕನ್ಯಾ ಆದಾನ

ಖಂಡಿತವಾಗಿ ಇಲ್ಲಿ ಕನ್ಯಾದಾನದ ಪ್ರಮೇಯವೇ ಇಲ್ಲ.
ಯಾವುದೇ ‌ಕನ್ಯೆ‌ ಒಂದು ವಸ್ತು, ಜಾಗ ಇತ್ಯಾದಿಗಳಲ್ಲ - ದಾನ ಮಾಡಲು.
ನಮ್ಮ ಜನರು ಮೌಢ್ಯದಿಂದ ಇದನ್ನು ಕನ್ಯಾದಾನ ಮಾಡಿಬಿಟ್ಟರು. ಇದಕ್ಕೆ ನಾನು ಒಂದು ಪ್ರಸಂಗವನ್ನು ತಮ್ಮ ಅವಗಾಹನೆಗೆ ತರಲಿಚ್ಛಿಸುತ್ತೇನೆ.
ಪ್ರಸಂಗ ಸೀತಾ ಕಲ್ಯಾಣ.

( ಕೆಲವರು ತಪ್ಪು ತಪ್ಪಾಗಿ ಇದನ್ನು ಸೀತಾ ಸ್ವಯಂವರ ಎಂದು ಬಳಸುತ್ತಾರೆ. ಸೀತೆಗೆ ಸ್ವಯಂವರ ಎಂದಿಗೂ ನಡೆಯಲಿಲ್ಲ- ಇಂದುಮತಿ, ದಮಯಂತಿಯರ ಹಾಗೆ.
ಸೀತೆ, ದ್ರೌಪದಿಯರದು ವೀರ್ಯಶುಲ್ಕ ಆಗಿತ್ತು).

ಜನಕ ಮಹಾರಾಜ ಸೀತಾರಾಮರ ವಿವಾಹಕ್ಕೆ ಮುನ್ನ ಶ್ರೀರಾಮನೊಂದಿಗೆ ಹೀಗೆ ಹೇಳುತ್ತಾನೆ.

" ಇಯಂ ಸೀತಾ ಮಮ ಸುತಾ
   ಸಹಧರ್ಮಚರೀ ತವ |
    ಪ್ರತೀಚ್ಛ ಚೈನಾಂ ಭದ್ರಂ ತೇ
   ಪಾಣಿಂ ಗೃಹ್ಣೀಷ್ವ ಪಾಣಿನಾ ||

ಪತಿವ್ರತಾ ಮಹಾಭಾಗ ಛಾಯೇವಾನುಗತಾ ಸದಾ |
ಇತ್ಯುಕ್ತ್ವಾ ಪ್ರಾಕ್ಷಿಪದ್ರಾಜಾ 
ಮಂತ್ರಪೂತಂ ಜಲಂ ತದಾ ||

ಈ ಎರಡು ಶ್ಲೋಕಗಳ ಅರ್ಥ ಹೀಗಿರುತ್ತದೆ.

" ನನ್ನ ಮಗಳು ಈ ಸೀತೆ ನಿನಗೆ ಸಹ ಧರ್ಮಚಾರಿಣಿಯಾಗಿರುತ್ತಾಳೆ. ಇವಳನ್ನು ಸ್ವೀಕರಿಸು.‌ ನಿನಗೆ ಶುಭವಾಗಲಿ. ಈಕೆಯ ಪಾಣಿಗ್ರಹಣ ಮಾಡು. ಈ ನನ್ನ ಪುತ್ರಿಯು ಪತಿವ್ರತೆಯೂ, ಭಾಗ್ಯಶಾಲಿನಿಯೂ ಆಗಿ ಅನುಗಾಲವೂ ನಿನ್ನನ್ನು ನೆರಳಿನಂತೆ ಅನುಸರಿಸುವಳು".

ನಾವು ಯಾವುದೇ ದಾನ ಕೊಡುವಾಗ/ಹೋಮ ಮಾಡುವಾಗ ಈ ರೀತಿ ಹೇಳಿ ದಾನ/ಹೋಮ ಮಾಡುತ್ತೇವೆ.
' ದದಾಮಿ.  ನ ಮಮ'.
        ಅಥವಾ
' ಸ್ವಾಹಾಃ .ನ ಮಮ'
ಇದರ ಅರ್ಥ = ಇದನ್ನು ನಾನು ದಾನ ಮಾಡುತ್ತಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ. 
               ಅಥವಾ
ಇದನ್ನು ಆಹುತಿ ನೀಡುತ್ತಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ.

   ‌‌  ದಯವಿಟ್ಟು ಗಮನಿಸಿ. ಈ ಮೇಲಿನ ಶ್ಲೋಕಗಳಲ್ಲಿ ' ದದಾಮಿ. ನ ಮಮ' ಎಂಬ ಪದ ಪ್ರಯೋಗವಾಗಿದೆಯೇ, ಖಂಡಿತ ಇಲ್ಲ. ಅಂದರೆ ಜನಕ ಮಹಾರಾಜ ಶ್ರೀರಾಮನಿಗೆ ಕನ್ಯಾದಾನ ಮಾಡಲಿಲ್ಲ ಎಂದೇ ಅರ್ಥ.

ಮತ್ತೆ ಈ ' ಕನ್ಯಾದಾನ' ಎನ್ನುವ ಪದ ಹಾಗೂ ಪದ್ಧತಿ ಹೇಗೆ ಚಾಲ್ತಿಗೆ ಬಂತು?
ವಿವರಿಸುತ್ತೇನೆ, ಕೇಳಿ.
ಇದು ಕನ್ಯಾದಾನವಲ್ಲ. ಸರಿಯಾದ ಪ್ರಯೋಗ ' ಕನ್ಯಾ +ಆಧಾನ = ಕನ್ಯಾಧಾನ.

ಈ ಕನ್ಯಾಧಾನ ಪದ ಕಾಲಾನುಕ್ರಮದಲ್ಲಿ ಅಪಭ್ರಂಶ ಹೊಂದಿ ಕನ್ಯಾದಾನ ಆಗಿರುತ್ತದೆ. ಹಾಗೆಯೇ ಆಚರಣೆಗಳೂ ಸಹ.
ಅಂದರೆ ಕನ್ಯಾಧಾನ ಎಂದರೇನು?
ಆಧಾನ ಎಂದರೆ ನ್ಯಾಸವಾಗಿಡುವುದು ಎಂದು. ದಾನಕ್ಕೂ, ಆಧಾನಕ್ಕೂ ಇದೇ ವ್ಯತ್ಯಾಸ.

 ಒಮ್ಮೆ ದಾನ ಕೊಟ್ಟರೆ ಮುಗಿಯಿತು. ಅದು ಎಂದಿಗೂ ನನ್ನದಲ್ಲ. ನ್ಯಾಸ- ಹಾಗಲ್ಲ. ನಾನು ನನ್ನ ಮಗಳನ್ನು ನ್ಯಾಸ ಮಾಡಿದರೂ ಆಕೆ ಎಂದೆಂದಿಗೂ ನನ್ನ ಮಗಳೇ ಆಗಿರುತ್ತಾಳೆ. ನಮ್ಮಿಬ್ಬರ ಈ ಸಂಬಂಧವನ್ನು ಯಾರಿಂದಲೂ ಕಸಿದುಕೊಳ್ಳಲಾಗದು.
ಇದುವರೆಗೆ ನನ್ನಿಂದ ರಕ್ಷಿತಳಾಗಿದ್ದ ನನ್ನ ಮಗಳು ಇನ್ನು ಮುಂದೆ ನಿನ್ನ ರಕ್ಷಣೆಗೆ ಒಳಪಡುವಳು. ಈಕೆಯನ್ನು ಸರಿಯಾಗಿ ರಕ್ಷಿಸಿಕೊಂಡು ಹೋಗಬೇಕು ಎನ್ನುವ ಎಚ್ಚರಿಕೆಯೂ ಇದೆ. ಯಾವುದೇ ದಾನದಲ್ಲಿ ಹೀಗಾಗುವುದಿಲ್ಲ. ಒಮ್ಮೆ ದಾನ ಕೊಟ್ಟರೆ ಮುಗಿಯಿತು. ದಾನ ಪಡೆದವನು ಅದನ್ನು ಹೇಗೆ ಬೇಕಾದರೂ ಬಳಸಬಹುದು.
ರಾಮಾಯಣದ ಮೇಲಿನ ಎರಡು ಶ್ಲೋಕಗಳೂ ಇದೇ ಅರ್ಥವನ್ನು ಧ್ವನಿಸುತ್ತಿದೆಯಲ್ಲವೇ.

ಸನಾತನ ಧರ್ಮದ ವಿವಾಹ ಆಚರಣೆಯಲ್ಲಿ ಮಗಳನ್ನು ಧಾರೆಯೆರೆದು ಕೊಟ್ಟ ಕನ್ಯಾ ಪಿತೃ ಅಳಿಯನಿಂದ ತನ್ನ ಮಗಳನ್ನು ಕುರಿತು ಕೆಲವೊಂದು ಭರವಸೆಗಳನ್ನು ಅಪೇಕ್ಷಿಸುತ್ತಾನೆ. ಅವುಗಳನ್ನು ವಿವಾಹ ಸಮಯದಲ್ಲಿ ಮಂತ್ರಪೂರ್ವಕ ಕೋರಲಾಗುತ್ತದೆ. ಈಗ ನಾನು ಅವುಗಳಲ್ಲಿ ಕೆಲವನ್ನು ಮಾತ್ರ ಪ್ರಸ್ತಾಪಿಸುತ್ತೇನೆ. ಇಲ್ಲಿ ನಾನು ಮಂತ್ರಗಳನ್ನು ಉದ್ಧರಿಸುತ್ತಿಲ್ಲ. ಈ ಮಂತ್ರಗಳನ್ನು ಎಲ್ಲಿ ಬೇಕಾದರೂ ಪರಾಂಬರಿಸಬಹುದು. ಅವುಗಳ ಭಾವವನ್ನು ಮಾತ್ರ ಉಲ್ಲೇಖಿಸುವೆ.

" ಇವಳನ್ನು ನೀನು ಯಾವ ರೀತಿ ಪೋಷಿಸಬೇಕು, ಈವರೆಗೆ ನಾನು ಹೇಗೆ ಪೋಷಿಸಿದ್ದೇನೆ, ಇವಳ ಅಪೇಕ್ಷೆಗಳೇನು,
ಯಾವುದರಲ್ಲಿ ಆಸಕ್ತಿ, ಅಭಿರುಚಿ ಇದೆ, 
ಇವಳ ಅಪೇಕ್ಷೆಗಳೇನಿವೆ, ಇವಳಿಗೆ ಅನುರೂಪವಾಗಿ ನೀನು ಯಾವ ರೀತಿ ಸಹಕರಿಸುತ್ತೀಯೆ, ಇವಳು ಈಗ ನಿನ್ನ ಪತ್ನಿಯೇ ಆಗಿದ್ದರೂ, ನನ್ನ ಮಗಳೂ ಆಗಿದ್ದಾಳೆ- ಇವೆಲ್ಲವನ್ನೂ ಕನ್ಯೆಯ ತಂದೆಯು ಅಳಿಯನಿಗೆ ತಿಳಿಸುತ್ತಾನೆ ಹಾಗೂ ಆತನಿಂದ ಭರವಸೆ ಪಡೆಯುತ್ತಾನೆ. ಆದರೆ ದಾನದಲ್ಲಿ ಇವು ‌ಯಾವುವೂ ಉದ್ಭವಿಸುವುದಿಲ್ಲ.

ವರದಕ್ಷಿಣೆ.

ಇದನ್ನೂ ಪರಿಶೀಲಿಸೋಣ.
ಪ್ರಾಚೀನ ಕಾಲದಲ್ಲಿ ಶಾಸ್ತ್ರ ಸಮ್ಮತವಲ್ಲದ ಕನ್ಯಾಶುಲ್ಕ ಪ್ರಚಲಿತವಿತ್ತೇ ಹೊರತು ವರದಕ್ಷಿಣೆ ಎನ್ನುವುದು ಇರಲಿಲ್ಲ.

' ವರದಕ್ಷಿಣೆ' ಎನ್ನುವುದೂ ಅಪಭ್ರಂಶವೇ.
ಇದರ ನಿಜ‌ ಸ್ವರೂಪ ' ವರಹ ದಕ್ಷಿಣೆ'.

ವರಹ ಎಂದರೆ ಹಿಂದಿನ ಕಾಲದಲ್ಲಿ ನಾಲ್ಕೂ ಕಾಲು ರೂಪಾಯಿಗಳು.
ಸಾಲಂಕೃತ ಕನ್ಯೆಯನ್ನು ಒಂದು ವರಹ ದಕ್ಷಿಣೆಯೊಂದಿಗೆ ಧಾರೆ ಎರೆದುಕೊಡಲಾಗುತ್ತಿತ್ತು. 

ಈಗಿನ ಕಾಲದಲ್ಲಿ ನಾವು ತಾಂಬೂಲದೊಂದಿಗೆ ದಕ್ಷಿಣೆ ಇಡುತ್ತೇವಲ್ಲಾ ಹಾಗೆ. ಒಂದು ವರಹಕ್ಕಿಂತಲೂ ಹೆಚ್ಚು ದಕ್ಷಿಣೆ ನೀಡುವುದು ನಿಷಿದ್ಧವಾಗಿತ್ತು.

ನೀವು ಕೇಳಬಹುದು- ಒಂದು ವರಹವೇ ಏಕೆ?- ಎಂದು.
ಹೌದು. ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ಹಣದ  ಮಾನ ಅಥವಾ ಅಳತೆ ವರಹ.
ಇದಕ್ಕೆ ವರಹ ಎಂದು ಏಕೆ ಕರೆಯುತ್ತಿದ್ದರು?
ಪರಮಾತ್ಮ ನಾರಾಯಣನು ಸಮುದ್ರದಲ್ಲಿ ಮುಳುಗಿಸಲಾಗಿದ್ದ ಭೂಮಿಯನ್ನು ವರಾಹಾವತಾರ ಎತ್ತಿ ಉದ್ಧರಿಸುತ್ತಾನೆ. 

ನಾನು ಕೊಡುತ್ತಿರುವ ಒಂದು ವರಹ ದಕ್ಷಿಣೆ ವರಾಹಸ್ವಾಮಿ ಉದ್ಧರಿಸಿದ ಇಡೀ ಭೂಮಂಡಲಕ್ಕೆ ಸಮಾನ ‌ಎನ್ನುವ ಭಾವನೆ (ನಂಬಿಕೆ). 

ಭೂಮಂಡಲಕ್ಕಿಂತಲೂ ಹೆಚ್ಚು ಬೆಲೆಯುಳ್ಳ ವಸ್ತು ಯಾವುದೂ ಇಲ್ಲವಲ್ಲಾ, ಅದಕ್ಕೆ.
ನಾನು ನೀಡುವ ದಕ್ಷಿಣೆಯಷ್ಷೇ ನನ್ನದಲ್ಲ(ನ ಮಮ). ಆದರೆ ಮಗಳು ಮಾತ್ರ ಎಂದೆಂದಿಗೂ ನನ್ನ ಮಗಳೇ ಆಗಿರುತ್ತಾಳೆ.

ಪ್ರಾಚೀನ ಕಾಲದಲ್ಲಷ್ಟೇ ಅಲ್ಲ. ಇತಿಹಾಸದಲ್ಲಿಯೂ ಅನೇಕ ರಾಜರುಗಳು ತಮ್ಮ ನಾಣ್ಯಗಳನ್ನು 'ವರಹ'ವೆಂದೇ ಟಂಕಿಸುತ್ತಿದ್ದರು. 

 ವಿಜಯನಗರದ ಅರಸರ ಕಾಲದ ನಾಣ್ಯಗಳಲ್ಲಿ ವರಾಹ(ಹಂದಿಯ) ಚಿತ್ರವಿರುತ್ತಿತ್ತು.
ಈ ವರಹದಕ್ಷಿಣೆಯೇ ಕಾಲಾನುಕ್ರಮದಲ್ಲಿ ಶಾಸ್ತ್ರಸಮ್ಮತವಲ್ಲದ  ವರದಕ್ಷಿಣೆ'ಯಾಗಿ ಪರಿವರ್ತನೆಯಾಗಿದೆ.

ಮೇಲಿನ ವಿಚಾರವನ್ನು ಸಮರ್ಥಿಸಲು ಇನ್ನೊಂದು ವಿಷಯವನ್ನೂ ಪ್ರಸ್ತಾಪಿಸುತ್ತೇನೆ.

ಈಗಿನ ಕಾಲದಲ್ಲಿ ಮದುವೆಯಾದ ಕೂಡಲೇ ಹೆಣ್ಣು ತಾನು ಜನಿಸಿದ ಕುಲದ ಹೆಸರನ್ನು ತ್ಯಜಿಸಿ, ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಒಂದು ಪದ್ಧತಿಯಾಗಿದೆ. ಇದು ಶುದ್ಧಾಂಗ ತಪ್ಪು. ಕೇವಲ ಪಾಶ್ಚಿಮಾತ್ಯರ ಅಂಧಾನುಕರಣೆ.

ಇದಕ್ಕೆ  ಉದಾಹರಣೆ.

ಸೀತೆ ಜಾನಕಿ ಅಥವಾ ಮೈಥಿಲಿ ಎಂದು ಕರೆಸಿಕೊಂಡಳೇ ವಿನಾ ಎಂದೂ 'ರಾಮಿ' ಆಗಲಿಲ್ಲ. 

( ಸೀತಾರಾಮ ಎಂಬ ಪದ ಬಳಕೆಯಲ್ಲಿದೆ, ಇದು ರಾಮನಿಗೆ ಅನ್ವಯವಾಗುತ್ತದೆಯೇ ಹೊರತು ಸೀತೆಗಲ್ಲ).

ಕೃಷ್ಣೆ- ದ್ರೌಪದಿ ಅಥವಾ ಪಾಂಚಾಲಿ ಎನ್ನಿಸಿಕೊಂಡಳೇ ಹೊರತು ಪಾಂಡವಿ ಆಗಲಿಲ್ಲ. 
ಪೃಥೆಯು ಕುಂತಿಯಾದಳೇ ವಿನಾ ಪಾಂಡವಿ ಆಗಲಿಲ್ಲ. 
ಗಾಂಧಾರಿ ಗಾಂಧಾರಿಯಾಗಿಯೇ ಉಳಿದಳು. ಧೃತರಾಷ್ಟ್ರನ ಹೆಸರನ್ನು ತನ್ನ ಹೆಸರಿನ ಮುಂದೆ ತರಲಿಲ್ಲ.
ರುಕ್ಮಿಣಿ ಎಂದೂ ತನ್ನ ಹೆಸರಿನ ಮುಂದೆ ಕೃಷ್ಣನ ಹೆಸರನ್ನು ಸೇರಿಸಿಕೊಳ್ಳಲಿಲ್ಲ.

ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಪದ್ಧತಿ ನಮ್ಮದಲ್ಲ.✍📮 (ಸಂಗ್ರಹ)

ಅಂಗಾರಕ ಸಂಕಷ್ಟ ಚತುರ್ಥಿ

ನಾಳೆ  ಮಂಗಳವಾರ ಅಂಗಾರಕ 
ಸಂಕಷ್ಟ ಚತುರ್ಥಿ ಇದೆ ಅದರ ಬಗ್ಗೆ ಒಂದು ಮಾಹಿತಿ

ಚತುರ್ಥಿತಿಥಿಯಂದು ಆಚರಿಸುವ ವ್ರತಗಳಲ್ಲಿ ಸಂಕಷ್ಟಹರ ಚತುರ್ಥಿಯೂ ಒಂದು. 

ಹೆಸರೇ ಹೇಳುವಂತೆ ಕಷ್ಟದಿಂದ ಪಾರಾಗಲು ಈ ವ್ರತವನ್ನು ಮಾಡುತ್ತಾರೆ. ಇದನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ‘ಸಂಕಷ್ಟಿ’ ಅಥವಾ ‘ಸಂಕಷ್ಟವ್ರತ’ವೆಂದೂ ಹೇಳುತ್ತಾರೆ. ಚತುರ್ಥಿಯು ಒಂದು ತಿಂಗಳಲ್ಲಿ ಎರಡು ಸಲ ಬರುತ್ತದೆ. ಅವುಗಳಲ್ಲಿ ಕೃಷ್ಣಪಕ್ಷದ ಚತುರ್ಥಿಯಂದೇ ಸಂಕಷ್ಟಿಯನ್ನು ಆಚರಿಸುತ್ತಾರೆ. 

ಅಂದು ಮಂಗಳವಾರವಾದರೆ ‘ಅಂಗಾರಕ ಚತುರ್ಥಿ’ ಎನ್ನುತ್ತಾರೆ. ಅಂಗಾರಕ ಚತುರ್ಥಿಗೆ ಹೆಚ್ಚಿನ ಮಹತ್ತ್ವವಿದೆ.

ಸಂಕಷ್ಟಿಯನ್ನು ಆಚರಿಸುವವರು ಕೃಷ್ಣ ಪಕ್ಷದ ಚತುರ್ಥಿಯಂದು ಉಪವಾಸ ಮಾಡುತ್ತಾರೆ. 

ಸಂಜೆ ವ್ರತವನ್ನು ಆಚರಿಸಿ, ಚಂದ್ರದರ್ಶನ ಮಾಡುವುದರೊಂದಿಗೆ ಉಪವಾಸ ಕೊನೆಗೊಳ್ಳುತ್ತದೆ. 

ಒಂದು ವರ್ಷದಲ್ಲಿ ಅಧಿಕ ಮಾಸವಿಲ್ಲದಿದ್ದಾಗ ಚೈತ್ರಮಾಸದಿಂದ ಹನ್ನೆರಡು ಕೃಷ್ಣ ಪಕ್ಷಗಳಿರುತ್ತವೆ. ಹಾಗಾಗಿ ಸಂಕಷ್ಟಿಯ ಸಂಖ್ಯೆಯೂ ಹನ್ನೆರಡು. ಅಧಿಕ ಮಾಸವಿದ್ದಾಗ ಈ ಸಂಖ್ಯೆ ಹದಿಮೂರಕ್ಕೇರುತ್ತದೆ.

ಪೂಜಾ ವಿಧಾನ

ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ನೆಲ್ಲಿಯ ಹಿಟ್ಟಿನೊಂದಿಗೆ ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳಸ್ನಾನ ಮಾಡಬೇಕು.

 ಸ್ನಾನವಾದ ಮೇಲೆ ಸಂಕಷ್ಟಹರ ಗಣಪತಿ ವ್ರತದ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಅದು ಅಸಾಧ್ಯವಾದರೆ
ಹಾಲು, ಹಣ್ಣು ಸೇವಿಸಬಹುದು. ಕೆಲವರು ಅನ್ನವನ್ನು ಬಿಟ್ಟು ಉಪ್ಪಿಟ್ಟು ಅವಲಕ್ಕಿ ಮುಂತಾದವುಗಳನ್ನು ಸ್ವೀಕರಿಸುತ್ತಾರೆ.

ಪೂಜೆಯ ಮಾಡುವ ಸ್ಥಳವನ್ನು ಗೋಮಯದಿಂದ ಶುದ್ಧಗೊಳಿಸಿ, ಅಷ್ಟದಳ ಗಣಪತಿ ಮಂಡಲವನ್ನು ಬಿಳಿಯ ಮಣ್ಣಿನಿಂದ ಬರೆಯಬೇಕು. 

ಅರಿಸಿನ ಕುಂಕುಮಗಳಿಂದ ಮಂಡಲವನ್ನು ಅಲಂಕರಿಸಬೇಕು. ಇದರ ಮೇಲೆ ಕಲಶವನ್ನು ಸ್ಥಾಪಿಸುವುದಕ್ಕಾಗಿ ಎರಡು ಕುಡಿಬಾಳೆಯ ಮೇಲೆ ಅಕ್ಕಿಯನ್ನು ಹರಡಬೇಕು. 

ಅದರ ಮೇಲೆ ಮೃತ್ತಿಕೆ ನಾಣ್ಯ ಮತ್ತು ನೀರು ಹಾಕಿದ ಕಲಶವನ್ನಿಟ್ಟು, ಅದರ ಮೇಲೆ ಮಾವಿನ ಚಿಗುರು ತೆಂಗಿನಕಾಯಿ ನಾಣ್ಯ ಪವಿತ್ರ ಉಪವೀತಗಳನ್ನು ಇಟ್ಟು, ಎದುರಲ್ಲಿ ವೀಳ್ಯದ ಎಲೆ ಅಡಿಕೆ ಬಾಳೆಹಣ್ಣು ಇಡಬೇಕು. ಈ ಕಲಶಕ್ಕೆ ಪೂಜೆ ಮಾಡಿ ಗಣಪತಿಯನ್ನು ಆವಾಹನೆ ಮಾಡಿ, ಷೋಡಶೋಪಚಾರ ಪೂಜೆ ಮಾಡಬೇಕು.

ಆಸನ ಧ್ಯಾನ ಪಾದ್ಯ ಅರ್ಘ್ಯ ಆಚಮನೀಯ ಪಂಚಾಮೃತ ವಸ್ತ್ರ ಉಪವೀತ ಆಭರಣ ಗಂಧ ಅಕ್ಷತೆ ಹೂ ಮುಂತಾದ ಉಪಚಾರಗಳಾದ ಮೇಲೆ ದೂರ್ವೆಗಳಿಂದ (ಎಂದರೆ ಗರಿಕೆಯಿಂದ) ಅಷ್ಟೋತ್ತರ ಶತ ನಾಮಾವಳಿ ಅಥವಾ ಅಷ್ಟೋತ್ತರ ಸಹಸ್ರನಾಮ ಪೂಜೆ ಮಾಡಬೇಕು.

ಅಂಗಾರಕ ವ್ರತದ ಕಥೆಯನ್ನು ಓದಬೇಕು
ಕಥೆಯು ಹೀಗಿದೆ.

ಕಥಾಶ್ರವಣ

ಸುಲಭನೆಂಬ ಕ್ಷತ್ರಿಯನು ಸಮುದ್ರೆಯೆಂಬ ಪತ್ನಿಯೊಂದಿಗೆ ಪುರಾಣವನ್ನು ಕೇಳುತ್ತಿದ್ದಾಗ ಮಧುಸೂದನ ಎಂಬವನು ಅಲ್ಲಿಗೆ ಬಂದನು. 

ಅವನನ್ನು ನೋಡಿ ಸುಲಭನು ನಗೆಯಾಡಲು, ಸಿಟ್ಟಿಗೆದ್ದ ಮಧುಸೂದನನು ಎತ್ತಾಗುವಂತೆ ಸುಲಭನನ್ನು ಶಪಿಸಿದನು.

 ಇದರಿಂದ ಕೋಪಗೊಂಡ ಸುಲಭೆಯು ಮಧುಸೂದನನು ಕತ್ತೆಯಾಗುವಂತೆ ಶಪಿಸಿದಳು. 

ಇದರಿಂದ ಇನ್ನೂ ಕೋಪಗೊಂಡ ಮಧುಸೂದನನು ಆಕೆಗೆ ಪತಿತಳಾಗುವಂತೆ ಶಪಿಸಿದನು. 

ಹೀಗೆ ಮೂವರೂ ಶೋಚನೀಯ ಸ್ಥಿತಿಗೆ ತಲುಪಿ ಸಂಚರಿಸುತ್ತಿರುವಾಗ ದೇವಾಲಯವೊಂದರಲ್ಲಿ ಸಂಕಷ್ಟಹರ ಗಣಪತಿಯ ಪೂಜೆ ನಡೆಯುತ್ತಿದ್ದುದನ್ನು ನೋಡಿದರು. 

ಈ ಶಾಪಗ್ರಸ್ತರಿಗೆ ಅಲ್ಲಿ ಸ್ಥಳವು ದೊರೆಯದಿದ್ದರೂ ಪರಲೋಕದಲ್ಲಿ ಸುಸ್ವಾಗತವು ದೊರೆಯಿತು.

ಕೌಂಡಿನ್ಯ ಆಶ್ರಯೆ ಎಂಬ ದಂಪತಿಗಳು ದೂರ್ವೆಯ ಮಹಿಮೆಯನ್ನು ಚರ್ಚಿಸುತ್ತಾರೆ. 

ಯಮಲೋಕದ ಉತ್ಸವವೊಂದರಲ್ಲಿ ಯಮನು ತಿಲೋತ್ತಮೆಯ ನರ್ತನದಿಂದ ಆಕರ್ಷಿತನಾದನು. 

ಕೂಡಲೇ ಅಲ್ಲಿಂದ ಹೊರಟರೂ ಯಮನ ತೇಜಸ್ಸಿನಿಂದ ಜ್ವಾಲಾಮಾಲಿಯೆಂಬ ಅಯೋನಿಜನು ಜನಿಸಿದನು. 

ಲೋಕಕಂಟಕನಾದ ಅವನನ್ನು ಕೊಲ್ಲಲು ಗಣಪತಿಯೇ ಬರಬೇಕಾಯಿತು. ಅನಲಾಸುರನನ್ನೂ ಆಗ ಸಂಹರಿಸಿದ ಗಣೇಶನಿಗೆ ಚಂದ್ರ ಸಿದ್ಧಿ ಬುದ್ಧಿ ತಾವರೆ ಶೇಷ ಮುಂತಾದವು ಕೊಡುಗೆಯಾಗಿ ದೊರೆತವು. 

ಆದರೆ ಅವನಿಗೆ ಮನಃಶಾಂತಿ ದೊರೆಯದೆ, ದೂರ್ವಾರ್ಚನೆ ಮಾಡಿದ ಮೇಲೆಯೇ ಮನಸ್ಸಿಗೆ ಶಾಂತಿ ದೊರೆಯಿತು.

ಮಿಥಿಲೆಯ ರಾಜನಾದ ಜನಕನು ಅಪರಿಮಿತವಾಗಿ ಅನ್ನದಾನ ಮಾಡುತ್ತಿದ್ದರೂ ಅವನ ಸಂಪತ್ತು ಹಾಗೆಯೇ ಇದ್ದಿತು. 

ಇದರಿಂದ ಗರ್ವಿತನಾದ ರಾಜನನ್ನು ಸಾತ್ವಿಕನನ್ನಾಗಿಸಲು ಗಣಪತಿಯು ಕುಷ್ಠರೋಗಿಯಾಗಿ ಬಂದು ಭೋಜನಶಾಲೆಯಲ್ಲಿ ಉಂಡು ಅನ್ನವಿಲ್ಲದಂತೆ ಮಾಡಿದನು. 

ಬಡದಂಪತಿಗಳ ದೂರ್ವೆಯೊಂದರಿಂದ ತೃಪ್ತನಾಗಿ ಅವರಿಗೆ ವರದಾನ ಮಾಡಿದ್ದನ್ನು ನೋಡಿದ ಮೇಲೆ ರಾಜನಿಗೆ ಜ್ಞಾನೋದಯವಾಯಿತು.

ಆಶ್ರಯೆಯು ನಾರದರ ಸೂಚನೆಯಂತೆ ದೂರ್ವಾದಳದ ಭಾರಕ್ಕೆ ಸರಿಯಾದ ಚಿನ್ನವನ್ನು ಯಾಚಿಸಲು ಇಂದ್ರ ಕುಬೇರ ವಿಷ್ಣು ಶಿವ ಮುಂತಾದ ಮಹಾಮಹಿಮರೆಲ್ಲರೂ ಅದನ್ನು ನೀಡುವಲ್ಲಿ ವಿಫಲರಾದರು. 

ಕೃತವೀರ್ಯ ಶೂರಸೇನ ಸ್ಕಂದ ಪಾರ್ವತೀ ದಮಯಂತೀ ನಳ ಪ್ರದ್ಯುಮ್ನ ರುಕ್ಮಿಣೀ ಶ್ರೀಕೃಷ್ಣ ಮುಂತಾದವರು ಆಚರಿಸಿದ ಈ ವ್ರತ ಅಸಾಧಾರಣವಾದುದು.

ಕಥಾಶ್ರವಣವಾದ ಮೇಲೆ ಉತ್ತರಪೂಜೆ ಮಾಡಬೇಕು. 

ಧೂಪ ದೀಪವಾದ ಮೇಲೆ ನೈವೇದ್ಯಕ್ಕೆ ಕರಿಗಡುಬು, ಮೋದಕ ಇಡಬೇಕು.

ಮೈದಾಹಿಟ್ಟು, ರವೆಯನ್ನು ಕಲಸಿ ಕಣಕ ಮಾಡಿ,
 ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. 

ಹೂರಣವನ್ನು ಎರಡು ತರಹ ಮಾಡುತ್ತಾರೆ. ಕೊಬ್ಬರಿತುರಿ, ಸಕ್ಕರೆ, ಏಲಕ್ಕಿ ಅಥವಾ ಬೆಲ್ಲ, ಕಾಯಿ ತುರಿ, ಏಲಕ್ಕಿ. ಈ ದಿನ ಕಡುಬು ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. 

ನೈವೇದ್ಯಕ್ಕೆ ಕನಿಷ್ಠ ಇಪ್ಪತ್ತೊಂದು ಕರಿಗಡಬು ಮತ್ತು ಮೋದಕಗಳನ್ನು ಮಾಡಿಕೊಳ್ಳಬೇಕು. ಪೂಜೆಯ ನಂತರ ಕಡಬು, ಮೋದಕ ದಾನ ಮಾಡಿ, ಉಳಿದ ಕಡಬು, ಮೋದಕಗಳನ್ನು ಪ್ರಸಾದವಾಗಿ ಸ್ವೀಕರಿಸಬೇಕು. 

ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು.

ನೈವೇದ್ಯವಾದ ಮೇಲೆ ಫಲ ಸಮರ್ಪಣ, ದೂರ್ವಾಪೂಜೆ, ಮಂಗಳಾರತಿ, ಮಂತ್ರಪುಷ್ಪ, ಪ್ರದಕ್ಷಿಣ, ನಮಸ್ಕಾರ, ಪ್ರಸನ್ನಾರ್ಘ್ಯ, ಪ್ರಾರ್ಥನೆ ಮಾಡಿ ಪೂಜಾ ಸಮಾಪ್ತಿ ಮಾಡಬೇಕು. 

ವಾಯನದಾನ, ತೀರ್ಥಪ್ರೋಕ್ಷಣ, ಕಲಶದಾನಗಳಿಂದ ಪೂಜೆ ಸಾಂಗವಾಗಿ ನೆರವೇರುತ್ತದೆ

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

 *ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ಕಾಪಿ ಪೇಸ್ಟ್ ಮಾಡುವ ಬದಲಾಗಿ ಲೈಕ್ ಕೊಟ್ಟು ಶೇರ್ 
ಮಾಡಿಕೊಂಡರೆ  ಭಗವಂತನ ನಿಮ್ಮವನಾಗಬಹುದು ಅಲ್ವ
ಮುಂಗಡವಾಗಿ ಹಾಕಿ ನಿಮಗೆ ಅನುಕೂಲ ಮಾಡಿದ ನಮಗೆ ಸಹ ಗೌರವ ಸಿಕ್ಕಂತೆ ಅಲ್ವ. ಇನ್ನೂ ನಿಮ್ಮ ಇಷ್ಟ 
ಕದ್ದವರಿಗೂ ಹಾಗೂ ಶೇರ್ ಮಾಡಿಕೊಂಡವರಿಗೂ
ಧನ್ಯವಾದಗಳು ಶುಭವಾಗಲಿ

ಭಾನುವಾರ, ಏಪ್ರಿಲ್ 17, 2022

ಪೂರ್ವಜರ ಮಾತಿದು ಮರಿಬ್ಯಾಡ

☆☆🌹 ಪೂರ್ವಜರ ಮಾತಿದು ಮರಿಬ್ಯಾಡ 🌹☆☆

ಪೂರ್ವಜರಿಂದ ಬಳುವಳಿಯಾಗಿ ಬಂದ ನೂರೆಂಟು ರೀತಿ-ರಿವಾಜುಗಳನ್ನು ಇಲ್ಲಿ ಕೇಳಿ...ಇವುಗಳಲ್ಲಿ ಯಾವುದನ್ನು ನಂಬುತ್ತೀರೋ, ಯಾವುದನ್ನು ಬಿಡುತ್ತೀರೋ ನಿಮಗೇ ಬಿಟ್ಟಿದ್ದು.   

ಇಡಿ ಕುಂಬಳದಕಾಯಿ ಗೃಹದೊಳಗೆ ತರಬ್ಯಾಡ 
ಮನೆಯೊಳಗೆ ಉಗುರ ತೆಗಿ-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧ ||

ಮಧ್ಯಾಹ್ನ ಮೇಲೆ ತುಳಸಿಯ ಕೊಯ್-ಬ್ಯಾಡ
ಹೊತ್ತ್-ಮುಳ್ಗದ್ ಮ್ಯಾಲೇ ಗುಡಿಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೨ ||

ಉಪ್ಪು, ಮೊಸರುಗಳ ಕಡ ಕೊಡುವದೇ ಬ್ಯಾಡ
ಬಿಸಿ-ಅನ್ನಕೆಂದೂ ಮೊಸರ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೩ ||

ಮನೆ ಬಾಗ್ಲು ಹಾಕ್ವಾಗ ಚಿಲಕ ಶಬ್ದವು ಬ್ಯಾಡ
ಊಟ ಮಾಡ್ವಾಗ ಏಳ್ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೪ ||

ಸೋಮವಾರದ ದಿನದಿ ತಲೆಗೆಣ್ಣೆ ಹಾಕ್-ಬ್ಯಾಡ
ಒಂಟಿ ಕಾಲಲ್ಲಿ ನಿಲಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೫ ||

ಮಂಗ್ಳಾರ ತವರಿಂದ ಮಗ್ಳು ಮನಿಗೆ ಹೋಪ್ದ್-ಬ್ಯಾಡ
ಸೊಸೆ ಶುಕ್ರವಾರ ಕಳ್ಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೬ ||

ತಲೆ-ಕೂದಲೆಂದೂ ಒಲೆ-ಬೆಂಕಿಗ್ ಹಾಕ್ಬ್ಯಾಡ
ಹೊಸ್ತಿಲನು ಮೆಟ್ಟುತ ದಾಟ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೭ ||

ಮನೆ ಬಿಟ್ಟು ಹೊರಟಾಗ ಕಸ ಗುಡ್ಸುವದು ಬ್ಯಾಡ
ಗೋಡೆ ಮೇಲ್ ಕಾಲ್ಕೊಟ್ಟು ಮಲಗ್ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೮ ||

ರಾತ್ರಿಯ ಹೊತ್ತೆಂದೂ ಬಟ್ಟೆ ಒಗೆಯಲು-ಬ್ಯಾಡ
ಅಕ್ಕಿ ನೀರಿಗೆ ಹಾಕಿ ತೊಳಿ-ಬ್ಯಾಡ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೯ ||

ಒಂದು ಕಾಯಿಯ ನೀರ ಮೂರ್-ಮಕ್ಳಿಗ್ ಕುಡ್ಸ್-ಬ್ಯಾಡ
ಒಡಕು ಬಳೆಗಳನು ಧರಿಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೦ ||

ಮಲಗ್-ಕೊಂಡ ಚಾಪೆಯ ಮಡಿಸದೇ ಬಿಡಬ್ಯಾಡ
ಉಗುರು ಕಚ್ಚುವದ ಮಾಡ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೧ ||

ಅಣ್ಣ-ತಮ್ಮ ಒಂದೇ ದಿನ ಚೌರ ಮಾಡ್-ಬ್ಯಾಡ
ಕತ್ತರಿ, ಚೂರಿಗಳು ಕೈಗ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೨ ||

ಹುಟ್ಟಿದ ದಿನದಂದು ಮುಂಜಿ ಮಾಡ್ವದು ಬ್ಯಾಡ
ಒಂದೇ ಬಾಳೆಲೆಯ ತರಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೩ ||

ಹಿಡಿ-ಕಟ್ಟು ಮೇಲ್ಮುಖವ ಮಾಡಿ ನಿಲ್ಲಿಸಬ್ಯಾಡ
ಉಂಡ್ ಕೈ ಎಂದೂ ಒಣಗ್ಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ  || ೧೪ ||

ಸತ್ತವರ ಮೀಯಿಸಲು ಹಾಕುವದ ಮರೆ-ಬ್ಯಾಡ
ಹುಣ್ಮೆ-ಅಮವಾಸ್ಯೆಗೆ [ಗದ್ದೆ]ಹೂಡ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ  || ೧೫ ||

ಮುಸ್ಸಂಜೆ ಹೊತ್ತಿನಲಿ ಮಲಗಲು ಹೋಗ್-ಬ್ಯಾಡ 
ಉದ್ಧಾರವಾಗದು ನಿನ-ಪಾಡು ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೬ ||

ನೀರು ಕಾಲಿಗೆ ಹಾಕ್ತ(ಹಾಕುತ) ಮಡು-ನೆನೆಸ ಮರೆಬ್ಯಾಡ
ಮರೆತರೆ ಶನಿ ಕಾಟ ತಪ್ಪದಿರದು ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೭ ||

ಕೇಳು ನೀ ಹೊಸ್ತಿಲಿನ ಮೇಲೆ ಕೂಡಲು-ಬ್ಯಾಡ 
ನರಸಿಂಹ ಹಿರಣ್ಯನ ಸೀಳಿರುತಿಹ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೮ ||

ಒಂದ್ ಚಪ್ಲಿ ಹಾಕ್ಕೊಂಡು ಏಳ್-ಹೆಜ್ಜೆ ನಡಿ-ಬ್ಯಾಡ
ಸಾವ ನಿಮ್ಮನೆಗೆ ತರ-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೯ || 

ಉಂಡಾದ ಮೇಲೆಂಟು ಹೆಜ್ಜೆ ಇಡದಿರ-ಬ್ಯಾಡ  
ಯಮ ಕಾಯುತಿರುವ ಸರಿ ನೋಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೨೦ ||

ಹೀಗುಂಟು ನೂರೆಂಟು ನಮ್ಮ "ಬೇಕು-ಬ್ಯಾಡ"
ತಿಳಿದು ನೋಡುವದ ಬಿಡಬ್ಯಾಡ ... ನನ ಕಂದ
ನಂಬುವದೋ-ಬಿಡುವದೋ ನೀ ನೋಡ || ೨೧ ||

ಶ್ರೀಕೃಷ್ಣಾರ್ಪಣಮಸ್ತು
ಸದ್ವಿಚಾರ ಸಂಗ್ರಹ

ಗುರುವಾರ, ಏಪ್ರಿಲ್ 7, 2022

ಭಯಂಕರ ಆಣೆ, ಶಾಪಗಳು :-

ಭಯಂಕರ  ಆಣೆ, ಶಾಪಗಳು :- 

ರಾಕ್ಷಸರು  ಹುಟ್ಟಿನ ಜೊತೆಯಲ್ಲಿಯೇ, ದೇವತೆಗಳು  ಮನುಷ್ಯರಾಗಿ  ಜನ್ಮ ತಾಳಿದರು.  ಇಂತಹ ಶಕ್ತಿಗಳನ್ನು  ಸಂಹರಿಸಲು ಪ್ರಬಲ ಶಕ್ತಿಯೇ  ಬೇಕು. ಆಗ  ಭಗವಂತನು ಅವತರಿಸುವನು.  ಸೃಷ್ಟಿಯ ಸಮತೋಲನವನ್ನು ಕಾಪಾಡಲು  ಕರ್ಮ ಮಾಡುವುದು, ಕರ್ಮ ಮಾಡುವ ಅನಿವಾರ್ಯವಾಗಿ ಸಮಸ್ಯೆಗಳು ಪರಿಹಾರ, ಆಣೆ, ಪ್ರಮಾಣ, ಶಪತ, ಶಾಪ, ಪಾಪ ಪುಣ್ಯ,ದಿಂದ  ಸಿಗುವ  ಫಲಾಫಲಗಳನ್ನು ಸ್ವೀಕರಿಸುವುದು. ಇದು ಜಗದ ನಿಯಮ. ನಾವು ನಿಮಿತ್ತ ಮಾತ್ರ ಸೂತ್ರಧಾರ  ಭಗವಂತ. 

ವಾಲ್ಮೀಕಿಗಳು ರಾಮಾಯಣ ಬರೆಯಲು ಒಂದು ಶಾಪದ ಘಟನೆ ಕಾರಣವಾಗುತ್ತದೆ.  ಒಂದು ಮುಂಜಾನೆ ತಮಸಾ ನದಿಗೆ  ಸ್ನಾನಕ್ಕೆ ಹೋದಾಗ, ವಾತಾವರಣ  ಆಹ್ಲಾದವಾಗಿರುತ್ತದೆ. ಹಕ್ಕಿಗಳ ಕಲರವ, ಸುಖದಲ್ಲಿದ್ದ  ಗಂಡು-ಹೆಣ್ಣು ಕ್ರೌಂಚಪಕ್ಷಿಗಳೆರಡು  ಚಿಲಿಪಿಲಿ ಗುಟ್ಟುತ್ತ  ಸಂತೋಷದಲ್ಲಿರುವುದನನ್ನು ನೋಡಿದ  ವಾಲ್ಮೀಕಿಗಳು  ಆನಂದವನ್ನು  ಆಸ್ವಾದಿಸುತ್ತಿದ್ದ  ಕ್ಷಣ. ಬೇಡನೊಬ್ಬ ಗಂಡು ಪಕ್ಷಿಗೆ ಬಾಣ ಬಿಡುತ್ತಾನೆ. ಅದು ಪ್ರಾಣ ಬಿಡುತ್ತದೆ. ಹೆಣ್ಣು ಪಕ್ಷಿಯ  ನೋವಿನ ಆಕ್ರಂದನ ವಾಲ್ಮೀಕಿಗಳಿಗೆ  ಸಹಿಸಲಾಗಲಿಲ್ಲ  ತಕ್ಷಣ, ' ನಿನಗೆ  ನಿಲ್ಲಲು  ಎಲ್ಲಿಯೂ  ನೆಲೆ ಸಿಗದಿರಲಿ' ಎಂದು ಬೇಡನಿಗೆ  ಶಾಪ ಕೊಡುತ್ತಾರೆ. ಈ ಘಟನೆ ಮುಂದೆ ರಾಮಾಯಣ ಬರೆಯಲು ಕಾರಣವಾಗುತ್ತದೆ. ಹಾಗೆಯೇ ದಶರಥನಿಗೆ ಶ್ರವಣಕುಮಾರನ  ಹೆತ್ತವರ  ಶಾಪ.  ಮುಂದೊಂದು ದಿನ ದಶರಥ  ಪತ್ನಿ  ಕೈಕೆಯ  ಧೈರ್ಯ ಜಾಣ್ಮೆ ಗೆ  ಮೆಚ್ಚಿ ಕೊಟ್ಟ ಎರಡು ವರಗಳೇ  ಅವನಿಗೆ ಮುಳುವಾಗುತ್ತದೆ.  ಇದು ರಾಮಾಯಣಕ್ಕೆ ತಿರುವು ಕೊಡುತ್ತದೆ. 

ಶಾಪಗಳ ಜೊತೆ ಭಯಂಕರ ಆಣೆಗಳು ಇದ್ದವು.  ತಾಯಿ ಕೈಕೆಯ ಆಸೆಯಂತೆ ರಾಮ, ಸೀತೆ, ಲಕ್ಷ್ಮಣ, ಹದಿನಾಲ್ಕು ವರ್ಷಗಳು ವನವಾಸಕ್ಕೆ ಹೋಗುತ್ತಾರೆ. ವನವಾಸಕ್ಕೆ ಹೋಗಿ  ಒಂದೆ ವಾರದಲ್ಲೇ ಬಳಲಿದ ದಶರಥ ಸ್ವರ್ಗಸ್ಥನಾದನು.  ಭರತ  ಬರುತ್ತಾನೆ. ತನ್ನ ತಾಯಿ  ಕೈಕೆಯ ಕೆಟ್ಟನಡೆಯಿಂದಾಗಿ  ರಾಮನ ವನವಾಸ, ತಂದೆಯ ಸಾವು ಆಗಿದ್ದೆಂದು  ಭರತನಿಗೆ ತಿಳಿಯುತ್ತದೆ.  ಯಾವುದೇ ಕೆಟ್ಟ ತಾಯಿಯೂ ಸಹಿಸಿಕೊಳ್ಳಲಾರದಷ್ಟು, ತನ್ನ ತಾಯಿ ಕೈಕೆಯನ್ನು ತೀವ್ರವಾಗಿ ಖಂಡಿಸುತ್ತಾನೆ. ನೋವು, ದುಃಖ, ಹತಾಶೆ, ಅವಮಾನ ಹಾಗೂ  ಬಹಳ ಹೆದರಿಕೆಯಿಂದ  ತಾಯಿ ಕೌಸಲ್ಯೆ ಇದ್ದಲ್ಲಿಗೆ ಬರುತ್ತಾನೆ. ಭರತನನ್ನು  ನೋಡಿದ  ಕೌಸಲ್ಯೆ  ಅನುಮಾನದಿಂದ, "ಭರತ ಮಹಾರಾಜರು ಬರಬೇಕು ತಮ್ಮ ತಾಯಿ ಕೊಡಿಸಿದ ರಾಜ್ಯವನ್ನು ಚೆನ್ನಾಗಿ ಪಾಲನೆ ಮಾಡಿರಿ. ನಾನು ನನ್ನ ಮಗ ರಾಮನ ಜೊತೆ ಇರುವಂತೆ ದಯವಿಟ್ಟು ವ್ಯವಸ್ಥೆ ಮಾಡಿ, ಇಲ್ಲವೇ  ನಾವೇ   ಹೊರಡುತ್ತೇವೆ  ಎಂದಳು." ಈ ಮಾತುಗಳನ್ನು ಕೇಳಿ ಭರತನಿಗೆ  ಯಾರೊ ಕಾದ ಸೀಸವನ್ನು  ಕಿವಿಗೆ  ಸುರಿದಂತಾಯಿತು.  ತಾನು ತಿಳಿದುಕೊಂಡಂತೆ  ಆಗಿದೆ.  ತನ್ನ ಮೇಲೆ ತಾಯಿ ಕೌಸಲ್ಯೆಗೆ ಅನುಮಾನ ಇದೆ ಎಂಬುದು ಗೊತ್ತಾಯಿತು. 

ರಾಮಚಂದ್ರನನ್ನು ಕಾಡಿಗೆ ಕಳಿಸುವ ಪಿತೂರಿಯಲ್ಲಿ ತನ್ನ ಪಾತ್ರವೇನೂ ಇರಲಿಲ್ಲ ಎನ್ನುವುದನ್ನು ಸಾಬೀತುಪಡಿಸಲು ತಾಯಿ ಕೌಸಲ್ಯೆ  ಮುಂದೆ ಮಂಡಿಯೂರಿ ಕುಳಿತು ಆಣೆಗಳನ್ನು ಮಾಡುತ್ತಾನೆ.  ಮಾತೆ, ನನ್ನ ಪಿತೂರಿಯಿಂದ ರಾಮನು  ಕಾಡಿಗೆ ಹೋಗಿದ್ದೆ ಆದಲ್ಲಿ, ನಾನು ಅಭ್ಯಾಸ ಮಾಡಿದ ಗ್ರಂಥ ಶಾಸ್ತ್ರ, ಶಸ್ತ್ರಾಸ್ತ್ರಗಳ  ವಿದ್ಯೆಗಳು ನನ್ನ  ಸಮಯಕ್ಕೆ ಬರದೆ ಬುದ್ಧಿ  ಓಡದಿರಲಿ, ಪಿತೂರಿಯಲ್ಲಿ ನಾನಿದ್ದರೆ, ಪಾಪಿಷ್ಠರು ನೀಚರ  ಬಳಿ  ಇರುವಂತೆ  ಗತಿ ಬರಲಿ, ಹಸುಗಳನ್ನು ಕಾಲಿನಿಂದ ಒದೆಯುವ ಬುದ್ಧಿ ಬರಲಿ, ನನ್ನ ತಪ್ಪು ಇದ್ದರೆ, ಒಳ್ಳೆಯ ರಾಜನಿಗೆ ದ್ರೋಹ ಮಾಡುವ ಕೆಟ್ಟತನ ಬರಲಿ,  ಹಸಿದು ತಿನ್ನುತ್ತಿರುವವನ ಅನ್ನವನ್ನು ಕಿತ್ತು ಎಸೆಯುವಂತೆ ಆಗಲಿ,  ತೆರಿಗೆ ವಸೂಲಿ ಮಾಡಿಯೂ  ಪ್ರಜೆಗಳನ್ನು ಕಾಪಾಡದ ಕೆಟ್ಟ ರಾಜನ ದುರ್ಬುದ್ಧಿಗಳು ಬರಲಿ.  ಒಳ್ಳೆಯ ಹೆಂಡತಿಗೆ ಮೋಸ ಮಾಡುವ  ಗಂಡನಿಗೆ  ಬರುವ  ದುರ್ಬುದ್ಧಿಗಳೆಲ್ಲಾ ನನಗೆ ಬರಲಿ. ವಯಸ್ಸಾದ ತಂದೆ-ತಾಯಿಯನ್ನು  ಮನೆಯಿಂದ ಹೊರಹಾಕಿದ  ನೀಚಮಗ  ನಾನಾಗಲಿ,  ರಾಮನನ್ನು  ಕಾಡಿಗೆ ಕಳಿಸುವಲ್ಲಿ ನನ್ನ ಪಾತ್ರ ಇದ್ದರೆ, ಆಗತಾನೆ ಹುಟ್ಟಿದ ಶಿಶುವಿನ ಕುತ್ತಿಗೆ ಹಿಸುಕಿ ಸಾಯಿಸುವಂಥ  ಕೆಟ್ಟಗುಣ ಬರಲಿ,  ಹೀಗೆ ಇನ್ನೂ ಬೇಕಾದಷ್ಟು ತನಗೆ ತಾನೇ ಶಪಿಸಿಕೊಳ್ಳುತ್ತಾ, ದುಃಖವನ್ನು ತಾಳಲಾರದೆ ಆಯಾಸದಿಂದ ಕೌಸಲ್ಯೆ  ಪಾದಗಳ ಮೇಲೆ ಎಚ್ಚರ ತಪ್ಪಿ ಬಿದ್ದನು.  ಭರತನ ನೋವಿನ  ಮಾತುಗಳನ್ನು ಕೇಳಿದ ಕೌಸಲ್ಯೆ ಗೆ, ನನ್ನ ಮಗ ಭರತನಿಂದ  ಇಂತಹ ಕೆಟ್ಟ ಕೆಲಸ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂಬುದು ಖಚಿತವಾಯಿತು. ಅವನನ್ನು  ತನ್ನ ತೊಡೆಯ ಮೇಲೆ ಮಲಗಿಸಿ ಕೊಂಡು ನೀರು ಕುಡಿಸಿ ಉಪಚರಿಸಿದಳು. ಇದು ರಾಮಾಯಣದ  ಶಾಪ ಆಣೆಗಳ, ತುಣುಕು. 

ಮಹಾಭಾರತದಲ್ಲಂತೂ, ಪಾಪ,  ಶಾಪ, ತಾಪ, ಶಪಥಗಳು ಲೆಕ್ಕವಿಲ್ಲದಷ್ಟು.
ಅದರಲ್ಲಿ  ಧೃತರಾಷ್ಟ್ರ ಅರಮನೆಯಲ್ಲಿದ್ದರೆ,  ಪಾಂಡು ಕಾಡು-ಮೇಡುಗಳಲ್ಲಿ ಕಳೆದದ್ದು ಹೆಚ್ಚು, ಕಾಡಿನಲ್ಲಿ ಕಾಲ ಕಳೆಯುವುದು ಆತನಿಗೆ ಬಹಳ ಇಷ್ಟವಿತ್ತು. ಹೀಗೊಮ್ಮೆ ತನ್ನ ಮಡದಿಯರಾದ  ಕುಂತಿ ಮತ್ತು ಮಾದ್ರಿಯರ  ಜೊತೆಗೆ ವನವಿಹಾರಕ್ಕೆ ಬಂದಾಗ  ಭೇಟಿಯಾಡಲು ಹೋಗುತ್ತಾನೆ, ಮೈಥುನ ಕ್ರಿಯೆಯಲ್ಲಿದ್ದ  ಗಂಡು-ಹೆಣ್ಣು ಜಿಂಕೆಗಳ ಮೇಲೆ ಬಾಣ ಪ್ರಯೋಗ ಮಾಡುತ್ತಾನೆ. ಬಾಣ  ಚುಚ್ಚಿದ ನೋವಿನಲ್ಲೇ,  ಗಂಡು ಜಿಂಕೆ  ಮಾತನಾಡಿ, ನೀನು ಮಾಡಿದ್ದು ಅಪರಾಧ ಎನ್ನುತ್ತದೆ,  ಯುದ್ಧದಲ್ಲಿ ಸೈನಿಕರನ್ನು ಕೊಲ್ಲುವುದು ಅವಶ್ಯ, ಹಾಗೆ ಬೇಟೆಯಾಡುವುದು ರಾಜ ಧರ್ಮ ತಪ್ಪು ಹೇಗೆ ಆಗುತ್ತದೆ ಎಂದು ಪಾಂಡು ಕೇಳಿದ್ದಕ್ಕೆ,  ಬೇಟೆಯಾಡುವುದು ನಿನ್ನ ತಪ್ಪಲ್ಲ ಆದರೆ ಸನ್ನಿವೇಶ, ಸಂದರ್ಭಗಳನ್ನು  ನೋಡಿ ಖಚಿತಪಡಿಸಿಕೊಂಡು ಬೇಟೆಯಾಡುವುದು ರಾಜಧರ್ಮ.  ಅದರಲ್ಲೂ  ಪ್ರಾಣಿ-ಪಕ್ಷಿ, ಕ್ರಿಮಿ,ಕೀಟ,  ,ಜಂತು ಯಾವುದೇ ಆಗಿರಲಿ, ಅಂತಹ  ಗಂಡು - ಹೆಣ್ಣು  ಸುಖದಲ್ಲಿದ್ದಾಗ  ಯಾರೇ ಆದರೂ ಸರಿ,  ಅವುಗಳಿಗೆ  ತೊಂದರೆ ಮಾಡುವುದು, ಬಾಣ ಬಿಡುವುದು, ಸಾಯಿಸುವುದು ಅಕ್ಷಮ್ಯ, ಎಂದು ಶಾಪ ಕೊಡುತ್ತಾ,  ನಿನ್ನ ಜೀವನದಲ್ಲಿ ಇಂತಹ ಸುಖದ ಸನ್ನಿವೇಶ ಇದ್ದಾಗಲೇ  ನಿನಗೆ ಸಾವು ಬರಲಿ' ಎಂದು ಶಾಪ ಕೊಟ್ಟು ಜಿಂಕೆಯ ರೂಪದಲ್ಲಿದ್ದ ಮಹರ್ಷಿ 'ಕಿಂದಮ' ನಿಜ ರೂಪ ತಾಳುತ್ತಾನೆ. ನಂತರ ಪಾಂಡು ಕುರಿತು, ನೀನು ನನ್ನನ್ನು ಜಿಂಕೆ ರೂಪದಲ್ಲಿದ್ದಾಗ ಕೊಂದ ಕಾರಣ ನಿನಗೆ 'ಬ್ರಹ್ಮಹತ್ಯಾ' ದೋಷ ಬರುವುದಿಲ್ಲ. ನೀನು  ಸುಖ ಅನುಭವಿಸುವ ಸಮಯದಲ್ಲಿ ಶಾಪ ಫಲಿಸುತ್ತದೆ ಎಂದು ಹೇಳಿ ಜಿಂಕೆಗಳು ಅಸುನೀಗಿದವು. 

ಶಾಪಗಳಲ್ಲಿ ಕೆಲ ವಿಧಗಳಿವೆ.  ಕಿಂದಮ ಮಹರ್ಷಿ ಶಾಪ ಕೊಟ್ಟಿರಬಹುದು. ಇದು  ತೊಂದರೆ ಇಲ್ಲದ ‌ಶಾಪ, ಪಾಂಡು ಕಾಮ  ಬಿಟ್ಟಿದ್ದರೆ ಎಷ್ಟು ವರ್ಷ ಬೇಕಾದರೂ ಬದುಕಬಹುದಿತ್ತು. ನಂತರ ಪಾಂಡು ಸಂನ್ಯಾಸ ಸ್ವೀಕರಿಸಿದ. ಬದುಕಿನುದ್ದಕ್ಕೂ  ಪ್ರೀತಿ, ದ್ವೇಷ, ಮಾಡುವಂತಿಲ್ಲ, ಮರಣವನ್ನು ತಳ್ಳುವಂತಿಲ್ಲ ತಟಸ್ಥ ರೀತಿಯ ಜೀವನ. ಪಾಂಡು  ವೈಭೋಗ ಜೀವನ ತೊರೆದು, ಸಾತ್ವಿಕ ಜೀವನ ಆರಿಸಿಕೊಂಡನು , ಬೇಡಿ ತಿನ್ನುವುದು ಅದೂ  ಸಿಕ್ಕರೆ ಮಾತ್ರ ಆಹಾರ, ಸಂಗ್ರಹಿಸುವುದು ಇಲ್ಲವೇ ಇಲ್ಲ. ಈ ರೀತಿ ಅವನಿಗೆ ಅವನೇ ಶಾಪ ದಂತಹ  ಕಟ್ಟುಪಾಡುಗಳನ್ನು  ಹಾಕಿ ಕೊಂಡ.  ಆದರೆ ಕುಂತಿ ಮಾದ್ರಿಯರು ಇದಕ್ಕೆ ಒಪ್ಪಲಿಲ್ಲ. ಎಲ್ಲರೂ ಬೇರೆ ಬೇರೆಯಾಗಿ ಬದುಕುವುದೆಂದು ನಿಶ್ಚಯಿಸಿದರು. ಹಿಮಾಲಯದತ್ತ  ಹೊರಟು ಶತಶೃಂಗ ಪರ್ವತಕ್ಕೆ  ಬಂದರು. ಅಲ್ಲಿ ತಪಸ್ವಿಗಳು, ಸಿದ್ಧರು, ಚಾರಣರು ಇದ್ದರು. ಪಾಂಡು ಮಹರ್ಷಿಗಳ ಪ್ರೀತಿ ವಿಶ್ವಾಸ ಗಳಿಸಿದನು.  'ಬ್ರಹ್ಮರ್ಷಿ' ಆಗುವಷ್ಟು ತನಗೆ ತಾನೇ  ವಿಧಿಸಿಕೊಂಡು ಕಠಿಣಾತಿಕಠಿಣ  ತಪಸ್ಸಿನ ಜೀವನ ನಡೆಸಿದ್ದನು.  ಮಕ್ಕಳಿರದ ಕಾರಣ  'ಶತಶೃಂಗ' ಕ್ಕಿಂತ ಮೇಲೆ  ಹೋಗಲಾಗಲಿಲ್ಲ. ಅವನಿಗಿದ್ದ  ಶಾಪ ಕಾರಣ, ಆ ದಿನ ಅವನ  ಮನಸ್ಸು ದುರ್ಬಲವಾಗುತ್ತದೆ, ಒಂದು ಸಂದರ್ಭದಲ್ಲಿ , ಮಾದ್ರಿ ಬೇಡಬೇಡವೆಂದರೂ, ಪಾಂಡು ಸಂಯಮ ಕಳೆದುಕೊಳ್ಳುತ್ತಾನೆ.   ಮರಣ  ಬರುತ್ತದೆ. 

ಕರ್ಮಸಿದ್ಧಾಂತದಂತೆ, ಯಾವುದನ್ನು , ಯಾರಿಂದಲೂ,ತಪ್ಪಿಸಿಕೊಳ್ಳಲು,
ಸರಳ  ಮಾರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಸ್ವತಹ ಅನುಭವಿಸಲೇಬೇಕು ಇಲ್ಲದಿದ್ದರೆ,  ಪಾಪದ ದುಪ್ಪಟ್ಟು ಸತ್ಕಾರ್ಯ ಮಾಡಿ  ಜಗತ್ತಿಗೆ ಒಳ್ಳೆಯದನ್ನು ಮಾಡುವ  ಮೂಲಕ  ಆಕಸ್ಮಿಕವಾಗಿ ಅಥವಾ ಗೊತ್ತಿಲ್ಲದೆ ಬಂದ  ಶಾಪದಿಂದ  ಮುಕ್ತಿ ಪಡೆಯಬಹುದು. 

ಅಷ್ಟಾದಶ ಪುರಾಣನಾಂ, ಸಾರಂ ವ್ಯಾಸೇನ  ಕೀರ್ತಿತಂ !
ಪರೋಪಕಾರಃ  ಪುಣ್ಯಾಯ  ಪಾಪಾಯ ಪರಪೀಡನಂ! 

೧೮, ಪುರಾಣಗಳಲ್ಲೂ  ವ್ಯಾಸರು ಉಲ್ಲೇಖಿಸಿರುವ 
ಸಾರ ಇದೇ,  ಪರೋಪಕಾರ  ಮಾಡಿದರೆ  ಪುಣ್ಯ, 
ಹಿಂಸೆ  ಮಾಡಿದರೆ  ಪಾಪ  ಲಭಿಸುತ್ತದೆ ಎಂದು. 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಸುಭೀಕ್ಷವಾಗಿರುವ 'ಶೃಂಗೇರಿ

ಸುಭೀಕ್ಷವಾಗಿರುವ   'ಶೃಂಗೇರಿ' :- 

ಈ ಕತೆಯನ್ನು ಮನೆಯಲ್ಲಿ ಕೇಳಿದ್ದು, ಹಾಗೂ ಸ್ವಲ್ಪ ಓದಿದ್ದೆ. ಹೆಚ್ಚುಕಡಿಮೆ ಕಥೆ ಹೀಗೆ ಇದೆ.  ಸ್ವಲ್ಪ ವ್ಯತ್ಯಾಸವಿರಬಹುದು. ಒಳ್ಳೆಯ ಕಥೆ ಓದಿ. 

