ಬುಧವಾರ, ಸೆಪ್ಟೆಂಬರ್ 2, 2020

ರುದ್ರಾಕ್ಷಿ

🍃 #ರುದ್ರಾಕ್ಷಿ:🍃
ರುದ್ರನ 'ಅಕ್ಷಿ'ಯೇ ರುದ್ರಾಕ್ಷಿ. ಅರ್ಥಾತ್ ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ-ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ. ಹಿಮಾಲಯ ಮತ್ತು ನೇಪಾಳದ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಈ ವೃಕ್ಷಗಳು ಶೀಘ್ರಗತಿಯಲ್ಲಿ ಫಲ ಬಿಡುವ ಜಾತಿಗೆ ಸೇರಿದ್ದು, ಮೂರ್ನಾಲ್ಕು ವರ್ಷಗಳಲ್ಲೇ ರುದ್ರಾಕ್ಷಿ ಬೀಜಗಳನ್ನು ಬಿಡತೊಡಗುತ್ತವೆ. ಇಂಥ ರುದ್ರಾಕ್ಷಿಗಳಲ್ಲಿ ಏಕಮುಖದಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೂ ಒಳಜಾತಿಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ಸ್ಥಾನಮಾನವಿದೆ. ಇದೇ ಕಾರಣಕ್ಕೆ ಭಕ್ತಾದಿಗಳು ರುದ್ರಾಕ್ಷಿಮಾಲೆಯನ್ನು ಧರಿಸುವದುಂಟು.

🔸 ರುದ್ರಾಕ್ಷಿ ಒಂದು ಪವಿತ್ರ ವಸ್ತು
ರುದ್ರಾಕ್ಷಿ ಪವಿತ್ರ ವಸ್ತು . ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ , ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರು ಬಿಂದುಗಳು ರುದ್ರಾಕ್ಷಿ ಮಣಿಗಳಾದವು. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ. ಇದನ್ನು ಜಪಮಾಲೆಯಾಗಿಯೂ ಉಪಯೋಗಿಸುತ್ತಾರೆ.
 
ಇನ್ನೊಂದು ಪುರಾಣದ ಕಥೆ
ಶಿವನು ದೀರ್ಘ ಕಾಲ ಧ್ಯಾನ ನಿರತನಾಗಿ ನಂತರ ಕಣ್ಣುಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದ ಭಾಷ್ಪ ರುದ್ರಾಕ್ಷಿಯಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ.
ಅದು ಶಿವನ ಮೂರನೇಕಣ್ಣಿನ ರೂಪವಾದದ್ದು ಜನರ ಕಣ್ಣೀರನ್ನು ಒರೆಸುವ ಎಂದರೆ ದುಃಖವನ್ನು ದೂರಮಾಡುವ ಗುಣ ಹೊಂದಿದೆ ಎಂದು ಕೆಲವರು ಹೇಳುತ್ತಾರೆ.
ಇನ್ನೊಂದು ಕಥೆಯಂತೆ ಶಿವನು ತಾರಕಾಸುರನನ್ನು ಸಂಹರಿಸಿದಮೇಲೆ ಅವನ ಮಕ್ಕಳಾದ ತದಿನ್ಮಾಲಿ (ವಿದ್ಯುನ್ಮಾಲಿ), ತಾರಕಾಕ್ಷ, ಕಮಲಾಕ್ಷ , ಗುಣವಂತರಾಗಿ ದೇವತೆಗಳ ಸಾಲಿಗೆ ಸೇರಿದರು. ಆದರೆ ಕೆಲವು ಕಾಲಾನಂತರ ದುಷ್ಱರಾಗಿ ಜನರಿಗೆ ತೊಂದರೆ ಕೊಟ್ಟರು . ಅವರನ್ನು ಶಿವನು ಸಂಹರಿಸಿದನು. ಹೀಗೆ ತನ್ನ ಭಕ್ತರು ದುಷ್ಱರಾಗಿ ಸತ್ತುದನ್ನು ನೋಡಿ ಶಿವನ ಕಣ್ಣಿನಿಂದ ನೀರ ಹನಿಗಳು ಉದುರಿದವು . ಅವೇ ಮರಗಳಾಗಿ ಅದರ ಸಂತತಿ ರುದ್ರಾಕ್ಷ್ಷಿಗಳನ್ನು ಕೊಡುತ್ತಿವೆ. ಒಂದುಮರದಲ್ಲಿ ಸುಮಾರು ೨೦೦೦ ದಷ್ಟು ಹಣ್ಣುಬಿಡುವುದು. ಅದರಲ್ಲಿ ೧೦೮ ಮಣಿಗಳ ಜಪಮಾಲೆಗಳನ್ನು ಮಾಡುತ್ತಾರೆ . ಹಿಮಾಲಯದ ಯತಿಗಳು ಆ ಮರದ ಹಣ್ಣುಗಳನ್ನು (ಅದನ್ನೇ) ಅಮೃತ ಫಲವೆಂದು ತಿನ್ನುತ್ತಾರೆ. 

🔸 ರುದ್ರಾಕ್ಷಿ ಯ ಲಭ್ಯತೆ
ರುದ್ರಾಕ್ಷಿ ಹಿಮಾಲಯ ತಪ್ಪಲು ಪ್ರದೇಶದಲ್ಲಿ ಮತ್ತು ನೇಪಾಳದಲ್ಲಿ ಬೆಳಯುತ್ತದೆ. ಆಗ್ನೇಯ ಏಷಿಯಾ ದೇಶಗಳಲ್ಲಿಯೂ ಬೆಳೆಯುತ್ತದೆ. ರುದ್ರಾಕ್ಷಿ ಕಾಯಿ ನೋಡಲು ನಸು ನೀಲಿ ಬಣ್ಣದ್ದಾಗಿರುತ್ತದೆ. ಇದು ಸಿಪ್ಪೆಯ ಭಾಗ. ಸಿಪ್ಪೆ ಸುಲಿದರೆ , ಒಳಗಡೆ ಹಸಿರು ಬಣ್ಣದ ರುದ್ರಾಕ್ಷಿ ಸಿಗುತ್ತದೆ. ಅದು ಚೆನ್ನಾಗಿ ಒಣಗಿದ ನಂತರ ನಸು ಶ್ವೇತವರ್ಣ, ತಾಮ್ರದ ನಸು ಕೆಂಪು, ಹಾಗೂ ನಸು ಕಪ್ಪು ಬಣ್ಣದವು ಸಿಗುತ್ತವೆ. ಸೂಜಿಯನ್ನು ಉಪಯೋಗಿಸಿ ಮಡಿಕೆಗಳಿರುವ ರುದ್ರಾಕ್ಷಿಯ ಗೆರೆಗಳನ್ನು ಬಿಡಿಸುತ್ತಾರೆ. ಗೆರೆಗಳ ಆಕಾರವನ್ನು ನೋಡಿ ರುದಾಕ್ಷಿಯ ಮುಖಗಳನ್ನು ಗುರ್ತಿಸುತ್ತಾರೆ. ಅದರಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖಗಳವರೆಗೂ ಇರವ ರುದ್ರಾಕ್ಷಿ ಸಿಗುವುದೆಂದು ಹೇಳುತ್ತಾರೆ. ಆದರೆ ೫ ಮುಖದಿಂದ ೧೪ ಮುಖಗಳಿರುವ ರುದ್ರಾಕ್ಷಿಗಳು ಹೆಚ್ಚು ಇರತ್ತವೆ. ಏಕ ಮುಖ ರುದ್ರಾಕ್ಷಿ ಬಹಳ ವಿರಳವಾಗಿ ದೊರೆಯುತ್ತವೆ. ಪಂಚಮುಖಿ ರುದ್ರಾಕ್ಷಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಗೂ ಅದರದೇ ಮಹತ್ವವಿದೆ. ಒಂದೊಂದು ಮುಖಕ್ಕೂ ಒಬ್ಬೊಬ್ಬ ದೇವತೆಯನ್ನು ಗುರುತಿಸುತ್ತಾರೆ. ಇದಲ್ಲದೆ ರುದ್ರಾಕ್ಷಿಗೆ ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ.
(ಈ ರುದ್ರಾಕ್ಷಿಯ ಮಹತ್ವದ ಬಗ್ಗೆ ಉತ್ತರ ಭಾರತದ ಅನೇಕ ಶಿವ ದೇವಾಲಯಗಳ ಗೋಡೆಗಳ ಮೇಲೆ ಮಾಹಿತಿ ವಿವರ ಬರೆದಿದ್ದಾರೆ. ಇದು ಅದರ ಆಧಾರದಿಂದ ಬರೆದುದು)

🔸  ಒಂದರಿಂದ ಹದಿನಾಲ್ಕು ಮುಖಗಳ ರುದ್ರಾಕ್ಷಿಗಳ ಸಂಕ್ಷಿಪ್ತ ಪರಿಚಯ:
🔸 ಏಕ ಮುಖ ರುದ್ರಾಕ್ಷಿ
ಏಕ ಮುಖ ರುದ್ರಾಕ್ಷಿ ಯನ್ನು ಸಾಕ್ಷಾತ್ ಶಿವನ ಸ್ವರೂಪವೆಂದು ತಿಳಿಯುತ್ತಾರೆ . ಒಂದು ರುದ್ರಾಕ್ಷಿ ಮರದಲ್ಲಿ ಏಕಮುಖ ರುದ್ರಾಕ್ಷಿ ಯು ಒಂದೇ ಒಂದು ಬಿಡುತ್ತದೆ ಎಂದು ಹೇಳುತ್ತಾರೆ. ಇದು ಬಹಳ ಭಾಗ್ಯಶಾಲಿಯೂ, ಶಿವನಿಗೆ ಪ್ರೀತಿ ಪಾತ್ರನೂ ಆದವನಿಗೆ ಮಾತ್ರ ದೊರೆಯುತ್ತದೆ ಎಂಬ ನಂಬುಗೆ ಇದೆ. ಇದಕ್ಕೆ ಬೆಲೆ ಬಹಳ ಜಾಸ್ತಿ. ಅಂದರೆ ರೂ.ಸಾವಿರದಿಂದ ಇದರ ಬೆಲೆ ಆರಂಭವಾಗುತ್ತದೆ. ಈ ಬಗೆಯ ರುದ್ರಾಕ್ಷಿ ಧರಿಸಿದರೆ ಇಹದ ಎಲ್ಲಾ ಸೌಭಾಗ್ಯಗಳೂ ಈಶ್ವರನ ಕೃಪೆ ಸದಾ ದೊರೆಯುತ್ತದೆ ಎಂಬ ಧೃಢ ನಂಬುಗೆ ಇದೆ..

