ಮಕ್ಕಳ ಕಥೆ: ಪರಪುಟ್ಟ.
ಈ ಕಥೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೂ ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಹಾಗೆ ಸುಮ್ಮನೆ ಓದಿ. ಖುಷಿಕೊಡುತ್ತದೆ.
ಊರಿನ ಹತ್ತಿರವಿರುವ ಕಾಡಿನಲ್ಲಿ,ಅಕ್ಕ ಪಕ್ಕ ವಾಸವಿದ್ದ ಕಾಗೆ ಮತ್ತು ಗೂಬೆ ಬಹಳ ಕಾಲದ ಸ್ನೇಹಿತರು. ನಿತ್ಯ ಆಹಾರ ಹುಡುಕಲು ಒಟ್ಟಿಗೆ ಹೋಗಿ ಬರುತ್ತಿದ್ದವು.ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದವು. ಒಟ್ಟಿಗೆ ದೂರದೂರದವರೆಗೂ ಹೋಗಿಬರುತ್ತಿದ್ದವು. ಹೀಗಿರುವಾಗ, ಒಂದು ಬೆಳಗ್ಗೆ ಎಷ್ಟು ಹೊತ್ತಾದರೂ ಗೂಬೆ ಬರಲಿಲ್ಲ. ಅದನ್ನು ಕರೆಯಲು ಕಾಗೆ, ಬಾಗಿಲ ಮುಂದೆ ನಿಂತು, ಗೆಳತಿ ಗೂಬೆ ಬೇಗ ಬಾ ಬಿಸಿಲು ಏರುತ್ತೆ ಎಂದು ಎರಡು ಸಲ ಜೋರಾಗಿ ಕೂಗಿದರೂ ಹೊರಗೆ ಬರಲಿಲ್ಲ ಗೂಬೆ, ಆಗ ಅದರ ಮನೆ ಒಳಗೆ ಹೋಯಿತು. ಗೂಬೆ ಮಲಗಿದ್ದಲ್ಲಿಂದ ಎದ್ದಿರಲಿಲ್ಲ.ಹತ್ತಿರ ಹೋಗಿ ಯಾಕೆ ಹುಷಾರಿಲ್ವಾ ಎಂದು ಕೇಳಿದಾಗ, ನರಳುತ್ತಲೆ ಇಲ್ಲ ಕಣೆ, ಮೈ,ಕೈಯೆಲ್ಲಾ ವಿಪರೀತ ನೋವು, ಮೈಯನ್ನ ಯಾರೋ ಹಿಂಡಿದಂತೆ ಆಗುತ್ತಿದೆ. ಜ್ವರ ಬೇರೆ ಬಂದಿದೆ, ಎಂದು ಹೇಳಿದಾಗ, ಅಯ್ಯೋ ಪಾಪ ಹೌದಾ? ಹಾಗಾದರೆ ನೀನು ಇವತ್ತು ಹೊರಗೆ ಬರಬೇಡ ನಾನೇ ನಿನಗೆ ಆಹಾರ ತರುತ್ತೇನೆ ಎಂದು ಹೇಳುತ್ತಾ ಬೀದಿ ಬಾಗಿಲವರೆಗೂ ಹೊರಟ ಕಾಗೆ, ವಾಪಸ್ಸು ಬಂದು ನೀನು ನನ್ನ ಜೊತೆ ಬಾ ನನಗೊಬ್ಬ ಒಳ್ಳೆ ಪಂಡಿತ ಗೂತ್ತಿದಾನೆ ಎಂದು ಹೇಳಿದಾಗ , ಗೂಬೆ ಅಯ್ಯೋ ನಾನು ಏಳಲಾರೆ, ಹಾರಕ್ಕಂತೂ ಸಾಧ್ಯಾನೇ ಇಲ್ಲ ಬಿಡು ಎಂದಿತು. ಹೆಚ್ಚು ದೂರ ಇಲ್ಲ. ನಿಧಾನಕ್ಕೆ ಬಾ ನಾನು ಕರೆದುಕೊಂಡು ಹೋಗುತ್ತೇನೆ. ಬೇಗ ಗುಣವಾಗುತ್ತದೆ. ಎಂದು ಕಾಗೆ ಹೇಳಿತು