ಇದು ರಾಮಾಯಣ ಕಾಲದಲ್ಲಿ ನಡೆದದ್ದು. ಅಯೋಧ್ಯಾ ಪತಿ ದಶರಥ ಮಹಾರಾಜನಿಗೆ, ಕೌಸಲ್ಯೆ, ಸುಮಿತ್ರೆ, ಕೈಕೆಯಿ,ಎಂಬ ಮೂರು ಪತ್ನಿಯರು. ಇವರಲ್ಲಿ  ಕೌಸಲ್ಯೆಗೆ ಶ್ರೀರಾಮಚಂದ್ರ ,ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಘ್ನರು ಮತ್ತು ಕೈಕೇಯಿಗೆ ಭರತ. ಇವರು ಮಕ್ಕಳು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರೆಲ್ಲರಿಗಿಂತ ಮೊದಲು ದಶರಥ ಮತ್ತು  ಕೌಸಲ್ಯೆಗೆ ಒಬ್ಬ ಮಗಳು ಇದ್ದಳು. ಇವಳ ಹೆಸರು ಶಾಂತ. ಇವಳು ನೋಡಲು ರೂಪವಂತೆ ,ವಿದ್ಯಾವಂತೆ ,ಗುಣವಂತೆ, ಹಾಗೂ ಸಕಲ ವಿದ್ಯಾ ಪಾರಂಗತೆ, ಯುದ್ಧ ಶಸ್ತ್ರ ಕಲೆಯನ್ನು ಕಲಿತಿದ್ದಳು. ಇಂಥ ಮಗಳಿದ್ದರೂ ಸಹ ದಶರಥನಿಗೆ ಏನೋ ಒಂದು ಚಿಂತೆ ಮನಸ್ಸಿನಲ್ಲಿ ಕಾಡುತ್ತಿತ್ತು. ರಾಜ್ಯಕ್ಕೆ ವಾರಸುದಾರರಿಲ್ಲ, ವಂಶೋದ್ಧಾರಕ ಗಂಡು ಮಗು ಬೇಕು ಎಂಬುದು ದಶರಥನ ಕೊರಗು. ಇದು ಮಗಳು ಶಾಂತಳಿಗೂ  ತಿಳಿದಿತ್ತು. ತಾನು ಎಷ್ಟೇ ವಿದ್ಯಾವಂತೆ, ಬುದ್ಧಿವಂತೆಯಾದರೂ, ತಂದೆಗೆ ಇದು ಮುಖ್ಯವಲ್ಲ  ತಾನು ಹೆಣ್ಣು ಮಗಳು, ರಾಜ್ಯಕ್ಕೆ ವಾರಸದಾರ   ಮಗ ಬೇಕು. ಇದು ತಂದೆಗೆ ಬಹಳ ಮುಖ್ಯ ಎಂಬುದನ್ನು ಅರಿತಿದ್ದಳು. 

ದಶರಥನು  ಚಿಂತೆಯಿಂದ  ಹೊರಬರಬೇಕೆಂದು, ಕುಲಗುರುಗಳಾದ ವಸಿಷ್ಟ ಮಹರ್ಷಿ ಗಳಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿ ಇದಕ್ಕೆ ಪರಿಹಾರವೇನು? ಎಂದು ಕೇಳಿದಾಗ, ವಸಿಷ್ಠರು ಪುತ್ರಕಾಮೇಷ್ಟಿ ಯಾಗ ಮಾಡಬೇಕೆಂದು ಅದನ್ನು ಋಷ್ಯಶೃಂಗ ಮುನಿಗಳು  ಮಾಡಬೇಕೆಂದು  ಹೇಳಿದರು. ಋಷ್ಯಶೃಂಗ ಮುನಿಗಳು ಇವರಿಗೆ 'ಮಳೆ' ಮುನಿಗಳು ಎಂಬ ಹೆಸರು ಇತ್ತು. ಏಕೆಂದರೆ, ಋಷ್ಯಶೃಂಗರು  ಇರುವ ಸುತ್ತಮುತ್ತ ಅಂದರೆ ಅದೆಷ್ಟೋ ದೂರದ ತನಕವೂ ಮಳೆ ,ಬೆಳೆಗೆ ಕೊರತೆಯಿರುವುದಿಲ್ಲ ಮತ್ತೆ ಯಾವುದೇ ಅವಘಡಗಳು ಸಂಭವಿಸುವುದಿಲ್ಲ. ಇಂಥದೊಂದು ವರ ಅವರಿಗೆ ಇತ್ತು. 

'ಋಷ್ಯಶೃಂಗ'. ಮುನಿಗಳ ಹಿನ್ನೆಲೆ:- ವಿಭಾಂಡಕ ಮಹರ್ಷಿಗಳು. ಕಶ್ಯಪ ಬ್ರಹ್ಮನ ಮಗ .ಇವರು ಪರಮೇಶ್ವರನಿಂದ 'ವರ' ಪಡೆಯಬೇಕೆಂದು ಘೋರ ತಪಸ್ಸನ್ನು ಆಚರಿಸುತ್ತಾರೆ.  ಸಹಸ್ರಾರು ವರ್ಷಗಳ ಅವರ ತಪಸ್ಸಿನ ಫಲದ ಪ್ರಖರತೆ ಮತ್ತು ಅವರ ಶಿರಸ್ಸಿ ನಿಂದ ಬಂದ ತಪೋ ಜ್ವಾಲೆ ಪ್ರಕರವಾಗಿ ಬೆಳಗುತ್ತಾ ಲೋಕವನ್ನು ಆವರಿಸತೊಡಗಿತು. ಇದರಿಂದ ದೇವತೆಗಳು ಹೆದರಿ ಅವರ ತಪಸ್ಸು ಭಂಗ ಮಾಡಲು ದೇವೇಂದ್ರನ ಆಣತಿಯಂತೆ ' ಅಪ್ಸರೆ' ಊರ್ವಶಿಯನ್ನು ಅವರ ತಪಸ್ಸು ಕೆಡಿಸಲು ಕಳಿಸುತ್ತಾರೆ. ಆದರೆ 'ವಿಭಾಂಡಕರು'  ಶಿಖರಗಳ ಮಧ್ಯೆ ಇದ್ದುದರಿಂದ, ಶಿಖರದ ಎತ್ತರಕ್ಕೆ ಹೋಗಲು ಅವರ ತಪಸ್ಸಿನ ಪ್ರಖರತೆ ಅವಳನ್ನು ತಡೆಯುತ್ತದೆ. ಹೀಗಾಗಿ ಊರ್ವಶಿಗೆ ಮೇಲೆ ಹೋಗಲು ಸಾಧ್ಯವಾಗಲಿಲ್ಲ. ಅವಳು ತುಂಗಾನದಿಯ  ದಡದಲ್ಲಿ ಕುಳಿತು ಅವರಿಗಾಗಿ ಕಾಯುತ್ತಾ ಸಮಯ ಕಳೆಯುತ್ತಾಳೆ. ನಿತ್ಯದಂತೆ ಸ್ನಾನದ ಸಮಯಕ್ಕೆ ವಿಭಾಂಡಕರು ನದಿಗೆ  ಬರುತ್ತಾರೆ. ಊರ್ವಶಿ ಆ ಸಮಯದಲ್ಲಿ ನದಿಯಲ್ಲಿ ಮೋಹಕವಾಗಿ ಜಲಕ್ರೀಡೆಯಾಡುತ್ತಿದ್ದಳು. ಇದನ್ನು ನೋಡಿದ ಮಹರ್ಷಿಗಳಿಗೆ ಒಂದು ಕ್ಷಣ  ಮನಸ್ಸು ವಿಚಲಿತವಾಗುತ್ತದೆ. ಇದರ ಪರಿಣಾಮ ಅವರಿಂದ ವೀರ್ಯಸ್ಖಲನ ಗೊಂಡು ನದಿಯಲ್ಲಿ ಸೇರುತ್ತದೆ. ಅಪ್ಸರೆ ತನ್ನ ಕೆಲಸ ಮುಗಿಯಿತೆಂದು ಅವಳು ದೇವಲೋಕಕ್ಕೆ ಹೋದಳು. ಆ ಸಮಯಕ್ಕೆ ನೀರಡಿಕೆ ದಾಹದಿಂದ ಒಂದು ,'ಜಿಂಕೆ' ಅಲ್ಲಿಗೆ  ಬರುತ್ತದೆ. ಅದು ನದಿಯ ನೀರು ಕುಡಿದಾಗ, ಅದರ  ಮೂಲಕ  ವಿಭಾಂಡಕ ಮಹರ್ಷಿಗಳ  ರೇತಸ್ಸು ಅದರ ಹೊಟ್ಟೆ ಸೇರುತ್ತದೆ. ಜಿಂಕೆ ಗರ್ಭಧರಿಸಿ ದಿನ  ತುಂಬಿದ ಮೇಲೆ ಒಂದು ಶುಭ ಮುಹೂರ್ತದಲ್ಲಿ  ಗಂಡು ಮಗುವಿಗೆ ಜನ್ಮ ನೀಡುತ್ತದೆ. ಪ್ರಾಣಿ ಸಹಜ ದಂತೆ ಅದು ಹೊರಟುಹೋಗುತ್ತದೆ. 

ವಿಭಾಂಡಕರು ನಿತ್ಯದಂತೆ ಸ್ನಾನ ಮಾಡಲು ನದಿಗೆ ಬಂದಾಗ ನದೀತೀರದಲ್ಲಿ, ಮಗು ಅಳುತ್ತಿರುವ  ಧ್ವನಿ ಕೇಳಿ, ಆದರ ಬಳಿ ಬಂದಾಗ, ಅವರ ದಿವ್ಯ ದೃಷ್ಟಿಗೆ ತಾವೇ ಮಗುವಿನ ತಂದೆ ಎಂದು ತಿಳಿಯುತ್ತದೆ. ಮಗು 'ಜಿಂಕೆ'ಯ ಗರ್ಭದಿಂದ ಬಂದ ಕಾರಣ, ಮತ್ತು ಮಗುವಿನ ಹಣೆಯ ಮೇಲೆ  ಜಿಂಕೆಯಂತೆ ಶೃಂಗ ವಿರುತ್ತದೆ. ಹೀಗಾಗಿ ಋಷಿಮೂಲ, ಹಾಗೂ' ಶೃಂಗ 'ವಿರುವ ಕಾರಣ ಮಗುವಿಗೆ 'ಋಷ್ಯಶೃಂಗ' ನೆಂದು ನಾಮಕರಣ ಮಾಡುತ್ತಾರೆ. ವಿಭಾಂಡಕ ಮಹರ್ಷಿಗಳಿಗೆ
ತಪಸ್ಸು ಕೆಡಿಸಲು ಬಂದವಳ ಮೇಲೆ ಬಹಳ ಕೋಪ ಬರುತ್ತದೆ. ತಪಸ್ಸು ಕೆಡಿಸಿದ್ದಲ್ಲದೆ, ಮಗುವಿಗೆ ಜನ್ಮ ನೀಡಲು ಕಾರಣಳಾಗಿ  ಅದನ್ನು ಹಾಗೆ ಬಿಟ್ಟು  ಹೋದ ಕಾರಣ ಸ್ತ್ರೀ ಸಂಕುಲದ ಮೇಲೆ ಅವರಿಗೆ ಕೋಪ ಬಂದು ಮಗುವಿಗೆ ಸ್ತ್ರೀಯರ ನೆರಳೇ ಬೀಳಬಾರದೆಂದು, ಗಿರಿಗಳ ಸುತ್ತ ತಮ್ಮ ತಪಃಶಕ್ತಿಯಿಂದ ಬಂಧನ ಮಾಡಿ ಮಗುವನ್ನು ತಾವೇ ಆರೈಕೆ ಮಾಡಿ ಬೆಳೆಸುತ್ತಾರೆ. 

ವಿಭಾಂಡಕ ಮಹರ್ಷಿಗಳ ಮಗ, ಕಶ್ಯಪ ಬ್ರಹ್ಮನ ಮೊಮ್ಮಗ ಋಷ್ಯಶೃಂಗರು ಸಕಲ ವಿದ್ಯಾ ಪಾರಂಗತರು. ದೇವ ವಾಣಿಯಂತೆ ಶೃಂಗೇರಿ ಸಮೀಪದ ಬೆಟ್ಟದ ಕೆಳಗೆ ಚಂದ್ರಮೌಳೇಶ್ವರ ನನ್ನು ಕುರಿತು ತಪಸ್ಸು ಆಚರಿಸುತ್ತಾರೆ. ಪರಮೇಶ್ವರ ಪ್ರತ್ಯಕ್ಷನಾದಾಗ, 'ನಾನು ನಿನ್ನಲ್ಲಿ  ಐಕ್ಯನಾಗಬೇಕು' ಎಂದು ಕೇಳುವ ಬರದಲ್ಲಿ 'ನೀನು ನನ್ನಲ್ಲಿ  ಐಕ್ಯ ನಾಗಬೇಕು' ಎಂದು ಕೇಳಿದಾಗ ಶಿವನು 'ತಥಾಸ್ತು' ಎಂದು ವರ  ಕೊಡುತ್ತಾನೆ.  ಮುಂದೆ ' ಚಂದ್ರಮೌಳೇಶ್ವರನು' ಋಷ್ಯಶೃಂಗ  ಮಹರ್ಷಿಯಲ್ಲಿ ಐಕ್ಯನಾಗುತ್ತಾನೆ. ಋಷ್ಯಶೃಂಗರು ಮೋಡಗಳನ್ನು ಆಕರ್ಷಿಸಿ ಮಳೆ ಬರಿಸುವ ವಿಶಿಷ್ಟ ಶಕ್ತಿಯನ್ನು ಪಡೆದಿದ್ದರು. ಶಿವನಲ್ಲಿ ವರ ಕೇಳುವಾಗ ಆದ ಮಾತಿನ  ವ್ಯತ್ಯಾಸದಿಂದಾಗಿ ಈ ಪ್ರದೇಶಕ್ಕೆ 'ಕಗ್ಗ' ಎಂಬ ಹೆಸರು ಬಂದಿತು. ಮುಂದೆ ಇದು 'ಕಿಗ್ಗ' ಎಂದಾಯಿತು. ಇದು ಋಷ್ಯಶೃಂಗ ಮಹರ್ಷಿಗಳ ಹಿನ್ನೆಲೆ. 

,ಅಯೋಧ್ಯಾ ಪತಿ ದಶರಥ ಮಹಾರಾಜನಿಗೆ ಗಂಡು ಮಕ್ಕಳಿಲ್ಲದ ಕಾರಣ ಪುತ್ರಕಾಮೇಷ್ಠಿಯಾಗ ಮಾಡಬೇಕೆಂದು ಕುಲಗುರುಗಳು ಹೇಳಿದಾಗ ಋಷ್ಯಶೃಂಗರೇ ಯಾಗ ಮಾಡಬೇಕು. ಆದರೆ ಋಷ್ಯಶೃಂಗರು ವಿವಾಹಿತರಲ್ಲ ಹೀಗಿರುವಾಗ ಯಾಗವನ್ನು ಮಾಡುವಂತಿಲ್ಲ. ಈ ಚಿಂತೆಯಲ್ಲಿ ಮುಳುಗಿರುವ  ತಂದೆಯ ಹತ್ತಿರ ಬಂದ ಮಗಳು :ಶಾಂತ' ಅಪ್ಪಾಜಿ ನಾನು ಋಷ್ಯಶೃಂಗರನ್ನು ಮದುವೆಯಾಗುವೆ  ಎಂದಳು. ಈ ಮಾತನ್ನು ಕೇಳಿ ದಶರಥನು ಹೌಹಾರಿದನು.
ತಾಯಿ ಕೌಸಲ್ಯ ಚಡಪಡಿಸಿದಳು. ಆದರೆ ಮಗಳು ಶಾಂತ ಮಾತ್ರ ನಿರ್ಧಾರದ ಧ್ವನಿಯಲ್ಲಿ ಹೇಳಿದ್ದಳು. ದಶರಥನ ಒಳಮನಸ್ಸು ಇದಕ್ಕೆ ಒಪ್ಪಿತ್ತು. ಆದರೆ ಋಷ್ಯಶೃಂಗರು  ಹುಟ್ಟಿದಾಗಿನಿಂದ ಇಂದಿನ ತನಕವೂ ಸ್ತ್ರೀಯರ ಮುಖವನ್ನೇ ನೋಡಿಲ್ಲ. ಅಲ್ಲದೆ ಮಹಾ ತಪಃಶಕ್ತಿ ಉಳ್ಳವರು. ಆ ಬೆಟ್ಟ-ಗುಡ್ಡಗಳ ನಡುವೆ ಅವರನ್ನು ಕಾಣಲು ಕೆಲವು ಮಹಿಳೆಯರು ಹೋದವರು ತಿರುಗಿ ಬಂದ ಉದಾಹರಣೆಯೇ ಇರಲಿಲ್ಲ. ಹೀಗಿರುವಾಗ ಇವರ ಹತ್ತಿರ ಹೋಗುವುದೆಂದು, ಆಗುವುದೆಂದು, ಎಂದು ಮತ್ತೆ ಚಿಂತೆ ಶುರುವಾಯಿತು. 

ಒಮ್ಮೆ ವಿಭಾಂಡಕ ಮಹರ್ಷಿಗಳು, ಋಷ್ಯಶೃಂಗರ ನ್ನು ಬಿಟ್ಟು ಸ್ವಲ್ಪ ದಿನಗಳಿಗೆ ಪುಣ್ಯಕ್ಷೇತ್ರಗಳ  ದರ್ಶನಕ್ಕೆ ತೀರ್ಥಯಾತ್ರೆ ಹೊರಟರು. ಇಂತಹ ಒಂದು ಅವಕಾಶವನ್ನು ದಶರಥನು ಬಳಸಿಕೊಂಡು ಅನೇಕ ಸ್ತ್ರೀಯರನ್ನು ಶೃಂಗಗಿರಿ ಪ್ರದೇಶಗಳ ಹತ್ತಿರ ಸಂಚರಿಸಲು ಬಿಟ್ಟನು. ಋಷ್ಯಶೃಂಗರು ಒಮ್ಮೊಮ್ಮೆ ಇವರನ್ನು ಕಾಣುವಂತಾಯಿತು. ಇದುವರೆಗೂ ನೋಡಿರದ ಸ್ತ್ರೀ ಮುಖವನ್ನು ನೋಡಿದಾಗ ಅವರಲ್ಲಿ ಏನೋ ಅಪ್ಯಾಯತೆ ಮೂಡಿತು. ಮತ್ತೆ ಕೆಲವು ದಿನಗಳಲ್ಲಿ ಹಣ್ಣು-ಹಂಪಲು ತಿಂಡಿ ಗಳನ್ನು ಕೊಡಲು  ಬರುತ್ತಿದ್ದರು. ಈ ಸಮಯ ಸಾಧಿಸಿ ದಶರಥನು ಮಗಳು ಶಾಂತಾಳ ಸಮೇತ ಅವರನ್ನು 
ನೋಡಲು ಬಂದನು. ಇದೇ ತರಹ ಒಂದೆರಡು ಸಲಹ ರಾಜನೇ ಸ್ವತಹ ಬಂದು ಅವರಿಗೆ ಏನಾದರೂ ಅನುಕೂಲತೆಗಳು ಬೇಕಿದ್ದರೆ  ತಿಳಿಸಿ  ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದನು. ಹಾಗೆಯೇ ಒಂದು ದಿನ, ನಿಮ್ಮ ಸೇವೆ ಮಾಡಲು ನನ್ನ ಮಗಳನ್ನು ಇಲ್ಲಿ ಬಿಡುತ್ತೇನೆ ಎಂದನು. ಈ ರೀತಿಯಾಗಿ ಸೇವೆಗೆ ನಿಂತ  ಮಗಳು ಶಾಂತಾ ಋಷ್ಯಶೃಂಗರ ಸೇವೆಯಲ್ಲೇ ನಿರತಳಾದಳು. ಕೆಲವೇ ದಿನಗಳಲ್ಲಿ  ಋಷ್ಯಶೃಂಗರಿಗೆ ಶಾಂತಾಳ ನಿಷ್ಕಲ್ಮಶ ಸೇವೆ ನೋಡಿ ಬಹಳ ಸಂತೋಷವಾಯಿತು. ಅರಮನೆಯಲ್ಲಿ ಹುಟ್ಟಿ ಬೆಳೆದವವಳಾದರೂ ಋಷಿಮುನಿಗಳ  ಪರ್ಣಕುಟೀರಕ್ಕೆ ತಕ್ಕಂತೆ, ಅವರ ಅನುಷ್ಠಾನಗಳಿಗೆ ಹೊಂದಿಕೆಯಾಗುವಂತೆ  ನಡೆದುಕೊಂಡುದನ್ನು ಬಹಳವಾಗಿ ಮೆಚ್ಚಿಕೊಂಡರು. 

ಮತ್ತೆ ದಶರಥನು ಋಶ್ಯ ಶೃಂಗ ರಿದ್ದಲ್ಲಿಗೆ  ಬಂದು, ನನ್ನ ಮಗಳ ಸೇವೆಯಲ್ಲಿ ಏನಾದರೂ ಲೋಪವಾಯಿತೇ ಎಂದು ವಿನಮ್ರತೆಯಿಂದ ಕೇಳಿದನು. ಋಷ್ಯಶೃಂಗರು  "ಮಹಾರಾಜ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸೇವೆ ಮಾಡಿದ್ದಾಳೆ. ನಮ್ಮ ಮನಸ್ಸಿಗೆ ಸಮಾಧಾನ ತಂದಿದೆ. ನೀವು ನನ್ನಲ್ಲಿ ಏನು ವರ ಬೇಕು ಕೇಳಿಕೊಳ್ಳಬಹುದು" ಎಂದರು. ದಶರಥನ ಮಹರ್ಷಿಗಳೇ ನನ್ನ ಮಗಳು ಶಾಂತಾಳನ್ನು ನೀವು ವಿವಾಹ ಮಾಡಿಕೊಂಡು ನಮ್ಮ ಅರಮನೆಯಲ್ಲಿ  ಪುತ್ರಕಾಮೇಷ್ಟಿ ಯಾಗವನ್ನು ನಡೆಸಿಕೊಡಬೇಕು. ಹಾಗೂ ಈ ಸುತ್ತಮುತ್ತ ಪ್ರದೇಶಗಳಲ್ಲಿ ಅಂದರೆ ನಲವತ್ತು ಗಾವುಗ ದೂರದವರೆಗೂ ಅತಿವೃಷ್ಟಿ-ಅನಾವೃಷ್ಟಿ ಎಂದೆಂದಿಗೂ ಆಗಬಾರದು ಸುಭೀಕ್ಷ ವಾಗಿರಬೇಕು. ಎಂದು ಎರಡು ವರಗಳನ್ನು ಕೇಳಿದನು. ರಾಜಕುಮಾರಿ ಶಾಂತ ಋಷ್ಯಶೃಂಗ ಮಹರ್ಷಿಗಳ ಮನಸ್ಸನ್ನು ಗೆದ್ದಿದ್ದಳು.ಮಹರ್ಷಿಗಳ ಆಶಯದಂತೆ ಋಷ್ಯಾ ಶ್ರಮದಲ್ಲಿ ಸರಳವಾಗಿ ಶಾಂತ ಮತ್ತು  ಋಷ್ಯಶೃಂಗ ಮಹರ್ಷಿಗಳ ವಿವಾಹವನ್ನು. ಅರಮನೆಯ ಸ್ವಲ್ಪ ಪರಿವಾರದೊಂದಿಗೆ ಬಂದು ದಶರಥ ಮಹಾರಾಜನು ನೆರವೇರಿಸಿದನು . ದಂಪತಿ ಸಮೇತ ಅರಮನೆಗೆ ಬಂದು ಪುತ್ರಕಾಮೇಷ್ಠಿಯಾಗವನ್ನು ಪೂರೈಸಿದರು. ಆನಂತರ ರಾಮ,ಲಕ್ಷಣ ಶತ್ರುಘ್ನ, ಭರತ ಜನಿಸಿದರು, 

ದಶರಥನ ಆಸೆಯು ನೆರವೇರಿತು. ಶಾಂತಾಳ ಮನಸ್ಸಿಗೂ  ತೃಪ್ತಿತಯಾಯಿತು.
ಋಷ್ಯಶೃಂಗ ಮುನಿಗಳ ವಿವಾಹವೂ ನೆರವೇರಿತು. ಶೃಂಗೇರಿ ಹತ್ತಿರ ಕಿಗ್ಗ ದಲ್ಲಿರುವ ಋಷ್ಯಶೃಂಗ ಮುನಿಗಳ ದೇವಸ್ಥಾನದಲ್ಲಿ ಇರುವ ಶಿವಲಿಂಗವು ಋಷ್ಯಶೃಂಗರ ಆಶಯದಂತೆ, ಚಂದ್ರಮೌಳೇಶ್ವರನೇ ಋಷ್ಯಶೃಂಗ ರಲ್ಲಿ ಐಕ್ಯವಾಗುತ್ತಾನೆ. ಋಷ್ಯಶೃಂಗರು ಜಿಂಕೆಯ ಗರ್ಭದಲ್ಲಿ ಜನಿಸಿದ್ದರಿಂದ ಜಿಂಕೆ ಮೈಮೇಲೆ  ಚಿತ್ತಾರವಿರುವಂತೆ. ಅಂದರೆ ಅಲ್ಲಿರುವ ಲಿಂಗವು, ಎಲ್ಲಾ ಕಡೆ ಇರುವ ಲಿಂಗಗಳಂತೆ ನುಣುಪಾಗಿರದೆ, ಒಂತರಾ ತರಬರಕಲಾಗಿದೆ.  ಪಕ್ಕದಲ್ಲಿ ಶಾಂತಾಅಮ್ಮನವರ  ಗುಡಿಯು ಇದೆ. ಮತ್ತು ದಶರಥ ಕೇಳಿದಂತೆ ಶೃಂಗೇರಿ ಸುತ್ತಮುತ್ತ 40 ಗಾವುಗದಷ್ಣು ಎಂದರೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ, ಚಿಕ್ಕಮಂಗಳೂರು ಸೇರಿದಂತೆ(ಇರಬಹುದು) ಸುತ್ತಮುತ್ತಲ ವರೆಗೆ ಆಗುತ್ತದೆ.  ಇದುವರೆಗೂ ಇಲ್ಲಿ  ಅತಿವೃಷ್ಟಿ-ಅನಾವೃಷ್ಟಿ ಎಂದೂ  ಆಗಿಲ್ಲ. ಋಷ್ಯಶೃಂಗ ಮಹರ್ಷಿಗಳ ಆಶೀರ್ವಾದದ  ವರದಿಂದ ಮಳೆ-ಬೆಳೆ, ನೀರಿಗೂ ಕೊರತೆಯಾಗಿಲ್ಲ ಎಂಬುದು ಬಹಳಷ್ಟು ಜನರ ಮನಸ್ಸಿನಲ್ಲಿ ಇಂದಿಗೂ ಬೇರೂರಿದೆ. 

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ  ವಾ
ಶ್ರವಣ ನಯನಜಂ  ವಾ ಮಾನಸಂ  ವಾಪರಾಧಂ !
ವಿಹಿತಮವಿಹಿತಂ  ನಾ  ಸರ್ವಮೇತತ್  ಕ್ಷಮಸ್ವ
ಜಯ ಜಯ ಕರುಣಾಬ್ಧೇ  ಶ್ರೀ  ಮಹಾದೇವ  ಶಂಭೋ! 

ಕರುಣಾಸಾಗರ ಮಹಾದೇವನಾದ  ಶಂಭುವೇ, ಕೈ ಕಾಲು,  ಮಾತು, ದೇಹ ಕರ್ಮಗಳಿಂದಾಗಲಿ -  ಕಿವಿ,  ಕಣ್ಣು  ಮನಸ್ಸಿನಿಂದಾಗಲೀ,  ತಿಳಿದೋ ತಿಳಿಯದೆಯೋ  ನಾನು  ಮಾಡಿದ  ಎಲ್ಲಾ  ಅಪರಾಧಗಳನ್ನು ಕ್ಷಮಿಸು. 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಮಕ್ಕಳ ಕಥೆ# ಹನುಮಕ್ಕನ ರಾಮ ಭಕ್ತಿ :-

ಮಕ್ಕಳ ಕಥೆ# ಹನುಮಕ್ಕನ ರಾಮ ಭಕ್ತಿ :- 

ರಾಮಾನಾಥ್ ಸೇಟು ರವರು ಸುಂದರವಾದ  'ಶ್ರೀ ಸೀತಾ ರಾಮ'  ಮಂದಿರವನ್ನು  'ಕಲ್ಯಾಣಿ ಪುರದಲ್ಲಿ'  ಕಟ್ಟಿಸಿದ್ದರು,  ನಿತ್ಯ ಪೂಜೆ, ಭಜನೆ, ನೈವೇದ್ಯ,ಮಂಗಳಾರತಿ, ಹಾಗೂ ವಿಶೇಷವಾಗಿ  ಸೀತಾರಾಮ ಕಲ್ಯಾಣ, ರಾಮೋತ್ಸವ,ಗಳನ್ನು ಆರಂಭಿಸಿ ಈಗಾಗಲೇ ಇಪ್ಪತ್ತೈದು  ವರ್ಷಗಳೇ ಕಳೆದಿವೆ. ರಾಮನಾಥ ಸೇಟುರವರು ಧರ್ಮಿಷ್ಠರಾಗಿದ್ದು,  ದೇವಸ್ಥಾನ, ಬಡವರಿಗೆ ಅನ್ನದಾನ, ಶಿಕ್ಷಣ, ವೈದ್ಯಕೀಯ ಸೌಲಭ್ಯ, ಉಚಿತ ಕಲ್ಯಾಣ ಮಂಟಪ, ಹೀಗೆ ಬೇಕಾದಷ್ಟು ಸಮಾಜ ಸೇವೆಗಳನ್ನು ಮಾಡಿದ್ದರು.  ಇಷ್ಟಾದರೂ ಅವರು ಒಂದು ದಿನವೂ ದೇವಸ್ಥಾನದಲ್ಲಿ ಅಧಿಕಾರಯುತವಾಗಿ ಮುಂದೆ  ನಿಂತವರಲ್ಲ. ಎಲ್ಲರಂತೆ ಸರದಿಯಲ್ಲಿ  ಬರುತ್ತಿದ್ದರು. ಯಾರಾದರೂ ಕೇಳಿದರೆ, ಭಗವಂತನು  ಕರೆಸಿಕೊಳ್ಳುವ  ತನಕ  ನಾವು ಕಾಯಬೇಕು ಎನ್ನುತಿದ್ದರು. ‌ 

ಇವರ ನಂತರ ಇವರ ಮಗ   'ಪ್ರೇಮನಾಥ್ ಸೇಟು', ತಂದೆಯಂತೆ  ಒಳ್ಳೆಯ ಕೆಲಸಗಳನ್ನು ಮಾಡಿ ಹೆಸರು ಪಡೆದಿದ್ದನು.  ಈಗ ಅವರ ಮಗ ಅಂದರೆ 'ರಾಮನಾಥ್' ಸೇಟು ರವರ ಮೊಮ್ಮಗ 'ಅಭಿರಾಮ' ಸೇಟು ಉಸ್ತುವಾರಿ ವಹಿಸಿಕೊಂಡು ಶ್ರೀ ಸೀತಾ-ರಾಮ ದೇವರ  ಪೂಜಾ ಕೈಂಕರ್ಯವನ್ನು  ಯಾವುದೇ ಲೋಪವಿಲ್ಲದಂತೆ  ಚೆನ್ನಾಗಿ ನಡೆಸಿ ಕೊಂಡು  ಬರುತ್ತಿದ್ದಾನೆ.  ಕಲ್ಯಾಣಿ ಪುರದ  ಸುತ್ತಮುತ್ತ ಹಳ್ಳಿ ಹರಾಸುಗಳಿಗೆಲ್ಲಾ, ದೊಡ್ಡ ರಾಮ ಮಂದಿರ  ಇದೊಂದೇ ಆಗಿತ್ತು. ನಿತ್ಯ ಪೂಜೆ, ಮತ್ತು ನೈವೇದ್ಯವನ್ನು  ದಿನಕ್ಕೊಂದು  ಕುಟುಂಬದವರು  ವಹಿಸಿಕೊಂಡಿದ್ದರು.  ಪೂಜೆ  ಮಾಡಿಸುವರ  ಹೆಸರನ್ನು ಅರ್ಚಕರೆ  ತಿಳಿಸುತ್ತಿದ್ದರು.  ಶ್ರೀಮಂತರ ಹೆಸರುಗಳು ಸಾಕಷ್ಟು ಇದ್ದವು. ಹಾಗೇ ಊರಿನ  ಓರ್ವ ಬಡ ಮುದುಕಿ ಹನುಮಕ್ಕನ ಹೆಸರು ಪಟ್ಟಿಯಲ್ಲಿ  ಇತ್ತು. 