🔸 ದ್ವಿಮುಖ ರುದ್ರಾಕ್ಷಿ
ಇದು ಶಿವ ಪಾರ್ವತಿ ಸ್ವರೂಪ ಎಂದು ಹೇಳುತ್ತಾರೆ ಈ ರುದ್ರಾಕ್ಷಿಯೂ ಸಿಗುವುದು ತುಂಬಾ ವಿರಳ. ಇದನ್ನು ಧರಿಸುವುದರಿಂದ ಗೋಹತ್ಯೆಯೇ ಮೊದಲಾದ ಇತರೆ ದೋಷಗಳೂ ನಾಶವಾಗುತ್ತದೆ. ಈ ರುದ್ರಾಕ್ಷಿಯು ಉತ್ತಮ ಗೃಹಸ್ತ ಜೀವನ ಸುಖ ಶಾಂತಿ, ಸೌಬಾಗ್ಯವನ್ನು ಕೊಡುವುದೆಂದು ಹೇಳಲಾಗುತ್ತದೆ. ಇದರ ಬೆಲೆಯೂ ತುಂಬಾ ಹೆಚ್ಚು

🔸 ತ್ರಿಮುಖ ರುದ್ರಾಕ್ಷಿ
ಮೂರುಮುಖದ ರುದ್ರಾಕ್ಷಿ ಅಗ್ನಿ ದೇವನ ಸ್ವರೂಪ ಎಂದು ಹೇಳುತ್ತಾರೆ. ಇದೂ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಇದರ ಧಾರಣೆಯಿಂದ ಸಕಲ ಪಾಪಗಳೂ ನಿವಾರಣೆ ಆಗುವುದು . ಇದರ ಬೆಲೆಯೂ ಸ್ವಲ್ಪ ಹೆಚ್ಚಾಗಿಯೇ ಇದೆ.

🔸 ಚತುರ್ಮುಖ ರುದ್ರಾಕ್ಷಿ
ಇದನ್ನು ಬ್ರಹ್ಮ ಸ್ವರೂಪ ಎಂದು ಗುರುತಿಸುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದು. ಇದು ಭ್ರೂಣ ಹತ್ಯಾದೋಷವನ್ನು ನಿವಾರಣೆ ಮಾಡುವುದು. ಸ್ಮರಣ ಶಕ್ತಿ, ಬುದ್ಧಿ, ಶಿಕ್ಷಣದಲ್ಲಿ ಸಫಲತೆ, ಇವು ದೊಕುವುದೆಂದು ಹೇಳುವರು. ಬೆಲೆ ಸಾಧಾರಣ ಮಟ್ಟದ್ದು.

🔸 ಪಂಚ ಮುಖಿ ರುದ್ರಾಕ್ಷಿ
ಪಂಚ ಮುಖಿ ರುದ್ರಾಕ್ಷಿ ಯನ್ನು ಸ್ವಯಂ ಭಗವಾನ್ ಶಂಕರನ ಸ್ವರೂಪ ಎಂದು ತಿಳಿಯುತ್ತಾರೆ. ಹೆಚ್ಚಿನ ರುದ್ರಾಕ್ಷಿಗಳು ಪಂಚ ಮುಖಿ ಆಗಿರುತ್ತವೆ. ಈ. ರುದ್ರಾಕ್ಷಿ ಹೆಚ್ಚು ಸಿಗುವುದರಿಂದ ಬೆಲೆಯೂ ಕಡಿಮೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಈಶ್ವರನ ಕೃಪೆ ದೊರಕಿ ಮನಸ್ಸಿಗೆ ಶಾಂತಿದೊರೆಯುವುದು ಎಂಬ ನಂಬುಗೆ ಇದೆ.

ರುದ್ರಾಕ್ಷಿ ಯ ಜಪ ಮಾಲೆ
ಸಾಮಾನ್ಯವಾಗಿ ಪಂಚ ಮುಖಿ ರುದ್ರಾಕ್ಷಿಗಳಿಂದ ಜಪ ಮಾಲೆ ಮಾಡುತ್ತಾರೆ. ೧೦೮ ಮಣಿ(ಬೀಜದ) /೨೭ ಮಣಿಗಳ( ರುದ್ರಾಕ್ಷಿ ಬೀಜದ) ಅಥವಾ ೧೦ ರುದ್ರಾಕ್ಷಿ ಮಣಿಗಳ ಮಾಲೆ ಮಾಡುವುದು ರೂಡಿಯಲ್ಲಿದೆ. ಜಪ ಮಾಡುವಾಗ ಅದನ್ನು ಒಂದು ಕ್ರಮದಲ್ಲಿ ಬೆರಳುಗಳ ಮದ್ಯೆ ಇಟ್ಟುಕೊಂಡು , ಹೆಬ್ಬೆರಳಿನಿಂದ ಒಂದೊಂದು ಜಪಕ್ಕೂ ಒಂದೊಂದು ಮಣಿಯನ್ನು ಜಾರಿಸುತ್ತಾ ಜಪ ಮಾಡುವರು. ಈ ರೀತಿ ಹಿಂದುಗಳು, ಸಿಖ್ಖರು, ಬೌದ್ಧರು, ಎಲ್ಲರೂ ಈ ರೀತಿ ಜಪ ಮಾಡುತ್ತಾರೆ.

🔸 ಷಷ್ಠ ಮುಖಿ ರುದ್ರಾಕ್ಷಿ
ಆರು ಮುಖದ ರುದ್ರಾಕ್ಷಿ ಶಿವ ಪುತ್ರ ಕುಮಾರ ಕಾರ್ತಿಕೇಯನ ರೂಪವೆಂದು ತಿಳಿಯಲಾಗುತ್ತದೆ. ಈ ರುದ್ರಾಕ್ಷಿಯೂ ಹೆಚ್ಚಿ ಪ್ರಮಾಣದಲ್ಲಿ ದೊರೆಯುವುದು. ಈರುದ್ರಾಕ್ಷಿ ಧರಿಸುವುದರಿಂದ ಅಧರ್ಮiಚರಣೆ ಮಾಡಿದ್ದಲ್ಲಿ ಅದರಿಂದ ಉಂಟದ ಪಾಪಗಳು ನಿವರಣೆ ಆಗುವುದು ಹಾಗೂ ಸ್ಮರಣ ಶಕ್ತಿ ಹೆಚ್ಚುವುದು ಎಂಬ ನಂಬುಗೆ ಇದೆ.

🔸 ಸಪ್ತ ಮುಖಿ ರುದ್ರಾಕ್ಷಿ
ಏಳು ಮುಖದ ರುದ್ರಾಕ್ಷಿ ಅನಂತ ನಾಗನ (ಅಥವಾ ಆದಿ ಶೇಷನ )ಸ್ವರೂಪ ಎಂದು ಹೇಳುವರು. ಇದೂ ಸಹ ವಿರಳವಾಗಿ ದೊರೆಯುವುದು. ಆದ್ದರಿಂದ ಬೆಲೆ ಹೆಚ್ಚು. ಈ ರುದ್ರಾಕ್ಷಿ ಧಾರಣೆಯಿಂದ ಹಾವಿನ ಭಯ ಇರುವುದಿಲ್ಲ .ಶರೀರ ಧೃಢವಾಗಿ ಬುದ್ಧಿ ಚುರುಕಾಗುವುದು - ಎಂದು ನಂಬಲಾಗಿದೆ.

🔸 ಅಷ್ಟ ಮುಖಿ ರುದ್ರಾಕ್ಷಿ
ಎಂಟು ಮುಖದ ರುದ್ರಾಕ್ಷಿಯು ಗಣಪತಿಯ ರೂಪವಾಗಿದೆ. ಈ ರುದ್ರಾಕ್ಷಿ ಬಹಳ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಬೇಡಿಕೆ ಜಾಸ್ತಿ ಇರುವುದರಿಂದ, ಬೆಲೆ ಜಾಸ್ತಿ ಈ ರುದಾಕ್ಷಿಯನ್ನು ಧರಿಸುವುದಿಂದ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತದೆ ಮತ್ತು ಸರ್ವ ಸಿದ್ಧಿಯುಂಟಾಗುವುದೆಂಬುದು ಭಕ್ತರ ನಂಬುಗೆ .

🔸 ನವ ಮುಖಿ ರುದ್ರಾಕ್ಷಿ
ಒಂಭತ್ತು ಮುಖದ ರುದ್ರಾಕ್ಷಿಯನ್ನು ಭೈರವ ಮತ್ತು ನವ ದುರ್ಗ ಸ್ವರೂಪ ಎಂದು ತಿಳಿಯಲಾಗುತ್ತದೆ. ಈ ರುದ್ರಾಕ್ಷಿಯೂ ಕೂಡಾ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುವುದು. ಆದ್ದರಿಂದ ಬೆಲೆಯೂ ಹೆಚ್ಚು. ಈ ರುದ್ರಾಕ್ಷಿಯನ್ನು ಧರಸುವುದರಿಂದ ಉತ್ತಮ ಸಂತಾನ ಪ್ರಾಪ್ತಿಯಾಗುವುದೆಂದು ಹೇಳುತ್ತಾರೆ.

🔸 ದಶಮುಖಿ ರುದ್ರಾಕ್ಷಿ
ಹತ್ತುಮುಖದ ಉದ್ರಾಕ್ಷ ಭಗವಾನ್ ನಾರಾಯಣನ ಸ್ವರೂಪೆಂದು ನಂಬುಗೆ. ಈ ರುದ್ರಾಕ್ಷಿ ಧಾರಣೆಯಿಂದ ಇಹದ ಎಲ್ಲಾ ಸೌಲಭ್ಯಗಳೂ ಲಭಿಸುತ್ತದೆ ಮತ್ತುಸದಾ ಸುಖ ಶಾಂತಿ ಇರುತ್ತದೆ ಎಂದು ಹೇಳುತ್ತಾರೆ.

🔸 ಏಕಾದಶ ಮುಖದ ರುದ್ರಾಕ್ಷಿ
ಹನ್ನೊಂದು ಮುಖದ ರುದ್ರಾಕ್ಷಿ ಪರಶಿವನ ರುದ್ರ ಸ್ವರೂಪ (ಏಕಾದಶ ರುದ್ರರು) ಎಂದು ಹೇಳುತ್ತಾರೆ. ಇದೂ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಸಾಮಾನ್ಯವಾಗಿ ಸಂನ್ಯಾಸಿಗಳು, ಯತಿಗಳು, ಸಾಧಕರು ಇದನ್ನು ಧರಿಸುತ್ತಾರೆ. ಯಜ್ಞ ಯಾಗಾದಿಗಳ ಫಲ ಈ ರುದ್ರಾಕ್ಷಿ ಧರಿಸುವುದರಿಂದ ಸಿದ್ಧಿಸುತ್ತದೆ ಎಂದು ನಂಬಿಕೆ ಇದೆ.

