ಉಪಯೋಗಗಳು:
ಅತಿಯಾದ ಬಾಯಾರಿಕೆಗೆ ನಿಂಬೆರಸ ಸಕ್ಕರೆ ನೀರು ಬೆರೆಸಿ ಕುಡಿದರೆ ಪರಿಣಾಮಕಾರಿ. ಈ ಪಾನಕವನ್ನು ಅತಿಸಾರ ಆಮಶಂಕೆಯಲ್ಲಿ ಮೇಲಿಂದ ಮೇಲೆ ಕುಡಿಯುತ್ತಿರಬೇಕು.
ನಿಂಬೆರಸದ ಜೊತೆ ಜೇನುತುಪ್ಪ ಸೇರಿಸಿ ಕುಡಿದರೆ ರಕ್ತವೃದ್ಧಿ. ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸ, ಅರ್ಧ ಚಮಚ ಉಪ್ಪು ಅಥವಾ ಸೈಂಧವಲವಣ ಸೇರಿಸಿ ಕುಡಿದರೆ ಅಜೀರ್ಣ, ಎದೆಉರಿ, ಮಲಬದ್ಧತೆ ನಿವಾರಣೆ. ನಿಂಬೆರಸಕ್ಕೆ ಉಪ್ಪು ಬೆರೆಸಿ ಮೃದುವಾಗಿ ಉಜ್ಜುವುದರಿಂದ ಹಲ್ಲುಗಳಿಗೆ ಹೊಳಪು ಬರುತ್ತದೆ.
ನಿಂಬೆರಸದಲ್ಲಿ ಅರಿಶಿನ ಬೇರನ್ನು ತೇಯ್ದು ಮೊಡವೆಗಳಿಗೆ ಲೇಪಿಸಿ ಅರ್ಧ ಗಂಟೆಯ ನಂತರ ಮುಖ ತೊಳೆಯಬೇಕು. ಇದರಿಂದ ಕಲೆಗಳೂ ಹೋಗುವುದಲ್ಲದೇ ಮುಖದ ಕಾಂತಿಯು ಹೆಚ್ಚುತ್ತದೆ. ನಿಂಬೆರಸ ಮೈ ಕೈಗೆ ಹಚ್ಚಿಕೊಂಡರೆ ಸೊಳ್ಳೆಗಳು ಹತ್ತಿರ ಬರಲಾರವು. ನಿಂಬೆರಸ ಬೆರೆಸಿದ ನೀರಿನಿಂದ ಆಗಾಗ್ಗೆ ಬಾಯಿ ಮುಕ್ಕಳಿಸಿದರೆ ದುರ್ವಾಸನೆ ಹೋಗುತ್ತದೆ.
ಗಂಟಲು ನೋವಿರುವಾಗ ಬಿಸಿ ನೀರಿನಲ್ಲಿ ನಿಂಬೆರಸ ಜೇನುತುಪ್ಪ ಬೆರೆಸಿ ಕುಡಿಯಬೇಕು. ತೂಕ ಕಡಿಮೆಗೊಳಿಸಲು ಒಂದು ಲೋಟ ನೀರಿಗೆ ಒಂದು ನಿಂಬೆರಸ ಮತ್ತು ಎರಡು ಚಮಚ ಜೇನುತುಪ್ಪ ಬೆರೆಸಿ ಮೂರು ತಿಂಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ವಾಂತಿಯಾಗುತ್ತಿದ್ದರೆ ನಿಂಬೆರಸಕ್ಕೆ ಸಕ್ಕರೆ ನೀರು ಬೆರೆಸಿ ಚಿಟಿಕೆ ಉಪ್ಪು ಹಾಕಿ ಸೇವಿಸಬೇಕು.
ನಿಂಬೆರಸವನ್ನು ತಲೆಗೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಿದರೆ ಹೊಟ್ಟು ನಿವಾರಣೆಯಾಗುತ್ತದೆ.
ಹಾಲಿನಕೆನೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮವು ಮೃದುವಾಗುವುದಲ್ಲದೇ ಕಾಂತಿಯೂ ಹೆಚ್ಚುತ್ತದೆ. ಜೇನುಹುಳು, ಚೇಳು, ಇತರ ಕ್ರಿಮಿಕೀಟಗಳು ಕಚ್ಚಿದಾಗ ನಿಂಬೆ ಹೋಳಿನ ಮೇಲೆ ಉಪ್ಪು ಸೇರಿಸಿ ಕಚ್ಚಿದ ಸ್ಥಳಕ್ಕೆ ಕಟ್ಟಿದರೆ ಉರಿ ನೋವು ಕಡಿಮೆಯಾಗುತ್ತದೆ.