ಆ  ದಿನ  ಹನುಮಕ್ಕನ ಸೇವೆ ಇತ್ತು.  ಆಕೆ ಕಾಡೆಲ್ಲಾ  ಹುಡುಕಿ ಒಂದು ಬುಟ್ಟಿ  ತುಂಬಾ  ದುಂಡುಗಾಯಿ ಹಣ್ಣು ತಂದಿದ್ದಳು.  ಹನುಮಕ್ಕ ನೀನು ರಾಮನ ನೈವೇದ್ಯಕ್ಕೆ ಏನು ತಂದಿದಿ ಎಂದು ಕೇಳಿದಾಗ, ಅರ್ಚಕರೇ ನಾನು ರಾಮನಿಗೆ ಬಹಳ  ಇಷ್ಟ ಎಂದು  ಸಿಹಿಯಾದ  ದುಂಡುಗಾಯಿ-ಹಣ್ಣು,  ತಂದಿದ್ದೇನೆ.  ಶಬರಿಯು  ಇದೇ ಹಣ್ಣನ್ನು ರಾಮನಿಗೆ  ಕೊಟ್ಟಿದ್ದಳು  ಎಂದು ಸಂತೋಷದಿಂದ ತೋರಿಸಿದಳು. ‌ ಹಣ್ಣುಗಳನ್ನು ನೋಡಿದ ಪೂಜಾರಿ  ಏನು ಹನುಮಕ್ಕ  ಇದೇನು  ತ್ರೇತಾಯುಗವೇ, ಈ  ಕಾಡು ಹಣ್ಣುಗಳನ್ನು ರಾಮ  ತಿನ್ನುವುದಿಲ್ಲ.  ಕಲಿಯುಗದಲ್ಲಿ ಬೇಕಾದಷ್ಟು ಒಳ್ಳೆಯ ಹಣ್ಣು , ತಿನಿಸುಗಳು ಸಿಗುತ್ತದೆ.  ಇದನ್ನು ಕೇಳಿ, ಅಲ್ಲಾ ಪೂಜಾರಪ್ಪ  ನಮ್ಮಂತಹ ಬಡವರು  ಅಷ್ಟು ಹಣ ಕೊಟ್ಟು  ತರುವುದು ಹೇಗೆ?
ಪೂಜಾರಿ ಸಿಟ್ಟಿನಿಂದ ಅಜ್ಜಿ ನಿನ್ನ   ಹಣ್ಣುಗಳನ್ನು ತೆಗೆದುಕೊಂಡು ಹೋಗು  ಈ ದಿನ  ಸೇಟು ಅಭಿರಾಮ ರಿಂದ ನೈವೇದ್ಯ ನಡೆಯುತ್ತದೆ  ಎಂದು  ಅಜ್ಜಿಯನ್ನು ತಳ್ಳಿದ ರಭಸಕ್ಕೆ ಹನುಮಕ್ಕ  ಬಿದ್ದಳು. ಚೆಲ್ಲಾಪಿಲ್ಲಿಯಾಗಿ  ಬಿದ್ದ ಹಣ್ಣುಗಳನ್ನು ಹನುಮಕ್ಕ  ಆರಿಸಿ ಬುಟ್ಟಿಯಲ್ಲಿ ತುಂಬಿ ದೇವಸ್ಥಾನದ  ಹೊರಗೆ ಬಂದು ಬಿಕ್ಷುಕರ ಜೊತೆ ಕುಳಿತಳು. 

ಆಗಿನ್ನೂ  ಅಭಿರಾಮ ಸೇಟು ತನ್ನ ಹೆಂಡತಿಯ  ಜೊತೆ ಮಂದಿರಕ್ಕೆ ಬಂದನು.  ಪೂಜಾರಿ ಆತನನ್ನು ವಿಶೇಷವಾಗಿ ಸ್ವಾಗತಿಸಿದನು. ಅಭಿರಾಮನು ನಮಸ್ಕರಿಸಿ ರಾಮನಿಗೆ  ನೈವೇದ್ಯವನ್ನು ತಾನೇ  ಇಟ್ಟು ಹೊರಟನು.  ಹೊರಡುವಾಗ  ಪೂಜಾರಿ ಕರೆದು ಮುದುಕಿ ಜೊತೆಗೆ ಏನು ಗಲಾಟೆ  ಎಂದು ಕೇಳಿದ. ಮುದುಕಿ ತಂದ ದುಂಡು ಕಾಯಿ-ಹಣ್ಣಿ ನ ವಿಷಯ ಹೇಳಿದನು. ಆಕೆ  ಕಲಿಯುಗದ ಶಬರಿ  ಎಂದುಕೊಂಡಿದ್ದಾಳೆ  ಎಂದನು. ಇದನ್ನು ಕೇಳಿದ ಸೇಟು ಮತ್ತು ಅವನ ಹೆಂಡತಿ, ಹೌದೇ, ಇದಂತು  ರಾಮನಿಗೆ ಅವಮಾನ ಮಾಡಿದಂತೆ ನಾವು   ಹೇಳುತ್ತೇವೆ ಎಂದು, ಬೇಜಾರಿನಿಂದ ಕುಳಿತಿದ್ದ ಹನುಮಕ್ಕ ನ ಹತ್ತಿರ ಬಂದು, ಅಜ್ಜಿ ನೀವು ಕಾಡಿನಿಂದ ತಂದ ಹಣ್ಣುಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದರು. ಹನುಮಕ್ಕ , ನೋಡುತ್ತಿರಿ ಒಂದಲ್ಲ ಒಂದು ದಿನ  ನನ್ನ ರಾಮ  ನಾನು ತಂದ ಹಣ್ಣುಗಳನ್ನು ತಿನ್ನುತ್ತಾನೆ ಎಂದಳು. ಅದಕ್ಕೆ ಸೇಟು, ಓಹೋ ಅಜ್ಜಿ ನೀನು ಶಬರಿ ಎಂದು ಕೊಂಡೆಯಾ  ಅದು ಸಾಧ್ಯವಿಲ್ಲ ಎಂದು ಹೇಳಿ ನಕ್ಕು ಮುಂದೆ ಹೊರಟನು.  ಹನುಮಕ್ಕ  ರಾಮನಾಮ ಜಪ ಮಾಡುತ್ತಿದ್ದಳು. 

ಮುಂದಿನ ವಾರವೇ  ಅಭಿರಾಮ್ ಸೇಟುವಿನ  ಹತ್ತು ವರ್ಷದ ಮಗನ  ಹುಟ್ಟಿದಹಬ್ಬ ಬಂದಿತ್ತು.  ಅದಕ್ಕಾಗಿ, ಸೇಟು ಮತ್ತು ಅವನ ಹೆಂಡತಿ ರಾಮನಿಗೆ ಒಳ್ಳೆಯ ವಸ್ತ್ರಗಳು, ಆಭರಣಗಳು, ಬಡವರಿಗೆ ಅನ್ನದಾನ, ವಸ್ತ್ರದಾನ ಎಲ್ಲ ಇಟ್ಟುಕೊಂಡಿದ್ದರು. ದೇವಾಲಯದಲ್ಲೂ ಅದಕ್ಕಾಗಿ  ಅಲಂಕಾರ ಸಿದ್ಧತೆಗಳು ನಡೆಯುತ್ತಿದ್ದವು.  ಆ ದಿನ ಮತ್ತೆ ಅದೇ ರೀತಿ ಬುಟ್ಟಿ ತುಂಬಾ ಹಣ್ಣು ತಂದು, ದೇವಾಲಯದ ಆವರಣವನ್ನೆಲ್ಲ  ಗುಡಿಸುತ್ತಿದ್ದಳು . ಇದನ್ನು ನೋಡಿದ ಪೂಜಾರಿ ಅಜ್ಜಿ  ಇದನ್ನೆಲ್ಲ ಮಾಡಲು ಕೆಲಸಗಾರರಿದ್ದಾರೆ.  ನೀನು ಹೋಗು ಎಂದನು. ಅದಕ್ಕೆ ಮುದುಕಿಯು ಏ ಪೂಜಾರಿ ಇದು ನನ್ನ ಭಕ್ತಿ, ನಾನು ರಾಮನ ಸೇವೆ  ಮಾಡುತ್ತೇನೆ. ನೀನು ಯಾಕೆ ತಡೆಯುತ್ತಿ ? ಹೀಗೆ ಕೇಳಿದಾಗ ಏನಾದರೂ ಮಾಡಿಕೋ ಎಂದು ಪೂಜಾರಿ  ಹೊರಟನು.  ಹನುಮಕ್ಕ ತಾನು ಕುಳಿತುಕೊಳ್ಳುವ ಜಾಗ, ಮೆಟ್ಟಿಲು, ಅಂಗಳ, ಎಲ್ಲಾ ಗುಡಿಸಿ ಅಲಂಕರಿಸಿದ ಹೂವಿನ ಮೇಲೆ ಹಣ್ಣಿನ ಬುಟ್ಟಿ ಇಟ್ಟು ರಾಮಧ್ಯಾನ ಮಾಡುತ್ತಾ ಕುಳಿತಳು. ಅವಳ ಅಕ್ಕಪಕ್ಕ ಬಿಕ್ಷುಕರು ಇದ್ದು, ಇವಳ ರಾಮನ ಮೇಲಿನ ಭಕ್ತಿಯನ್ನು ಹೊಗಳುತ್ತಿದ್ದರು. 

ಸೇಟು ಮತ್ತು ಆತನ ಹೆಂಡತಿ ತಮ್ಮ ಮಗನೊಂದಿಗೆ ದೇವಸ್ಥಾನಕ್ಕೆ ಬಂದು, ರಾಮನಿಗೆ  ಅಲಂಕಾರ ಮಾಡಲು ವಸ್ತ್ರಾಭರಣಗಳನ್ನು ಕೊಟ್ಟರು. ರಾಮನಿಗೆ
ಅಲಂಕಾರ, ವಿಶೇಷ ಪೂಜೆ, ಆರತಿ, ಪ್ರಸಾದ, ಎಲ್ಲ ಮುಗಿದ ಮೇಲೆ ಸೇಟು ದಂಪತಿಗಳು ಬಿಕ್ಷುಕರಿಗೆ ದಾನ ಮಾಡಲು ಬಂದರು. ಎಲ್ಲಾ ಬಿಕ್ಷುಕರಿಗೆ ದಾನ ಕೊಟ್ಟಂತೆ, ಹನುಮಕ್ಕನಿಗೆ   ಕೊಡಲು ಬಂದಾಗ, ನನಗೆ ಬೇಡ ಎಂದಳು. ಸೇಟು ಗೆ ಸಿಟ್ಟು ಬಂದು ನನ್ನ ಮಗನ ಹುಟ್ಟಿದ ಹಬ್ಬಕ್ಕೆ  ದಾನ ಕೊಡುತ್ತಿದ್ದೇನೆ. ಬೇರೆ ಏನಾದರೂ ಬೇಕಾದರೆ ಕೇಳು ಕೊಡುತ್ತೇನೆ. ಸೇಟು ನಾನು ಬಿಕ್ಷುಕಿಯಲ್ಲ  ಆಗ ಸೇಟು ಮತ್ತೇಕೆ ಬಿಕ್ಷುಕರ ಜೊತೆ ಕುಳಿತಿದ್ದಿ,  ಹೀಗೆ ಹೇಳಿದಾಗ, ಸೇಟು ದೇವಸ್ಥಾನ  'ದೇವರಮನೆ' . ಇಲ್ಲಿ ಭಕ್ತರು ಎಲ್ಲಿ ಬೇಕಾದರೂ ಕೂರಬಹುದು  ರಾಮನಿಗೆ, ಶ್ರೀಮಂತ, ಬಡವ ಬಿಕ್ಷುಕ ಅಂತ ಇಲ್ಲ.  ಇದನ್ನು ಕೇಳಿ  ಅಲ್ಲೇ ನಿಂತಿದ್ದ ಪೂಜಾರಿ,  ಸೇಟು ನೀನು ಬಾ, ಈ  ಮುದುಕಿಗೆ ತಲೆ ಕೆಟ್ಟಿದೆ ಎಂದು ಕರೆದುಕೊಂಡು ಹೋದನು. ಅವರವರ ಮನೆಗೆ ಹೋದರು.  

ಮರುದಿನ ಬೆಳಿಗ್ಗೆ  ಪೂಜಾರಿ ದೇವಸ್ಥಾನಕ್ಕೆ ಬಂದು ದೇವರನ್ನು ನೋಡುತ್ತಾನೆ.‌  ಹಾಕಿದ್ದ ಒಡವೆಗಳು ಒಂದು ಇರಲಿಲ್ಲ. ಕಳ್ಳತನವಾಗಿದೆ ಕಳ್ಳತನವಾಗಿದೆ ಎಂದು ಬೊಬ್ಬೆ ಹೊಡೆದ.  ಊರವರು ಸೇರಿದರು.  ಸೇಟು ಮತ್ತು ಆತನ ಪತ್ನಿ ಬಂದರು. ನಿಮಗೆ ಯಾರ  ಮೇಲಾದರೂ ಅನುಮಾನ ಇದೆಯೇ ಎಂದು ಅರ್ಚಕನನ್ನು  ಕೇಳಿದ.  ಪೂಜಾರಿಗೆ ಅಜ್ಜಿಯ ಮೇಲೆ  ಕಣ್ಣು ಹೋಯಿತು.  ಸ್ವಲ್ಪ ಸಿಟ್ಟು ಇತ್ತು. ನನಗೆ ಮುದುಕಿಯ ಮೇಲೆ ಅನುಮಾನ.  ಎಲ್ಲರಿಗಿಂತ ಮೊದಲು ದೇವಸ್ಥಾನಕ್ಕೆ ಬಂದು,  ಎಲ್ಲರೂ ಹೋದ ಮೇಲೆ ಕೊನೆಗೆ  ಹೋಗುವುದು ಇವಳೊಬ್ಬಳೇ, ಆಭರಣ  ಲಪಟಾಯಿಸಿ ಬೇಕೆಂದು  ಹೊಂಚುಹಾಕಿದ್ದಳು ಎಂದನು. 

ಅಜ್ಜಿ ಆಭರಣಗಳನ್ನು  ಕದ್ದೆಯಾ?  ಸೇಟು ಕೇಳಿದಾಗ, ಇಲ್ಲ ಸೇಟು ನಾನ್ಯಾಕೆ ಕದಿಯಲಿ ನನ್ನನ್ನು  ನಂಬಿ  ಎಂದು  ಭಯದಿಂದ ಹೇಳಿದಾಗ, ಅರ್ಚಕನು,  ಈ ಮುದುಕಿ ಬಡಪಟ್ಟಿಗೆ ಒಪ್ಪುವುದಿಲ್ಲ. ಹೊಡೆದರೆ ಬಾಯಿ ಬಿಡುತ್ತಾಳೆ ಎಂದ ಪೂಜಾರಿ, ಸೇಟು ಅವನ ಹೆಂಡತಿ  ಮೂರು ಜನ. ಹಿಗ್ಗಾಮುಗ್ಗ ಹೊಡೆದರು. ಊರ ಜನರಿಬ್ಬರು  ಸೇರಿ  ಹೊಡೆದರು. ಅಜ್ಜಿಗೆ ತುಂಬಾ ಪೆಟ್ಟಾಯಿತು ಹೀಗೆ ಹೊಡೆಯುತ್ತಾ ಇದ್ದಾಗ, 'ನಿಲ್ಲಿಸಿ'  ಎಂಬ ಧ್ವನಿ ಬಂದತ್ತ ತಿರುಗಿದಾಗ, ರಾಮನ  ಮುಂದೆ ಕೋಲು ಹಿಡಿದುಕೊಂಡು 'ರಾಮನಾಥ  ಸೇಟು'(ಸತ್ತಿದ್ದ) ನಿಂತಿದ್ದರು.  ಎಲ್ಲರೂ ಹೆದರಿ ದೂರ ಓಡಿದರು. ಆಗ  ರಾಮನಾಥ ಸೇಟು ಅಜ್ಜಿಯ ಹತ್ತಿರ ಬಂದು ಆಕೆಯ  ತಲೆಯ  ಮೇಲೆ  ಕೈಯಿಟ್ಟು ,ಈ ಜನರು ನಿನಗೆ ಅನ್ಯಾಯ ಮಾಡಿದ್ದಾರೆ. ನೀನು ಒಡವೆ  ಕದ್ದಿಲ್ಲ ಎಂದು ನನಗೆ ಗೊತ್ತು ಎಂದಾಗ,  ನೀವು ಯಾರಪ್ಪ ಎಂದಳು. ನಾನು ಈ ದೇವಸ್ಥಾನದ ಸ್ವಾಮಿ  ಬಾ  ನನ್ನ ಜೊತೆ ನಿನ್ನ ಹಣ್ಣುಗಳಿಂದ  ದೇವರಿಗೆ ನೈವೇದ್ಯ ಮಾಡೋಣ ಎಂದು ಕರೆದಾಗ, ನಿಜವೇ ರಾಮನು  ನಾನು ತಂದ ಹಣ್ಣು ತಿನ್ನುವನೇ ಎಂದು ಕೇಳಿದಳು.  ರಾಮನಿಗೆ ನೀನು  ತಂದ ಹಣ್ಣು ‌ ಇಷ್ಟ ಎಂದು ಕೈಹಿಡಿದು  ಹಣ್ಣಿನ ಬುಟ್ಟಿ ಸಮೇತ ರಾಮ ನಾಥ ಸೇಟು  ಗರ್ಭಗುಡಿಯೊಳಗೆ  ಹೋದನು. ತನ್ನಿಂತಾನೇ ಬಾಗಿಲು ಮುಚ್ಚಿತು. ಹೊರಗೆ  ಕೌತುಕ ರಾಗಿ ಜನ ನೋಡುತ್ತಿದ್ದಾರೆ. ಸ್ವಲ್ಪ ಹೊತ್ತಿಗೆ ಹನುಮಕ್ಕ ಹೊರಗೆ ಬಂದು  ಪೂಜಾರಪ್ಪ ನಾನು ತಂದ ಹಣ್ಣುಗಳನ್ನು ರಾಮ ಸ್ವೀಕಾರ ಮಾಡಿದ  ನಾನು  ಧನ್ಯಳಾದೆ ಎಂದು ಸಂತೋಷದಿಂದ ಹೇಳಿದಳು.
       
ಎಲ್ಲರಿಗೂ ಆಶ್ಚರ್ಯವಾಯಿತು. ಸೇಟು ಕೇಳಿದ ಅಜ್ಜಿ ನನ್ನ ತಾತ ನಿನ್ನನ್ನು ಕರೆದುಕೊಂಡು  ಹೋಗಿದ್ದು,  ಅದು ಹೇಗೆ? ಹೌದು ನಾನು ನಿಮ್ಮ ತಾತನನ್ನು ನೋಡಿದೆ ಎಂದಾಗ, ಅರ್ಚಕನು,   ಸೇಟು ನಿಮ್ಮ ತಾತ  ಸ್ವರ್ಗ ವಾಸಿಯಾಗಿ
25 ವರ್ಷಗಳಾಗಿದೆ.‌  ಹೌದು ಮತ್ತೆ ಇದು  ಹೇಗೆ ಸಾಧ್ಯ ಪೂಜಾರಿ, ಇದೆಂಥ ಚಮತ್ಕಾರ ಎಂದು ಮಾತಾಡಿದರು.  ಇದು ಚಮತ್ಕಾರ ಅಲ್ಲ, ರಾಮನ ಲೀಲೆ. ನನ್ನನ್ನು ಕರೆದುಕೊಂಡು ಹೋಗಿದ್ದು, ನನ್ನ  ಕೈಯಾರೆ ರಾಮನಿಗೆ ಹಣ್ಣು ತಿನ್ನಿಸಿದ್ದು  ಎಲ್ಲವೂ ರಾಮ ಲೀಲೆ  ಎಂದು ಅಜ್ಜಿ ಹೇಳಿದಳು.  ಸೇಟು ಆಶ್ಚರ್ಯವಾಗಿ ನೋಡುತ್ತಾ ನಿಂತ. ಆಗ ಅರ್ಚಕನು, 
ಸೇಟು ಇದು ನಿಜ.  'ಭಕ್ತಿಗೆ ತುಂಬಾ ಶಕ್ತಿ' ಇರುತ್ತದೆ ಆದ್ದರಿಂದ ಅಜ್ಜಿ ಹೇಳಿದ್ದೆಲ್ಲ ನಿಜವಾದುದು ಎಂದನು.‌  ತಕ್ಷಣ ಸೇಟು ಹೌದು ಪೂಜಾರಿ. ಅಜ್ಜಿ ಕಲಿಯುಗದ ಶಬರಿ ಎಂದು ಹೇಳಿದಾಗ ಅಲ್ಲಿದ್ದವರೆಲ್ಲಾ ಹೌದು ಎಂದು ಅಂದಿನಿಂದಲೇ ಅಜ್ಜಿಗೆ ಬಹಳ ಗೌರವ, ಪ್ರೀತಿ ಕೊಟ್ಟರು. ಹನುಮಕ್ಕ ತಾನೇ ರಾಮನಿಗೆ ಹಣ್ಣು ತಿನ್ನಿಸಿದ ಸಂತಸದಲ್ಲಿ ದಿನ ಕಳೆಯುತ್ತಿದ್ದಳು. ಪ್ರತಿನಿತ್ಯವೂ ರಾಮನಿಗೆ ಹಣ್ಣು ತಂದುಕೊಡುತ್ತಿದ್ದಳು.‌  ಬರುವ ಭಕ್ತರೆಲ್ಲ ರಾಮನ ಅನುಗ್ರಹದೊಂದಿಗೆ   ಹನುಮಕ್ಕನ  ಆಶೀರ್ವಾದ ಪಡೆಯುತ್ತಿದ್ದರು. 

ಪ್ರೇಮ ಮುದಿತಾ ಮನಸೆ ಕಹೋ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ! 

ಪರಮ  ಶಾಂತಿ  ಸುಖನಿಧಾನ, ದಿವ್ಯ ರಾಮ ರಾಮ 
ನಿರಾದಾರಕೋ  ಆಧಾರ , ಏಕ  ರಾಮ ರಾಮ
ಶ್ರೀ ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ 

ಮಾತಾ ಪಿತಾ ಬಂಧು ಸಖ ಸಬ  ಹೀ ರಾಮ ರಾಮ
ಭಕ್ತ  ಜನನ  ಜೀವನ  ಧನ ಏಕ ರಾಮ ರಾಮ
ಶ್ರೀ ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ! 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ತಪಸ್ಸಿಗಿಂತ 'ವಿಶ್ವಾಸ ಮತ್ತು ನಂಬಿಕೆ' ಬೇಕು :

ತಪಸ್ಸಿಗಿಂತ 'ವಿಶ್ವಾಸ ಮತ್ತು ನಂಬಿಕೆ' ಬೇಕು :- 

ಪ್ರಾಚೀನ ಕಾಲದಲ್ಲಿ ನಡೆದ ಕಥೆ ,  ಒಂದು  ಮರದಲ್ಲಿ  ಪುಟ್ಟ ಪಕ್ಷಿ  ಗೂಡಿನಲ್ಲಿ ತನ್ನ ಎರಡು  ಮರಿಗಳೊಂದಿಗೆ ವಾಸವಾಗಿತ್ತು. ಪುಟ್ಟ ಪಕ್ಷಿ ದಿನವೂ  ಹೊರಗೆ ಹೋಗಿ ತನಗೂ ಹಾಗೂ ಮರಿಗಳಿಗೆ  ಆಹಾರ ತಂದು  ಕೊಕ್ಕಿನಿಂದ ಮರಿಗಳಿಗೆ  ತಿನ್ನಿಸಿ,  ಆಟವಾಡಿ  ದಿನ ಕಳೆಯುತ್ತಾ  ಸಂತೋಷವಾಗಿದ್ದವು.  ಹೀಗೆ ಒಂದು ದಿನ ತಾಯಿ ಪಕ್ಷಿಯು ಆಹಾರ ತರುವಾಗ  ಆಕಾಶವೆಲ್ಲಾ ಮೋಡ  ಕವಿತಿರುವುದನ್ನು  ನೋಡಿ  ಲಘು ಬಗೆ ಯಿಂದ ಗೂಡಿಗೆ ಬಂದು ಸೇರಿತು. ಅದು ಅಂದು ಕೊಂಡಂತೆ ಮಳೆ ಬಂದಿತು. ಎರಡು  ದಿನಗಳಾದರೂ ಮಳೆ ಕಡಿಮೆಯಾಗಲಿಲ್ಲ. ಜೋರಾಗಿಯೇ  ಸುರಿಯುತ್ತಿತ್ತು. ಹೀಗಾಗಿ ತಾಯಿ ಪಕ್ಷಿ ಹೊರಗೆ ಹೋಗಿ  ತನ್ನ  ಮರಿಗಳಿಗೆ ಆಹಾರ ತರಲು ಸಾಧ್ಯವಾಗಲಿಲ್ಲ. ಮರಿಗಳು ತಾಯಿ ಮುಂದೆ ತಮ್ಮ ಕೊಕ್ಕನ್ನು  ಕಳೆದು ಆಹಾರ ಕೇಳುತ್ತಿದ್ದವು. ಮರಿಗಳು ಹಸಿವಿಗಾಗಿ   ಒದ್ದಾಡುವುದನ್ನು ತಾಯಿ ಪಕ್ಷಿಗೆ ನೋಡಲಾಗಲಿಲ್ಲ. ಮಳೆ ಕಡಿಮೆಯಾದ ಹೊರತು ಆಹಾರ ತರಲು ಅದರ ಕೈಯಲ್ಲಿ ಸಾಧ್ಯವಿರಲಿಲ್ಲ. 

ಆಗ ಅದು ಕೃಷ್ಣನನ್ನು ಪ್ರಾರ್ಥಿಸುತ್ತಾ,  ಹೀಗೆ ಹೇಳಿತು. ಹೇ ಪ್ರಭು ನೀನು ಗೋಕುಲ ಪರ್ವತವನ್ನೆ  ಎತ್ತಿ  ಗೋಪಾಲಕರ  ಜೀವವನ್ನು ರಕ್ಷಣೆ  ಮಾಡಿದ್ದಿ,ಅದೇ ತರಹ ನನ್ನ ಮಕ್ಕಳ ಜೀವವನ್ನು ರಕ್ಷಣೆ ಮಾಡು ಎಂದು ಕೇಳುತ್ತಿತ್ತು.
ಆ ಸಮಯಕ್ಕೆ  ದ್ವಾರಕಾನಗರದಲ್ಲಿ ಕೃಷ್ಣನು ತನ್ನ ಅಂತಃಪುರದಲ್ಲಿ ರುಕ್ಮಿಣಿ ಜೊತೆ ಮಾತನಾಡುತ್ತಿದ್ದನು. ಪಕ್ಷಿಯ ಪ್ರಾರ್ಥನೆ ಅವನಿಗೆ ಕೇಳಿದ್ದು ,ರುಕ್ಮಿಣಿ ಜೊತೆ ಮಾತನಾಡುವುದನ್ನು ನಿಲ್ಲಿಸಿದನು. ಆಗ ರುಕ್ಮಿಣಿ ಕೇಳಿದಳು. ಕೃಷ್ಣಾ ಇದ್ದಕ್ಕಿದ್ದಂತೆ ಏಕೆ ಮಾತು ನಿಲ್ಲಿಸಿದೆ?  ಈಗ ಯಾವುದೋ ಪುಟ್ಟ ಪಕ್ಷಿ ನಾನು ಗೋವರ್ಧನ ಪರ್ವತ ಮೇಲೆತ್ತಿ  ಗೋಪಾಲಕರನ್ನು  ರಕ್ಷಣೆ ಮಾಡಿದ ಘಟನೆ  ನೆನಪಿಸುತ್ತಾ, ಅದೇ ರೀತಿ ತನ್ನ  ಮರಿಗಳಿಗೆ ಆಹಾರ ಕೊಟ್ಟು  ರಕ್ಷಿಸುವಂತೆ  ಕೇಳುತ್ತಿದೆ. ಇದನ್ನು ಕೇಳಿದ ರುಕ್ಮಿಣಿ, ಪ್ರಭು ಎಲ್ಲೋ ಇರುವ ಪಕ್ಷಿಗೆ ನೀವು ಆಹಾರವನ್ನು ಹೇಗೆ  ಒದಕಗಿಸುತ್ತೀರಿ ಎಂದು ಕೇಳಿದಳು. ಕೃಷ್ಣನು ಏನಾದರೂ ಉಪಾಯ ಮಾಡಿ ಆಹಾರ ಕೊಟ್ಟು ಅವುಗಳ ಜೀವವನ್ನು ರಕ್ಷಿಸುತ್ತೇನೆ. 

ಕೃಷ್ಣನ ಉಪಾಯದಂತೆ  ಆಹಾರದ ಚೀಲವನ್ನು ತೆಗೆದುಕೊಂಡು ಬರುತ್ತಿದ್ದ ಸನ್ಯಾಸಿ ಅದೇ ಮರದ ಕೆಳಗೆ ಕುಳಿತು ಆಹಾರದ ಚೀಲವನ್ನು ಇಟ್ಟು  ಸ್ವಲ್ಪ ಹೊತ್ತು ಧ್ಯಾನ ಮಾಡಿ,  ತಣ್ಣಗಿರುವ  ಆಹಾರ ಬಿಸಿಮಾಡಿಕೊಳ್ಳಲು, ಕಟ್ಟಿಗೆ 
ತರಲು ಹೊರಡುವ ಮುನ್ನ,   ಆಹಾರದ ಚೀಲವನ್ನು ಮರದ ಕೊಂಬೆಗೆ  ಸಿಗಿಸಿ ಹೋದನು. ಇದಾವುದೂ ತಿಳಿಯದ ಪಕ್ಷಿ,   ತಾನಿರುವ  ಮರದ ಕೆಳಗೆ ಸಿಗಿಸಿದ್ದ ಆಹಾರದ ಚೀಲವನ್ನು ನೋಡಿ ಕೆಳಗೆ ಬಂದು ತನ್ನ ಕೊಕ್ಕಿನಿಂದ  ಕಚ್ಚಿತು. ಹರಿದ ಭಾಗದಿಂದ ಆಹಾರವನ್ನು ತೆಗೆದುಕೊಂಡು ಹೋಗಿ ತನ್ನ ಮರಿಗಳಿಗೆ  ತಿನ್ನಿಸಿತು. ಇದೇ ತರಹ  ತನ್ನ ಕೊಕ್ಕಿನಿಂದ ಪದೇಪದೇ ಆಹಾರ  ತೆಗೆದು  ತನ್ನ ಮರಿಗಳಿಗೆ   ತಿನ್ನಿಸುತಿತ್ತು.  ಇದರಿಂದ ಚೀಲವು ಹರಿದು  ಉಳಿದ  ಆಹಾರವೆಲ್ಲ ಕೆಳಗೆ ಬಿದ್ದಿತು. 

ಸನ್ಯಾಸಿ ಬಂದು  ನೋಡಿದನು. ಅನ್ನದ  ಚೀಲ ಹರಿದು  ಅನ್ನವೆಲ್ಲ ಭೂಮಿಯ ಮೇಲೆ ಬಿದ್ದಿತ್ತು. ಅವನು ತಲೆ ಎತ್ತಿ ಪಕ್ಷಿಯನ್ನು ನೋಡಿ ಆ ಪಕ್ಷಿಯೇ  ಇದನ್ನೆಲ್ಲಾ ಮಾಡಿದ್ದು ಎಂದು ಗೊತ್ತಾಯಿತು. ಸಿಟ್ಟು ಬಂದಿತು.  ಏ ಪಕ್ಷಿ ನಿನ್ನ ಕಾರಣದಿಂದ  ನನಗೆ  ಆಹಾರ ಇಲ್ಲವಾಯಿತು. ಇದಕ್ಕಾಗಿ  ನಿನಗೆ  ತಕ್ಕ ದಂಡನೆ  ಕೊಡುತ್ತೇನೆ  ಎಂದನು. ಆಗ ಪಕ್ಷಿಯು  ಸಾಧು ಮಹಾರಾಜ, ನಾನು ಅನ್ನಕ್ಕಾಗಿ ಭಗವಾನ್ ಶ್ರೀ ಕೃಷ್ಣನನ್ನು  ಕೇಳಿದ್ದೆ, ಅದಕ್ಕಾಗಿ ಕೃಷ್ಣನು ನನಗೆ ಆಹಾರವನ್ನು ಕಳಿಸಿದ್ದಾನೆ ಎಂದುಕೊಂಡೆ, ನೀನು ಆಹಾರದ ಚೀಲವನ್ನು ಮರಕ್ಕೆ  ಸಿಗಿಸಿದ್ದಿ ಎಂದು ನನಗೆ ಗೊತ್ತಿರಲಿಲ್ಲ.  ಕೃಷ್ಣನೇ ಆಹಾರ ಕಳಿಸಿದ್ದಾನೆ ಎಂದು ನನ್ನ ಮಕ್ಕಳಿಗೆ ಆಹಾರ ಕೊಟ್ಟು ನಾನು ತಿಂದೆ  ಎಂದಿತು. 

ಆಗ ಸಾಧು, ನಿನ್ನ ಕಾರಣದಿಂದಾಗಿ ನನಗೆ ಆಹಾರವಿಲ್ಲ ವಾಯಿತು.ನನಗೆ ಹಸಿವಾಗುತ್ತಿದೆ ಏನು ಮಾಡಲಿ ಎಂದನು. ಅದಕ್ಕೆ ಪಕ್ಷಿಯು, ಹೇ ಸಾಧು ಬಾಬಾ, ನಾನು  ಪುಟ್ಟ ಪಕ್ಷಿ,  ನೀನು ಮಹಾ ಜ್ಞಾನಿ. ಅಜ್ಞಾನಿಯಾದ  ನನ್ನಂತ ಪುಟ್ಟ ಪಕ್ಷಿ  ಆಹಾರ  ಕೇಳಿದ್ದಕ್ಕೆ , ಕಾಡಿನಲ್ಲಿ ಬೇಕಾದಷ್ಟು ಮರಗಳಿದ್ದರೂ,  ಭಗವಾನ್ ಕೃಷ್ಣನು  ನಾನು ಇರುವ ಮರದ  ಕೆಳಗೆ ಅನ್ನ ನನಗೆ ಸಿಗುವಂತೆ  ಕಳಿಸಿದ್ದಾನೆ.  ಹೀಗಿರುವಾಗ ನಿನ್ನಂತಹ ಜ್ಞಾನಿ ಭಗವಂತನನ್ನು ಕೇಳಿದರೆ ಅನ್ನ ಕೊಡದೇ ಇರುತ್ತಾನೆಯೇ?  ಭಗವಂತನ ಮೇಲೆ  ನಿನಗೆ ಇರುವ  ಭಕ್ತಿಯ ಜೊತೆ ವಿಶ್ವಾಸ ಮತ್ತು ನಂಬಿಕೆಯನ್ನು  ಇಡಬೇಕು. ಆಗ ಭಗವಂತನು  ಯಾರನ್ನು ಉಪವಾಸ ಇರಲು ಬಿಡುವುದಿಲ್ಲ ಎಂದಿತು. 