🔸 ದ್ವಾದಶ ಮುಖಿ ರುದ್ರಾಕ್ಷಿ
ಹನ್ನೆರಡು ಮುಖದ ರುದ್ರಾಕ್ಷಿ ಭಗವಾನ್ ಸೂರ್ಯನಾರಾಯಣನ ಸ್ವರೂಪವೆಂದು ತಿಳಿಯಲಾಗುತ್ತದೆ (ದ್ವಾದಶಾದಿತ್ಯರು) . ಈ ರುದ್ರಾಕ್ಷಿಯ ಬೆಳೆಯೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ. ಈರುದ್ರಾಕ್ಷಿಯನ್ನು ಧರಿಸುವುದರಿಂದ ಮನುಷ್ಯನಲ್ಲಿ ತೇಜಸ್ಸು ಹೆಚ್ಚುತ್ತದೆ ಹಾಗೂ ಪ್ರಭಾವ ಶಾಲೀ ವ್ಯಕ್ತಿತ್ವವುಂಟಾಗುತ್ತದೆ ಎಂದು ಹೇಳುತ್ತಾರೆ. ಇದರ ಬೆಲೆಯೂ ಹೆಚ್ಚು.

🔸 ತ್ರಯೋದಶಿ ಮುಖಿ ರುದ್ರಾಕ್ಷಿ
ಹದಿಮೂರುಮುಖದ ರುದ್ರಾಕ್ಷಿ ಇಂದ್ರ ದೇವನ ಸ್ವರೂಪ ಎಂದು ಭಾವಿಸುತ್ತಾರೆ. ಈ ರುದ್ರಾಕ್ಷಿಯ ಧಾರಣೆಯಿಂದ ಆತ್ಮ ಶಾಂತಿ ದೊರೆಯು ವುದು ಶಾರೀರಿಕ ಶಾಂತಿ ದೊರೆಯುವುದು.

🔸 ಚತುರ್ದಶ ಮುಖದ ರುದ್ರಾಕ್ಷಿ
ಹದಿನಾಲ್ಕು ಮುಖದ ರುದ್ರಾಕ್ಷಿ ಆಂಜನೇಯನ ಸ್ವರೂಪವೆಂದು ತಿಳಿಯಲಾಗುತ್ತದೆ. ಇದು ಸಹಾ ಕಡಿಮೆ ಪ್ರಮಾಣದಲ್ಲಿ ದೊರೆಯುವುದು. ಈ ರುದ್ರಾಕ್ಷಿ ಧಾರಣೆಯಿಂದ ರೋಗಗಳಿಂದ ಮುಕ್ತಿ ದೊರೆಯುತ್ತದೆ- ಮನುಷ್ಯ ನಿರೂಗಿಯಾಗಿ ಬಲಶಾಲಿಯಾಗುತ್ತಾನೆ ಎಂದು ಹೇಳುತ್ತಾರೆ. ಇದರ ಬೆಲೆಯೂ ಹೆಚ್ಚು.

ಟಿಪ್ಪಣಿ:
ಈ ಹದಿನಾಲ್ಕು ವಿಧದ ರುದ್ರಾಕ್ಷಿಗಳು ಪ್ರಕೃತಿಯಲ್ಲಿ ದೊರೆಯುತ್ತವೆ . ಇಚ್ಛೆಗೆ ಅನುಗುಣವಾಗಿ ಈ ರುದ್ರಾಕ್ಷಿಗಳನ್ನು ಧರಿಸುವುದರಿಂದ ಇಚ್ಛಿತ ಫಲ ದೊರಕುವುದೆಂದು ದೈವ ಭಕ್ತರ ನಂಬುಗೆ ಇದೆ. ಇದಕ್ಕೂ ಹೆಚ್ಚಿನ ಮುಖದ ರುದ್ರಾಕ್ಷಿಗಳು ಸಿಗುವುದು ತುಂಬಾ ವಿರಳ. ಜನಮನ್ನಣೆ ಪೆಡೆರುವುದು ಈ ಹದಿನಾಲ್ಕು ಬಗೆಗಳು ಮಾತ್ರ ಎಂದು ಹೇಳುತ್ತಾರೆ.

ಶಿವಾರ್ಪಣಮಸ್ತು 
(ಸದ್ವಿಚಾರ ಸಂಗ್ರಹ)

“ಸುವರ್ಣ ಮಂತ್ರಾಕ್ಷತೆ

“ಸುವರ್ಣ ಮಂತ್ರಾಕ್ಷತೆ” ಮತ್ತು ಮಹತ್ವಗಳು..!
ಹಣ್ಣಾದರೆ ಪ್ರಸಾದವಾಗಿ ತಿನ್ನಬಹುದು, ಆದರೆ “ಸುವರ್ಣ ಮಂತ್ರಾಕ್ಷತೆ” ಏನು ಮಾಡಬೇಕು..? ಇಲ್ಲಿದೆ ನೋಡಿ ಮಾಹಿತಿ..
“ಸುವರ್ಣ ಮಂತ್ರಾಕ್ಷತೆ” ಯನ್ನು ಬರೀ ಕೈಯಲ್ಲಿ ತೆಗೆದುಕೊಳ್ಳಬಾರದು..!
ತೆಗೆದುಕೊಳ್ಳುವವರು ಪುರುಷರಾದರೆ “ಶಲ್ಯ” ದ ತುದಿಯಿಂದ ತೆಗೆದುಕೊಳ್ಳಬೇಕು..!
“ಹೆಂಗಸರಾದರೆ” “ಸೀರೆಯ” “ಸೆರಗಿನ ತುದಿ” ಯಿಂದ ತೆಗೆದುಕೊಳ್ಳಬೇಕು..!
ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ..!
ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು..!
೧. ಸುವರ್ಣ ಮಂತ್ರಾಕ್ಷತೆಯನ್ನು “ನಗದು” ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನ ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯಲ್ಲಿನ ಸರ್ವದಾರಿದ್ರ್ಯಗಳೂ ನಿವಾರಣೆಯಾಗುತ್ತದೆ..!
೨. ವ್ಯಾಪಾರ-ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟು ಪೂಜಿಸಿದರೆ ಅಧಿಕ ಲಾಭವಾಗಿ ಅಭಿವೃದ್ಧಿ ಆಗುತ್ತದೆ..
೩. ಸುವರ್ಣ ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿ ಪ್ರತಿದಿನ ಇಟ್ಟು ಪೂಜಿಸುತ್ತಿದ್ದರೆ ಆ ಮನೆಯ ಮೇಲೆ ಯಾವುದೇ ದುಷ್ಟಮಂತ್ರಗಳು, ಮಾಟ ಮಂತ್ರಗಳು ಕೆಲಸ ಮಾಡುವುದಿಲ್ಲ..!
೪. ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿ “ಗುರುಚರಿತ್ರೆ” ಪಾರಾಯಣ ಮಾಡಿದರೆ,
ಜಾತಕದಲ್ಲಿನ “ಗುರು” ಗ್ರಹದ ನೀಚತ್ವ ದೋಷ , ಗುರುಶಾಪ, ಗುರುಅಸ್ತದ ದೋಷಗಳು ಪೂರ್ಣ ನಿವಾರಣೆಯಾಗಿ , “ಜಾತಕಸ್ಥರು ಜೀವನದಲ್ಲಿ ಇತ್ತಮವಾದ ನೆಲೆ ಕಂಡುಕೊಳ್ಳುತ್ತಾರೆ..!
೬. ಪ್ರತಿದಿನ ಪೂಜೆ ಮಾಡುವಾಗ ” ಸುವರ್ಣಮಂತ್ರಾಕ್ಷತೆಗೆ” ಪೂಜೆ ಮಾಡಿದರೆ “ಲಕ್ಷ್ಮೀ” ದೇವಿಯ ಪೂರ್ಣ ಅನುಗ್ರಹವಾಗಿ ಸಮಸ್ತ ಸಾಲದಭಾಧೆ ನಿವಾರಣೆಯಾಗುತ್ತದೆ..!
೭. ಸುವರ್ಣ ಮಂತ್ರಾಕ್ಷತೆಯನ್ನು ಬೆಳ್ಳಿಯ ತಾಯತದಲ್ಲಿಟ್ಟು , ಶಾಸ್ತ್ರೋಕ್ತವಾಗಿ ಧರಿಸಿದರೆ ಸಕಲ ಕಾರ್ಯ ದಿಗ್ವಿಜಯವಾಗಿ , ಮನೋಸಂಕಲ್ಪ ನೆರವೇರುತ್ತದೆ..!
೮. ಮನೆ ಕಟ್ಟುವಾಗ, ಬಾವಿ ತೋಡಿಸುವಾಗ, ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ, ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ.. ಬಾವಿಯಲ್ಲಿ ಸಿಹಿಯಾದ ನೀರು ಬರುತ್ತದೆ.
ಈ ಮಂತ್ರಾಕ್ಷತೆಯಿಂದ
ವಿದ್ಯಾರ್ಥಿಗಳಿಗೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ , ವಿದ್ಯಾಭಿವೃದ್ದಿ ಆಗುತ್ತದೆ..!
ಸಕಲ ವ್ಯಾಧಿಗಳು ರೋಗಗಳು ನಿವಾರಣೆಯಾಗುತ್ತದೆ..
ಪ್ರಯಾಣದಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ..
ಮನೆಯಲ್ಲಿನ ಸರ್ವದೋಷಗಳು ನಿವಾರಣೆಯಾಗಿ ಉತ್ತಮವಾದ ಅಭಿವೃದ್ಧಿ ಹೊಂದುತ್ತಾರೆ..
"ಅಕ್ಷತೆ" ಇಲ್ಲದೇ ಆಶೀರ್ವಾದ ಮಾಡಬಾರದು..!
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