ಗೂಬೆಗೆ ಹೌದೆನ್ನಿಸಿತು. ಎರಡೂ ಜೊತೆಯಾಗಿ ಹಾರುತ್ತಾ ಹೊರಟವು. ಒಂದಷ್ಟು ದೂರ ಹೋದಮೇಲೆ, ಇನ್ನೂ ಎಷ್ಟು ದೂರ ಇದೆ? ನನ್ನ ಕೈಯ್ಯಿಂದ ಆಗದೇ ಇಲ್ಲ ಎಂದಿತು ಗೂಬೆ. ಇನ್ನೇನು ಸ್ವಲ್ಪ ದೂರವಷ್ಟೇ, ಅಲ್ಲಿ ನಾಗರ ಬನ ಇದೆ ಅದನ್ನು ದಾಟಿ ಬಿಟ್ಟರೆ ಮುಂದೆ ಸಿಗುವುದೇ ಪಂಡಿತನ ಮನೆ ನೋಡು, ನೋಡು ಆಗೋ ಬಂದೇ ಬಿಟ್ಟಿತು. ಅಲ್ಲಿ ಕಾಣುತ್ತಲ್ಲ ಅದೇ ಮಾವಿನ ತೋಪು ಅಲ್ಲೇ ನನ್ನ ಸ್ನೇಹಿತ ಇರುವುದು. ಇಷ್ಟು ಹೇಳುವಷ್ಟರಲ್ಲಿ ಬಂದೇಬಿಟ್ಟಿತು.
ಕಾಗೆ, ಕ್ಷಣವೂ ತಡಮಾಡದೆ ಕುಹೂ ಕುಹೂ ಎಂದು ಧ್ವನಿ ಬರುತ್ತಿದ್ದ ಮಾವಿನ ಮರದ ಹತ್ತಿರ ಗೂಬೆಯನ್ನು ಕರೆದುಕೊಂಡು ಹೋಯಿತು. ಕಣ್ಣಿಗೂ ಕಾಣದಂತೆ ಇದ್ದ ಕೋಗಿಲೆ ಕಣ್ಣುಮುಚ್ಚಿಕೊಂಡು ಇಂಪಾಗಿ ಹಾಡುತ್ತಿತ್ತು. ನಿಧಾನವಾಗಿ ಎಬ್ಬಿಸಿದ ಕಾಗೆ ನೋಡು ಕೋಗಿಲೆ, ಈ ಗೂಬೆ ನನ್ನ ಗೆಳೆಯ ನಿನ್ನೆಯಿಂದ ಹುಷಾರಿಲ್ಲ ಪರೀಕ್ಷೆ ಮಾಡಿ ಔಷಧಿ ಕೊಡು. ನಾನು ಆಚೆ ಕಡೆ ಹೋಗಿ ಒಂದಷ್ಟು ಆಹಾರ ತರುತ್ತೇನೆ, ಎಂದು ಎರಡನ್ನು ಪರಿಚಯ ಮಾಡಿಸಿ ತಾನು ಆಹಾರ ತರಲು ಹೊರಗೆ ಹೊರಟಿತು. ಕೋಗಿಲೆ ದೃಷ್ಟಿಸಿ ನೋಡಿ, ಮನಸ್ಸಿನಲ್ಲಿ ಥೂ ಬೆಳಗ್ಗೆ ಮುಂಚೆ ಈ ಗೂಬೆ ಮುಂಡೇದು ಬಂದಿದೆ. ಅಂದುಕೊಳ್ಳುತ್ತಿದ್ದರೆ,ಗೂಬೆ ಅಯ್ಯೋ ಇದು ಪಂಡಿತ ಅಂತೆ ಕರ್ರಗೆ ಇಷ್ಟು ಸಣ್ಣಕ್ಕೆ ಕುತ್ಕೊಂಡಿದೆ ಮೂರೂತ್ತು ಹಾಡು ಗುಣಗುತ್ತ ಇರತ್ತೆ ಅದೇನು ಔಷಧಿ ಕೊಡುತ್ತೋ ದೇವರಿಗೆ ಗೊತ್ತು. 'ಬಂದ ದಾರಿಗೆ ಸುಂಕವಿಲ್ಲ' ಎಂದುಕೊಂಡಿತು.