ಪಕ್ಷಿಯ ಮಾತುಗಳನ್ನು ಕೇಳಿದ  ಸನ್ಯಾಸಿಗೆ ಬಂದ ಸಿಟ್ಟು ಬಂದಹಾಗೆ  ಕರಗಿಹೋಗಿ ಶಾಂತನಾದನು. ಸಮಾಧಾನದಿಂದ  ಹೇ  ಪುಟ್ಟ ಪಕ್ಷೀಯೇ, ನಾನು ಇಷ್ಟು ವರ್ಷಗಳ ಕಾಲ ಮಾಡಿದ ತಪಸ್ಸಿನಿಂದ ಸಿಗದ ಜ್ಞಾನ, ನಿನ್ನ ಮಾತಿನಿಂದ ಕ್ಷಣದಲ್ಲಿ ನನಗೆ ಜ್ಞಾನ  ಸಿಕ್ಕಿತು.  ಸ್ವಲ್ಪ  ಆಹಾರಕ್ಕಾಗಿ  ನನ್ನ ಮನಸ್ಸು  ವಿಚಲಿತ ಗೊಂಡಿತು.  ನಿನಗಿರುವ ವಿಶ್ವಾಸದ  ಮುಂದೆ ನನ್ನ  ಜ್ಞಾನ ಸೋತಿತು ಎಂದು  ಪುಟ್ಟ  ಪಕ್ಷಿಯ ಮುಂದೆ ತಲೆಬಾಗಿದನು. ಸ್ವಲ್ಪ ಹೊತ್ತಿಗೆ ಮಳೆ ನಿಂತಿತು. ಸನ್ಯಾಸಿಯು ಪಕ್ಷಿಗೆ ಕೃತಜ್ಞತೆ ಹೇಳಿ ಮುಂದೆ ಹೊರಟನು. ಸ್ವಲ್ಪ ದೂರ  ಹೋಗುತ್ತಿದ್ದಂತೆ  ಹಣ್ಣುಗಳಿಂದ ತುಂಬಿದ ಮರ ಕಂಡಿತು. ಹೇ ಕೃಷ್ಣ ನಿನ್ನ ಲೀಲೆ ಬಲ್ಲವರಾರು?  ಎಂದುಕೊಂಡು ಮರದಲ್ಲಿದ್ದ ಹಣ್ಣನ್ನು ಕಿತ್ತು  ತಿಂದನು ಅಲ್ಲೇ  ಹರಿಯುವ ನದಿಯಲ್ಲಿ ನೀರು ಕುಡಿದು, ಪ್ರಭು ಭಗವಂತ,ಶ್ರೀಕೃಷ್ಣ, ನಿನ್ನ ಲೀಲೆಗಳೇ  ಅರ್ಥವಾಗುವುದಿಲ್ಲ. ಎಷ್ಟೋ  ವರ್ಷಗಳ ಕಾಲ ತಪಸ್ಸು ಮಾಡಿದರೂ ಸಿಗದ  ಜ್ಞಾನವನ್ನು ಪುಟ್ಟ ಪಕ್ಷಿಯ ಕೈಯಲ್ಲಿ ತಿಳಿಸಿದೆ.ಎಲ್ಲೋ ಕಾಡಿನಲ್ಲಿರುವ  ಪಕ್ಷಿ  ಆಹಾರ ಕೊಡಲು ನಿನ್ನ ಕೇಳಿದರೆ  ನನ್ನ ಮೂಲಕ  ಅದಿರುವ  ಸ್ಥಳಕ್ಕೆ ಕಳಿಸಿಕೊಟ್ಟೆ. ನಿನ್ನ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ . ಹೇ ಕೃಷ್ಣ ,ವಾಸುದೇವ, ಈ ಪ್ರಪಂಚದಲ್ಲಿ  ಇದೇ ತರಹ  ಎಲ್ಲಾ ಜೀವಿಗಳಿಗೂ ಆಹಾರ ಒದಗಿಸಿ ರಕ್ಷಣೆ ಮಾಡುತ್ತಿರುವ ನಿನಗೆ  ಕೋಟಿ ಕೋಟಿ ನಮಸ್ಕಾರಗಳು ಎಂದು ಪ್ರಾರ್ಥಿಸಿ  ತಪಸ್ಸಿಗೆ ಕುಳಿತನು. 

ಎನ್ನ ರಕ್ಷಿಸೋ ನೀನು   ದೇವರ ದೇವ !!
ಎನ್ನ  ರಕ್ಷಿಸೋ ನೀನು , ಯಾದವ ಕುಲ ಮಣಿ
ಮುನ್ನ ದ್ರೌಪದಿಯ, ಅಭಿಮಾನ ಕಾಯ್ದ  ಕೃಷ್ಣ! 

ಬಾಲನ  ಮೊರೆಯನ್ನು  ಕೇಳಿ  ಕೃಪೆ ಯಿಂದ
ಪಾಲಿಸಿದೆಯೋ   ನರಸಿಂಹ  ರೂಪ  ದಿಂದ ! 

ಇನ  ಕುಲಾಂಬುದಿಚಂದ್ರ   ಘನಶುಭ ಗುಣಸಾಂದ್ರ
ಸನಕಾದಿ  ಮುನಿವಂದ್ಯ   ಪುರಂದರ  ವಿಠಲ! 

ಎನ್ನ ರಕ್ಷಿಸೋ ನೀನು ದೇವರ ದೇವ!

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಅತ್ತೆ ತಾಯಿಯಾದಳು -ಸೊಸೆ ಮಗಳಾದಳು :

ಅತ್ತೆ ತಾಯಿಯಾದಳು -ಸೊಸೆ ಮಗಳಾದಳು :- 

ಆ  ಮನೆಯಲ್ಲಿ ಅತ್ತೆ ಮಂಗಳಮ್ಮನಿಗೆ ಸೊಸೆ  ರೇಖಾಳನ್ನು  ಹಾಗೂ ಸೊಸೆಗೆ ಅತ್ತೆಯನ್ನು ಕಂಡರೆ  ಅಷ್ಟಕ್ಕಷ್ಟೇ.  ಮದುವೆಯಾಗಿ ವರ್ಷ ತುಂಬಿದೆ. ಆದರೆ ಸೊಸೆ ಇನ್ನೂ ಮನೆಗೆ ಹೊಂದಿಕೊಂಡಿಲ್ಲ ಎಂಬ ಸಿಟ್ಟು, ಸೊಸೆ ಬೇಗ ಎದ್ದು ಹೊಸಿಲಿಗೆ ರಂಗೋಲಿ, ಗಿಡಗಳಿಗೆ ನೀರು ,ಹೂ ಬಿಡಿಸುವುದು, ನಿತ್ಯ ದೇವರ ಪೂಜೆ , ಶ್ರಾವಣ ಮಾಸದ  ವ್ರತ ಕಥೆ, ಲಕ್ಷ್ಮಿ ಪೂಜೆಗಳನ್ನು  ಮಾಡಲಿ, ಮನೆಗೆ ಬಂದ ಬಂಧುಗಳಿಗೆ ಉಪಚರಿಸಲಿ, ಅತ್ತೆಯ  ಸೇವೆ ಮಾಡಲಿ, ಒಟ್ಟಾರೆ  ಸೊಸೆ ಹೀಗಿರಲಿ ಎಂಬ ಆಸೆ. ಸೊಸೆ  ಸಿಟಿಯಲ್ಲಿ  ಬೆಳೆದವಳು. ಇಬ್ಬರು  ಮಕ್ಕಳಲ್ಲಿ ಇವಳು ಮುದ್ದಿನ  ಹಿರೇಮಗಳು  ಮುಂಚೆ ಏಳುವುದೆಂದರೆ ಆಗದು.  ಅದರಲ್ಲೂ  ಮನೆಕೆಲಸಗಳನ್ನು ಮಾಡಿ  ಗೊತ್ತಿಲ್ಲ. ತೋಟ ಗದ್ದೆಯ, ಗಂಧ- ಗಾಳಿ ಇಲ್ಲ. ಹುಡುಗ ಉನ್ನತ ವ್ಯಾಸಂಗ ಮಾಡಿ, ಸರ್ಕಾರಿ ಕೆಲಸವಿದೆ. ಮನೆ,ಆಸ್ತಿ ಇದೆ. ನೋಡಲು  ಚನ್ನಾಗಿದ್ದಾನೆ. ಹೀಗಂದುಕೊಂಡು ಮಗಳನ್ನು  ಗ್ರಾಮದ  ಊರಿಗೆ  ಮದುವೆ ಮಾಡಿ  ಕೊಟ್ಟಿದ್ದರು. 

ಸೊಸೆ ಯಾವಾಗಲೂ ಹಿಂದಿ, ಇಂಗ್ಲಿಷ್, ಸಿನಿಮಾ  ಧಾರಾವಾಹಿ ನೋಡಲು ಕುಳಿತರೆ ಟಿ.ವಿ ಬಿಟ್ಟೇಳುತ್ತಿರಲಿಲ್ಲ. ಅತ್ತೆಗೆ ಕನ್ನಡ ಸಿನಿಮಾ, ಧಾರವಾಹಿಗಳು,   ರಿಯಾಲಿಟಿ  ಶೋಗಳು, ನೋಡುವುದು ಇಷ್ಟ, ಅದರೀಗ ಅವಕಾಶವೇ ಇಲ್ಲವಾಗಿದೆ. ಮನೆಯಲ್ಲಿ  ಮದುವೆಯಾದ ಇಬ್ಬರು  ಹೆಣ್ಣುಮಕ್ಕಳು ಹಬ್ಬ -ಹುಣ್ಣಿಮೆ ಎಂದು  ತವರುಮನೆಗೆ ಬರುವುದಕ್ಕಿಂತ  ಹೆಚ್ಚಾಗಿ,  ಸೊಸೆಯ ಅಪ್ಪ-ಅಮ್ಮ ಆಗಾಗ್ಗೆ  ಮಗಳನ್ನು ನೋಡಲು ಬರುವುದೇ ಜಾಸ್ತಿಯಾಗಿತ್ತು.  ಮೊದಲೆಲ್ಲಾ  ಹಬ್ಬ ಹುಣ್ಣಿಮೆಗಳು ಬಂದಾಗ  ಮಗ  ಹರ್ಷ ಅಮ್ಮನಿಗೆಂದು ಸೀರೆ ಕೊಡಿಸುವುದು, ಆಗಾಗ್ಗೆ ಸಿನಿಮಾ, ಹೋಟೆಲ್ಲು, ಬಂಧು-ಬಳಗದವರ ಮದುವೆ-ಮುಂಜಿ ಗಳಿಗೆ ಪುಣ್ಯಕ್ಷೇತ್ರಗಳಿಗೆ  ಕರೆದುಕೊಂಡು ಹೋಗುತ್ತಿದ್ದ. ಇತ್ತೀಚಿಗೆ  ಇದೆಲ್ಲ ಕಡಿಮೆಯಾಗಿದೆ. ಹೇಳಲಾಗದ  ಚಿಂತೆಗಳಿಂದ  ಇರಿಸು ಮುರಿಸಂತು ಆಗಿದೆ.  ತಪ್ಪಿಲ್ಲದಿದ್ದರೂ ನೆಪ ಹುಡುಕಿ ಸೊಸೆ  ಮೇಲೆ ಕೋಪ-ತೋರಿಸುತ್ತಿದ್ದಳು. ಮದುವೆಗೂ ಮೊದಲೆಲ್ಲ  ಮಗ ಹರ್ಷ, ಅಮ್ಮ ಇವತ್ತು ಒತ್ತು ಶ್ಯಾವಿಗೆ, ನಾಳೆ  ಸಮೋಸ  ಜಾಮೂನು ಮಾಡಿಕೊಡು, ಹಬ್ಬಗಳು ಬಂದರೆ ಹೋಳಿಗೆ ,ಅಂಬಡೆ,  ಗಸ್ಗಸೆ ಪಾಯಸ ,ಪುಳಿಯೋಗರೆ, ಮಾಡು ಎಂದು ಮೊದಲೇ ಹೇಳುತ್ತಿದ್ದ. ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು, ಉಂಡೆಗಳು  ಡಬ್ಬಿಗಳಲ್ಲಿ ಇರಲೇಬೇಕಿತ್ತು. ಆದರೆ ಸೊಸೆ ಬಂದ ಮೇಲೆ, ಅದೇನೋ ಸ್ಯಾಂಡ್ವಿಚ್, ಪಾನಿಪುರಿ, ಮಸಾಲೆ ಪುರಿ, ಇವುಗಳನ್ನೇ ಮಾಡಿಕೊಟ್ಟು ಮಗನ
ನಾಲಿಗೆ ರುಚಿ  ಕೆಡಿಸಿದ್ದಾಳೆ  ಅವರ ಅಂಬೋಣ. ಅವನು ಹಾಗೆ ತಾಯಿಯ ಹತ್ತಿರ ಕೇಳುತ್ತಿರಲಿಲ್ಲ. ಹೆಚ್ಚಿನ ಸಮಯ ಮುದ್ದಿನ ಮಡದಿ ಜೊತೆ ಕಳೆಯುತ್ತಿದ್ದನು.  ಈಗೀಗ  ಅತ್ತೆಗೆ ಅಡುಗೆ ಮನೆಯಲ್ಲಿ  ನಿಲ್ಲುವುದೋ,  ಪಡಸಾಲೆಯಲ್ಲಿ ಕೂರುವುದೋ ಒಂದೂ ತಿಳಿಯುತ್ತಿರಲಿಲ್ಲ . 

ಸೊಸೆಗೂ ಹಾಗೆ ಆಗಿತ್ತು. ಬೆಳಿಗ್ಗೆ  ಗಂಡ  ಕಚೇರಿಗೆ ಹೋದರೆ ಬರುವುದು ಸಂಜೆ,  ಅಲ್ಲಿ ತನಕ  ಅತ್ತೆಯ ಜೊತೆ ಇರಬೇಕು.  ಅದು ಮುಟ್ಟಿದರೆ ತಪ್ಪು ಇದು ಹಿಡಿದರೆ ತಪ್ಪು, ಇದನ್ನು ಹಾಗೆ ಮಾಡು, ಅದನ್ನು ಹೀಗೆ ಮಾಡು.
ಮಾಡು. ಏನಾದರೂ ವಟಗುಟ್ಟುತ್ತಲೇ ಇರುತ್ತಾರೆ ಎಂದುಕೊಳ್ಳುತ್ತಿದ್ದಳು. ತವರು ಮನೆಯಲ್ಲಿ ಎಷ್ಟು ಹಾಯಾಗಿದ್ದೆ.  ಫ್ರೆಂಡ್ಸು, ಪಾರ್ಕು, ದೊಡ್ಡ ದೊಡ್ಡ ಹೋಟೆಲ್ಲು, ಸ್ಟ್ರೀಟ್ ಗಳಲ್ಲಿ ಮಾಡುವ ಬೋಂಡಾ, ಅಂಬಡೆ, ಬಜ್ಜಿ, ಪಾಪ್ಕಾರ್ನ್, ಪಾನಿಪುರಿ, ಬೇಕು ಬೇಕಾದ  ಬಟ್ಟೆ, ಸ್ಲಿಪ್ಪರ್, ಮೇಕಪ್ ಸೆಟ್  ಖರೀದಿಸುತ್ತಿದ್ದಳು, ಇಲ್ಲಂತೂ, ಬಟ್ಟೆ ಖರೀದಿಸುವುದಕ್ಕೆ ಹಬ್ಬವೇ ಬರಬೇಕು. 

ಮನೆಗೆ ಯಾರೇ ಬರಲಿ, ಹೋಮ, ಹವನ ,ಪೂಜೆ,  ವ್ರತ-ಕಥೆಗಳಿಗೆ ಕರೆಯುತ್ತಿದ್ದರು. ಅಲ್ಲಿಗೆ ಹೋದರೆ, ರಂಗೋಲಿ ಹಾಕು, ಹೂ ಕಟ್ಟು,ವಿಳ್ಳೆದೆಲೆ  ಪಟ್ಟಿಮಾಡು, ಅಡಿಕೆ ಕುಟ್ಟು, ಬಂದವರಿಗೆ ಅರಿಶಿನ-ಕುಂಕುಮ ಕೊಡು, ಬಾಳೆಎಲೆ ಸರಿ ಮಾಡು, ಇವೆಲ್ಲ ಇರಲಿ ಬಡಿಸುವಾಗಂತೂ ಪಾಯಸ ಇಲ್ಲಿ ಹಾಕಬೇಕು, ಕೋಸಂಬರಿ ಅಲ್ಲೇ ಹಾಕಬೇಕು, ಪಲ್ಯಗಳನ್ನು 
ಈ ಬದಿ ಹಾಕಬೇಕು, ಎಲೆಯ ಮುಂದೆ ರಂಗೋಲಿ ಹಾಕಬೇಕು, ಈ ತರಹದ್ದು ಮುಗಿಯುತ್ತಲೇ ಇರಲಿಲ್ಲ.  ಸ್ವಲ್ಪ ತಪ್ಪಾದರೂ, ಅಯ್ಯೋ ಅದು ಹಾಗಲ್ಲ ಇದು ನಿನಗೆ ಗೊತ್ತೇ ಇಲ್ಲವೇ ಎನ್ನುತ್ತಿದ್ದರು. ಆದರೆ ನಿಜಕ್ಕೂ ಗೊತ್ತಿರಲಿಲ್ಲ. ಅಮ್ಮನ ಮನೆಯಲ್ಲಿ  ತಟ್ಟೆಯಲ್ಲಿ ಹಾಕಿ ಕೊಟ್ಟಿದ್ದನ್ನು, ತೊಡೆಯ ಮೇಲೆಟ್ಟುಕೊಂಡು ತಂದೆಯ ಜೊತೆ ಹರಟುತ್ತಾ, ಟಿವಿ ನೋಡುತ್ತಾ  ತಂಗಿ ಜೊತೆ ಕೀಟಲೆ ಮಾಡುತ್ತಾ ಊಟ ಮಾಡುತ್ತಿದ್ದಳು.  ಅವರಿವರ ಮದುವೆ, ಮುಂಜಿಗಳಿಗೆ ಹೋದಾಗ ಎಲೆ ಊಟ ನೋಡಿದ್ದಳು. ಅವಳ ತಂದೆಯದು ದೊಡ್ಡ ಹುದ್ದೆ, ಶಿಸ್ತುಬದ್ಧ ಜೀವನ, ತಾಯಿ ಹೈ ಸ್ಕೂಲ್ ಟೀಚರ್, ಕೆಲಸಗಳಿಗೆ ಹೊಂದಿಸಿ ಕೊಳ್ಳುವಂತೆ ಮನೆಯನ್ನು ಸುಧಾರಿಸಿಕೊಂಡು ಹೋಗುತ್ತಿದ್ದರು. ಈಗ ಇಬ್ಬರೂ ರಿಟೈರ್ಡ್. ಮನೆಯಲ್ಲಿ ಮೊದಲಿನಂತೆ ನಡೆದಿತ್ತು. ಬೆಂಗಳೂರಿನಂಥ ಮಹಾನಗರದಲ್ಲಿ  ನೋಡದಿರುವ ಜಾಗವಿಲ್ಲ, ಹೋಗದಿರುವ ಪ್ರವಾಸಗಳಿಲ್ಲ, ಗಂಡನ ಮನೆ ಕಟ್ಟಿ ಹಾಕಿದಂತಾಗಿದೆ. 

ಒಮ್ಮೆ ರೇಖಾಳ ತಂದೆ-ತಾಯಿ  ಕಾಶಿ, ರಾಮೇಶ್ವರ, ಚಾರ್ ಧಾಮ್ ಯಾತ್ರೆಗೆ, ಹೊರಟಿದ್ದು, ಜೊತೆಗೆ ಮಗಳನ್ನು ಬರುವಂತೆ ಕರೆದರು. ಒಂದೆರಡು ತಿಂಗಳು ಇರುವಂತೆ ಬೆಂಗಳೂರಿಗೆ ಬಂದಳು. ಆದರೆ ಪ್ರವಾಸ ಮುಂದೂಡಲಾಯಿತು. ಹೇಗೂ ಬಂದಿದ್ದೀಯಾ ಒಂದು ತಿಂಗಳು ಇದ್ದು ಹೋಗು ಎಂದು ತಂದೆ ತಾಯಿ ಹೇಳಿದ ಮಾತಿಗೆ ಅಲ್ಲೇ ಉಳಿದಳು. ತಾಯಿ ಹತ್ತಿರ ಗಂಡನ ಮನೆ ವಿಚಾರ ಅತ್ತೆ ವಿಚಾರ ಎಲ್ಲ ಹೇಳಿದಳು. ಅತ್ತೆಯ ಕಿರಿಕ್  ಬಿಟ್ಟರೆ  ಇನ್ನೆಲ್ಲಾ ಚೆನ್ನಾಗಿದೆ ಎಂದಳು. ಅಂದು ತಾಯಿಯ ಬಾಲ್ಯದ ಗೆಳತಿ, ಡಾ. ಕೌಸಲ್ಯಾ ಬಾಯಿ  ಮನೆಗೆ ಬಂದರು. ಗೆಳತಿಯರು ಎಲ್ಲಾ ವಿಚಾರಗಳನ್ನು ಮಾತಾಡುವಾಗ, ಗಂಡನ ಮನೆಯಲ್ಲಿ ಮಗಳು ಹೇಗಿದ್ದಾಳೆ ಎಂದು ಕೇಳಿದ್ದಕ್ಕೆ, ಗೆಳತಿ, ಫ್ಯಾಮಿಲಿ ಡಾಕ್ಟರು ಆಗಿರುವುದರಿಂದ, ಹುಡುಗಿಯ ಅಮ್ಮ ಎಲ್ಲವನ್ನೂ ಹೇಳಿದರು. ಆಗ ಡಾಕ್ಟರ್  ಒಂದು  ಸಲಹೆ ಕೊಡುತ್ತೇನೆ. ಕೆಲವೇ ದಿನಗಳಲ್ಲಿ  ಸುಧಾರಿಸುತ್ತದೆ. ಒಂದು ವಿಷಯ ನೀವು ಗಂಡ, ಹೆಂಡತಿ  ಮಗಳ ಮನೆಗೆ  ಹೆಚ್ಚು ಹೋಗಬೇಡಿ. 

ಅವಳಿಗೆ  ಗಂಡನ ಮನೆ ಹೊಸದು, ಹೊಂದಿಕೊಳ್ಳುವುದು ಕಷ್ಟವಾಗಿರುತ್ತದೆ.ಗ್ರಾಮಗಳಲ್ಲಿ ಇರುವ ಕುಟುಂಬದವರು ಮನೆ-ಮಕ್ಕಳು ಹಬ್ಬ-ಹುಣ್ಣಿಮೆ ಹೀಗೆ ಜಾಸ್ತಿ ಹಚ್ಚಿಕೊಂಡಿರುತ್ತಾರೆ. ಪಟ್ಟಣದಲ್ಲಿರುವವರ ಹಾಗೆ ಶಾಪಿಂಗು, ಪ್ರವಾಸ, ಎಂದು  ಹತ್ತಾರು ಕಡೆ ಸುತ್ತುವರಲ್ಲ. ಮನೆಯೇ  ಎಲ್ಲಾ ಆಗಿರುತ್ತದೆ. ಕ್ರಮೇಣ ಹೊಂದಿಕೆಯಾಗುತ್ತದೆ ಕಾಯಬೇಕು. ನಿನ್ನ ಮಗಳನ್ನು  ಕ್ಲಿನಿಕ್ಕಿಗೆ ಕಳಿಸು ಎಂದು ಹೇಳಿ ಹೊರಟರು. ಕ್ಲಿನಿಕ್ಕಿಗೆ ಬಂದ ರೇಖಾ ಎಲ್ಲವನ್ನು ಹೇಳುವುದು ಬೇಡವೋ ಎಂದು ಯೋಚಿಸುತ್ತಾ  ಡಾಕ್ಟರರನ್ನು ನೋಡಿದಳು. ಹಿರಿಯ ಅನುಭವಿ  ಆಯುರ್ವೇದಿಕ್ ಡಾಕ್ಟರ್ ,ಮಾತೃ ವಾತ್ಸಲ್ಯ ಮೂಡುವಂಥ ಅವರ ಉಡುಗೆ ತೊಡುಗೆ, ನಿಧಾನ ಮಾತು, ನೋಡಿ ಮುಚ್ಚುಮರೆಯಿಲ್ಲದೆ  ಎಲ್ಲವನ್ನು ಹೇಳಿದಳು. 

ನಿಧಾನವಾಗಿ ಎಲ್ಲವನ್ನು ಕೇಳಿದ  ಡಾ.ಕೌಸಲ್ಯ ಬಾಯಿ. ನೋಡು ಮಗಳೇ ನೀನು ಸ್ವಲ್ಪ ತಾಳ್ಮೆಯಿಂದ ಇದ್ದರೆ ಎಲ್ಲವೂ ಚೆನ್ನಾಗಿ ಆಗುತ್ತದೆ. ನಿಮ್ಮ ಅತ್ತೆ ಸ್ವಲ್ಪ ಹಿಂದಿನವರು. ಅಲ್ಲದೆ ವಯಸ್ಸಾಗುತ್ತಾ ಬಂದ ಹಾಗೆ, ಮಾನಸಿಕವಾಗಿ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ .ಹಳ್ಳಿಯಲ್ಲಿ ಇರುವವರು ಮಕ್ಕಳ ಮೇಲೆ ಜೀವವನ್ನೇ ಇಟ್ಟಿರುತ್ತಾರೆ.  ಅಂದಹಾಗೆ ನಿಮ್ಮ ಅತ್ತೆಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದೆಯೇ? ಎಂದು ಕೇಳಿದಾಗ, ಅಂಥದ್ದೇನೂ ಇಲ್ಲ. ಬಿ.ಪಿಗೆ ಮಾತ್ರೆ ತೆಗೆದುಕೊಳ್ಳುತ್ತಾರೆ, ಬಾಕಿಯಂತೆ ಆಗಾಗ್ಗೆ  ಬೆನ್ನು, ಮೊಣಕಾಲು ನೋವು,  ಎನ್ನುತ್ತಾರೆ ಎಂದಳು. ಮುಂದುವರಿಸಿದ ಡಾಕ್ಟರ್  ನಾನು ಕೆಲವೊಂದು ಸಲಹೆ ಕೊಡುತ್ತೇನೆ ಅದರಂತೆ ಮಾಡು. ನಿಮ್ಮ ಅತ್ತೆಗೆ ನೋವು  ಕಡಿಮೆಯಾಗುವ ವಿಟಮಿನ್ ಪೌಡರ್ ಕೊಡುತ್ತೇನೆ. ನಿತ್ಯ ರಾತ್ರಿ ಒಂದು ಲೋಟ ಹಾಲಿಗೆ  1 ಸ್ಪೂನ್  ಹಾಕಿ ಕುಡಿಯಲು  ಕೊಡು ಆಗ  ಸುಖವಾಗಿ ನಿದ್ದೆ ಮಾಡುತ್ತಾರೆ. ಮನಸ್ಸು ಹಗುರಾಗುತ್ತದೆ.  ತಾಳ್ಮೆಯಿಂದ  ಸ್ವಲ್ಪ ದಿನಗಳು ಮಾಡಬೇಕು. ಅವರು ಹೇಳಿದ್ದನ್ನು  ಅನುಸರಿಸಬೇಕು  ಅವರಿಂದ ಅಡಿಗೆ, ತಿಂಡಿಗಳನ್ನು ಕಲಿಯುವುದು,  ದೇವಸ್ಥಾನ, ಪಾರ್ಕು, ಸಣ್ಣಪುಟ್ಟ ಪ್ರವಾಸ, ಭಜನಾ ಮಂಡಳಿಗಳಿಗೆ  ಕರೆದುಕೊಂಡು ಹೋಗಿ ಅವರಿಗೆ ಅಭ್ಯಾಸ ಮಾಡಿಸು. ಬರಬರುತ್ತಾ ಅವರಿಗೂ ಹೊಂದಿಕೆಯಾಗುತ್ತದೆ ನಿನಗೂ ಸರಿಹೋಗುತ್ತದೆ 
ಹೀಗೆ ಎಲ್ಲವನ್ನೂ  ತಿಳಿಸಿದರು. 

ರೇಖಾಗೆ ಗಂಡನ ಮನೆ ಬಿಟ್ಟು ತವರಿಗೆ ಬಂದಮೇಲೆ, ಪ್ರವಾಸವು ಇಲ್ಲ. ಗಂಡನನ್ನು ಬಿಟ್ಟು ಇರುವುದು ಅವಳಿಗೆ ಹಿಂಸೆಯಾಗಿತ್ತು. ಊಟ ತಿಂಡಿ ಏನೂ ಬೇಡವಾಯಿತು. ಯಾವಾಗಲೂ ಗಂಡ ಹರ್ಷನ ನೆನಪೇ ಬರುತ್ತಿತ್ತು. ಈ ಕಡೆ ಅವಳ  ಅತ್ತೆಗೆ ಒಂದು ವಾರದ ತನಕ ಏನು ಅನ್ನಿಸಲಿಲ್ಲ ಮಗನಿಗೆ ಅಡಿಗೆ ತಿಂಡಿ ಮಾಡಿಕೊಟ್ಟು ಸಂತೋಷವಾಗಿದ್ದರು. ಆದರೆ ಜೀವನ ಸಪ್ಪೆ ಅನಿಸಿತು.  ಗಳಾಬಿಳಿಯಾಗಿ ಓಡಾಡುತ್ತಾ  ಟಿವಿ ನೋಡುತ್ತಾ, ಹಾಡು ಗುಣುಗುಣಿಸುತ್ತಾ ಸೊಸೆ ಮನೆತುಂಬಾ ಓಡಾಡಿ ಕೊಂಡಿದ್ದಳು. ಮಗ ಮನೆಗೆ ಬರುವ ಹೊತ್ತಿಗೆ,  ಹೊಸ ಹೊಸ ತಿಂಡಿ  ಮಾಡಿ ಕಾಯುತ್ತಿದ್ದಳು. ಮಗನು ಮೊದಲಿನ  ಹಾಗೆ ತಾಯಿ ಹತ್ತಿರ ಅದು, ಇದು ಕೊಡು  ತರಲೆ, ಕೀಟಲೆ ಯಾವುದು ಇರಲಿಲ್ಲ ಅವನಾಯಿತು ಫೋನ್ ಆಯ್ತು, ಕೆಲಸವಾಯಿತು. ಹೀಗಿದ್ದಾಗ,  ಸೊಸೆಯ ಮೇಲೆ  ನಾನು ತುಂಬಾ ಒತ್ತಡವನ್ನು ಹೇರಿದೆನೇ  ಎಂಬ ಅಳುಕು ಕಾಡಿತು. ನಾನೇ ಸರಿ ಮಾಡಿಕೊಳ್ಳಬೇಕು, ಎಲ್ಲರ ಯೋಚನೆ ಹೀಗೆ  ಸಾಗಿರುವಾಗ ಸೊಸೆಯು ತನ್ನ ಗಂಡನಿಗೆ ಫೋನ್ ಮಾಡಿ ಕರೆಸಿಕೊಂಡು  ಹರ್ಷನ  ಜೊತೆ  ಬಂದಳು. 

ಮತ್ತೆ ಮನೆ ತುಂಬಿದಂತಾಯಿತು. ಡಾಕ್ಟರ್ ಹೇಳಿದಂತೆ ಪ್ರತಿನಿತ್ಯ ಅತ್ತೆಗೆ ಪೌಡರ್ ಕೊಟ್ಟಳು. ಊರಿಂದ ಬರುವಾಗ ಅವರಿಗಾಗಿ ಒಳ್ಳೆಯ 2 ಸೀರೆ,ಹೊದೆಯಲು ಶಾಲು, ಅವರು ಇಷ್ಟಪಡುವ ಒಂದಷ್ಟು ತಿಂಡಿಗಳು, ಎಲ್ಲವನ್ನು 
ತಂದಿದ್ದಳು. ಇದನ್ನೆಲ್ಲಾ ನೋಡಿ  ಅತ್ತೆಗೆ ಮುಖ ಅರಳಿತು. ತೋರ್ಪಡಿಸದೆ  ಅದೇನು ನಿಮ್ಮಪ್ಪ ಅಮ್ಮನ ಜೊತೆ ಪ್ರವಾಸ ಹೋಗದೆ  ಇಷ್ಟು ಬೇಗ ಬಂದು ಬಿಟ್ಟೆಯಲ್ಲ ಎಂದರು. 'ಯಾಕೆ ಬರಬಾರದಿತ್ತೆ' ಕೇಳಬೇಕು ನಾಲಿಗೆ ತುದಿಯಲ್ಲಿ ಬಂದಿತ್ತು. ಆದರೂ ತಡೆದುಕೊಂಡು,  ಅಲ್ಲಲ್ಲೆ  ಕರೊನ ಇದೆ  ಅಷ್ಟು ದೂರದ ಪ್ರವಾಸ  ಈಗ  ಬೇಡ ಎಂದು ಮುಂದೆ ಹಾಕಿದರು. ಅವಳ ತಾಳ್ಮೆಯ ಮಾತು ಕೇಳಿ ದೇವರೇ ನಾನೆ  ಒರಟಾಗಿ ಮಾತನಾಡಿದೆನೆ  ಎಂದುಕೊಂಡರು. ಸೀದಾ  ಕೋಣೆಗೆ ಹೋದರು. ಎರಡು ಸೀರೆಗಳನ್ನು ನೋಡಿಕೊಂಡರು ತುಂಬಾ ಚೆನ್ನಾಗಿತ್ತು. ಶಾಲಂತೂ ಒಳ್ಳೆ ಮೊಲದ ಮರಿಯ ಹಾಗೇ ಮೃದುವಾಗಿತ್ತು. ತಿಂಡಿಗಳನ್ನು ನೋಡಿ ಆಸೆಯಾಯಿತು. ವಯಸ್ಸಾಗುತ್ತಾಗುತ್ತಾ ತಿನ್ನುವ ಚಪಲ ಜಾಸ್ತಿ ಆಗುತ್ತೆ ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ ಎಂದುಕೊಂಡು ತಮಗೆ ತಾವೇ ನಕ್ಕರು. 