ಅನಂತ ಪದ್ಮನಾಭ ವ್ರತ

ಅನಂತ ಪದ್ಮನಾಭ ವ್ರತ
ಭಾದ್ರಪದ ಶುಕ್ಲ ಚತುರ್ದಶಿಯಂದು ಅನಂತ ಚತುರ್ದಶೀ. ಈ ವ್ರತಕ್ಕೆ ಪೂರ್ವಾಹ್ನ ಮುಖ್ಯಕಾಲ. ಆದ್ದರಿಂದ ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ‘ಚತುರ್ದಶೀ’ ತಿಥಿ ದಿನದಂದು ಈ ವ್ರತವನ್ನು ಆಚರಿಸಬೇಕು.
ಮಹಾವಿಷ್ಣುವು ಪದ್ಮನಾಭನಾಗಿ ಅನಂತ (ಸಹಸ್ರ ಹೆಡೆಯ ನಾಗ)ನಲ್ಲಿ ಮಿಲನವಾದ ವ್ರತ ಇದು. ಅಂತ್ಯವಿಲ್ಲದ ಪರಮಾತ್ಮನಲ್ಲಿ ತಮ್ಮ ವೈಯಕ್ತಿಕ ಸುಖಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾ ವ್ರತವನ್ನು ಆಚರಿಸುತ್ತಾರೆ. ಈ ವ್ರತವು ಒಂದು ವೈಯಕ್ತಿಕ ಪೂಜೆಯಾಗಿದೆಯೇ ಹೊರತು ಸಾಮಾಜಿಕ ಮತ್ತು ಧಾರ್ಮಿಕ ಸ್ವರೂಪವಿರುವ ಉತ್ಸವವಲ್ಲ. ವ್ಯಕ್ತಿಗತ ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಿಸುವ ವ್ರತ. ಇದನ್ನು ಮೋಕ್ಷ ವ್ರತ ಎಂದೂ ಕರೆಯುವುದುಂಟು.
ಹದಿನಾಲ್ಕು ಲೋಕಗಳನ್ನು ವ್ಯಾಪಿಸಿರುವವನು ಎಂದು ಪ್ರತಿನಿಧಿಸುವಂತೆ 14 ಎಳೆಗಳನ್ನು ಮಾಡಿ, ಕೇಸರಿ ಅಥವಾ ಕುಂಕುಮ ಲೇಪಿತ ದೋರಕವನ್ನು ಮಾಡಿ, ಕಲಶ ಸಹಿತ ಅನಂತನಿಗೆ ಅರ್ಪಿಸುತ್ತಾರೆ. ಪರಮಾತ್ಮನು ರಂಗಧಾಮ ರೂಪವಾಗಿ ಅವತರಿಸಿದ ದಿನವಿದು. ಶೇಷಶಾಯಿಯಾಗಿ, ನಾಭಿಕಮಲದಲ್ಲಿ ಬ್ರಹ್ಮನನ್ನು ಸೃಷ್ಟಿಸಿ ಜಗತ್ತಿನ ಕಲ್ಯಾಣಕ್ಕಾಗಿ ಅನಂತಪದ್ಮನಾಭನೆಂಬ ಹೆಸರಿನಿಂದ ತನ್ನ ಮಹಿಮೆ ತೋರಿಸುವ ದೇವ-ದೇವನನ್ನು ಈ ದಿನ ವಿಶೇಷ ರೀತಿಯಲ್ಲಿ ಪೂಜಿಸಬೇಕು. ಪೂಜೆಯ ನಂತರ ಅನಂತರ ದಾರಗಳೆಂಬ ರಕ್ಷಾಸೂತ್ರಗಳನ್ನು ಕೈಗೆ ಕಟ್ಟಿಕೊಳ್ಳಬೇಕು. ಪುರುಷರು ಬಲಗೈಯಲ್ಲಿ, ಸ್ತ್ರೀಯರು ಎಡಗೈಯಲ್ಲಿ ಪವಿತ್ರವಾದ ಕುಂಕುಮಲೇಪಿತ 14 ಗಂಟುಗಳ್ಳುಳ್ಳ ಹತ್ತಿಯ ಅಥವಾ ರೇಷ್ಮೆಯ ದಾರವನ್ನು ಕಟ್ಟಿಕೊಳ್ಳುವರು.
ವ್ರತಾಚರಣೆಯ ದಿನ ಮುಂಜಾನೆ ಎದ್ದು ಮನೆಯನ್ನೆಲ್ಲಾ ಶುದ್ಧಿ ಮಾಡಿ, ರಂಗೋಲಿ ಇಟ್ಟು ದೇವರ ಬಲಭಾಗದಲ್ಲಿ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ವ್ರತವನ್ನು ಆಚರಿಸಬೇಕು. ಮಂಟಪವನ್ನು ಕಟ್ಟಿ ಅಷ್ಟದಳ ಪದ್ಮವನ್ನು ಬರೆದು ಅಕ್ಕಿಯನ್ನು ಹರಡಿ ಪೂರ್ವಾಭಿಮುಖವಾಗಿ ಕಲಶವನ್ನು ಸ್ಥಾಪಿಸಬೇಕು. ಈ ವ್ರತವನ್ನು 14 ವರ್ಷಗಳ ಕಾಲ ನಡೆಸಿ, ನಂತರ ಉದ್ಯಾಪನೆ ಮಾಡಬೇಕು. ಅನಂತನ ವ್ರತದಿಂದ ಯಜಮಾನನಿಗೆ ಅನಂತ ಸೌಭಾಗ್ಯ, ಅನಂತ ಕೀರ್ತಿ, ಅನಂತ ಸಂಪತ್ತು, ಅನಂತ ಸೌಖ್ಯ, ಸತ್ಸಂತಾನ ಮುಂತಾದವು ಲಭಿಸುತ್ತದೆಂದು ಹೇಳುವರು. ಆರಂಭದಲ್ಲಿ ಯಮುನಾಪೂಜೆ ಈ ವ್ರತದ ಇನ್ನೊಂದು ವಿಶೇಷ. ನದಿ, ತಟಾಕ, ಬಾವಿ, ಕೆರೆ ಮುಂತಾದ ಪ್ರದೇಶದಿಂದ ಕಲಶದಲ್ಲಿ ನೀರು ತುಂಬಿ, ಅದನ್ನು ಪೂಜಿಸಿ, ಇದೇ ನೀರನ್ನು ಕಲಶಕ್ಕೆ ಹಾಕಿ ಪೂಜಿಸಿ ಧ್ಯಾನಿಸಬೇಕು.
ಈ ವ್ರತವನ್ನು ವನವಾಸದಲ್ಲಿರುವ ಪಾಂಡವರಿಗೆ ಶ್ರೀಕೃಷ್ಣನು ಹೇಳಿ, ಧರ್ಮರಾಜನಿಂದ ಈ ವ್ರತವನ್ನು ಮಾಡಿಸಿದನೆಂದೂ, ಅದೇ ಮುಂದೆ ಅವನ ವಿಜಯಕ್ಕೆ ಕಾರಣವಾಯಿತೆಂದೂ ಹೇಳಲಾಗುತ್ತದೆ. ಅಗಸ್ತ್ಯ ಮಹರ್ಷಿಗಳಿಂದ ಆಚರಿಸಲ್ಪಟ್ಟ ಈ ವ್ರತವನ್ನು ಜನಕ, ಸಗರ, ದಿಲೀಪ, ಹರಿಶ್ಚಂದ್ರ ಭರತಾದಿಗಳೂ ಆಚರಿಸಿ ಅದರ ಪ್ರಭಾವದಿಂದ ರಾಜ್ಯವನ್ನು ಸುಖದಿಂದ ಪರಿಪಾಲಿಸಿ ಖ್ಯಾತರಾದರು. 
ಅನಂತನ ವ್ರತದ ಕಥೆ: ಅರಣ್ಯವಾಸ ಮಾಡುತ್ತಿರುವ ಧರ್ಮ, ಭೀಮ, ಅರ್ಜುನ, ನಕುಲ, ಸಹದೇವರು ಅತ್ಯಂತ ಕಷ್ಟಪಡುತ್ತಿರುವಾಗ, ಅಲ್ಲಿಗೆ ಬಂದ ಮಹಾನುಭಾವನಾದ ಶ್ರೀಕೃಷ್ಣನಿಗೆ ವಂದಿಸಿ ಯುಧಿಷ್ಠಿರನು, “ಎಲೈ ಕರುಣಾಮೂರ್ತಿಯೇ! ನನ್ನ ತಮ್ಮಂದಿರೊಡಗೂಡಿ ನಾನು ವನವಾಸದಿಂದ ಅತ್ಯಂತ ದುಃಖವನ್ನು ಅನುಭವಿಸುತ್ತಿದ್ದೇನೆ. ಈ ದುಃಖವೆಂಬ ಸಾಗರವನ್ನು ಹೇಗೆ ದಾಟವೆನೋ ಹೇಳಬೇಕು” ಎನ್ನಲು, ಶ್ರೀಕೃಷ್ಣನು “ಧರ್ಮರಾಯನೇ ಪುರುಷರಿಗೂ ಸ್ತ್ರೀಯರಿಗೂ ಸಕಲ ಕಾಮ್ಯಸಿದ್ಧಿ ಕೊಡುವ ಅನಂತವ್ರತವೆಂಬ ಒಂದು ವ್ರತವುಂಟು. ಈ ವ್ರತವನ್ನು ಭಾದ್ರಪದ ಮಾಸದಲ್ಲಿ ಶುಕ್ಲಪಕ್ಷದ ಚತುರ್ದಶಿಯಲ್ಲಿ ಮಾಡತಕ್ಕದ್ದು” ಎಂದು ಹೇಳಲು ಧರ್ಮರಾಯನು ಆ ವ್ರತದ ಕಥೆಯನ್ನು ಕೇಳಲು ಇಚ್ಛಿಸಲಾಗಿ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ ವ್ರತದ ಕಥೆಯನ್ನು ಹೇಳುತ್ತಾನೆ.