ಸಂಧಿವಾತ ಅಥವಾ ಕೀಲುನೋವಿನಿಂದ ಬಳಲುವವರು ನಿಂಬೆರಸಕ್ಕೆ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಬೆರೆಸಿ ಬಿಸಿ ಮಾಡಿ ಬಿಸಿ ಇರುವಾಗಲೇ ಹಚ್ಚಿ ನಿಧಾನವಾಗಿ ಉಜ್ಜಿದರೆ ನೋವು ಕಡಿಮೆಯಾಗುವುದು. ಒಣಗಿದ ನಿಂಬೆಸಿಪ್ಪೆಯ ಪುಡಿ, ಅರಿಶಿನಪುಡಿಯನ್ನು ಕೊಬ್ಬರಿ ಅಥವಾ ಎಳ್ಳೆಣ್ಣೆಯಲ್ಲಿ ಬೆರೆಸಿ ಇಸಬು ಮತ್ತು ಇತರ ಚರ್ಮರೋಗಗಳ ಮೇಲೆ ಲೇಪಿಸುವುದರಿಂದ ನವೆ ಕಡಿಮೆಯಾಗುವುದು.
ನಿಂಬೆರಸವನ್ನು ಬಾಳೆಹಣ್ಣು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿಯಲ್ಲಿನ ನೋವು ಉರಿ ಕಡಿಮೆಯಾಗುವುದು. ಉರಿಮೂತ್ರವಾದಾಗ ನಿಂಬೆರಸ ಜೇನುತುಪ್ಪವನ್ನು ನೀರಿನೊಂದಿಗೆ ಸೇರಿಸಿ ಕುಡಿಯಬೇಕು.
ಅಂಗಾಲು ಬಿರುಕು ಬಿಟ್ಟಿದ್ದರೆ ನಿಂಬೆಹಣ್ಣಿನ ರಸ, ಗ್ಲಿಸರಿನ್ ಹಾಗೂ ಹಾಲು ಸೇರಿಸಿ ಕಾಯಿಸಿ ಗಟ್ಟಿಯಾದ ಮೇಲೆ ಇಳಿಸಿ ಆರಿದ ನಂತರ ಹಚ್ಚಿದರೆ ಅಂಗೈ ಅಂಗಾಲು ಬಿರುಕು ಮಾಯವಾಗಿ ಚರ್ಮವು ಮೃದುವಾಗುವುದು. ನಿಂಬೆಸಿಪ್ಪೆ ಒಣಗಿಸಿ ಪುಡಿಮಾಡಿ ಕಡಲೇಹಿಟ್ಟು ಸೀಗೇಪುಡಿಯೊಡನೆ ಬೆರೆಸಿ ಸ್ನಾನಕ್ಕೆ ಬಳಸಬಹುದು. ಕಾಲರಾದಲ್ಲಿ ನಿಂಬೆರಸ ಸೇವನೆ ಒಳ್ಳೆಯದು.
ರಕ್ತವಾಂತಿ ಇಲ್ಲವೇ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಕಾಯಿಸಿ ಆರಿಸಿದ ನೀರಿಗೆ ಸಕ್ಕರೆ ನಿಂಬೆರಸ ಹಾಕಿ ಸೇವನೆ ಮಾಡಬೇಕು. ನಿಂಬೆರಸಕ್ಕೆ 2 ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ. ಹೊಟ್ಟೆನೋಯುತ್ತಿದ್ದರೆ ನೀರಿಗೆ ನಿಂಬೆರಸ, ಚಿಟಿಕೆ ಉಪ್ಪು ಸೇರಿಸಿ ಕುಡಿಯಬೇಕು.
ನಿಂಬೆಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಶುಂಠಿರಸ, ಇಂಗು, ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಕಲಸಿ ಒಂದು ದಿನ ಇಟ್ಟು ನಂತರ ನೆರಳಲ್ಲಿ ಒಣಗಿಸಿ ಒಂದು ಬಾಟಲ್‌ನಲ್ಲಿ ಹಾಕಿಟ್ಟುಕೊಂಡರೆ ಅಜೀರ್ಣ ಹಾಗೂ ಪ್ರಯಾಣದಲ್ಲಾಗುವ ತೊಂದರೆಯಲ್ಲಿ ಸೇವಿಸಬಹುದು. ಇತ್ತೀಚಿನ ಸಂಶೋಧನೆ ಪ್ರಕಾರ ನಿಂಬೆಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ಜೀವಕೋಶಗಳನ್ನು ತಡೆಗಟ್ಟುತ್ತದೆ ಎಂಬುದು ಸಾಬೀತಾಗಿದೆ.