ಡಾಕ್ಟರ್ ಕೌಸಲ್ಯ ಬಾಯಿ ಹೇಳಿದಂತೆ, ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿತ್ತು.ಒಂದು ತಿಂಗಳಲ್ಲೆ  ಅತ್ತೆ-ಸೊಸೆಯರಲ್ಲಿ  ಸಾಕಷ್ಟು ಬದಲಾವಣೆ ಕಂಡಿತು. ತಂದೆ ತಾಯಿ ಬರುವುದು, ದಿನವೂ ಗಂಟೆ ಘಡಿಯ ಫೋನ್ ಮಾಡುವುದು ಕಡಿಮೆಯಾಗಿತ್ತು. ಆ ವೇಳೆಗೆ ಶ್ರಾವಣ ಮಾಸ ಬಂದಿತು.  ತಾಯಿ ಮನೆಗೆ ಹೋಗುತ್ತೇನೆ ಎಂದು ತಯಾರಿ ಮಾಡಿಕೊಳ್ಳಲು ಹೊರಟ ಸೊಸೆಗೆ, ನೋಡಮ್ಮ  ಶ್ರಾವಣದಲ್ಲಿ  ಭೀಮನ ಅಮಾವಾಸ್ಯೆ, ಮಂಗಳಗೌರಿ ವ್ರತ, ನಾಗರ ಪಂಚಮಿ, ಹಬ್ಬಗಳನ್ನು ಮಾಡಿಕೊಂಡು ಗೌರಿ ಹಬ್ಬಕ್ಕೆ ಹೋಗಿ ಬರುವಿಯಂತೆ ಈ ಮನೆಯಲ್ಲೂ  ವ್ರತ ಗಳನ್ನು ಮಾಡಿದಂತಾಗುತ್ತದೆ. ದೇವಸ್ಥಾನದ  ಪುರೋಹಿತರಿಗೆ ಹೇಳುತ್ತೇನೆ. ಯೋಚಿಸಿ ಹೇಳು ಹೇಗಾದರೂ ಸರಿ ಎಂದರು. ರೇಖಾಗೂ  ಮನಸ್ಸಿನಲ್ಲಿ  ಈಗ ಹೋದರೆ ಗೌರಿಹಬ್ಬ ಮುಗಿಸಿ ಬರುವುದು  ಒಂದುವರೆ ತಿಂಗಳ ಹತ್ತಿರ ಆಗುತ್ತದೆ ಎಂದುಕೊಂಡಿದ್ದಳು. ಅತ್ತೆ ಹೇಳಿದ ಮೇಲೆ  ನೀವು ಹೇಳಿದಂತೆ ಆಗಲಿ ಎಂದಳು. ಮಂಗಳಮ್ಮನಿಗೆ  ತನ್ನ ಸೊಸೆ ಹೇಳಿದ ಹಾಗೆ ಕೇಳುತ್ತಾಳೆ ಎಂದು ಇನ್ನೂ ಅಭಿಮಾನ ಹೆಚ್ಚಿತು.  ಡಾಕ್ಟರ್ ಕೌಸಲ್ಯ ಬಾಯಿ ಸಲಹೆ ಗಳನ್ನು ಅನುಸರಿಸಿದ ಮೇಲೆ ಎರಡು ಕುಟುಂಬದಲ್ಲಿ ಶಾಂತಿ ನೆಲೆಸಿ  ಅತ್ತೆ ತಾಯಿಯಾದರೆ, ಸೊಸೆ  ಮಗಳಾದಳು. 

ಹಿಂದೆ  'ತರಂಗ' ಸಂಪಾದಕೀಯದಲ್ಲಿ  ಸಂಧ್ಯಾ ಪೈಯವರು  ಬರೆದ  ಆಧಾರ. 

ಅಹಂಮಮಾಭಿ ಮಾನೋತ್ಥೈ, ಕಾ ಮಲೋಭಾದಿಭಿರ್ಮಲೈ!
ವೀತಂ  ಯದಾ  ಮನ , ಶುದ್ಧಮ ದುಃಖಮ ಸುಖಂ ಸಮಮ್! 

ನಾನು, ನನ್ನದು ಎಂಬ ಅಭಿಮಾನದಿಂದುಂಟಾದ,  ಕಾಮ, ದುರಾಸೆ, ಮೊದಲಾದ ಕೋಣೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು  ಶುದ್ಧವಾಗುತ್ತದೋ ಆಗ  ಸುಖವಾಗಲಿ, ದುಃಖವಾಗಲಿ,  ಸಮವೆನಿಸುತ್ತದೆ. 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಗಾಂಧಾರಿಯ ಹಸಿವು

ಗಾಂಧಾರಿಯ ಹಸಿವು:-. 

ಕುರುಕ್ಷೇತ್ರ ಯುದ್ಧ ಮುಗಿದಿದೆ. ಪಾಂಡವರಿಗೂ ಮತ್ತು  ಕೌರವರಿಗೂ ನಡೆದ ಮಹಾಭಾರತ ಯುದ್ಧದಲ್ಲಿ ಕೌರವರೆಲ್ಲರೂ ನಾಶವಾದರು. ಕೌರವರು ಗಾಂಧಾರಿಯ ಮಕ್ಕಳು. ಗಾಂಧಾರಿ ಈಗ ಅತ್ಯಂತ  ದುಃಖದಿಂದಿದ್ದಳು.
ಯುದ್ಧಭೂಮಿಗೆ ಹೋಗಿ ಮಡಿದು ಬಿದ್ದ ತನ್ನ ಮಕ್ಕಳನ್ನು, ಮಗನಾದ ದುರ್ಯೋಧನನನ್ನು ತೊಡೆಯ ಮೇಲಿಟ್ಟುಕೊಂಡು ಬಿಕ್ಕಿಬಿಕ್ಕಿ ಅಳುತ್ತಾ ಕುಳಿತಳು. ಪಶ್ಚಿಮದಲ್ಲಿ ಸೂರ್ಯ ಮುಳುಗಿದರೂ, ಆಕೆ ಕುಳಿತಲ್ಲಿಂದ ಏಳಲಿಲ್ಲ. ಉಳಿದವರೆಲ್ಲ ತಮ್ಮ ನಿವಾಸಗಳಿಗೆ ಮರಳಿದರು. ಗಾಂಧಾರಿಯು  ತನ್ನ ಮಕ್ಕಳ ಶವಗಳನ್ನು ಬಿಟ್ಟು ಬರಲು ಮನಸ್ಸಿಲ್ಲದೆ ತನ್ನ ಪುತ್ರರ ಮೇಲೆ ಅಷ್ಟೊಂದು ವ್ಯಾಮೋಹಗೊಂಡಿದ್ದಳು. 

ಕೃಷ್ಣನು  ಅಲ್ಲಿಗೆ ಬಂದು ಆಕೆಯನ್ನು ಸಂತೈಸುತ್ತಾ," ತಾಯಿ ಈ ವ್ಯರ್ಥ ದುಃಖವನ್ನು ಸಾಕು ಮಾಡು, ತಪ್ಪಿಸಲಾಗದ ನಿನ್ನ ಮಕ್ಕಳ ಅಗಲುವಿಕೆಯ ಸಲುವಾಗಿ ಅತ್ತು  ಪ್ರಯೋಜನವಿಲ್ಲ .ಮಕ್ಕಳು ಮತ್ತು ಬಂಧುಗಳು ಇವರೆಲ್ಲರೂ ವ್ಯಾಮೋಹದ ಬಂಧನದಿಂದ ಒಂದುಗೂಡುವರು. ಒಂದು ಛತ್ರದಲ್ಲಿ ಸೇರಿದ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಅಲ್ಲಿಂದ ತೆರಳುವಂತೆ ಈ ಪ್ರಪಂಚದಲ್ಲಿ ಒಂದು ಕಡೆ ಸೇರಿದ ಇವರು ಕೂಡ ಕಾಲಾನುಕಾಲಕ್ಕೆ ಅಲ್ಲಿಂದ ತೆರಳಲೇಬೇಕು. ಹಾಗೆ ನೀನು ದುಃಖಿಸಬೇಡ ಹೀಗೆ ದುಃಖಿಸುತ್ತಿದ್ದರೆ  ಅವರು ಇನ್ನು  ಮರಳಿ ಬರುವುದಿಲ್ಲ. ಸಾವೆಂದರೆ ಒಂದು ವಿಧವಾದ ಹೊರ ತೊಡುಗೆಯನ್ನು ಕಳಚುವ ಪ್ರವೃತ್ತಿ. ಅಂತರಾತ್ಮನು ಸಾಯುವುದು ಇಲ್ಲ, ಹುಟ್ಟುವುದು ಇಲ್ಲ ಅರ್ಥವಾಯಿತೆ  ತಾಯಿ. ಮೇಲೇಳು  ಮನೆಗೆ ಹೋಗೋಣ. ನೀನು ಹಸಿವನ್ನು ತಾಳಲಾಗುವುದಿಲ್ಲ  ಹಸಿವಿನಿಂದ ಮತ್ತಷ್ಟು ದುಃಖವಾಗುತ್ತದೆ ಈಗ ಕತ್ತಲಾಯಿತು ಏಳು" ಎಂದನು. 

ಗಾಂಧಾರಿ ಸಿಟ್ಟಿನಿಂದ  "ಏ ಕೃಷ್ಣಾ ಈ ಎಲ್ಲಾ ಅನಾಹುತಗಳಿಗೆ ನೀನೇ ಕಾರಣ. ದಯಮಾಡಿ ನನ್ನನ್ನು ಇಲ್ಲಿಂದ ಕದಲಿಸಬೇಡ, ಖಂಡಿತವಾಗಿಯೂ ನಾನು ಇಲ್ಲಿಂದ ಬರುವುದಿಲ್ಲ. ನನ್ನ ಮಕ್ಕಳೊಂದಿಗೆ ಇಲ್ಲಿಯೇ ಸಾಯುತ್ತೇನೆ. ಮಕ್ಕಳೆಲ್ಲರನ್ನು  ಕಳೆದುಕೊಂಡ ಮೇಲೆ ನನಗೆ ಯಾವುದರ ಮೇಲೆಯೂ ಇಷ್ಟವಿಲ್ಲ.  ನಾನು ಏನನ್ನೂ ತಿನ್ನುವುದಿಲ್ಲ. ನಿರಶನ  ವ್ರತ ಹಿಡಿದು ಸಾಯುತ್ತೇನೆ". ಕೃಷ್ಣನು  ಈ ರೀತಿ ಮೊಂಡುತನದಿಂದ ಕುಳಿತ ಗಾಂಧಾರಿಯನ್ನು ಒತ್ತಾಯಿಸದೆ  ಅಲ್ಲಿಂದ ಹಾಗೆಯೇ ನಡೆದನು.  

ಗಾಂಧಾರಿಯು ಯುದ್ಧಭೂಮಿಯಲ್ಲಿ ಕುಳಿತು ಎರಡು ದಿನ ಕಳೆಯಿತು.ಅವಳಿಗೆ ಯಾರು ಆಹಾರ ನೀರು ಕೊಡಲಿಲ್ಲ. ಆಕೆ ಹಸಿವಿನಿಂದ ತುಂಬಾ ಒದ್ದಾಡುತ್ತಿದ್ದಳು. ತಿನ್ನಲು ಏನಾದರೂ ಸಿಕ್ಕಿತೆಂದು ಆಕಡೆ ಕಡೆ ಹುಡುಕಿ ದಳು. ಆದರೆ ಅವಳಿಗೆ ಏನೂ ಸಿಗಲಿಲ್ಲ. ಹತ್ತಿರದಲ್ಲಿದ್ದ ಮರದ ಕೊಂಬೆಯೊಂದರ ಮೇಲೆ ಮಾಂಸವು ನೇತಾಡುತ್ತಿತ್ತು. ಸುತ್ತಮುತ್ತ ನೋಡಿ ಯಾರೂ ಇಲ್ಲದ್ದನ್ನು ಕಂಡು ಅದನ್ನು ತಿಂದು ಹಸಿವನ್ನು ನೀಗಿಸಿಕೊಳ್ಳಬೇಕೆಂದು ಮನಸ್ಸು ಮಾಡಿದಳು. ಆದರೆ ಆಗಲಿಲ್ಲ ಮಾಂಸವು ಬಹಳ ಎತ್ತರದಲ್ಲಿತ್ತು. ನೆಲದ ಮೇಲೆ ನಿಂತು ಅದನ್ನು ತೆಗೆದುಕೊಳ್ಳುವುದು ಕಷ್ಟವಾಗಿತ್ತು. ಈಗ ಆಕೆಯು ತನ್ನ ಮಕ್ಕಳ ಶವಗಳನ್ನು ಒಂದರ ಮೇಲೊಂದು ಇಟ್ಟು ಮೇಲಕ್ಕೆ ಹತ್ತಿದಳು. ನೇತಾಡುತ್ತಿದ್ದ ಮಾಂಸವು ಅವಳ ಕೈಗೆ  ಎಟುಕಿತು. ಅವಳು ಅದನ್ನು ಇನ್ನೇನು ಬಾಯಲ್ಲಿ ಇಟ್ಟುಕೊಳ್ಳಬೇಕೆಂದು ಅಷ್ಟರಲ್ಲಿ ಎಲ್ಲರ ಅಂತರಾತ್ಮದಲ್ಲಿ ವಾಸವಾಗಿರುವ ಶ್ರೀಕೃಷ್ಣನು ಅಲ್ಲಿ ಪ್ರತ್ಯಕ್ಷನಾದನು. ಆಕೆಯನ್ನು ಕುರಿತು " ತಾಯೀ ಆ ಮಾಂಸವನ್ನು ತಿನ್ನದಿರು. ನಿನಗಾಗಿ ಸೊಗಸಾದ ಭಕ್ಷ ಭೋಜ್ಯಗಳ  ಭೋಜನವನ್ನು ತಂದಿದ್ದೇನೆ. ಇವುಗಳನ್ನು ಮನದಣಿಯುವಂತೆ ಊಟ ಮಾಡು. ನಿನ್ನ ಸೇವೆ ಮಾಡಲು ನಾನು ಇರುವಾಗ ನೀನೇಕೆ ಕಷ್ಟದಿಂದ ಹೀಗೆ ನರಳಬೇಕು? ತಾಯಿ ನಾನು ಆಗಲೇ ಹೇಳಲಿಲ್ಲವೇ ಹಸಿವು ಮನುಷ್ಯನನ್ನು ಪೀಡಿಸುತ್ತದೆ ಅದನ್ನು ಯಾರು ಗೆಲ್ಲಲು ಸಾಧ್ಯವಿಲ್ಲ"

ಗಾಂಧಾರಿಯು ನಾಚಿಕೆ, ಅವಮಾನ  ಮತ್ತು ದುಃಖದಿಂದ ತಲೆ ತಗ್ಗಿಸಿದಳು. ಕೃಷ್ಣಪರಮಾತ್ಮನ ಪಾದಗಳಿಗೆ ನಮಸ್ಕಾರ ಮಾಡಿ ಹೀಗೆಂದಳು.
" ಏ ಕೃಷ್ಣ ನೀನು ಭಗವಂತ. ಎಲ್ಲರ ಹೃದಯಮಂದಿರದಲ್ಲಿ ನೆಲೆಸಿರುವ ಅಂತರ್ಯಾಮಿ ಅಲ್ಲವೇ? ನೀನು ವಿಶ್ವಕ್ಕೆ ಒಡೆಯ. ದಯಮಾಡಿ ನನ್ನ ಅಜ್ಞಾನವನ್ನು ನಿವಾರಿಸಿ ಜ್ಞಾನ ಜ್ಯೋತಿಯನ್ನು ನೀಡು. ನನ್ನ ಮಕ್ಕಳ ಮೇಲಿನ ವ್ಯಾಮೋಹವನ್ನು ಬಿಡುವುದು ಅತಿ ಕಷ್ಟ.ಈ ಅಜ್ಞಾನವನ್ನು ನಿವಾರಿಸು" ಎಂದು ಬೇಡಿಕೊಂಡಳು. ಕೃಷ್ಣನು ಗಾಂಧಾರಿಯನ್ನು ಕರೆದುಕೊಂಡು ಯುಧಿಷ್ಠಿರನ ಅರಮನೆಗೆ ಬಂದನು. ಯುಧಿಷ್ಠಿರನು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡನು. 

ಹಸಿವಿನ ಬಾಧೆ ಬಹಳ ದೊಡ್ಡದು. ವ್ಯಾಮೋಹ ಬಂಧನವು ಮತ್ತು ದೊಡ್ಡದು.
ಕರ್ಮಬಂಧನ ಎಲ್ಲಕ್ಕಿಂತ ದೊಡ್ಡದು.  ಶರೀರ ವ್ಯಾಮೋಹವು ಉನ್ನತವಾದ ಬಂಧನ. ಈ  ಶಾರೀರಿಕ ಭ್ರಮೆಯನ್ನು  ನಿರ್ದಯೆಯಿಂದ ಕತ್ತರಿಸಿ ಹಾಕಬೇಕು. ವ್ಯಾಮೋಹದಿಂದ ದೂರವಾಗಿ ಬಂದನಾತೀತರಾರಾಗಿರಬೇಕು. ಸ್ವರ್ಗ ಸುಖದ ಲೋಕಕ್ಕೆ ಪ್ರವೇಶಿಸಲು ಹೆಬ್ಬಾಗಿಲಿನ ಬೀಗವನ್ನು ತೆಗೆಯಬೇಕು. 

"ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವಃ 
ತ್ರಾಹಿಮಾಂ ಕೃಪಯಾ ದೇವ  ಶರಣಾಗತ ವತ್ಸಲ 
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ 
ತಸ್ಮಾತ್ ಕಾರುಣ್ಯ ಭಾವೇನ 
ರಕ್ಷಮಾಂ ಪರಮೇಶ್ವರ ರಕ್ಷ ರಕ್ಷೊ ಜಗದೀಶ್ವರ !"
                  ಶ್ರೀಕೃಷ್ಣಾರ್ಪಣಮಸ್ತು.

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಮಕ್ಕಳ ಕಥೆ: ಪರಪುಟ್ಟ

ಮಕ್ಕಳ ಕಥೆ:  ಪರಪುಟ್ಟ.

ಈ ಕಥೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೂ ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಹಾಗೆ ಸುಮ್ಮನೆ ಓದಿ. ಖುಷಿಕೊಡುತ್ತದೆ.

  ಊರಿನ ಹತ್ತಿರವಿರುವ ಕಾಡಿನಲ್ಲಿ,ಅಕ್ಕ ಪಕ್ಕ ವಾಸವಿದ್ದ ಕಾಗೆ ಮತ್ತು ಗೂಬೆ ಬಹಳ ಕಾಲದ ಸ್ನೇಹಿತರು. ನಿತ್ಯ ಆಹಾರ ಹುಡುಕಲು ಒಟ್ಟಿಗೆ ಹೋಗಿ ಬರುತ್ತಿದ್ದವು.ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದವು. ಒಟ್ಟಿಗೆ ದೂರದೂರದವರೆಗೂ ಹೋಗಿಬರುತ್ತಿದ್ದವು. ಹೀಗಿರುವಾಗ, ಒಂದು ಬೆಳಗ್ಗೆ ಎಷ್ಟು ಹೊತ್ತಾದರೂ ಗೂಬೆ ಬರಲಿಲ್ಲ. ಅದನ್ನು ಕರೆಯಲು ಕಾಗೆ,  ಬಾಗಿಲ ಮುಂದೆ ನಿಂತು, ಗೆಳತಿ ಗೂಬೆ ಬೇಗ ಬಾ ಬಿಸಿಲು ಏರುತ್ತೆ  ಎಂದು ಎರಡು ಸಲ ಜೋರಾಗಿ ಕೂಗಿದರೂ ಹೊರಗೆ ಬರಲಿಲ್ಲ ಗೂಬೆ, ಆಗ ಅದರ ಮನೆ  ಒಳಗೆ ಹೋಯಿತು. ಗೂಬೆ ಮಲಗಿದ್ದಲ್ಲಿಂದ ಎದ್ದಿರಲಿಲ್ಲ.ಹತ್ತಿರ ಹೋಗಿ ಯಾಕೆ ಹುಷಾರಿಲ್ವಾ  ಎಂದು ಕೇಳಿದಾಗ, ನರಳುತ್ತಲೆ ಇಲ್ಲ ಕಣೆ, ಮೈ,ಕೈಯೆಲ್ಲಾ ವಿಪರೀತ ನೋವು, ಮೈಯನ್ನ ಯಾರೋ ಹಿಂಡಿದಂತೆ ಆಗುತ್ತಿದೆ. ಜ್ವರ ಬೇರೆ ಬಂದಿದೆ, ಎಂದು ಹೇಳಿದಾಗ, ಅಯ್ಯೋ ಪಾಪ ಹೌದಾ?  ಹಾಗಾದರೆ ನೀನು ಇವತ್ತು ಹೊರಗೆ ಬರಬೇಡ ನಾನೇ ನಿನಗೆ ಆಹಾರ ತರುತ್ತೇನೆ ಎಂದು ಹೇಳುತ್ತಾ ಬೀದಿ ಬಾಗಿಲವರೆಗೂ ಹೊರಟ ಕಾಗೆ, ವಾಪಸ್ಸು ಬಂದು ನೀನು ನನ್ನ ಜೊತೆ ಬಾ  ನನಗೊಬ್ಬ ಒಳ್ಳೆ ಪಂಡಿತ ಗೂತ್ತಿದಾನೆ ಎಂದು ಹೇಳಿದಾಗ , ಗೂಬೆ ಅಯ್ಯೋ ನಾನು ಏಳಲಾರೆ, ಹಾರಕ್ಕಂತೂ ಸಾಧ್ಯಾನೇ ಇಲ್ಲ ಬಿಡು  ಎಂದಿತು. ಹೆಚ್ಚು ದೂರ ಇಲ್ಲ. ನಿಧಾನಕ್ಕೆ ಬಾ ನಾನು ಕರೆದುಕೊಂಡು ಹೋಗುತ್ತೇನೆ. ಬೇಗ ಗುಣವಾಗುತ್ತದೆ. ಎಂದು ಕಾಗೆ ಹೇಳಿತು

ಗೂಬೆಗೆ ಹೌದೆನ್ನಿಸಿತು. ಎರಡೂ ಜೊತೆಯಾಗಿ ಹಾರುತ್ತಾ ಹೊರಟವು. ಒಂದಷ್ಟು ದೂರ ಹೋದಮೇಲೆ, ಇನ್ನೂ ಎಷ್ಟು ದೂರ ಇದೆ? ನನ್ನ ಕೈಯ್ಯಿಂದ ಆಗದೇ ಇಲ್ಲ ಎಂದಿತು ಗೂಬೆ. ಇನ್ನೇನು ಸ್ವಲ್ಪ ದೂರವಷ್ಟೇ, ಅಲ್ಲಿ ನಾಗರ ಬನ ಇದೆ ಅದನ್ನು ದಾಟಿ ಬಿಟ್ಟರೆ ಮುಂದೆ ಸಿಗುವುದೇ ಪಂಡಿತನ  ಮನೆ ನೋಡು, ನೋಡು ಆಗೋ ಬಂದೇ ಬಿಟ್ಟಿತು. ಅಲ್ಲಿ ಕಾಣುತ್ತಲ್ಲ ಅದೇ ಮಾವಿನ ತೋಪು ಅಲ್ಲೇ ನನ್ನ ಸ್ನೇಹಿತ ಇರುವುದು. ಇಷ್ಟು ಹೇಳುವಷ್ಟರಲ್ಲಿ ಬಂದೇಬಿಟ್ಟಿತು. 

  ಕಾಗೆ, ಕ್ಷಣವೂ ತಡಮಾಡದೆ ಕುಹೂ ಕುಹೂ ಎಂದು ಧ್ವನಿ ಬರುತ್ತಿದ್ದ ಮಾವಿನ ಮರದ ಹತ್ತಿರ ಗೂಬೆಯನ್ನು ಕರೆದುಕೊಂಡು ಹೋಯಿತು.  ಕಣ್ಣಿಗೂ ಕಾಣದಂತೆ ಇದ್ದ ಕೋಗಿಲೆ ಕಣ್ಣುಮುಚ್ಚಿಕೊಂಡು ಇಂಪಾಗಿ ಹಾಡುತ್ತಿತ್ತು. ನಿಧಾನವಾಗಿ ಎಬ್ಬಿಸಿದ ಕಾಗೆ ನೋಡು ಕೋಗಿಲೆ, ಈ ಗೂಬೆ ನನ್ನ ಗೆಳೆಯ ನಿನ್ನೆಯಿಂದ ಹುಷಾರಿಲ್ಲ ಪರೀಕ್ಷೆ ಮಾಡಿ  ಔಷಧಿ ಕೊಡು. ನಾನು ಆಚೆ ಕಡೆ ಹೋಗಿ ಒಂದಷ್ಟು ಆಹಾರ ತರುತ್ತೇನೆ, ಎಂದು ಎರಡನ್ನು ಪರಿಚಯ ಮಾಡಿಸಿ ತಾನು ಆಹಾರ ತರಲು ಹೊರಗೆ ಹೊರಟಿತು. ಕೋಗಿಲೆ ದೃಷ್ಟಿಸಿ ನೋಡಿ, ಮನಸ್ಸಿನಲ್ಲಿ ಥೂ ಬೆಳಗ್ಗೆ ಮುಂಚೆ ಈ ಗೂಬೆ ಮುಂಡೇದು ಬಂದಿದೆ.  ಅಂದುಕೊಳ್ಳುತ್ತಿದ್ದರೆ,ಗೂಬೆ ಅಯ್ಯೋ ಇದು ಪಂಡಿತ ಅಂತೆ ಕರ್ರಗೆ ಇಷ್ಟು ಸಣ್ಣಕ್ಕೆ ಕುತ್ಕೊಂಡಿದೆ ಮೂರೂತ್ತು ಹಾಡು ಗುಣಗುತ್ತ  ಇರತ್ತೆ ಅದೇನು ಔಷಧಿ ಕೊಡುತ್ತೋ ದೇವರಿಗೆ ಗೊತ್ತು. 'ಬಂದ ದಾರಿಗೆ ಸುಂಕವಿಲ್ಲ' ಎಂದುಕೊಂಡಿತು.

 ಗೂಬೆಯನ್ನು ನೋಡುತ್ತಾ ನಿನಗೇನಾಗಿದೆ ಎಂದು ಕೋಗಿಲೆ ಕೇಳಿತು. ನೆನ್ನೆಯಿಂದ ಮೈ ಕೈಯೆಲ್ಲಾ  ನೋವು, ಖಂಡಾಪಟ್ಟೆ ಜ್ವರ ಇದೆ. ಗೂಬೆಯ ರೆಕ್ಕೆಪುಕ್ಕ, ಕಣ್ಣು, ಮೂಗು, ಬಾಯಿ  ಒಂದೊಂದಾಗಿ ಪರೀಕ್ಷಿಸಿದ ಕೋಗಿಲೆ, ಗೂಬೆಗೆ ಹೀಗೆ ಹೇಳಿತು, "ನೀನು ಗುಡ್ಡದ ದಾರಿಯಲ್ಲಿರುವ  ನೀರಿನ ಹೊಂಡದಲ್ಲಿ ಸ್ವಲ್ಪ ಹೊತ್ತು ಕೂರು ಎಂದಿತು. ಕೋಗಿಲೆ ಮುಖ  ಸಿಂಡರಿಸಿಕೊಂಡು,  ಅಯ್ಯೋ ಈ ಪಾಟೀ ಚಳಿ‌ಲೀ ನಡ್ಗತಾ ಇದೀನಿ, ನೀನು  ನೋಡಿದರೆ ತಣ್ಣೀರಿನಲ್ಲಿ ಕೂತ್ಕೊಳ್ಳೋಕೆ  ಹೇಳಿದೆಯಲ್ಲ, ಎಂದು ಕೇಳಿದಾಗ, ಯಾವ ಭಾವವನ್ನೂ ವ್ಯಕ್ತಪಡಿಸದ  ಕೋಗಿಲೆ,  ನಿನ್ನ ಇಷ್ಟ ನನಗೆ ಸಮಯವಿಲ್ಲ ಬೇಕಾದರೆ ಕೂರು ಇಲ್ಲದಿದ್ದರೆ ಹೋಗು ಎಂದು ಖಡಕ್ಕಾಗಿ ಹೇಳಿ. ತನ್ನ ಪಾಡಿಗೆ ತಾನು ಹಾಡು ಹೇಳಿಕೊಳ್ಳುತ್ತಾ ಕಣ್ಣು ಮುಚ್ಚಿ ಕುಳಿತು ಬಿಟ್ಟಿತು. ಗೂಬೆಗೆ ವಿಪರೀತ ಕೋಪ ಬಂದರೂ ಏನು ಮಾಡಲಾಗದೆ ತಣ್ಣೀರಿನ ಹೊಂಡದಲ್ಲಿ  ಕುಳಿತುಕೊಂಡಿತು.ಒಂದಷ್ಟು ಹೊತ್ತಾದರೂ, ಕೋಗಿಲೆಯಿಂದ ಯಾವ ಸೂಚನೆಯೂ ಬರದ ಕಾರಣ ತಾನೆ ನೀರಿನಿಂದ ಮೇಲೇಳಲು ಪ್ರಯತ್ನಿಸಿತು. ಏನೊ ಹಗುರವಾದಂತೆ ಅನಿಸಿತು. ಅಲ್ಲೇ ರೆಕ್ಕೆ ಅಲ್ಲಾಡಿಸಿತು. ನೋವಾಗಲಿಲ್ಲ. ನೀರಿನ ಹೊಂಡದಿಂದ ಮೇಲೆದ್ದು ಬಂದಿತು. ಮೈ ಕೊಡವಿತು.ಅರೆ ನೋವೆಲ್ಲಾ ಮಾಯವಾಗಿದೆ
ಜ್ವರವು ಬಿಟ್ಟಿತ್ತು .ಗೂಬೆಗೆ ಆಶ್ಚರ್ಯವಾಯಿತು. ಸಂತೋಷದಿಂದ ಕೋಗಿಲೆ ಹತ್ತಿರ ಬಂದು ನನ್ನ ಕಾಯಿಲೆ ವಾಸಿಯಾಯಿತು ಔಷಧಿಯಲ್ಲ, ಗುಳಿಗೆಯಲ್ಲ, ಅದೇನು ಮಂತ್ರ ಮಾಡಿದೆ, ಅರ್ಧಗಂಟೆಯು ಆಗಿಲ್ಲ ನನಗೆ ಪೂರ್ತಿ ಹುಷಾರಾಗಿ ಬಿಟ್ಟಿದೆ ಎಂದು ಗೂಬೆ ಕೇಳಿದಾಗ, ಏನಿಲ್ಲ ನಿನ್ನ ಪುಕ್ಕದೊಳಗೆ  ಒಂದು  ಸಣ್ಣ ಮಣ್ಣಿನ ಹೆಂಟೆ ಸೇರಿಕೊಂಡಿತ್ತು. ಆ ನೋವಿಗೆ ಜ್ವರ ಬಂದಿತ್ತು. ನೀರಿನಲ್ಲಿ ಕುಳಿತಾಗ ಮಣ್ಣಿನ ಹೆಂಟೆ ಕರಗಿತು. ನೋವಿನೂಂದಿಗೆ ಜ್ವರವು ಹೋಯಿತು. ಓಹೋ ಹಾಗಾದರೆ ಕಾಗೆ  ಹೇಳಿದ್ದು ನಿಜ ನೀನು ಬಹಳ ಬುದ್ಧಿವಂತನೆಂದು, ನಿನಗೆ ನನ್ನ 
ನಮಸ್ಕಾರಳು ಹೋಗಿ ಬರುತ್ತೇನೆ. ಎಂದು ಗೂಬೆ ಹೊರಡಲಣಿಯಾದಾಗ, ಸರಿ ಸರಿ ನಮಸ್ಕಾರ. ಈಗ ನಿನ್ನನ್ನು ಪರೀಕ್ಷಿಸಿ ವಾಸಿಮಾಡಿದ ಶುಶ್ರೂಷೆಯ ಶುಲ್ಕವನ್ನು ಕೊಡು ಎಂದು ಕೋಗಿಲೆ ಕೇಳಿದಾಗ, ಗೂಬೆ ಸಿಟ್ಟಿನಿಂದ ನಿನಗೆ ಹಣ ಏಕೆ ಕೊಡಬೇಕು ನೀನೇನು ಔಷಧಿ ,ಗುಳಿಗೆ ಕೊಟ್ಟಿದ್ದೀಯಾ? ಎಂದಿತು. ಓಹೋಹೋ ನಿನಗೆ ಬರಬಾರದ ರೋಗ ಬಂದಿದೆ ಎಂದು ಸುಳ್ಳು ಹೇಳಿ ಔಷಧಿ ಕೊಟ್ಟಿದ್ದರೆ ದುಡ್ಡು ಕೊಡುತ್ತಿರಲಿಲ್ಲವೇ? 
ನಾನು ನಿಜವನ್ನು ಹೇಳಿದ್ದಕ್ಕೆ ಏನು ಮಹಾ ಅನ್ನಿಸಿದೆ ಅಲ್ಲವೇ? ಅದೆಲ್ಲಾ ನನಗೆ ಗೊತ್ತಿಲ್ಲ ನಾನೇನು ಧರ್ಮಕ್ಕೆ ಕೊಟ್ಟಿಲ್ಲ ಒಟ್ಟಿನಲ್ಲಿ ಹಣ ಕೊಡು ಎಂದಿತು.ನಾನು ಒಂದು ದಮಡಿಯನ್ನು ಕೊಡುವುದಿಲ್ಲನೀನು ಏನು ಬೇಕಾದರೂ ಮಾಡಿಕೋ ಎಂದು ಗೂಬೆ ಪುರ್ರಂತ ಹಾರಿಹೋಯಿತು.