ಕೃತಯುಗದಲ್ಲಿ ಸುಮಂತನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನು ವಸಿಷ್ಠ ಗೋತ್ರೋತ್ಪನ್ನನು, ಅಧ್ಯಯನ ಶಾಸ್ತ್ರ ಸಂಪನ್ನನು ಆಗಿದ್ದನು. ಆತನು ಭೃಗುಋಷಿಗಳ ಮಗಳಾದ ದೀಕ್ಷೆ ಎಂಬ ಕನ್ನಿಕೆಯನ್ನು ವಿವಾಹವಾದನು. ದೀಕ್ಷಾದೇವಿಯ ಗರ್ಭದಲ್ಲಿ ಒಳ್ಳೆಯ ಗುಣವುಳ್ಳ ಒಬ್ಬ ಕನ್ನಿಕೆ ಜನಿಸಿದಳು. ಆಕೆಗೆ ಶೀಲೆ ಎಂದು ನಾಮಕರಣವಾಯಿತು. ದೀಕ್ಷಾದೇವಿಯು ತಾಪಜ್ವರದಿಂದ ಸ್ವರ್ಗಲೋಕಗೈದಳು. ಆಗ ಸುಮಂತನು ಅಗ್ನಿಹೋತ್ರಾದಿ ಕರ್ಮಗಳಿಗೆ ಲೋಪವಾಗಬಾರದೆಂಬ ಕಾರಣಕ್ಕಾಗಿ ಕರ್ಕಶಿ ಎಂಬ ಹೆಸರುಳ್ಳ ಕನ್ನಿಕೆಯನ್ನು ಲಗ್ನ ಮಾಡಿಕೊಂಡನು. ಕಠಿಣ ಚಿತ್ತಳಾದ ಕರ್ಕಶಿಯು ಕೋಪಿಷ್ಠಳಾಗಿ, ಕಲಹಕಾರಿಣಿಯಾಗಿಯೂ ಇದ್ದಳು. ಶೀಲೆಯು ವಿವಾಹಯೋಗ್ಯಳಾದೊಡನೆ, ಸುಮಂತನು ಕೌಂಡಿನ್ಯ ಮಹಾಮುನಿಗಳ ತಪೋಮಹಿಮೆಯನ್ನು ಕಂಡು ಕೌಂಡಿನ್ಯರಿಗೆ ಮಗಳನ್ನಿತ್ತು ವಿವಾಹ ಮಾಡಿದನು. ಆಗ ವಿವಾಹವನ್ನೆಲ್ಲಾ ಮಾಡಿ ಪಾರಿತೋಷಕಾರ್ಥವಾಗಿ ವಿವಾಹ ಕಾಲದಲ್ಲಿ ಅಳಿಯನಿಗೆ ಕೊಡತಕ್ಕ ವಸ್ತ್ರಾಭರಣಗಳನ್ನು ಕೊಂಚ ಕೊಡಬೇಕೆಂದು ಕಠಿಣಚಿತ್ತಳಾದ ತನ್ನ ಪತ್ನಿಯನ್ನು ಕೇಳಿದಾಗ, ಆಕೆಯು ಕೊಡಲು ಏನೂ ಇಲ್ಲ ಎಂದಳು. ಚಿಂತಿಸಿದ ಸುಮಂತನು, ಮದುವೆಗೆ ಮಾಡಿದ ಮಿಕ್ಕ ಹಿಟ್ಟನ್ನು ಕೊಟ್ಟು ಅಳಿಯ ಮಗಳನ್ನು ಕಳುಹಿಸಿದನು. ಕೌಂಡಿನ್ಯನು ಸದಾಚಾರ ಸಂಪತ್ತುಳ್ಳ ಶೀಲೆಯೊಡನೆ ಬಂಡಿಯಲ್ಲಿ ಕುಳಿತು ತಮ್ಮ ಆಶ್ರಮಕ್ಕೆ ಹೊರಟರು. ಮಾರ್ಗಮಧ್ಯದಲ್ಲಿ ಒಂದು ನದೀ ತೀರದಲ್ಲಿ ಬಂಡಿಯನ್ನು ನಿಲ್ಲಿಸಿ, ಮಧ್ಯಾಹ್ನವಾದ್ದರಿಂದ ಮಾಧ್ಯಾಹ್ನಿಕವನ್ನು ಮಾಡುವುದಕ್ಕಾಗಿ  ಕೌಂಡಿನ್ಯರು ನದಿಯ ಕಡೆಗೆ ಹೊರಟರು.
ಆ ದಿವಸವು ಅನಂತಪದ್ಮನಾಭ ಚತುರ್ದಶಿಯಾದುದರಿಂದ ಕೆಂಪು ಸೀರೆಗಳನ್ನುಟ್ಟುಕೊಂಡು ಅನೇಕ ಮಂದಿ ಸ್ತ್ರೀಯರು ಅತಿಭಕ್ತಿಯಿಂದ ಬೇರೆಬೇರೆಯಾಗಿ ಅನಂತಪದ್ಮನಾಭ ಸ್ವಾಮಿಯನ್ನು ಪೂಜೆ ಮಾಡುತ್ತಿರಲಾಗಿ, ಕೌಂಡಿನ್ಯರ ಸತಿಯಾದ ಶೀಲೆಯು ಅವರನ್ನು ಕಂಡಳು. ಅವರ ಸಮೀಪಕ್ಕೆ ಹೋಗಿ “ಮಾತೆಯರೆ, ನೀವು ಮಾಡುತ್ತಿರುವ ಪೂಜೆ ಎಂಥಾದ್ದು? ಯಾವ ದೇವರನ್ನು ಪೂಜಿಸುತ್ತಿದ್ದೀರಿ? ಇದರ ಹೆಸರೇನು? ನನಗೂ ಹೇಳಬೇಕೆಂದು” ಕೇಳಿದಳು. ಆ ಸ್ತ್ರೀಯರು, “ನಾವು ಅನಂತನನ್ನು ಪೂಜಿಸುತ್ತಿರುವೆವು. ಇಂದು ಭಾದ್ರಪದ ಶುಕ್ಲ ಚತುರ್ದಶಿ. ಇಂದು ಮಹಾವಿಷ್ಣುವನ್ನುಅನಂತ ಮತ್ತು ಯಮುನೆಯರೊಡನೆ ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ನೆರವೇರುವುವು” ಎಂದು ಹೇಳಿದರು. ಸಂತಸಗೊಂಡ ಶೀಲೆಯು ಅವರ ಸಹಾಯದಿಂದ ವ್ರತವನ್ನು ಮಾಡಿ ಅನಂತನದಾರವನ್ನು ಕೈಗೆ ಕಟ್ಟಿಕೊಂಡು ದಾರಿಯಲ್ಲಿ ಆಹಾರಕ್ಕಾಗಿ ತಂದಿದ್ದ ಹಿಟ್ಟನ್ನು ಬ್ರಾಹ್ಮಣರಿಗೆ ಕೊಟ್ಟು, ಪತಿಗೆ ಸ್ವಲ್ಪ ಆಹಾರವನ್ನು ಕೊಟ್ಟು, ಉಳಿದ ಸ್ವಲ್ಪವನ್ನು ತಾನು ಭುಂಜಿಸಿ ಸಂತುಷ್ಟಳಾಗಿ ತನ್ನ ಪತಿಯೊಡನೆ ಆಶ್ರಮಕ್ಕೆ ತೆರಳಿದಳು. ಆಶ್ರಮಕ್ಕೆ ಹೋದ ತಕ್ಷಣವೇ ಅನಂತಸ್ವಾಮಿಯ ಅನುಗ್ರಹದಿಂದ ಅನಂತವಾದ, ಸರ್ವೋತ್ತಮವಾದ, ಲೋಕಸಮ್ಮತವಾದ ಅಷ್ಟೈಶ್ವರ್ಯಂಗಳು ವ್ರತಮಹಿಮೆಯಿಂದ ಉಂಟಾದವು. ಕೌಂಡಿನ್ಯ ಮಹಾಮುನಿಯ ಆಶ್ರಮವು ಸಕಲೈಶ್ವರ್ಯಗಳಿಂದಲೂ ಧನಧಾನ್ಯಗಳಿಂದಲೂ ಅತಿಥಿ ಸತ್ಕಾರದಿಂದ ಕೂಡಿ ಅಧಿಕವಾಗಿ ಪ್ರಕಾಶಿಸಿತು. ಶೀಲೆಯು ಸಕಲ ದಿವ್ಯಾಭರಣಗಳನ್ನು ಧರಿಸಿದವಳಾಗಿ ಸಾವಿತ್ರಿಗೆ ಸಮಾನಳಾದಳು. ಇದನ್ನು ನೋಡಿದ ಬಂಧುಗಳು ಅನಂತಪದ್ಮನಾಭನ ಅನುಗ್ರಹದಿಂದ ಈಕೆ ಇಷ್ಟು ಸಂತೋಷದಿಂದಿರಬಹುದೆಂದು ಹೇಳಿಕೊಳ್ಳುತ್ತಿದ್ದರು. 
ಹೀಗಿರಲು ಒಮ್ಮೆ, ಕೌಂಡಿನ್ಯರು ಪತ್ನಿಯ ಕೈಯಲ್ಲಿದ್ದ ಕೆಂಪು ದಾರವನ್ನು ನೋಡಿ, ಅದು ಏನೆಂದು ವಿಚಾರಿಸಲು, ಆಕೆಯು ಅನಂತನ ವ್ರತದ ವಿಚಾರವನ್ನು ತಿಳಿಸಿ, ವ್ರತದ ಫಲವಾಗಿ, ಸ್ವಾಮಿಯ ಅನುಗ್ರಹದಿಂದ  ತಮಗೆ ಧನಧಾನ್ಯ ಐಶ್ವರ್ಯಗಳು ಉಂಟಾಗಿವೆ ಎನ್ನಲು, ಕೋಪಗೊಂಡ ಕೌಂಡಿನ್ಯರು ತಮಗೆ ದೊರಕಿರುವ ಸಕಲ ಧನಧಾನ್ಯವೂ ತಮ್ಮ ಸಾಧನೆಯ ಫಲವೆಂದು ನುಡಿದು, ಪತ್ನಿಯ ಕೈಯಲ್ಲಿದ್ದ ದಾರವನ್ನು ಕಿತ್ತು ಹತ್ತಿರದಲ್ಲಿದ್ದ ಬೆಂಕಿಗೆ ಹಾಕುತ್ತಾರೆ. ಶೀಲೆಯು ತಕ್ಷಣ ಭಯದಿಂದ ಓಡಿಬಂದು ದಾರವನ್ನು ತೆಗೆದು ಹಾಲಿನಲ್ಲಿ ಹಾಕಿ ರಕ್ಷಿಸಿದಳು. ಕೌಂಡಿನ್ಯರ ಈ ಕರ್ಮಪರಿಪಾಕದಿಂದ ಅವರ ಐಶ್ವರ್ಯವು ದಿನೇ ದಿನೇ ನಶಿಸಿ ಹೋಯಿತು. ಕಳ್ಳರು ಐಶ್ವರ್ಯವನ್ನು ಕದ್ದೊಯ್ದರು. ತಾವು ಮಾಡಿದ ವ್ರತದ ದೂಷಣೆಯೇ ಇದಕ್ಕೆ ಕಾರಣವೆಂದು ಅರಿತು, ನೊಂದ ಕೌಂಡಿನ್ಯರು ಅನಂತನಿಗಾಗಿ  ಕಾಡಿನಲ್ಲಿ ಅಲೆದಾಡಿ ಹುಡುಕಾಟ ನಡೆಸುತ್ತಾರೆ. ಅವರ ನಿಷ್ಠೆಗೆ ಮೆಚ್ಚಿದ ಅನಂತನು ಅವರಿಗೆ ಕಾಣಿಸಿಕೊಂಡು ಅವರನ್ನೂ ಆಶೀರ್ವದಿಸುತ್ತಾನೆ.  ನಂತರ ಕೌಂಡಿನ್ಯರು ಅನಂತ ವ್ರತವನ್ನಾಚರಿಸಿ ಅದರ ಪ್ರಭಾವದಿಂದ ಇಹಲೋಕದಲ್ಲಿ ಸಕಲ ಇಷ್ಟಾರ್ಥಗಳನ್ನೂ, ಸಕಲ ಸಂಪತ್ತನ್ನೂ ಅನುಭವಿಸಿ, ಪರದಲ್ಲಿ ಮೋಕ್ಷವನ್ನೂ  ಹೊಂದಿ ಈಗಲೂ ಉಡುರಾಶಿಗಳ ಮಧ್ಯದಲ್ಲಿ ಪುನರ್ವಸು ನಕ್ಷತ್ರವಾಗಿ ಪ್ರಕಾಶಿಸುತ್ತಿದ್ದಾರೆ.
ಭವಿಷ್ಯೋತ್ತರ ಪುರಾಣದ ಈ ಕಥೆಯಿಂದ ಅನಂತಪದ್ಮನಾಭ ಸ್ವಾಮಿಯ ಮಹಾತ್ಮೆಯನ್ನು ಅರಿಯಬಹುದು. ಒಟ್ಟಾರೆ ಅಲ್ಪಾಯಾಸದಿಂದ ಅಲ್ಪನೂ ಕಲ್ಪನಾಗುವ ವ್ರತವೇ ಅನಂತಪದ್ಮನಾಭ ವ್ರತ ಎನ್ನಬಹುದು.