ಗೂಬೆಯನ್ನು ನೋಡುತ್ತಾ ನಿನಗೇನಾಗಿದೆ ಎಂದು ಕೋಗಿಲೆ ಕೇಳಿತು. ನೆನ್ನೆಯಿಂದ ಮೈ ಕೈಯೆಲ್ಲಾ ನೋವು, ಖಂಡಾಪಟ್ಟೆ ಜ್ವರ ಇದೆ. ಗೂಬೆಯ ರೆಕ್ಕೆಪುಕ್ಕ, ಕಣ್ಣು, ಮೂಗು, ಬಾಯಿ ಒಂದೊಂದಾಗಿ ಪರೀಕ್ಷಿಸಿದ ಕೋಗಿಲೆ, ಗೂಬೆಗೆ ಹೀಗೆ ಹೇಳಿತು, "ನೀನು ಗುಡ್ಡದ ದಾರಿಯಲ್ಲಿರುವ ನೀರಿನ ಹೊಂಡದಲ್ಲಿ ಸ್ವಲ್ಪ ಹೊತ್ತು ಕೂರು ಎಂದಿತು. ಕೋಗಿಲೆ ಮುಖ ಸಿಂಡರಿಸಿಕೊಂಡು, ಅಯ್ಯೋ ಈ ಪಾಟೀ ಚಳಿಲೀ ನಡ್ಗತಾ ಇದೀನಿ, ನೀನು ನೋಡಿದರೆ ತಣ್ಣೀರಿನಲ್ಲಿ ಕೂತ್ಕೊಳ್ಳೋಕೆ ಹೇಳಿದೆಯಲ್ಲ, ಎಂದು ಕೇಳಿದಾಗ, ಯಾವ ಭಾವವನ್ನೂ ವ್ಯಕ್ತಪಡಿಸದ ಕೋಗಿಲೆ, ನಿನ್ನ ಇಷ್ಟ ನನಗೆ ಸಮಯವಿಲ್ಲ ಬೇಕಾದರೆ ಕೂರು ಇಲ್ಲದಿದ್ದರೆ ಹೋಗು ಎಂದು ಖಡಕ್ಕಾಗಿ ಹೇಳಿ. ತನ್ನ ಪಾಡಿಗೆ ತಾನು ಹಾಡು ಹೇಳಿಕೊಳ್ಳುತ್ತಾ ಕಣ್ಣು ಮುಚ್ಚಿ ಕುಳಿತು ಬಿಟ್ಟಿತು. ಗೂಬೆಗೆ ವಿಪರೀತ ಕೋಪ ಬಂದರೂ ಏನು ಮಾಡಲಾಗದೆ ತಣ್ಣೀರಿನ ಹೊಂಡದಲ್ಲಿ ಕುಳಿತುಕೊಂಡಿತು.ಒಂದಷ್ಟು ಹೊತ್ತಾದರೂ, ಕೋಗಿಲೆಯಿಂದ ಯಾವ ಸೂಚನೆಯೂ ಬರದ ಕಾರಣ ತಾನೆ ನೀರಿನಿಂದ ಮೇಲೇಳಲು ಪ್ರಯತ್ನಿಸಿತು. ಏನೊ ಹಗುರವಾದಂತೆ ಅನಿಸಿತು. ಅಲ್ಲೇ ರೆಕ್ಕೆ ಅಲ್ಲಾಡಿಸಿತು. ನೋವಾಗಲಿಲ್ಲ. ನೀರಿನ ಹೊಂಡದಿಂದ ಮೇಲೆದ್ದು ಬಂದಿತು. ಮೈ ಕೊಡವಿತು.ಅರೆ ನೋವೆಲ್ಲಾ ಮಾಯವಾಗಿದೆ