ಸ್ವಲ್ಪ ಸಮಯಕ್ಕೆ ಕಾಗೆ ಬಂದು, ನನ್ನ ಸ್ನೇಹಿತನ ಆರೋಗ್ಯ ಹೇಗಿದೆ? ಏನು ಆಗಿತ್ತು ಎಂದು ಕಳಕಳಿಯಿಂದ ವಿಚಾರಿಸಿದಾಗ , ಬೇಸರಗೂಂಡಿದ್ದ ಕೋಗಿಲೆ, ನಿನಗೆ ಎಷ್ಟು ಸಾರಿ ಹೇಳಿಲ್ಲ, ಯಾರನ್ನೂ ಕರೆದುಕೊಂಡು ಬರಬೇಡ ಎಂದು, ನಿನ್ನ ಮಾತಿಗೆ ಕಟ್ಟುಬಿದ್ದು ನನ್ನ ಸಮಯವನ್ನು ಮೀಸಲಿಟ್ಟು ಪರೀಕ್ಷಿಸಿ, ಉಪಚಾರ ತಿಳಿಸಿ, ವಾಸಿ ಮಾಡಿದ್ದಕ್ಕೆ ಕಾಸು ಕೊಡದೆ  ಹೊರಟು ಹೋದರೆ ನಾನು ಸುಮ್ಮನಿರಲ್ಲ ಹಣ ಕೊಡಿಸುವ ಜವಾಬ್ದಾರಿ ನಿನ್ನದು ಎಂದಿತು.

ತಾಳ್ಮೆಯಿಂದ, ಆಯ್ತು ಗೆಳೆಯ ನಿನ್ನ ಹಣವನ್ನು ಕೊಡಿಸುವ ಜವಾಬ್ದಾರಿ ನನ್ನದು ಎಂದು ಗೂಬೆಯನ್ನು ಹುಡುಕುತ್ತಾ ಹೊರಟಿತು. ಎಷ್ಟುಹುಡುಕಿದರೂ ಗೂಬೆ ಮಾತ್ರ ಕಾಣಲಿಲ್ಲ. ಮುಸ್ಸಂಜೆ ಆಗ್ತಾ ಬಂತು ಬಂದಿತು. ವಾಪಸ್ಸು ಕೋಗಿಲೆ ಹತ್ತಿರ ಬಂದ ಕಾಗೆ, ಗೆಳೆಯ ನನ್ನಿಂದ ದೊಡ್ಡ ತಪ್ಪಾಯ್ತು ನನ್ನ ಮಿತ್ರ ಗೂಬೆ ಎಲ್ಲೂ ಸಿಗಲಿಲ್ಲ ಆದಕಾರಣ ಅವನು ಕೊಡಬೇಕಾದ ಹಣವನ್ನು ಅಷ್ಟಷ್ಟೇ ತಂದು ನಾನೇ ತೀರಿಸುತ್ತೇನೆ ಎಂದಾಗ, ಅದಕ್ಕೊಪ್ಪದ ಕೋಗಿಲೆ ಸಾಧ್ಯವಿಲ್ಲ ನೀನು ಅಷ್ಟಷ್ಟೇ ತಂದುಕೊಡುವವರೆಗೂ ಕಾದು ಕುಳಿತಿರಲು ನನಗೆ ಸಮಯವಿಲ್ಲ. ಆದುದರಿಂದ ಅಲ್ಲಿಯವರೆಗೂ  ನಾನು ನಿನ್ನ ಗೂಡಿನಲ್ಲಿ ನನ್ನ ಮೊಟ್ಟೆಗಳನ್ನು ಇಡುತ್ತೇನೆ.  ಅವುಗಳಿಗೆ ಕಾವು ಕೊಟ್ಟು ಮರಿಗಳನ್ನಾಗಿ ಮಾಡಿಕೊಡುವ ಜವಾಬ್ದಾರಿ ನಿನ್ನದು. ನೀನು ಯಾವಾಗ ನನ್ನ ಸಾಲ ತೀರಿಸುತ್ತೀಯೋ ಆವಾಗಿನಿಂದ ನನ್ನ ಮೊಟ್ಟೆಗಳನ್ನು ನಾನೇ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ನನಗೆ ಮುಖವನ್ನೊ ತೋರಿಸಬೇಡ  ಎಂದು ನಿಷ್ಠೂರದಿಂದ  ಹೇಳಿ, ತನ್ನ ಪಾಡಿಗೆ ತಾನು ಕಣ್ಣು ಮುಚ್ಚಿ  ಹಾಡು ಹೇಳುವುದರಲ್ಲಿ ಮೈಮರೆಯಿತು.

    ಪಾಪ ಕಾಗೆ ತನ್ನ ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗಬೇಕಾಯಿತು. ಅಂದಿನಿಂದ ಕೋಗಿಲೆ ತನ್ನ ಮೊಟ್ಟೆಗಳನ್ನು ಕಾಗೆ ಗೂಡಿನಲ್ಲಿ ಇಡುತ್ತದೆ. ಕಾಗೆ ಮತ್ತು ಕೋಗಿಲೆಯ ಮೊಟ್ಟೆಗಳು ಒಂದೇ ತರ ಇದ್ದು ಕಾಗೆ ಕಾವು ಕೊಟ್ಟು ಮರಿಗಳನ್ನಾಗಿ ಮಾಡುತ್ತದೆ. ಕೂಗಿದಾಗಲೇ ಕೋಗಿಲೆ ಮರಿ ಎಂದು ತಿಳಿಯುವುದು. ಕಾಗೆಗೆ ಸಿಗಬಾರದೆಂದು ಗೂಬೆ ಹಗಲೆಲ್ಲಾ ನಿದ್ದೆ ಮಾಡಿ ರಾತ್ರಿ ಸಮಯ 'ಘೂ ಘೂ' ಎಂದು ಕೂಗುತ್ತಾ ಹೊರಗೆ ಅಡ್ಡಾಡುತ್ತದೆ. ಅಂದಿನಿಂದ ಗೂಬೆಗೆ 'ನಿಶಾಚರ ಪ್ರಾಣಿ' ಎನ್ನುತ್ತಾರೆ. ಕೋಗಿಲೆ ಮರಿಗಳನ್ನು ಕಾಗೆ ಬೆಳೆಸುವುದರಿಂದ ಕೋಗಿಲೆಗೆ 'ಪರಪುಟ್ಟ' ಎಂದು ಕರೆಯುತ್ತಾರೆ. 

"ಎಚ್ಚರಗೊಳು ರಾಮ ನೀ ಎಚ್ಚರಗೊಳು ರಾಮ, ಸಚ್ಚಿದಾನಂದನು  ಎಚ್ಚರಗೊಳದಿರೆ
ಅಚ್ಚರಿಪಡುತಿದೆ ಮೂರ್ ಜಗವು, ಅಚ್ಚರಿ ಪಡುತಿದೆ  ಮೂರ್  ಜಗವು. ಎಚ್ಚರ ಗೊಳು ರಾಮ ನೀ ಎಚ್ಚರ ಗೊಳುರಾಮ".

ವಂದನೆಗಳೊಂದಿಗೆ,
ಬರಹ:-ಆಶಾ ನಾಗಭೂಷಣ್.

ಶಿಷ್ಯನ ಸತ್ವಪರೀಕ್ಷೆ

ಶಿಷ್ಯನ ಸತ್ವಪರೀಕ್ಷೆ:- 

ಗುರುಗಳಾದ  ಇಂದ್ರ ಶರ್ಮರ ಆಶ್ರಮ ನರ್ಮದಾ ನದಿ ದಡದಲ್ಲಿತ್ತು.ಅವರ ಆಶ್ರಮದಲ್ಲಿ ದೂರ ದೂರ ಪ್ರದೇಶಗಳಿಂದ ಅಧ್ಯಯನ ಮಾಡಲು ಸಾಕಷ್ಟು ವಿದ್ಯಾರ್ಥಿಗಳು ಬರುತ್ತಿದ್ದರು. ಅವರಿಗೆಲ್ಲ ವೇದ, ಮಂತ್ರ ಪುರಾಣಗಳನ್ನು ಕಲಿಸುತ್ತಿದ್ದರು. ಶಿಷ್ಯರಲ್ಲಿ  ಗೋಪಿನಾಥ ಎಂಬ ಪ್ರಾಮಾಣಿಕ ಗುರು ಭಕ್ತಿಯುಳ್ಳ ಹಾಗೂ ಬುದ್ಧಿವಂತನಾದ ಶಿಷ್ಯನಿದ್ದನು.  ಶ್ರದ್ಧೆಯಿಂದ ಗುರುಗಳ ಸೇವೆಯನ್ನು ಮಾಡುತ್ತಾ ಅವರು ಹೇಳಿದ ಕೆಲಸಗಳನ್ನು ನಿಷ್ಠೆಯಿಂದ ಮಾಡಿ ಶ್ರದ್ಧೆಯಿಂದ ಅಧ್ಯಯನವನ್ನು ಮಾಡುತ್ತಿದ್ದನು.ಗುರುಗಳಿಗೆ ಈ ಬಾಲಕನನ್ನು ಕಂಡರೆ ತುಂಬಾ ಅಭಿಮಾನವಿತ್ತು. 

ವೇದಾಧ್ಯಯನ  ಮುಗಿಸಿದ ವಿದ್ಯಾರ್ಥಿಗಳು, ಗುರುಗಳ ಆದೇಶದಂತೆ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತಿದ್ದರು.  ಹೊಸದಾಗಿ ಮತ್ತಷ್ಟು ವಿದ್ಯಾರ್ಥಿಗಳು ಬರುತ್ತಿದ್ದರು. ಕೆಲ ವಿದ್ಯಾರ್ಥಿಗಳು ಅಲ್ಲೆ ಇರುತ್ತಿದ್ದರು. ಒಂದಷ್ಟು ವರ್ಷಗಳು ಕಳೆಯಿತು. ಗುರುಗಳಿಗೂ ವಯಸ್ಸಾಗಿತ್ತು. ಒಂದು ದಿನ ಶಿಷ್ಯರನ್ನೆಲ್ಲ ಕರೆದು ನನ್ನ ಪ್ರೀತಿಯ ಶಿಷ್ಯ ರೇ ಇದುವರೆಗೂ  ನೀವೆಲ್ಲರೂ ಗುರು ವಾಕ್ಯವನ್ನು ಮೀರದಂತೆ ನಡೆದಿದ್ದೀರಿ.  ನಾನು ಕಲಿತ  ಜ್ಞಾನವನ್ನು ನಿಮಗೆಲ್ಲರಿಗೂ ಕಲಿಸಿದ್ದೇನೆ. ನಿಮ್ಮಲ್ಲಿ ಒಂದು  ವಿಚಾರ  ಹೇಳಬೇಕು.  ನನ್ನ ಪೂರ್ವ ಜನ್ಮದ ಕರ್ಮದ ಫಲದಿಂದ  ನನ್ನ ಮುಂದಿನ ದಿನಗಳು ಬಹಳ ಕಷ್ಟಕರವಾಗಿರುತ್ತದೆ. ನೋವಿನಿಂದ ತುಂಬಿರುವ ವ್ಯಾಧಿ ಬರುತ್ತದೆ. ಇದರಿಂದಾಗಿ ನನ್ನ ಕಿವಿ ಕೇಳುವುದಿಲ್ಲ.  ಕಣ್ಣು ಕಾಣುವುದಿಲ್ಲ.  ರೋಗಗ್ರಸ್ತ  ಶರೀರದಲ್ಲಿ ದುರ್ಗಂಧ ಬರುವುದರ ಜೊತೆಗೆ ಹುಳಗಳು ಆಗುತ್ತವೆ. ಆದ್ದರಿಂದ ನಾನು  ಆಶ್ರಮವನ್ನು  ಬಿಟ್ಟು ಕಾಶಿಗೆ ಹೋಗಿ ಉಳಿದ ಕಾಲವನ್ನು ಕಳೆಯಲು  ಇಚ್ಚಿಸಿದ್ದೇನೆ. ಪ್ರಾರಬ್ಧ ಕರ್ಮಗಳು  ಕಳೆದ  ನಂತರ  ಬರುತ್ತೇನೆ. ನಿಮ್ಮಲ್ಲಿ ಯಾರು ನನ್ನ ಜೊತೆ ಬರುತ್ತೀರಿ ಎಂದು ಕೇಳಿದರು. 

ಈ ಮಾತನ್ನೆಲ್ಲ ಕೇಳಿದ  ಶಿಷ್ಯರೆಲ್ಲ  ತುಟಿ ಪಿಟಕ್ಕೆನ್ನದೆ  ಕುಳಿತಿದ್ದರು. ಶಿಷ್ಯ ಗೋಪಿನಾಥ ಮುಂದೆ ಬಂದು, ಗುರುಗಳೇ ನೀವು ಎಲ್ಲಿ ಹೋಗುತ್ತೀರೋ, ಅಲ್ಲಿಗೆಲ್ಲಾ ನಿಮ್ಮ ಜೊತೆ ನಾನು ಬರುತ್ತೇನೆ.  ನೀವು ಯಾವುದೇ ಸ್ಥಿತಿಯಲ್ಲಿ ಇರಲಿ, ಆಗಲೂ ನಿಮ್ಮ ಜೊತೆಯೇ ಇದ್ದು  ನಿಮ್ಮ ಸೇವೆ ಮಾಡುತ್ತೇನೆ. ಆಗ ಗುರುಗಳು ಗೋಪಿನಾಥ ನೋಡು, ಈ ಕಾಯಿಲೆಯಿಂದ  ನನ್ನ ಕಣ್ಣು ಕುರುಡಾಗುತ್ತದೆ,  ಕಿವಿ ಕೇಳುವುದಿಲ್ಲ, ರೋಗಗ್ರಸ್ತ ಶರೀರದಿಂದ ನನ್ನ ಜೊತೆ ಇರಬೇಕೆಂದರೆ,  ಅಸಹ್ಯವನ್ನು ಸಹಿಸಿಕೊಳ್ಳಬೇಕಾಗುತ್ತದೆ. ತುಂಬಾ ಯೋಚನೆ ಮಾಡಿ ಹೇಳು ಎಂದರು. ಇದಕ್ಕೆ ಗೋಪಿನಾಥ,  ಗುರುದೇವ ನಾನು ಎಲ್ಲಾ ಕಷ್ಟಗಳನ್ನು ಸಹಿಸಲು ಸಿದ್ಧನಿದ್ದೇನೆ.  ನಿಮ್ಮ ಜೊತೆ ಇರಲು ಅನುಮತಿ ಮಾತ್ರ ಕೊಡಿ ಎಂದು ವಿನಮ್ರವಾಗಿ ಪ್ರಾರ್ಥಿಸಿದನು. ಮರುದಿನ ಗುರು ಮತ್ತು ಶಿಷ್ಯ  ಇಬ್ಬರು ಕಾಶಿಗೆ ಹೋಗಿ ಒಂದು ಸ್ಥಳದಲ್ಲಿ ವಾಸಿಸುತ್ತಾರೆ. 

ಗುರುಗಳು ಹೇಳಿದಂತೆ ಕೆಲವು ಕಾಲ ಕಳೆಯುತ್ತಿದ್ದ ಹಾಗೆ,  ಅವರಿಗೆ ಕುಷ್ಟರೋಗ ಬಂದು, ಕಿವಿಯೂ ಕೇಳದೆ, ಕಣ್ಣು ಕಾಣದೇ, ರಗಳೆ, ಕಿರಿಕಿರಿ ಮಾಡುವುದು, ವಿಚಿತ್ರವಾಗಿ ಕೂಗುವುದು  ಎಲ್ಲಾ ಶುರುವಾಯಿತು.
ಶಿಷ್ಯ  ಸ್ವಲ್ಪವೂ ಕೋಪ ಮಾಡಿಕೊಳ್ಳದೆ, ಹಗಲು-ರಾತ್ರಿಯೆನ್ನದೆ  ಪ್ರೀತಿಯಿಂದ ಅವರ ಸೇವೆ ಮಾಡುತ್ತಿದ್ದನು. ಅವರ ಕೊಳೆ ಬಟ್ಟೆ ಒಗೆದು, ಗಾಯಗಳನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿಸಿ, ಬಟ್ಟೆ ಹಾಕುವುದು,  ಆಹಾರ ತಿನ್ನಿಸುವುದು ಎಲ್ಲವನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ಇಷ್ಟಾದರೂ ಗುರುಗಳು ಅವನ ಮೇಲೆ ಸಿಡಿ ಗುಟ್ಟುತ್ತಿದ್ದರು. ಶಿಷ್ಯ ಪ್ರತಿಕ್ರಿಯಸದೆ  ಸಂತೋಷದಿಂದ  ಗುರು ಸೇವೆ ಮಾಡುತ್ತಿದ್ದನು. 

ಗುರುಗಳ ಸೇವೆ ಮಾಡುತ್ತಾ ಹಲವು ಕಾಲವೇ ಕಳೆದುಹೋಯಿತು. ಅವನಲ್ಲಿದ್ದ ಅಲ್ಪಸ್ವಲ್ಪ ಇಚ್ಛೆಗಳು ನಾಶವಾದವು. ಅಲೌಕಿಕ ಜ್ಞಾನ ಅವನಿಗೆ  ಬಂದಿತು. ಇದರಿಂದ ಅವನ ಮನಸ್ಸು ಮತ್ತಷ್ಟು ಹಗುರವಾಯಿತು. ಅವನ ದೇಹ  ತೇಜೋಮಯವಾಗಿತ್ತು. ಗುರುಗಳು ಹೇಳಿದಂತೆ ನಡೆದರೆ ಜೀವನದಲ್ಲಿ ಯಾವ ಕಷ್ಟಗಳು ಬರುವುದಿಲ್ಲ ಎಂಬ ಅರಿವು ಅವನಿಗಾಗತೊಡಗಿತು. ಹೀಗೆ ಗುರುಸೇವೆ ಮಾಡುತ್ತಾ ವರ್ಷಗಳೇ  ಉರುಳಿದವು.  ಇವನ ಗುರು ಸೇವೆ ಕಂಡು ಮೆಚ್ಚಿದ ಪರಮೇಶ್ವರನು ಅವನೆದುರು ಪ್ರತ್ಯಕ್ಷನಾಗಿ, ಬಾಲಕ ಕಾಶಿ ವಿಶ್ವನಾಥನ ದರ್ಶನಕ್ಕಾಗಿ ಜನರು ಎಲ್ಲೆಲ್ಲಿಂದಲೋ ಕಾಶಿಗೆ ಬರುತ್ತಾರೆ.  ಆದರೆ ನೀನು ಕರೆಯದೆ ಸ್ವಯಂ ನಿನ್ನ ಮುಂದೆ ನಾನೇ ಬಂದಿದ್ದೇನೆ. ನಿನ್ನ ಗುರುಗಳ ಹೃದಯದಲ್ಲಿ ನಾನು ಸೋಹನ್ ಸ್ವರೂಪದಲ್ಲಿ ವಾಸಮಾಡುತ್ತೇನೆ. ಆದ್ದರಿಂದ ನೀನು ಮಾಡುವ ಗುರುಸೇವೆ ನನಗೆ ತಲುಪುತ್ತದೆ. ನಾನು ಇದರಿಂದ ಬಹಳ ಸಂತುಷ್ಟನಾಗಿದ್ದೇನೆ  ಏನು ವರ ಬೇಕು ಕೇಳು ಎಂದನು. 

ಗೋಪಿನಾಥ ನಮ್ರನಾಗಿ ಪರಮೇಶ್ವರ ನೀವು  ಸಂತುಷ್ಟರಾಗಿರುವುದೇ ನನಗೆ ಸಾಕು ನನಗೆ  ಇನ್ನೇನು ಬೇಡ ಎಂದನು. ಶಿವನು ಇಲ್ಲ ನೀನು ಏನಾದರೂ ಒಂದು ವರ ಕೇಳಲೇಬೇಕು ಎಂದಾಗ, ಅವನು ಹೇ ಮಹಾದೇವ, ನೀವು ಸಂತೋಷದಿಂದ ಹೀಗೆ  ಹೇಳುತ್ತಿರುವುದೇ ನನ್ನ ಭಾಗ್ಯವಾಗಿದೆ. ಆದರೆ ನನ್ನ ಗುರುಗಳ ಅನುಮತಿಯಿಲ್ಲದೆ ನಾನು ನಿಮ್ಮನ್ನು ಏನು ಕೇಳಲಾರೆ ಎಂದನು.
ಆಗ ಶಿವನು ಸರಿ ನೀನು ಹೋಗಿ ನಿನ್ನ ಗುರುಗಳನ್ನೇ ಕೇಳಿ ಬಾ ಎಂದನು. ಶಿಷ್ಯನು ಗುರುಗಳ ಬಳಿ  ಬಂದು 'ಹೇ ಗುರುದೇವ ‌ ನಿಮ್ಮ ಕೃಪೆಯಿಂದ ಪರಮೇಶ್ವರನು ನನ್ನ ಮೇಲೆ  ಕರುಣೆತೋರಿ ವರ ಕೊಡಲು  ಇಚ್ಚಿಸಿದ್ದಾರೆ. ನೀವು  ಆಙ್ಞೆ ಮಾಡಿದರೆ ನಿಮ್ಮ ರೋಗ ವಾಸಿಯಾಗಿ ಅಂಧತ್ವ, ಕಿವುಡುತನ  ದೂರವಾಗಲಿ ಎಂಬ ವರ  ಕೇಳಬಹುದೇ? ಎಂದು ಕೇಳಿದನು, 

ಇದನ್ನು ಕೇಳಿದ ಗುರುಗಳಿಗೆ ಬಹಳ ಸಿಟ್ಟು ಬಂದು ಗೋಪಿನಾಥ ನಿನಗೆ ನನ್ನ ಸೇವೆ ಮಾಡಲು ಕಷ್ಟವಾಗಿದೆ. ಆದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ನೋಡುತ್ತಿರುವೆ. ಇದಕ್ಕಾಗಿ ಅವರಲ್ಲಿ ಭಿಕ್ಷೆ  ಬೇಡ ಬೇಕೆಂದಿರುವೆಯಾ?
ಇದಕ್ಕಾಗಿ ಶಿವನು ನಿನಗೆ ವರ ನೀಡುವನು. ಇದರಿಂದ ನನ್ನ ಪ್ರಾರಬ್ಧಕರ್ಮ ನಾಶವಾಗುವುದೇ? ದೂರ ಹೋಗು ಇಲ್ಲಿಂದ, ನಾನು ಮೊದಲೇ ಹೇಳಿದ್ದೆ ನನ್ನ ಜೊತೆ ಬರ ಬೇಡವೆಂದು, ನೀನೇ ಹಟಮಾಡಿ ಬಂದಿರುವೆ  ತೊಲಗಿಲ್ಲಿಂದ ಎಂದು ಕೋಪದಿಂದ ಹೇಳಿದರು. ಇದನ್ನು ಕೇಳುತ್ತಿದ್ದಂತೆ ಗೋಪಿನಾಥ ಶಿವನ ಹತ್ತಿರ ಓಡಿಬಂದು, ಹೇ ಪರಮೇಶ್ವರ  ನನಗೆ ಯಾವ ವರವನ್ನು ಕೊಡಬೇಡ ಎಂದನು. ಶಿವನು ಮತ್ತಷ್ಟು ಸಂತುಷ್ಟನಾಗಿ, ನೀನು ಗುರುಗಳ ಸೇವೆ ಅಷ್ಟೊಂದು ಮಾಡುತ್ತಿದ್ದರೂ ಗುರುಗಳೇ ಏಕೆ ಸಿಟ್ಟಾಗುತ್ತಾರೆ ಎಂದು ಕೇಳಿದಾಗ,  ಶಿಷ್ಯನಿಗೆ ಇದು ಸರಿ ಅನಿಸುವುದಿಲ್ಲ, ಅವನು ಶಿವನಿಗೆ, ಎಲ್ಲಕ್ಕಿಂತ ಗುರುಕೃಪೆಯೊಂದೇ, ಶಿಷ್ಯನಿಗೆ ಒಳಿತನ್ನು ಮಾಡುವುದು ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. 

ಈ ಹುಡುಗನ ಭಕ್ತಿಯನ್ನು ಶಿವನು ವಿಷ್ಣುವಿಗೆ ಹೇಳಿ  ಶಿಷ್ಯನ ಗುರುಭಕ್ತಿಯ ವರ್ಣನೆ ಮಾಡುತ್ತಾನೆ. ಇದನ್ನು ಕೇಳಿದ ವಿಷ್ಣು ತಾನು ಶಿಷ್ಯನನ್ನು ಪರೀಕ್ಷಿಸಲು ಬರುತ್ತಾನೆ. ಶಿವನು ಕೇಳಿದಂತೆ,  ವಿಷ್ಣು  ಶಿಷ್ಯನಿಗೆ ವರವನ್ನು ಕೇಳುವಂತೆ ಹೇಳುತ್ತಾನೆ. ಆಗ ಶಿಷ್ಯರು ಭಗವಂತನ ಪಾದಗಳನ್ನು ಹಿಡಿದು, ಹೇ ಭಗವಂತ ಗುರು ಕೃಪೆಯಿಂದಲೇ ನನಗೆ  ಪರಮೇಶ್ವರ ಹಾಗೂ  ನಿಮ್ಮ ದರ್ಶನವಾಗಿದೆ. ಹೀಗಿರುವಾಗ,  ಸತತವಾಗಿ  ಗುರುಚರಣಗಳ  ಸೇವೆಯನ್ನು  ಶ್ರದ್ಧಾ ಭಕ್ತಿಯಿಂದ  ಯಾವತ್ತಿಗೂ ಮಾಡುವಂತೆ ನನಗೆ ಅನುಗ್ರಹಿಸಿರಿ ಇದಕ್ಕಿಂತ ಹೊರತಾಗಿ ನನಗೆ  ಇನ್ನೇನು ಬೇಡ ಎಂದನು. ಮಹಾವಿಷ್ಣುವು ಪ್ರಸನ್ನನಾಗಿ ಅವನಿಗೆ ಆಶೀರ್ವಾದ ಮಾಡಿದನು. ಈ ವಿಷಯ ಗುರುಗಳಿಗೆ ತಿಳಿದು ಅವರು ಸಂತೋಷಗೊಂಡು ಶಿಷ್ಯನನ್ನು ಅಪ್ಪಿಕೊಂಡರು. ಶಿಷ್ಯನಿಗೆ ಆಶೀರ್ವಾದ  ಮಾಡುತ್ತಾ,  ವತ್ಸ ನೀನು ಎಲ್ಲಾ ಶಿಷ್ಯರಿಗಿಂತ  ಸರ್ವಶ್ರೇಷ್ಠ  ಶಿಷ್ಯನಾಗಿರುವೆ ನಿನಗೆ  ಎಲ್ಲಾ  ಸಿದ್ಧಿಗಳು  ಪ್ರಾಪ್ತವಾಗುತ್ತದೆ.‌ ಋದ್ಧಿ -ಸಿದ್ಧಿಯು ನಿನ್ನ ಹೃದಯದಲ್ಲಿ ವಾಸ ಮಾಡುವನು ಎಂದು ಆಶೀರ್ವಾದ ಮಾಡಿದರು. ಆಗ ಶಿಷ್ಯನು ಗುರುವರ್ಯ ಋದ್ಧಿ-ಸಿದ್ಧಿ ಗಳೆಲ್ಲವೂ  ನಿಮ್ಮ ಚರಣಗಳಲ್ಲಿ ಇದೆ ನೀವು ನನ್ನನ್ನು  ಅನುಗಾಲವು ಆನಂದಾವಸ್ಥೆಯಲ್ಲಿ  ಇರುವಂತೆ ಆಶೀರ್ವಾದ ಮಾಡಿರಿ ಎಂದು ಬೇಡುತ್ತಾನೆ. ಆ ಕ್ಷಣವೇ ಗುರುಗಳಿಗೆ  ಬಂದ ರೋಗವೆಲ್ಲವು ಶಾಶ್ವತವಾಗಿ ತೊಲಗಿ ಮೊದಲಿನಂತೆ ಕಾಂತಿಯುಕ್ತರಾಗುತ್ತಾರೆ. ಈ ರೀತಿಯಲ್ಲಿ  ಗುರುಗಳು  ಶಿಷ್ಯನ  ,'ಸತ್ವಪರೀಕ್ಷೆ'  ಮಾಡಿ ಅವನಿಗೆ ಬ್ರಹ್ಮವಿದ್ಯೆಯ ಖಜಾನೆಯನ್ನೇ ತೆರೆದು ಕೊಡುತ್ತಾರೆ. 

"ಅಖಂಡ ಮಂಡಲಾಕಾರಂ, ವ್ಯಾಪ್ತಂ ಏನ ಚರಾಚರಂ !
ತತ್ಪದಂ  ದರ್ಶಿತಂ  ಯೇನ  ತಸ್ಮೈ ಶ್ರೀ ಗುರವೇ ನಮಃ ! 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ರಾಮ ಸೇತುವೆ

ರಾಮ ಸೇತುವೆ:- 

ಪೌರಾಣಿಕ ಮಹತ್ವ  ಪಡೆದಿರುವ  'ರಾಮಸೇತು' ಇದು ಭಾರತದ ದಕ್ಷಿಣ ಭಾಗದ ತಮಿಳುನಾಡಿನ  'ರಾಮೇಶ್ವರಂ' ಎಂಬ ಪುಣ್ಯಕ್ಷೇತ್ರದಲ್ಲಿ ಇದೆ.  ಇಲ್ಲಿ ಆರಂಭಗೊಂಡ ಸೇತುವೆಯ ಇನ್ನೊಂದು ಭಾಗ ಶ್ರೀಲಂಕಾದ  ವಾಯುವ್ಯ  ತುದಿಯಲ್ಲಿರುವ ಮನ್ನಾರ್  ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುಣ್ಣ ಹಾಗೂ ಕಲ್ಲಿನ ಸೇತುವೆ ಇದಾಗಿದೆ. ಈ ಸೇತುವೆಯನ್ನು ರಾಮಸೇತು,  ನಾಲಾ ಸೇತು,  ಎಂಬ ಹೆಸರುಗಳಿಂದ  ಕರೆಯಲಾಗುತ್ತದೆ. ವಾನರ ಸೈನ್ಯವು  ಲಂಕೆಯಿಂದ ಸೀತಾದೇವಿಯನ್ನು ಕರೆತರಲು ಇದನ್ನು ನಿರ್ಮಾಣ ಮಾಡಿದವು. ಶ್ರೀರಾಮನ ವಾನರ ಸೈನ್ಯದಲ್ಲಿದ್ದ  'ನಲ ಮತ್ತು ನೀಲ' ಎಂಬ ವಾನರರ  ನೇತೃತ್ವದಲ್ಲಿ. ನಿರ್ಮಾಣಕಾರ್ಯವನ್ನು ಆರಂಭಿಸಲಾಯಿತು. ನಲ ಮತ್ತು ನೀಲ ಬಹಳ ಬುದ್ದಿವಂತ ಕೋತಿಗಳು. ಇವು ಭಗವಾನ್ 'ವಿಶ್ವಕರ್ಮರ' ಪುತ್ರರಾಗಿದ್ದರು. ಸಹಜವಾಗಿಯೇ ನಿರ್ಮಾಣಕಾರ್ಯಗಳ  ಪರಿಪೂರ್ಣ ಜ್ಞಾನವನ್ನು ಹೊಂದಿದ್ದವು.  ಆದ್ದರಿಂದ  ರಾಮಸೇತುವೆಯ ನಿರ್ಮಾಣ ಕಾರ್ಯವನ್ನು 'ನಲ ಮತ್ತು ನೀಲರು'  ಶ್ರೀರಾಮನ ಅಪ್ಪಣೆಯಂತೆ ಎಲ್ಲಾ ವಾನರ ಸೈನ್ಯ ದೊಂದಿಗೆ ನಿರ್ಮಿಸಲು ಮುಂದಾಗುತ್ತಾರೆ. 