ಶ್ರೀಕೃಷ್ಣಾರ್ಪಣಮಸ್ತು

ಪುತ್ತೂರು

ಪಟ್ಟಣಕ್ಕೆ ಪುತ್ತೂರು ಎಂದು ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಮುಖ ದೇವಾಲಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಈ ಪಟ್ಟಣದ ಹೆಸರಿಗೂ ನಂಟಿದೆ. ಪುತ್ತೂರು ಹಿಂದೆ "ಬಂಗ" ವಂಶದ ಅರಸರ ರಾಜಧಾನಿಯಾಗಿತ್ತು. ಹಿಂದೆ ಈ ದೇವಾಲಯ ಹಿಂಭಾಗದಲ್ಲಿ ಭಾರೀ ದೊಡ್ಡ ಕೆರೆಯನ್ನು ಮಾಡಲಾಗಿತ್ತು. ಆದರೆ, ಅದರ ಆಳ ಎಷ್ಟೇ ಆದರೂ ನೀರು ದೊರಕಲೇ ಇಲ್ಲ. ಇದಕ್ಕಾಗಿ ದೇವಾಲಯದ ಆಡಳಿತ ವರ್ಗ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದರು. ಜನರೆಲ್ಲರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ. ಸೇರಿದ ಜನರೆಲ್ಲ ಎದ್ದು ಹೊರಗೆ ಓಡಿದರು. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳೇ ಮುತ್ತುಗಳಾಗಿ ಬೆಳೆದವಂತೆ. ಮುತ್ತುಗಳು ಬೆಳೆದ ಊರು -"ಮುತ್ತೂರು" ಎಂದಾಗಿ, ಕ್ರಮೇಣ ಜನರ ಬಾಯಲ್ಲಿ "ಪುತ್ತೂರು" ಎಂದಾಯಿತೆಂದು ಪ್ರತೀತಿ.

ಒಂದು ಸಿದ್ಧಾಂತದ ಪ್ರಕಾರ, ಪುತ್ತೂರು ಹೆಸರು ಕನ್ನಡ ಭಾಷೆಯ "ಮುತ್ತು" ಮುತ್ತೂರು ಎಂದಾಗಿತ್ತು ಮತ್ತು ನಂತರ ನಿಧಾನವಾಗಿ ಇದು ತಾನಾಗಿಯೇ ಪುತ್ತೂರು ಎಂಬ ಹೆಸರಾಗಿ ಪ್ರಚಲಿತಕ್ಕೆ ಬಂದಿದೆ.ಶತಮಾನಗಳ ಹಿಂದೆ ಬರದ ಸಮಯದಲ್ಲಿ ಆರ್ಚಕರಿಗೆ ಮಹಾಲಿಂಗೇಶ್ವರ ದೇಗುಲದ ಪವಿತ್ರ ಕೊಳದಲ್ಲಿ ಅಕ್ಕಿಯು ಪ್ರಸಾದ ರೂಪದಲ್ಲಿ ದೊರಕಿತ್ತು ಮತ್ತು ಇದಕ್ಕಿದ್ದಂತೆ ಎಲ್ಲಾ ಮೂಲೆಯಿಂದ ನೀರು ಬರಲು ಆರಂಭಿಸಿ ಈ ಅಕ್ಕಿ ಮುತ್ತಾಗಿ ಪರಿವರ್ತನೆಯಾಯಿತು ಎಂಬ ನಂಬಿಕೆ ಇಲ್ಲಿದೆ.

ಇತರ ಸಿದ್ಧಾಂತದ ಪ್ರಕಾರ ತುಳು ಭಾಷೆಯ ಪುತ್ತದಿಂದ ಪುತ್ತೂರು ಹೆಸರು ಬಂತು. ಪುತ್ತ ಎಂದರೆ ಕನ್ನಡದ ಹುತ್ತ, ಅಂದರೆ ಹಾವುಗಳು/ಇರುವೆಗಳು ಇರುವ ಮಣ್ಣಿನ ಗೂಡು.

ಸದಾ ಸುದ್ದಿಯಲ್ಲಿರುವ ಈ ದೇವಾಲಯದ ಇತಿಹಾಸ, ಈ ದೇವಾಲಯಕ್ಕು ಊರಿನ ಹೆಸರಿಗೂ ಇರೋ ನಂಟಿನ ಬಗ್ಗೆ ಇಲ್ಲಿ ತಿಳಿಸಿದ್ದೇವೆ!

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ!
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು. ಈ ದೇವಸ್ಥಾನದ ಸುತ್ತಮುತ್ತ ಆನೆ ಬರೋ ಹಂಗಿಲ್ಲ . ಒಂದು ವೇಳೆ ಅಪ್ಪಿ-ತಪ್ಪಿ ಬಂದಲ್ಲಿ ಅವುಗಳಿಗೆ ಸಾವು ಖಚಿತವಂತೆ..! ಹಾಗೊಂದು ಪ್ರತೀತಿ ಇದೆ..! ಇದಕ್ಕೊಂದು ಐತಿಹಾಸಿಕ ಕತೆಯಿದೆ.!.ಒಂದ್ಸಲ ಗೋವಿಂದ ಭಟ್ಟರು ಅನ್ನೋ ಬ್ರಾಹ್ಮಣರು ಪೂಜೆ ಮಾಡಲೆಂದು ಒಂದು ಶಿವಲಿಂಗವನ್ನು, ಈಗ ದೇವಸ್ಥಾನ ಇರುವ ಜಾಗದಲ್ಲಿ ಮರೆತು ನೆಲದ ಮೇಲಿಟ್ಟರಂತೆ. ಭೂಸ್ಪರ್ಶವಾದ ಶಿವಲಿಂಗವು ಎಷ್ಟೇ ಎಳೆದರೂ ಮೇಲೇಳಲಿಲ್ಲ..! ಆಗ ಏನೂ ತೋಚದೆ ಶಿವಲಿಂಗವನ್ನು ಎಳೆಯಲು ಆನೆಯನ್ನು ಕರೆಸ್ತಾರಂತೆ..! ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದಂತೆ ಶಿವಲಿಂಗವೇ ದೊಡ್ಡದಾಗ್ತಾ ಹೋಯ್ತಂತೆ..! ಆ ಮಹಾಲಿಂಗಲವೇ ಈಗ ಪೂಜಿಸಲ್ಪಡುವ ಮಹಾಲಿಂಗೇಶ್ವರ..! ಸಿಕ್ಕಾಪಟ್ಟೆ ಜೋರಾಗಿ, ರಭಸದಿಂದ ಶಿವಲಿಂಗವನ್ನು ಎಳೆಯುತ್ತಿದ್ದ ಆನೆ ಛಿದ್ರಛಿದ್ರವಾಗಿ ಎಲ್ಲಾಯ್ತಾ ಅಲ್ಲಿ, ದೂರ ದೂರವಾಗಿ ಎಸೆಯಲ್ಪಟ್ಟಿತು..! ಅದರ ಒಂದೊಂದು ಅಂಗ ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿದ್ದಂತೆ..! ಕೊಂಬು ಬಿದ್ದೆಡೆ ಕೊಂಬೆಟ್ಟು, ತಲೆ ಬಿದ್ದೆಡೆ ತಾಳೆಪಾಡಿ,, ಕೈ ಬಿದ್ದಡೆ ಕೇಪಳ, ಬಾಲ ಬಿದ್ದ ಕಡೆಯಲ್ಲಿ ಬೀದಿಮಜಲು ಎಂದು ಹೆಸರಾಯಿತಂತೆ..! ಈ ಪವಾಡವನ್ನು ಕಂಡ, ಅಂದಿನ ಪುತ್ತೂರನ್ನು ಆಳುತ್ತಿದ್ದ ಬಂಗರಾಜ ದೇವರಿಗೆ ಗುಡಿ ಕಟ್ಟಿಸಿದ್ನಂತೆ..!
ಮಹಾಲಿಂಗೇಶ್ವರ ಗುಡಿಯ ಎದುರು ಮೂರು ಕಾಲುಗಳ್ಳುಳ್ಳ ನಂದಿ ಇದೆ..!.ಈ ನಂದಿಗೂ ಒಂದು ಕಥೆ ಇದೆ. ರೈತರು ಹೊಲದಲ್ಲಿ ಬೆಳೆದಿದ್ದ ಪೈರನ್ನು ಒಂದು ಬಸವ ದಿನಾಲೂ ಬಂದು ಹಾಳು ಮಾಡ್ತಿತ್ತಂತೆ..! ಒಂದು ದಿನ ರೈತ ಕಾದು ಕುಳಿತು ಬಸವನ ಕಾಲಿಗೆ ಹೊಡೆದ ರಭಸಕ್ಕೆ ಕಾಲು ಮುರಿತಂತೆ..! ಮೂರು ಕಾಲುಗಳಲ್ಲಿ ಅಳುತ್ತಾ ಮಹಾಲಿಂಗೇಶ್ವರನ ಮುಂದೆ ಬಂದ ಬಸವನಿಗೆ, ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ ಬದಲಾಗಿ ನನ್ನ ಜೊತೆಗೆ ನಿನ್ನನ್ನೂ ಪೂಜಿಸುವಂತಾಗಲಿ ಎಂದು ಕಲ್ಲಾಗಿ ಮಾಡ್ತಾನೆ ಮಾಹಾಲಿಂಗೇಶ್ವರ..! ಮಹಾಲಿಂಗೇಶ್ವರನ ಎದುರು ಇರುವ ನಂದಿಗೆ ಒಂದು ಕಾಲು ಮುರಿದುಹೋದುದನ್ನು ಈಗಲೂ ಕಾಣುತ್ತೇವೆ,..! ಮುರಿದ ಕಾಲು ಈಗಲೂ ಕಲ್ಲಾಗಿ ಹೊಲದ ಮಧ್ಯೆ ಇದೆ ಎಂದು ಅಂತ ಜನ ನಂಬಿದ್ದಾರೆ..!
ಆಮೇಲೆ ಶಾಸ್ತ್ರೋಕ್ತವಾಗಿ ಪೂಜಾವಿಧಿವಿಧಾನಗಳೊಂದಿಗೆ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಮಣ್ಯ, ಗಣೇಶ ಹಾಗೂ ದೈವಗಳನ್ನು ಪ್ರತಿಷ್ಟಾಪಿಸಲಾಯ್ತು..!. ದೇವಾಲಯದ ಮುಂದೆ ನಾಗ, ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಗಳನ್ನು ಕಟ್ಟಿ ಪೂಜಿಸಲಾಯಿತು.
ದೇವಾಲಯದ ಹಿಂದೆ ನಿತ್ಯ ಹರಿದ್ವರ್ಣದ ಕೆರೆಯೊಂದಿದೆ. ಕಾರ್ತೀಕ ಮಾಸದಲ್ಲಿ ದೇವಸ್ಥಾನ, ಕೆರೆಯ ಸುತ್ತಲೂ ದೀಪಗಳನ್ನು ಹಚ್ಚಿ ಲಕ್ಷದೀಪೋತ್ಸವ ನಡೆಸುತ್ತಾರೆ. ಈ ಕೆರೆಯಲ್ಲಿ ಹಿಂದೆ ಮುತ್ತು ಬೆಳೆಯುತ್ತಿತ್ತಂತೆ ನಂಬಿಕೆಯೂಂದು ಇದೆ..! ಈ ಮುತ್ತಿಗೊಂದು ಇನ್ನೊಂದು ಕತೆಯಿದೆ. ದೇವಾಲಯದ ಹಿಂದೆ ಕೆರೆ ನಿರ್ಮಾಣ ಮಾಡ್ತಾ ಇರ್ವಾಗ ಎಷ್ಟೇ ಆಳ ಅಗೆದರೂ ನೀರು ಬರ್ಲಿಲ್ವಂತೆ..! ಅದಕ್ಕೆ ವರುಣನ ಪೂಜೆಗೈದು ಬ್ರಾಹ್ಮಣರಿಗೆ ಕೆರೆಯಲ್ಲಿ ಅನ್ನಸಂತರ್ಪಣೆ ಮಾಡಿದ್ರಂತೆ..! ಆಗ ಬ್ರಾಹ್ಮಣರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರೂ ತುಂಬಲಾರಂಭಿಸಿದಾಗ ಅವರು ಊಟ ಬಿಟ್ಟು ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳು ಮುತ್ತಾಗಿ ಪರಿವರ್ತನೆಗೊಂಡವಂತೆ. ಮುತ್ತು ಸಿಗೋ ಊರು ಮುತ್ತೂರು ಮುತ್ತೂರಾಯ್ತು..!. ಕಾಲಕಳೆದಂತೆ ಮುತ್ತೂರು ಪುತ್ತೂರಾಯ್ತು..!
ಹೀಗೆ ತನ್ನದೇ ಆದ ಇತಿಹಾಸವನ್ನು ಹೊಂದಿರುವ ದೇವಾಲಯ ಪುತ್ತೂರು ಮಹಾಲಿಂಗೇಶ್ವರ ಜಾತ್ರ ಮಹೋತ್ಸವ ಪ್ರತಿವರ್ಷ ಏಪ್ರಿಲ್ 10 ರಿಂದ 20 ರವರೆಗೆ ನಡೆಯುತ್ತೆ ರಥೋತ್ಸವ
ಪ್ರತಿ ವರ್ಷ ಏಪ್ರಿಲ್ 17 ರಂದು, ಪುನರ್ ಪ್ರತಿಷ್ಠಾಪನ ಉತ್ಸವ ಪ್ರತಿ ವರ್ಷ ಮೇಷ ಮಾಸ 30 ರಂದು ವಿಜ್ರುಂಭಣೆಯಿಂದ ನಡೆಯುತ್ತೆ.
ಜಾತ್ರೆ, ರಥೋತ್ಸವವಲ್ಲದೇ, ನಾಗರ ಪಂಚಮಿ (ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು) ,ಕದಿರು(ತೆನೆಉತ್ಸವ) ನಡೆಯುವುದು.ಗಣೇಶ ಚತುರ್ಥಿಯಂದು 108 ಕಾಯಿ ಗಣಹೋಮ ಜರಗಿ ನಂತರ ಮದ್ಯಾಹ್ನ ಮಹಾಪೂಜೆ ಜರಗುವುದು. ಅಶ್ವಯುಜ ಶುಕ್ಲ ಪಕ್ಷದ ಪಾಡ್ಯ ತಿಥಿಯಿಂದ ನವಮಿ ತಿಥಿಯವರೆಗೆ ದುರ್ಗಾದೇವಿಗೆ ವಿಶೇಷ ಪೂಜೆ (ನವರಾತ್ರಿ),

ದೀಪಾವಳಿಯ ಬಲೀಂದ್ರ ಹಾಕುವುದು: ಅಶ್ವಯುಜ ಅಮವಾಸ್ಯೆ ತಿಥಿಯಂದು ಮಿದಲ್ಗೊಂಡು ದಿನಂಪ್ರತಿ ಹೊತ್ತು ಪೂಜೆ ಬಲಿ ಉತ್ಸವವು ಪತ್ತನಾಜೆವರೆಗೆ (ಮೇ ಅಂತ್ಯದವರೆಗೆ) ಜರಗುವುದು.
ಪೂಕರೆ ಉತ್ಸವ: ಕಾರ್ತಿಕ ಮಾಸದ ಹಸ್ತನಕ್ಷತ್ರದ ದಿವಸ ನಡೆಯುವುದು.
ಲಕ್ಷದೀಪೋತ್ಸವ: ಕಾರ್ತಿಕ ಮಾಸದ ಅಮವಾಸ್ಯೆ ದಿನ ರಾತ್ರಿ ಉತ್ಸವ ನಡೆಯುತ್ತದೆ. ಮಕರ ಸಂಕ್ರಮಣದಂದು ಕುಂಭಾಬಿಷೇಕ, ಕನಕಾಭಿಷೇಕ, ಶಿವರಾತ್ರಿ ದಿನದಂದು ಉತ್ಸಹ ಹಾಗೂ ಕೆರೆಯಲ್ಲಿ ವಿಶೇಷವಾಗಿ ತೆಪ್ಪೋತ್ಸವ ವಿಜ್ರಂಭಣಯಿಮ್ದ ಜರಗುತ್ತದೆ. ಬೆಳಗ್ಗಿನ ತನಕ ಭಜನೆ ಹಾಗೂ ಜಾಗರಣೆ ಭಕ್ತಾಧಿಗಳು ನೆರೆವೇರಿಸುತ್ತಾರೆ.
ಶ್ರೀ ದೇವಾಸ್ಥಾನದಲ್ಲಿ ವಾಷಿಕ ಜಾತ್ರೆಯು ಪ್ರತೀ ವರ್ಷ ಎಪ್ರಿಲ್ 10 ರಿಂದ 20ರ ತನಕ ಜರಗುತ್ತದೆ. ವಿಶೇಷವಾಗಿ ಎ.16 ರಂದು ಬಲ್ನಾಡು ದಂಡುನಾಯಕ ಉಳ್ಳಾಲ್ತಿ ಶ್ರೀ ಕ್ಷೇತ್ರಕ್ಕೆ ಆಗಮಿಸುವುದು. ನಂತರ ಉತ್ಸವ ಸಣ್ಣ ರಥೋತ್ಸವ ಪಾಲಕು (ಪಲ್ಲಕ್ಕಿ) ಉತ್ಸವ ಕೆರೆಯಲ್ಲಿ ಜರಗುತ್ತದೆ. ಪ್ರತಿ ವರ್ಷ ಎಪ್ರಿಲ್ 18ರಂದು ಜಾತ್ರೆ ಅಂಗವಾಗಿ ಬೆಳಿಗ್ಗೆ ತುಲಾಭಾರ ಸೇವೆ, ಸಾಯಂಕಾಲ ವೀರಮಮಂಗಲ ದೇವರು ಅವಭ್ರತ ಸ್ನಾನಕ್ಕೆ ಸವಾರಿ ಜರಗುತ್ತದೆ. ಮೇ ತಿಂಗಳ ಅಂತ್ಯದಲ್ಲಿ ಪ್ರತೀ ವರ್ಷ ದೇವರ ಬಲಿ ಉತ್ಸವವು ನಡೆದು ದೇವರ ಉತ್ಸವ ಮೂರ್ತಿಯನ್ನು ಪಾಣಿಪೀಠದಲ್ಲಿಟ್ಟು ಮಂಗಳಾರತಿ ನಡೆದ ನಂತರ ಉತ್ಸವ ಮುಕ್ತಾಯಗೊಳ್ಳುತ್ತದೆ. ಈ ಬಾರಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಸಾಧ್ಯ ಆದರೆ ಹೋಗಿ ಬನ್ನಿ, ಒಮ್ಮೆ ಹೋದರೆ ಉತ್ಸವ, ರಥೋತ್ಸವದ ಕಣ್ತುಂಬಿಕೊಂಡ ನೀವು ಮತ್ತೆ ಮತ್ತೆ ಪ್ರತಿವರ್ಷ ಹೋಗಿಯೇ ಹೋಗುತ್ತೀರಿ., ಹ್ಞಾಂ ಹೇಳೋದೆ ಮರೆತಿದ್ದೆ ನೋಡಿ.
ನೀವು ದೇವಾಲಯದ ನಡೆಯಲ್ಲಿ ನಿಂತು ಬೇಡಿಕೊಂಡರೆ, ನೀವು ಬೇಡಿದ್ದನ್ನ ಮಹಾಲಿಂಗೇಶ್ವರ ಕರುಣಿಸ್ತಾನೆ ಅನ್ನುವುದರಲ್ಲಿ ಅನುಮಾನವಿಲ್ಲ

ಮುಖಪುಟ ಸಂಗ್ರಹ ಲೇಖನ

ಸೋಮವಾರ, ಫೆಬ್ರವರಿ 24, 2020

ಒಂದು ಚಿಕ್ಕ ನಿಂಬೆಹಣ್ಣು 25 ಲಾಭಗಳು ಯಾರಿಗುಂಟು ಯಾರಿಗಿಲ್ಲ…!