ಜ್ವರವು ಬಿಟ್ಟಿತ್ತು .ಗೂಬೆಗೆ ಆಶ್ಚರ್ಯವಾಯಿತು. ಸಂತೋಷದಿಂದ ಕೋಗಿಲೆ ಹತ್ತಿರ ಬಂದು ನನ್ನ ಕಾಯಿಲೆ ವಾಸಿಯಾಯಿತು ಔಷಧಿಯಲ್ಲ, ಗುಳಿಗೆಯಲ್ಲ, ಅದೇನು ಮಂತ್ರ ಮಾಡಿದೆ, ಅರ್ಧಗಂಟೆಯು ಆಗಿಲ್ಲ ನನಗೆ ಪೂರ್ತಿ ಹುಷಾರಾಗಿ ಬಿಟ್ಟಿದೆ ಎಂದು ಗೂಬೆ ಕೇಳಿದಾಗ, ಏನಿಲ್ಲ ನಿನ್ನ ಪುಕ್ಕದೊಳಗೆ ಒಂದು ಸಣ್ಣ ಮಣ್ಣಿನ ಹೆಂಟೆ ಸೇರಿಕೊಂಡಿತ್ತು. ಆ ನೋವಿಗೆ ಜ್ವರ ಬಂದಿತ್ತು. ನೀರಿನಲ್ಲಿ ಕುಳಿತಾಗ ಮಣ್ಣಿನ ಹೆಂಟೆ ಕರಗಿತು. ನೋವಿನೂಂದಿಗೆ ಜ್ವರವು ಹೋಯಿತು. ಓಹೋ ಹಾಗಾದರೆ ಕಾಗೆ ಹೇಳಿದ್ದು ನಿಜ ನೀನು ಬಹಳ ಬುದ್ಧಿವಂತನೆಂದು, ನಿನಗೆ ನನ್ನ
ನಮಸ್ಕಾರಳು ಹೋಗಿ ಬರುತ್ತೇನೆ. ಎಂದು ಗೂಬೆ ಹೊರಡಲಣಿಯಾದಾಗ, ಸರಿ ಸರಿ ನಮಸ್ಕಾರ. ಈಗ ನಿನ್ನನ್ನು ಪರೀಕ್ಷಿಸಿ ವಾಸಿಮಾಡಿದ ಶುಶ್ರೂಷೆಯ ಶುಲ್ಕವನ್ನು ಕೊಡು ಎಂದು ಕೋಗಿಲೆ ಕೇಳಿದಾಗ, ಗೂಬೆ ಸಿಟ್ಟಿನಿಂದ ನಿನಗೆ ಹಣ ಏಕೆ ಕೊಡಬೇಕು ನೀನೇನು ಔಷಧಿ ,ಗುಳಿಗೆ ಕೊಟ್ಟಿದ್ದೀಯಾ? ಎಂದಿತು. ಓಹೋಹೋ ನಿನಗೆ ಬರಬಾರದ ರೋಗ ಬಂದಿದೆ ಎಂದು ಸುಳ್ಳು ಹೇಳಿ ಔಷಧಿ ಕೊಟ್ಟಿದ್ದರೆ ದುಡ್ಡು ಕೊಡುತ್ತಿರಲಿಲ್ಲವೇ?