ರಾಮಾಯಣದ ಒಂದು ಕಥೆಯ ಪ್ರಕಾರ ನಲ  ಮತ್ತು ನೀಲರು, ಚಿಕ್ಕಂದಿನಲ್ಲಿ ತುಂಬಾ ತಂಟೆಕೋರ ಕಪಿ ಗಳಾಗಿದ್ದವು. ಕಾಡಿನಲ್ಲಿ ತಪಸ್ಸಿಗೆ ನಿರತರಾಗಿರುತ್ತಿದ್ದ ಋಷಿಮುನಿಗಳ ವಸ್ತುಗಳನ್ನು  ಕದ್ದು ಸಮುದ್ರಕ್ಕೆ ಎಸೆಯುತ್ತಿದ್ದವಂತೆ.  ಸಮುದ್ರದಲ್ಲಿ ಅವು ಮುಳುಗಿ ಹೋಗುತ್ತಿತ್ತು . ಇದರಿಂದ ಋಷಿಮುನಿಗಳ  ನಿತ್ಯ ಕರ್ಮಗಳಿಗೆ ತೊಂದರೆಯಾಗುತ್ತಿತ್ತು.  ಇದರಿಂದ ಕುಪಿತಗೊಂಡ ಋಷಿಗಳು ಅವರಿಗೆ ಶಾಪ ಕೊಟ್ಟರು. " ಮುಂದೆ ನೀವು ಎಸೆದ ಯಾವುದೇ ವಸ್ತುಗಳು ಸಮುದ್ರದಲ್ಲಿ ಮುಳುಗದಿರಲಿ" ಎಂದು. ಹೀಗಾಗಿ ಸಮುದ್ರದಲ್ಲಿ ಸೇತುವೆ ಕಟ್ಟಲು  ನಲ ಮತ್ತು ನೀಲರಿಗಿದ್ದ  ಈ  ಶಾಪವು 
ಸಹಕಾರಿಯಾಯಿತು ಎಂದು ಉಲ್ಲೇಖಿಸಲಾಗಿದೆ. 

ವಾನರರು  ಸಮುದ್ರ ಕ್ಕೆ  ಎಸೆಯುತ್ತಿದ್ದ  ಕಲ್ಲು ಗಳ  ಮೇಲೆ, ಮೊದಲು 'ರಾಮ' ಎಂದು ಬರೆದು ಆಮೇಲೆ ಸಮುದ್ರಕ್ಕೆ. ಎಸೆಯುತ್ತಿದ್ದರು. ಅಂಥ ಕಲ್ಲುಗಳು ಮುಳಗದೆ ಸೇತುವೆ ನಿರ್ಮಾಣಕ್ಕೆ ಅನುಕೂಲವಾಗುತ್ತಿತ್ತು. ಸೇತುವೆಯ ನಿರ್ಮಾಣಕ್ಕೆ ಬೇಕಾದ ಉಳಿದ ವಸ್ತುಗಳಾದ ಮರ ಮತ್ತು ಕಲ್ಲುಗಳನ್ನು ಹೊತ್ತು ತರುತ್ತಿರುವಾಗ  ಶ್ರೀರಾಮನಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಅತ್ಯಂತ ಭಕ್ತಿ ಶ್ರದ್ಧೆಯಿಂದ ಸೇತುವೆ ನಿರ್ಮಾಣ ಮಾಡುತ್ತಿದ್ದರು. ಆಧುನಿಕ ಯುಗದಲ್ಲಿ ಸೇತುವೆಯನ್ನು ನಿರ್ಮಿಸಲು  ವರ್ಷಗಳೇ ಬೇಕಾಗುತ್ತದೆ. ಆದರೆ  ತಂತ್ರಜ್ಞಾನವಿಲ್ಲದ  ಆ ದಿನಗಳಲ್ಲಿ ರಾಮಸೇತುವೆ ನಿರ್ಮಾಣಗೊಂಡು  ಕೇವಲ ಐದು ದಿನಗಳಲ್ಲಿ ಪೂರ್ಣಗೊಂಡಿದ್ದು ವಿಶೇಷ. ಈ ಸೇತುವೆಯ  ಯೋಜನೆ  45 ರಿಂದ 48 ಕಿಲೋಮೀಟರ್ ನಷ್ಟು ಉದ್ದವಿದೆ.  

ಹನುಮಂತನಿಗೆ ರಾಮನ ಮೇಲೆ ಎಂತಹ ಭಕ್ತಿಯೆಂಬುದು ಇಲ್ಲಿನ ಒಂದು ಸಂದರ್ಭ ತಿಳಿಸುತ್ತದೆ. ಸೇತುವೆ ನಿರ್ಮಾಣದ ಮೊದಲು ರಾಮನೆ  ಸಮುದ್ರಕ್ಕೆ ಕಲ್ಲು ಹಾಕಿದಾಗ ಅದು ಮುಳುಗಿಹೋಗುತ್ತದೆ.  ರಾಮನ ಬಂಟ ಹನುಮಂತ ಶ್ರೀರಾಮನಿಗೆ,  ಕಲ್ಲಿನ ಮೇಲೆ 'ರಾಮ' ಎಂದು ಬರೆದು ಹಾಕಿದರೆ ಕಲ್ಲು ಎಂದಿಗೂ ಮುಳುಗುವುದಿಲ್ಲ ಎನ್ನುತ್ತಾನೆ. ಇದನ್ನು ಕೇಳಿ ಹನುಮಂತನ ಬಗ್ಗೆ ರಾಮನು ಅವನ ಪ್ರೀತಿಗೆ  ಎಣೆಯೇ ಇಲ್ಲವೆಂದು ಪುಳಕಗೊಳ್ಳುತ್ತಾನೆ. ರಾಮನ ಮೇಲೆ ಹನುಮಂತನಿಗೆ ಭಕ್ತಿ ಎಷ್ಟು ಇತ್ತು ಎಂಬುದನ್ನು  ಈ ಸಂಗತಿ ನಿರೂಪಿಸುತ್ತದೆ.  ಸೇತುವೆ ನಿರ್ಮಾಣದಲ್ಲಿ ವಾನರ ಸೈನ್ಯದ ಕಠಿಣ ಪರಿಶ್ರಮ ವ್ಯರ್ಥವಾಗದೆ ಸುಸೂತ್ರವಾಗಿ ಕಾರ್ಯ ನೆರವೇರಲಿ ಎಂದು ಶ್ರೀರಾಮನು ಋಷಿಮುನಿಗಳಾದ  ಬಕದಾಲ್ಭ್ಯರ ಸಲಹೆಯಂತೆ ವಿಜಯ ಏಕಾದಶೀ ಉಪವಾಸವನ್ನು ಆಚರಿಸುತ್ತಾನೆ. 

ಸಮುದ್ರದ ಮೂಲಕ ವಾನರ ಸೈನ್ಯವನ್ನು ಕೊಂಡೊಯ್ಯಲು, ರಾಮನು ಸಮುದ್ರ ರಾಜನ ಅನುಮತಿಗಾಗಿ,  ಮೂರು ದಿನ ಉಪವಾಸ ಮಾಡಿ ಸಮುದ್ರ ರಾಜನನ್ನು ಪೂಜಿಸುತ್ತಾನೆ. ಆದರೆ ರಾಮನ ಬೇಡಿಕೆಯನ್ನು ತಿರಸ್ಕರಿಸಿದಾಗ ಕೋಪದಿಂದ ಸಿಡಿದೆದ್ದ ರಾಮನು ಸಮುದ್ರದಲ್ಲಿರುವ ಅಪಾರವಾದ  ಜಲರಾಶಿ  ಆವಿಯಾಗಲಿ ಎಂದು ಶಪಿಸಿ ತನ್ನ ಬತ್ತಳಿಕೆಯಿಂದ ಬಾಣ ಬಿಡಲು ಮುಂದಾಗುತ್ತಾನೆ. ಇದರಿಂದ ಭಯಗೊಂಡ ಸಮುದ್ರರಾಜನು ಕೂಡಲೇ ಕೈಮುಗಿದು ಪ್ರಾರ್ಥಿಸಿ ರಾಮನ ಆಣತಿಯನ್ನು ಒಪ್ಪಿಕೊಂಡು, ನನ್ನ ಮೇಲೆ ನೀವು ಸೇತುವೆಯನ್ನು  ನಿರ್ಮಿಸ ಬಹುದು  ನಾನು ನನ್ನೆಲ್ಲಾ ಸಹಕಾರವನ್ನು ನಿಮಗೆ ಕೊಡುತ್ತೇನೆ ಎನ್ನುತ್ತಾನೆ. ಇಷ್ಟೇ ಅಲ್ಲದೆ ಸಮುದ್ರರಾಜನು ಸಲಹೆ ಕೊಡುತ್ತಾನೆ.  ವಾನರ ಸೈನ್ಯದಲ್ಲಿ ನೈಪುಣ್ಯತೆಯ ಅಗಾಧ ಜ್ಞಾನವಿರುವ   ಬುದ್ಧಿವಂತರಾದ ನಳ ಮತ್ತು ನೀಲ ಎಂಬ ವಾನರರ ಮುಂದಾಳತ್ವದಲ್ಲಿ ಸೇತುವೆ ನಿರ್ಮಿಸಿ ಎಂದು ಸಲಹೆ ಕೊಡುತ್ತಾನೆ. ವಾನರ ಸೈನ್ಯ ನನ್ನ ಮೇಲೆ ಹಾಕುವ  ಕಲ್ಲುಗಳು ಚದುರದಂತೆ ಒಂದೆಡೆ ಇರಿಸುವ  ಜವಾಬ್ದಾರಿ ನನ್ನದು ಎಂದು ಭರವಸೆ ನೀಡುತ್ತಾನೆ. ಸಮುದ್ರರಾಜನ ಮಾತುಗಳನ್ನು ಕೇಳಿದ ರಾಮನು ವಾನರ ಸೈನ್ಯಕ್ಕೆ ರಾಮಸೇತುವೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಟ್ಟನು. 

ಸೇತುವೆ ಮುಗಿದ ಬಳಿಕ ಶ್ರೀ ರಾಮನು  ಲಂಕೆಗೆ ಹೋಗುವ ಮೊದಲು ರಾಮೇಶ್ವರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸಿ ಹೊರಡುತ್ತಾನೆ. ಹೀಗೆ ರಾಮನಿಂದ  ಪ್ರತಿಷ್ಠಾಪಿಸಲ್ಪಟ್ಟು ,ಪೂಜಿಸಿದ  ಶಿವಲಿಂಗವು 'ರಾಮೇಶ್ವರ' ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರತಿವರ್ಷ ದೇಶ ವಿದೇಶಗಳಿಂದ  ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ರಾಮೇಶ್ವರನ ದರ್ಶನ ಪಡೆದು ಭಕ್ತಿಯಿಂದ ಆರಾಧಿಸಿ ಕೃತಾರ್ಥರಾಗಿದ್ದಾರೆ. 

ಪ್ರಾತಃಸ್ಮರಾಮಿ ರಘುನಾಥ ಮುಖಾರವಿಂದಂ
ಮಂದಸ್ಮಿತಂ  ಮಧುರ ಭಾಷಿ  ವಿಶಾಲ ಭಾಲಂ
ಕರ್ಣಾವ ಲಂಬಿ ಚಲ ಕುಂಡಲ ಶೋಭಿ ಗಂಡಂ
ಕರ್ಣಾಂತ ದೀರ್ಘ ನಯನಂ ನಯನಾಭಿರಾಮಂ! 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಜನ್ಮಾಂತರದ ಕರ್ಮಫಲದ ಸಂಬಂಧಗಳು :-

ಜನ್ಮಾಂತರದ  ಕರ್ಮಫಲದ ಸಂಬಂಧಗಳು :- 

ಧರ್ಮಪಾಲ ಎಂಬ ರಾಜನಿದ್ದನು.  ಹೆಸರಿಗೆ ತಕ್ಕಂತೆ ಧರ್ಮಪಾಲನೆಯನ್ನು ಮಾಡುತ್ತಿದ್ದ . 'ಯಥಾ ರಾಜ ತಥಾ ಪ್ರಜಾ' ರಾಜನಂತೆ  ರಾಜ್ಯವು  ಸುಭೀಕ್ಷ  ವಾಗಿತ್ತು. ರಾಜನು  ಆಸ್ತಿಕನಾಗಿದ್ದನು. ಅರಮನೆಗೆ ಹತ್ತಿರದ ಗುಡ್ಡದಮೇಲೆ ದೇವಸ್ಥಾನವನ್ನು ಕಟ್ಟಿಸುತ್ತಾನೆ. ದೇವರ ಪೂಜೆಗೆಂದು ಒಬ್ಬ  ಬ್ರಾಹ್ಮಣ ನನ್ನು ನೇಮಿಸುತ್ತಾನೆ.  ಈ ಬ್ರಾಹ್ಮಣನು, ಒಳ್ಳೆಯವನು, ಧರ್ಮಾತ್ಮನು  ಆಗಿದ್ದನು. ರಾಜನಿಗೆ ಬ್ರಾಹ್ಮಣನ  ಗುಣ ನಡೆಗಳು, ರಾಜನ ಪ್ರಸನ್ನತೆ, ನ್ಯಾಯ ಮಾರ್ಗಗಳ  ಕುರಿತು  ಬ್ರಾಹ್ಮಣನಿಗೂ ಗೌರವವಿತ್ತು.  ಬ್ರಾಹ್ಮಣ ಪೂಜೆಗೆ ಬಂದು ಇಪ್ಪತ್ತು ವರ್ಷ ಕಳೆದು ಹೋಗಿದೆ.  ರಾಜನು, ಇದುವರೆಗೂ  ಒಂದೇ ಒಂದು ಆದೇಶದ ಮಾತನ್ನು ಬ್ರಾಹ್ಮಣ ಗೆ ಹೇಳುವ ಸಂದರ್ಭ ಬರಲಿಲ್ಲ .    

ರಾಜನಿಗೆ  ಕೆಲವು ಕಾಲದ ನಂತರ ಪುತ್ರ ಸಂತಾನವಾಗಿ  ತುಂಬಾ ಸಂತೋಷ ವಾಯಿತು. ಮಗನಿಗೆ ಗುರುಕುಲದಲ್ಲಿ ಒಳ್ಳೆಯ ಶಿಕ್ಷಣ ಕೊಡಿಸಿದನು. ವಯಸ್ಸಿಗೆ  ಬಂದಮೇಲೆ   ಸುಂದರ  ರಾಜಕುಮಾರಿ  ಜೊತೆ  ಮದುವೆ ಮಾಡಿದನು. ಮದುವೆ  ದಿನ ರಾತ್ರಿ ರಾಜಕುಮಾರಿಗೆ ನಿದ್ದೆ ಬರಲಿಲ್ಲ. ಹೀಗಾಗಿ ರೂಮಿನಲ್ಲಿ  ಅತ್ತಿಂದಿತ್ತ  ಇತ್ತಿಂದತ್ತ  ಓಡಾಡುತ್ತಿದ್ದಳು. ಹೀಗೆ ಓಡಾಡುವಾಗ ರಾಜಕುಮಾರ ಮಲಗಿದ ಮಂಚದ ಹತ್ತಿರ ವಜ್ರಖಚಿತವಾದ ಅಪರೂಪದ ಕತ್ತಿಯನ್ನು ನೋಡಿದಳು. ಕೈಯಲ್ಲಿ ತೆಗೆದುಕೊಂಡಳು. ಕಣ್ಣು ಕೋರೈಸುವಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಭಯದಿಂದ ಅವಳ ಕೈ ಜಾರಿ ಬಿದ್ದ ಕತ್ತಿ ರಾಜಕುಮಾರನ ಕುತ್ತಿಗೆ  ಕತ್ತರಿಸಿತು.  ಪ್ರಾಣ ಹೋಯಿತು. ರಾಜಕುಮಾರಿಗೆ ಬಹಳ ಹೆದರಿಕೆ ಆಯ್ತು. ರಾಜಕುಮಾರನನ್ನು ತಾನು ಕೊಂದಿದ್ದೇನೆ  ಎಂದರೆ ತನಗೆ ಕಠಿಣ ಶಿಕ್ಷೆ ಆಗುತ್ತದೆ ಎಂದುಕೊಂಡು  ನಡುಗಿದಳು. 

ಬೆಳಗಾಯಿತು ಸೇವಕರಿಂದ  ವಿಷಯ ತಿಳಿದ  ರಾಜನು ಕೊಣೆಗೆ  ಬಂದನು.ವಿಚಾರಿಸಿದಾಗ,  ಅಪರಿಚಿತರು ರಾಜಕುಮಾರನನ್ನು ಕೊಲೆ ಮಾಡಿ ಗುಡ್ಡದ ಸಮೀಪ ದೇವಸ್ಥಾನದ ಒಳಗೆ  ಹೋದಂತೆ ನೋಡಿದೆ  ಹೀಗೆ ರಾಜಕುಮಾರಿ ಹೇಳಿದಳು. ರಾಜನ ಆದೇಶದಂತೆ  ಸೇವಕರು  ದೇವಸ್ಥಾನಕ್ಕೆ ಹೋದಾಗ ಅಲ್ಲಿ ಬ್ರಾಹ್ಮಣನು ಒಳಗೆ ದೇವರ ಪೂಜೆ ಮಾಡುತ್ತಿದ್ದನು. ಅವನನ್ನೇ  ಹಿಡಿದು ಹೊರಗೆ ತಂದರು. ರಾಜನು ಆ ಬ್ರಾಹ್ಮಣನನ್ನು ವಿಚಾರಿಸಿದಾಗ, ನನಗೇನೂ ತಿಳಿಯದು. ಇಷ್ಟಕ್ಕೂ  ನಿಮ್ಮ ಮಗನನ್ನು  ಏಕೆ ಕೊಲ್ಲಲಿ? ಎಷ್ಟೋ ವರ್ಷಗಳಿಂದ  ನೋಡಿದ್ದೇನೆ  ಬ್ರಾಹ್ಮಣ ಕೊಲೆ ಮಾಡಿರುವುದು ಸುಳ್ಳು ಎಂದು  ರಾಜನು ಸುಮ್ಮನಾದನು.   ಆದರೆ ಪರಿವಾರದವರೆಲ್ಲ ಇಲ್ಲ ಇವನೇ ಕೊಲೆ ಮಾಡಿರುವುದು ಎಂದು ಹೇಳಿದಾಗ,  ರಾಜನು ಪರಿಸ್ಥಿತಿಗಳ ಕಾರಣ,  ಹೇಳಿದ್ದನ್ನು ನಂಬಿದನು. ಬ್ರಾಹ್ಮಣನ ಮೇಲಿನ  ಕರುಣೆಯಿಂದ  ಪ್ರಾಣ ತೆಗೆಯದೆ, ಅವನ  ಮಗನ ಕುತ್ತಿಗೆಯನ್ನು ಕತ್ತರಿಸಿದ ಬ್ರಾಹ್ಮಣನ  ಕೈಯ್ಯನ್ನೆ  ಕತ್ತರಿಸುವಂತೆ, ಆದೇಶ  ಕೊಟ್ಟನು. ರಾಜನ ಸೇವಕರು,  ಬ್ರಾಹ್ಮಣನ  ಬಲಗೈ ಹಸ್ತ  ಕತ್ತರಿಸಿದರು.  ನೋವನ್ನು  ತಾಳಲಾರದೆ ಬ್ರಾಹ್ಮಣ ಒದ್ದಾಡಿದನು. ದೇವರೇ ಇಷ್ಟು ವರ್ಷಗಳು  ಒಂದೂ  ತಪ್ಪು ಮಾಡದೆ  ಶ್ರದ್ಧಾ  ಭಕ್ತಿಯಿಂದ  ನಿನ್ನ ಸೇವೆ ಮಾಡುತ್ತಾ ಬಂದಿದ್ದೇನೆ,  ನನಗೇಕೆ  ಇಂಥ  ಶಿಕ್ಷೆ  ಯೋಚಿಸಿ,  ಜ್ಯೋತಿಷ್ಯರನ್ನ ಕೇಳಿ ತಿಳಿಯಬೇಕು ಎಂದು ಕೊಂಡನು. ಅಧರ್ಮ ಮಾಡಿದ  ರಾಜನ  ಕೃತ್ಯದಿಂದ ಬೇಸತ್ತು ಊರನ್ನೇ  ಬಿಟ್ಟು ಹೊರಟನು. 

ಅಪರಾಧ ಮಾಡದಿದ್ದರೂ,  ಇಂತಹ ದೊಡ್ಡ ಶಿಕ್ಷೆಯಾಗಲು   ಕಾರಣವೇನು  ತಿಳಿಯಲು ಒಬ್ಬ ಮಹಾನ್ ಪಂಡಿತನನ್ನು ಹುಡುಕುತ್ತಾ ಹೊರಟನು. ಎಲ್ಲಿಯೂ ಸಿಗದೆ, ಕಾಶಿ ರಾಜ್ಯಕ್ಕೆ ಬಂದನು. ಅಲ್ಲೂಬ್ಬ ಜ್ಯೋತಿಷ್ಯ ಪ್ರಕಾಂಡ ಪಂಡಿತರು  ಸಿಕ್ಕಿದರು. ಅವರೊಡನೆ  ಮಾತನಾಡಿ ಅವರ ಮನೆಗೆ ಬಂದನು. ಆದರೆ ಪಂಡಿತನು  ಮನೆಗೆ ಬರುತ್ತಿದ್ದಂತೆ  ಒಳಗಿನಿಂದ ಅವನ ಹೆಂಡತಿ ಬಂದು ಪಂಡಿತನನ್ನು  ಬಾಯಿಗೆ ಬಂದಹಾಗೆ ಬೈಯ್ಯುತ್ತಾ ಜಗಳ ಮಾಡುತ್ತಾ ಗಂಡನನ್ನು  ತಿರಸ್ಕಾರದಿಂದ ಕಾಣುತ್ತಿದ್ದಳು. ಆದರೂ ಪಂಡಿತನು ಅವಳಿಗೆ ಏನೂ ಹೇಳದೆ ಸುಮ್ಮನಿರುವುದನ್ನು  ನೋಡಿ ಬ್ರಾಹ್ಮಣನಿಗೆ ಅರ್ಥವಾಗಲಿಲ್ಲ. 

ಪಂಡಿತರು, ಬ್ರಾಹ್ಮಣ ನನ್ನು  ಕರೆದು ಕೂರಿಸಿ, ಬ್ರಾಹ್ಮಣ ಶ್ರೇಷ್ಠರೇ ನೀವು ನನ್ನಲ್ಲಿಗೆ  ಬಂದ ಕಾರಣವೇನು  ಹೇಳಿ ಎಂದರು. ಬ್ರಾಹ್ಮಣನು ನಮಸ್ಕಾರ ಪಂಡಿತರೆ, ನನ್ನ ಸಮಸ್ಯೆಯನ್ನು ನಿಮ್ಮಲ್ಲಿ ಕೇಳಲು ಬಂದಿದ್ದೇನೆ ಆದರೆ ಅದಕ್ಕೂ ಮುನ್ನ ಸಾತ್ವಿಕ ರಾದ  ನಿಮ್ಮನ್ನು ನಿಮ್ಮ ಪತ್ನಿ  ಹುಡುಕಿ ಹುಡುಕಿ ಬಯ್ಯುತ್ತಾ  ಹೀಯಾಳಿಸುತ್ತಾರೆ? ನೀವು ಪ್ರತಿಯಾಗಿ  ಏನು ಹೇಳುವುದಿಲ್ಲ ಏಕೆ?  ಎಂದಾಗ   ಪಂಡಿತರು ಹೇಳಿದರು. ಆಕೆ  ಸ್ತ್ರೀ ಯಲ್ಲ, ನನ್ನ ಕರ್ಮ. ನಾವು ಹುಟ್ಟುವಾಗ, ಪತಿ, ಪತ್ನಿ, ಪುತ್ರ, ಪುತ್ರಿ,  ಒಡಹುಟ್ಟಿದವರಾಗಿ  ನಮ್ಮ ಜೊತೆ ಜೊತೆಯಲ್ಲಿ  ರಕ್ತ  ಸಂಬಂಧಿಗಳಾಗಿ, ಹುಟ್ಟುತ್ತಾರೆ  ಒಳ್ಳೆಯದಕ್ಕೂ ಅವರು ನಮ್ಮ ಜೊತೆ ಹುಟ್ಟಿರಬಹುದು.  ಅಥವಾ ಕರ್ಮ ಕಳೆದುಕೊಳ್ಳಲು ಬಂದಿರಬಹುದು. ಇದನ್ನು ಅನುಭವಿಸಬೇಕು. ಇದೇ ನನ್ನ ಭಾಗ್ಯದಲ್ಲಿ ಬರೆದಿತ್ತು ಎಂದರು. ಅದು ಏನು ಎಂದು ಕೇಳಿದಾಗ? ಹಿಂದಿನ ಜನ್ಮದಲ್ಲಿ ನಾನು ಒಂದು ಕಾಗೆ ಆಗಿದ್ದೆ.  ನನ್ನ ಪತ್ನಿ ಕತ್ತೆ ಯಾಗಿದ್ದಳು. ಕತ್ತೆಯ ಬೆನ್ನ ಮೇಲೆ ಒಂದು ಗಾಯವಾಗಿ ಅದು  ಹುಣ್ಣಾಗಿ  ಕತ್ತೆಗೆ  ನೋವಾಗುತ್ತಿತ್ತು. ಕಾಗೆ ಯಾಗಿದ್ದ ನಾನು ಆ ಗಾಯದ ಮೇಲೆ ಕುಕ್ಕಿ-ಕುಕ್ಕಿ ಇನ್ನಷ್ಟು ಹಿಂಸೆ ಮಾಡುತ್ತಿದ್ದೆ. ಅದು ನನ್ನನ್ನು  ಓಡಿಸಲಾಗದೆ ಮತ್ತಷ್ಟು ಒದ್ದಾಡಿ ಕೂಗುತ್ತಿತ್ತು. ಇದೇ ರೀತಿ ಪ್ರತಿದಿನ  ಗಾಯದ ಮೇಲೆ ಕುಕ್ಕಿಕುಕ್ಕಿ ಮತ್ತಷ್ಟು ಗಾಯ ಜಾಸ್ತಿ ಮಾಡಿದೆ.  ಒಂದು ದಿನ ಹೀಗೆ  ಕುಕ್ಕಿ ನೋವು ಮಾಡುತ್ತಿದ್ದಾಗ ಸಹಿಸದೆ  ಗಂಗಾನದಿಗೆ  ಇಳಿಯಿತು ನಾನು ಅದರ ಬೆನ್ನ ಮೇಲೆ ಕುಳಿತಿದ್ದೆ. ಆಳಕ್ಕೆ ಹೋಗಿ ಅದರ ಜೊತೆ ನಾನು ಮುಳುಗಿದೆ. ಗಂಗಾ ನದಿಯ ಪುಣ್ಯ ಫಲದಿಂದಾಗಿ, ನಾನು ವೇದ-ಪಾರಂಗತ  ಪಂಡಿತನಾದೆ, ಆಕೆ  ಬ್ರಾಹ್ಮಣ್ಯ  ಜನ್ಮತಾಳಿ  ನನ್ನ ಪತ್ನಿಯಾದಳು. ಹಿಂದಿನ  ಕರ್ಮಫಲ ಈ ಜನ್ಮದಲ್ಲಿ ಭಾದಿಸುತ್ತಿದೆ. ಇನ್ನು ಕೆಲವೇ ದಿನದಲ್ಲಿ ಕರ್ಮಫಲ ಮುಗಿಯುತ್ತದೆ ಏಕೆಂದರೆ ಇದರಲ್ಲಿ ಯಾರದೂ ತಪ್ಪಿಲ್ಲ. ಕಾಗೆ ಕುಕ್ಕುವುದು ಅದರ ಸ್ವಭಾವ.  ಕತ್ತೆಗೆ ಗಾಯವಾಗಿದ್ದು ಸಹಜ.  ಇನ್ನು ಕೆಲವು ದಿನ ಸಹಿಸಿಕೊಂಡರೆ ಕರ್ಮಫಲ ಮುಗಿಯುತ್ತದೆ ಎಂದು ಶಾಂತಚಿತ್ತರಾದರು. 

ನಂತರ ಬ್ರಾಹ್ಮಣ ಶ್ರೇಷ್ಠರೇ,  ಈಗ ನಿಮ್ಮ ಸಮಸ್ಯೆ ಹೇಳಿ ಎಂದರು. ಬ್ರಾಹ್ಮಣ ಇದುವರೆಗೂ ನಡೆದ ಸಮಾಚಾರವನ್ನೆಲ್ಲಾ ಹೇಳಿ, ಪಾಪಿಯಾದ ರಾಜನು ಅನ್ಯಾಯವಾಗಿ ನನ್ನ ಕೈಯನ್ನು ಕತ್ತರಿಸಿದ್ದಾರೆ. ಎಂದಾಗ  ಬ್ರಾಹ್ಮಣೊತ್ತಮರೆ  ನಿಮ್ಮ ಕೈಯನ್ನು ರಾಜ ಕತ್ತರಿಸಿದ್ದು ಅಲ್ಲ ಅದು ನಿಮ್ಮ ಕರ್ಮ ಫಲ ಎಂದು ಪಂಡಿತರು ಹೇಳಿದ್ದನ್ನು ಕೇಳಿದ ಬ್ರಾಹ್ಮಣ, ಇದು ಹೇಗೆ ಎಂದು ಕೇಳಿದನು. ಜ್ಯೋತಿಷಿ ಪಂಡಿತನು, ಬ್ರಾಹ್ಮಣೋತ್ತಮ  ನೀವು ಪೂರ್ವಜನ್ಮದಲ್ಲಿ ಒಬ್ಬ ಮಹಾನ್ ತಪಸ್ವಿ ಆಗಿದ್ದೀರಿ. ರಾಜಕುಮಾರಿ ಹಸು ಆಗಿದ್ದಳು. ರಾಜಕುಮಾರ ಕಟುಕ ಆಗಿದ್ದ.  ಒಂದು ದಿನ ಹಸುವನ್ನು ಕೊಲ್ಲಲು ಕಟುಕ ಕತ್ತಿಹಿಡಿದು ಬರುತ್ತಿದ್ದ. ಹಸು ತಪ್ಪಿಸಿಕೊಂಡು ನಿಮ್ಮ ಮುಂದೆಯೇ  ಹಾದು ಕಾಡಿನೊಳಗೆ ಹೋಯಿತು. ಆಗ ಕಟುಕ ನಿಮ್ಮ ಮುಂದೆ ಬಂದು ಹಸು ಎಲ್ಲಿ ಹೋಯಿತು ಎಂದು ಕೇಳಿದಾಗ ನೀವು ಬಲಗೈ ಎತ್ತಿ ಹಸು ಹೋದ ಜಾಗವನ್ನು ತೋರಿಸಿದಿರಿ ಕಟುಕ ಹಿಂದೆಯೇ ಹೋಗಿ ಹಸವಿನ ಕುತ್ತಿಗೆಯನ್ನು ಕತ್ತರಿಸಿದನು. ಆ ಸಮಯಕ್ಕೆ  ಕಾಡಿನ  ದೊಡ್ಡ ಸಿಂಹ  ಬಂದು ಕಟುಕ ಮತ್ತು ಹಸುವನ್ನು ಕೊಂದು ಹಾಕಿ ತಿಂದಿತು. ಈ ಜನ್ಮದಲ್ಲಿ  ಕಟುಕ ರಾಜಕುಮಾರನಾಗಿದ್ದ.  ಹಸು ರಾಜಕುಮಾರಿಯಾಗಿದ್ದಳು.  ಅವರಿಬ್ಬರು ಕರ್ಮಫಲದಿಂದ ಒಂದು ರಾತ್ರಿಯ ಮಟ್ಟಿಗೆ ಈ ಜನ್ಮದಲ್ಲಿ ಒಂದುಗೂಡಿದ್ದರು.  ಹಿಂದಿನ ಕರ್ಮಫಲ ದಂತೆ ರಾಜಕುಮಾರಿಯ ಕೈಜಾರಿ ಖಡ್ಗ ಬಿದ್ದು ರಾಜಕುಮಾರ ಮರಣಹೊಂದಿದ.  ನೀವು ಬಲಗೈ  ತೋರಿಸಿದ್ದರಿಂದ, ನಿಮ್ಮ ಬಲಗೈ ಕಳೆದುಕೊಂಡಿದ್ದೀರಿ. ಕರ್ಮಫಲಗಳು ಅದರ ಕರ್ತವ್ಯವನ್ನು ಮುಗಿಸಿದೆ. ಇದರಲ್ಲಿ ಯಾರ ತಪ್ಪು ಇಲ್ಲ. ಇನ್ನೂ  ಬಾಕಿ  ಇರುವ ಅವರವರ ಕರ್ಮಫಲಗಳನ್ನು  ಸಕಾರಾತ್ಮಕ ಚಿಂತನೆಯೊಂದಿಗೆ, ಸಂತೋಷದಿಂದ ಕಳೆಯಬೇಕು.ಬೇರೆ ಮಾರ್ಗವಿಲ್ಲ ಎಂದರು. 

ಚಿಂತನೀಯ ಹಿ ವಿಪದಾಂ , ಆದಾವೇವ  ಪ್ರತಿಕ್ರಿಯಾ !
ನ ಕೋಪಖನನಮ್ ಯುಕ್ತಂ  ಪ್ರದೀಪ್ತೇ  ವಹ್ನಿನಾ ಗೃಹೇ! 

ವಿಪತ್ತುಗಳಿಗೆ ಪೂರ್ವಭಾವಿಯಾಗಿಯೇ ಸಿದ್ಧತೆಗಳನ್ನು ಚಿಂತಿಸಿ ರಬೇಕು.
ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ಯುಕ್ತವಲ್ಲ. 

ವಂದನೆಗಳೊಂದಿಗೆ,
ಬರಹ: ಆಶಾ ನಾಗಭೂಷಣ.