ಹೌದು ಒಂದು ನಿಂಬೆಹಣ್ಣು ನಿಮಗೆ ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆ ಕೇವಲ ಒಂದು ಚಿಕ್ಕ ನಿಂಬೆಹಣ್ಣು ೨೫ ಲಾಭಗಳನ್ನು ನೀಡಲಿದೆ ಬನ್ನಿ ಯಾವ ಯಾವ ಲಾಭಗಳನ್ನು ನೀಡಲಿದೆ ಅನ್ನೋದು ಇಲ್ಲಿದೆ ನೋಡಿ.

ಉಪಯೋಗಗಳು: 

ಅತಿಯಾದ ಬಾಯಾರಿಕೆಗೆ ನಿಂಬೆರಸ ಸಕ್ಕರೆ ನೀರು ಬೆರೆಸಿ ಕುಡಿದರೆ ಪರಿಣಾಮಕಾರಿ. ಈ ಪಾನಕವನ್ನು ಅತಿಸಾರ ಆಮಶಂಕೆಯಲ್ಲಿ ಮೇಲಿಂದ ಮೇಲೆ ಕುಡಿಯುತ್ತಿರಬೇಕು.

ನಿಂಬೆರಸದ ಜೊತೆ ಜೇನುತುಪ್ಪ ಸೇರಿಸಿ ಕುಡಿದರೆ ರಕ್ತವೃದ್ಧಿ. ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸ, ಅರ್ಧ ಚಮಚ ಉಪ್ಪು ಅಥವಾ ಸೈಂಧವಲವಣ ಸೇರಿಸಿ ಕುಡಿದರೆ ಅಜೀರ್ಣ, ಎದೆಉರಿ, ಮಲಬದ್ಧತೆ ನಿವಾರಣೆ. ನಿಂಬೆರಸಕ್ಕೆ ಉಪ್ಪು ಬೆರೆಸಿ ಮೃದುವಾಗಿ ಉಜ್ಜುವುದರಿಂದ ಹಲ್ಲುಗಳಿಗೆ ಹೊಳಪು ಬರುತ್ತದೆ.

ನಿಂಬೆರಸದಲ್ಲಿ ಅರಿಶಿನ ಬೇರನ್ನು ತೇಯ್ದು ಮೊಡವೆಗಳಿಗೆ ಲೇಪಿಸಿ ಅರ್ಧ ಗಂಟೆಯ ನಂತರ ಮುಖ ತೊಳೆಯಬೇಕು. ಇದರಿಂದ ಕಲೆಗಳೂ ಹೋಗುವುದಲ್ಲದೇ ಮುಖದ ಕಾಂತಿಯು ಹೆಚ್ಚುತ್ತದೆ. ನಿಂಬೆರಸ ಮೈ ಕೈಗೆ ಹಚ್ಚಿಕೊಂಡರೆ ಸೊಳ್ಳೆಗಳು ಹತ್ತಿರ ಬರಲಾರವು. ನಿಂಬೆರಸ ಬೆರೆಸಿದ ನೀರಿನಿಂದ ಆಗಾಗ್ಗೆ ಬಾಯಿ ಮುಕ್ಕಳಿಸಿದರೆ ದುರ್ವಾಸನೆ ಹೋಗುತ್ತದೆ.

ಗಂಟಲು ನೋವಿರುವಾಗ ಬಿಸಿ ನೀರಿನಲ್ಲಿ ನಿಂಬೆರಸ ಜೇನುತುಪ್ಪ ಬೆರೆಸಿ ಕುಡಿಯಬೇಕು. ತೂಕ ಕಡಿಮೆಗೊಳಿಸಲು ಒಂದು ಲೋಟ ನೀರಿಗೆ ಒಂದು ನಿಂಬೆರಸ ಮತ್ತು ಎರಡು ಚಮಚ ಜೇನುತುಪ್ಪ ಬೆರೆಸಿ ಮೂರು ತಿಂಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ವಾಂತಿಯಾಗುತ್ತಿದ್ದರೆ ನಿಂಬೆರಸಕ್ಕೆ ಸಕ್ಕರೆ ನೀರು ಬೆರೆಸಿ ಚಿಟಿಕೆ ಉಪ್ಪು ಹಾಕಿ ಸೇವಿಸಬೇಕು.
ನಿಂಬೆರಸವನ್ನು ತಲೆಗೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಿದರೆ ಹೊಟ್ಟು ನಿವಾರಣೆಯಾಗುತ್ತದೆ.

ಹಾಲಿನಕೆನೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮವು ಮೃದುವಾಗುವುದಲ್ಲದೇ ಕಾಂತಿಯೂ ಹೆಚ್ಚುತ್ತದೆ. ಜೇನುಹುಳು, ಚೇಳು, ಇತರ ಕ್ರಿಮಿಕೀಟಗಳು ಕಚ್ಚಿದಾಗ ನಿಂಬೆ ಹೋಳಿನ ಮೇಲೆ ಉಪ್ಪು ಸೇರಿಸಿ ಕಚ್ಚಿದ ಸ್ಥಳಕ್ಕೆ ಕಟ್ಟಿದರೆ ಉರಿ ನೋವು ಕಡಿಮೆಯಾಗುತ್ತದೆ.

ಸಂಧಿವಾತ ಅಥವಾ ಕೀಲುನೋವಿನಿಂದ ಬಳಲುವವರು ನಿಂಬೆರಸಕ್ಕೆ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಬೆರೆಸಿ ಬಿಸಿ ಮಾಡಿ ಬಿಸಿ ಇರುವಾಗಲೇ ಹಚ್ಚಿ ನಿಧಾನವಾಗಿ ಉಜ್ಜಿದರೆ ನೋವು ಕಡಿಮೆಯಾಗುವುದು. ಒಣಗಿದ ನಿಂಬೆಸಿಪ್ಪೆಯ ಪುಡಿ, ಅರಿಶಿನಪುಡಿಯನ್ನು ಕೊಬ್ಬರಿ ಅಥವಾ ಎಳ್ಳೆಣ್ಣೆಯಲ್ಲಿ ಬೆರೆಸಿ ಇಸಬು ಮತ್ತು ಇತರ ಚರ್ಮರೋಗಗಳ ಮೇಲೆ ಲೇಪಿಸುವುದರಿಂದ ನವೆ ಕಡಿಮೆಯಾಗುವುದು.

ನಿಂಬೆರಸವನ್ನು ಬಾಳೆಹಣ್ಣು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿಯಲ್ಲಿನ ನೋವು ಉರಿ ಕಡಿಮೆಯಾಗುವುದು. ಉರಿಮೂತ್ರವಾದಾಗ ನಿಂಬೆರಸ ಜೇನುತುಪ್ಪವನ್ನು ನೀರಿನೊಂದಿಗೆ ಸೇರಿಸಿ ಕುಡಿಯಬೇಕು.

ಅಂಗಾಲು ಬಿರುಕು ಬಿಟ್ಟಿದ್ದರೆ ನಿಂಬೆಹಣ್ಣಿನ ರಸ, ಗ್ಲಿಸರಿನ್ ಹಾಗೂ ಹಾಲು ಸೇರಿಸಿ ಕಾಯಿಸಿ ಗಟ್ಟಿಯಾದ ಮೇಲೆ ಇಳಿಸಿ ಆರಿದ ನಂತರ ಹಚ್ಚಿದರೆ ಅಂಗೈ ಅಂಗಾಲು ಬಿರುಕು ಮಾಯವಾಗಿ ಚರ್ಮವು ಮೃದುವಾಗುವುದು. ನಿಂಬೆಸಿಪ್ಪೆ ಒಣಗಿಸಿ ಪುಡಿಮಾಡಿ ಕಡಲೇಹಿಟ್ಟು ಸೀಗೇಪುಡಿಯೊಡನೆ ಬೆರೆಸಿ ಸ್ನಾನಕ್ಕೆ ಬಳಸಬಹುದು. ಕಾಲರಾದಲ್ಲಿ ನಿಂಬೆರಸ ಸೇವನೆ ಒಳ್ಳೆಯದು.

ರಕ್ತವಾಂತಿ ಇಲ್ಲವೇ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಕಾಯಿಸಿ ಆರಿಸಿದ ನೀರಿಗೆ ಸಕ್ಕರೆ ನಿಂಬೆರಸ ಹಾಕಿ ಸೇವನೆ ಮಾಡಬೇಕು. ನಿಂಬೆರಸಕ್ಕೆ 2 ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ. ಹೊಟ್ಟೆನೋಯುತ್ತಿದ್ದರೆ ನೀರಿಗೆ ನಿಂಬೆರಸ, ಚಿಟಿಕೆ ಉಪ್ಪು ಸೇರಿಸಿ ಕುಡಿಯಬೇಕು.

ನಿಂಬೆಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಶುಂಠಿರಸ, ಇಂಗು, ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಕಲಸಿ ಒಂದು ದಿನ ಇಟ್ಟು ನಂತರ ನೆರಳಲ್ಲಿ ಒಣಗಿಸಿ ಒಂದು ಬಾಟಲ್‌ನಲ್ಲಿ ಹಾಕಿಟ್ಟುಕೊಂಡರೆ ಅಜೀರ್ಣ ಹಾಗೂ ಪ್ರಯಾಣದಲ್ಲಾಗುವ ತೊಂದರೆಯಲ್ಲಿ ಸೇವಿಸಬಹುದು. ಇತ್ತೀಚಿನ ಸಂಶೋಧನೆ ಪ್ರಕಾರ ನಿಂಬೆಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ಜೀವಕೋಶಗಳನ್ನು ತಡೆಗಟ್ಟುತ್ತದೆ ಎಂಬುದು ಸಾಬೀತಾಗಿದೆ.