ನಾನು ನಿಜವನ್ನು ಹೇಳಿದ್ದಕ್ಕೆ ಏನು ಮಹಾ ಅನ್ನಿಸಿದೆ ಅಲ್ಲವೇ? ಅದೆಲ್ಲಾ ನನಗೆ ಗೊತ್ತಿಲ್ಲ ನಾನೇನು ಧರ್ಮಕ್ಕೆ ಕೊಟ್ಟಿಲ್ಲ ಒಟ್ಟಿನಲ್ಲಿ ಹಣ ಕೊಡು ಎಂದಿತು.ನಾನು ಒಂದು ದಮಡಿಯನ್ನು ಕೊಡುವುದಿಲ್ಲನೀನು ಏನು ಬೇಕಾದರೂ ಮಾಡಿಕೋ ಎಂದು ಗೂಬೆ ಪುರ್ರಂತ ಹಾರಿಹೋಯಿತು.
ಸ್ವಲ್ಪ ಸಮಯಕ್ಕೆ ಕಾಗೆ ಬಂದು, ನನ್ನ ಸ್ನೇಹಿತನ ಆರೋಗ್ಯ ಹೇಗಿದೆ? ಏನು ಆಗಿತ್ತು ಎಂದು ಕಳಕಳಿಯಿಂದ ವಿಚಾರಿಸಿದಾಗ , ಬೇಸರಗೂಂಡಿದ್ದ ಕೋಗಿಲೆ, ನಿನಗೆ ಎಷ್ಟು ಸಾರಿ ಹೇಳಿಲ್ಲ, ಯಾರನ್ನೂ ಕರೆದುಕೊಂಡು ಬರಬೇಡ ಎಂದು, ನಿನ್ನ ಮಾತಿಗೆ ಕಟ್ಟುಬಿದ್ದು ನನ್ನ ಸಮಯವನ್ನು ಮೀಸಲಿಟ್ಟು ಪರೀಕ್ಷಿಸಿ, ಉಪಚಾರ ತಿಳಿಸಿ, ವಾಸಿ ಮಾಡಿದ್ದಕ್ಕೆ ಕಾಸು ಕೊಡದೆ ಹೊರಟು ಹೋದರೆ ನಾನು ಸುಮ್ಮನಿರಲ್ಲ ಹಣ ಕೊಡಿಸುವ ಜವಾಬ್ದಾರಿ ನಿನ್ನದು ಎಂದಿತು.
ತಾಳ್ಮೆಯಿಂದ, ಆಯ್ತು ಗೆಳೆಯ ನಿನ್ನ ಹಣವನ್ನು ಕೊಡಿಸುವ ಜವಾಬ್ದಾರಿ ನನ್ನದು ಎಂದು ಗೂಬೆಯನ್ನು ಹುಡುಕುತ್ತಾ ಹೊರಟಿತು. ಎಷ್ಟುಹುಡುಕಿದರೂ ಗೂಬೆ ಮಾತ್ರ ಕಾಣಲಿಲ್ಲ. ಮುಸ್ಸಂಜೆ ಆಗ್ತಾ ಬಂತು ಬಂದಿತು. ವಾಪಸ್ಸು ಕೋಗಿಲೆ ಹತ್ತಿರ ಬಂದ ಕಾಗೆ, ಗೆಳೆಯ ನನ್ನಿಂದ ದೊಡ್ಡ ತಪ್ಪಾಯ್ತು ನನ್ನ ಮಿತ್ರ ಗೂಬೆ ಎಲ್ಲೂ ಸಿಗಲಿಲ್ಲ ಆದಕಾರಣ ಅವನು ಕೊಡಬೇಕಾದ ಹಣವನ್ನು ಅಷ್ಟಷ್ಟೇ ತಂದು ನಾನೇ ತೀರಿಸುತ್ತೇನೆ ಎಂದಾಗ, ಅದಕ್ಕೊಪ್ಪದ ಕೋಗಿಲೆ ಸಾಧ್ಯವಿಲ್ಲ ನೀನು ಅಷ್ಟಷ್ಟೇ ತಂದುಕೊಡುವವರೆಗೂ ಕಾದು ಕುಳಿತಿರಲು ನನಗೆ ಸಮಯವಿಲ್ಲ. ಆದುದರಿಂದ ಅಲ್ಲಿಯವರೆಗೂ ನಾನು ನಿನ್ನ ಗೂಡಿನಲ್ಲಿ ನನ್ನ ಮೊಟ್ಟೆಗಳನ್ನು ಇಡುತ್ತೇನೆ. ಅವುಗಳಿಗೆ ಕಾವು ಕೊಟ್ಟು ಮರಿಗಳನ್ನಾಗಿ ಮಾಡಿಕೊಡುವ ಜವಾಬ್ದಾರಿ ನಿನ್ನದು. ನೀನು ಯಾವಾಗ ನನ್ನ ಸಾಲ ತೀರಿಸುತ್ತೀಯೋ ಆವಾಗಿನಿಂದ ನನ್ನ ಮೊಟ್ಟೆಗಳನ್ನು ನಾನೇ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ನನಗೆ ಮುಖವನ್ನೊ ತೋರಿಸಬೇಡ ಎಂದು ನಿಷ್ಠೂರದಿಂದ ಹೇಳಿ, ತನ್ನ ಪಾಡಿಗೆ ತಾನು ಕಣ್ಣು ಮುಚ್ಚಿ ಹಾಡು ಹೇಳುವುದರಲ್ಲಿ ಮೈಮರೆಯಿತು.
ಪಾಪ ಕಾಗೆ ತನ್ನ ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗಬೇಕಾಯಿತು. ಅಂದಿನಿಂದ ಕೋಗಿಲೆ ತನ್ನ ಮೊಟ್ಟೆಗಳನ್ನು ಕಾಗೆ ಗೂಡಿನಲ್ಲಿ ಇಡುತ್ತದೆ. ಕಾಗೆ ಮತ್ತು ಕೋಗಿಲೆಯ ಮೊಟ್ಟೆಗಳು ಒಂದೇ ತರ ಇದ್ದು ಕಾಗೆ ಕಾವು ಕೊಟ್ಟು ಮರಿಗಳನ್ನಾಗಿ ಮಾಡುತ್ತದೆ. ಕೂಗಿದಾಗಲೇ ಕೋಗಿಲೆ ಮರಿ ಎಂದು ತಿಳಿಯುವುದು. ಕಾಗೆಗೆ ಸಿಗಬಾರದೆಂದು ಗೂಬೆ ಹಗಲೆಲ್ಲಾ ನಿದ್ದೆ ಮಾಡಿ ರಾತ್ರಿ ಸಮಯ 'ಘೂ ಘೂ' ಎಂದು ಕೂಗುತ್ತಾ ಹೊರಗೆ ಅಡ್ಡಾಡುತ್ತದೆ. ಅಂದಿನಿಂದ ಗೂಬೆಗೆ 'ನಿಶಾಚರ ಪ್ರಾಣಿ' ಎನ್ನುತ್ತಾರೆ. ಕೋಗಿಲೆ ಮರಿಗಳನ್ನು ಕಾಗೆ ಬೆಳೆಸುವುದರಿಂದ ಕೋಗಿಲೆಗೆ 'ಪರಪುಟ್ಟ' ಎಂದು ಕರೆಯುತ್ತಾರೆ.
"ಎಚ್ಚರಗೊಳು ರಾಮ ನೀ ಎಚ್ಚರಗೊಳು ರಾಮ, ಸಚ್ಚಿದಾನಂದನು ಎಚ್ಚರಗೊಳದಿರೆ
ಅಚ್ಚರಿಪಡುತಿದೆ ಮೂರ್ ಜಗವು, ಅಚ್ಚರಿ ಪಡುತಿದೆ ಮೂರ್ ಜಗವು. ಎಚ್ಚರ ಗೊಳು ರಾಮ ನೀ ಎಚ್ಚರ ಗೊಳುರಾಮ".
ವಂದನೆಗಳೊಂದಿಗೆ,
ಬರಹ:-ಆಶಾ ನಾಗಭೂಷಣ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