ಶಿಷ್ಯನ ಸತ್ವಪರೀಕ್ಷೆ:-
ಗುರುಗಳಾದ ಇಂದ್ರ ಶರ್ಮರ ಆಶ್ರಮ ನರ್ಮದಾ ನದಿ ದಡದಲ್ಲಿತ್ತು.ಅವರ ಆಶ್ರಮದಲ್ಲಿ ದೂರ ದೂರ ಪ್ರದೇಶಗಳಿಂದ ಅಧ್ಯಯನ ಮಾಡಲು ಸಾಕಷ್ಟು ವಿದ್ಯಾರ್ಥಿಗಳು ಬರುತ್ತಿದ್ದರು. ಅವರಿಗೆಲ್ಲ ವೇದ, ಮಂತ್ರ ಪುರಾಣಗಳನ್ನು ಕಲಿಸುತ್ತಿದ್ದರು. ಶಿಷ್ಯರಲ್ಲಿ ಗೋಪಿನಾಥ ಎಂಬ ಪ್ರಾಮಾಣಿಕ ಗುರು ಭಕ್ತಿಯುಳ್ಳ ಹಾಗೂ ಬುದ್ಧಿವಂತನಾದ ಶಿಷ್ಯನಿದ್ದನು. ಶ್ರದ್ಧೆಯಿಂದ ಗುರುಗಳ ಸೇವೆಯನ್ನು ಮಾಡುತ್ತಾ ಅವರು ಹೇಳಿದ ಕೆಲಸಗಳನ್ನು ನಿಷ್ಠೆಯಿಂದ ಮಾಡಿ ಶ್ರದ್ಧೆಯಿಂದ ಅಧ್ಯಯನವನ್ನು ಮಾಡುತ್ತಿದ್ದನು.ಗುರುಗಳಿಗೆ ಈ ಬಾಲಕನನ್ನು ಕಂಡರೆ ತುಂಬಾ ಅಭಿಮಾನವಿತ್ತು.
ವೇದಾಧ್ಯಯನ ಮುಗಿಸಿದ ವಿದ್ಯಾರ್ಥಿಗಳು, ಗುರುಗಳ ಆದೇಶದಂತೆ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತಿದ್ದರು. ಹೊಸದಾಗಿ ಮತ್ತಷ್ಟು ವಿದ್ಯಾರ್ಥಿಗಳು ಬರುತ್ತಿದ್ದರು. ಕೆಲ ವಿದ್ಯಾರ್ಥಿಗಳು ಅಲ್ಲೆ ಇರುತ್ತಿದ್ದರು. ಒಂದಷ್ಟು ವರ್ಷಗಳು ಕಳೆಯಿತು. ಗುರುಗಳಿಗೂ ವಯಸ್ಸಾಗಿತ್ತು. ಒಂದು ದಿನ ಶಿಷ್ಯರನ್ನೆಲ್ಲ ಕರೆದು ನನ್ನ ಪ್ರೀತಿಯ ಶಿಷ್ಯ ರೇ ಇದುವರೆಗೂ ನೀವೆಲ್ಲರೂ ಗುರು ವಾಕ್ಯವನ್ನು ಮೀರದಂತೆ ನಡೆದಿದ್ದೀರಿ. ನಾನು ಕಲಿತ ಜ್ಞಾನವನ್ನು ನಿಮಗೆಲ್ಲರಿಗೂ ಕಲಿಸಿದ್ದೇನೆ. ನಿಮ್ಮಲ್ಲಿ ಒಂದು ವಿಚಾರ ಹೇಳಬೇಕು. ನನ್ನ ಪೂರ್ವ ಜನ್ಮದ ಕರ್ಮದ ಫಲದಿಂದ ನನ್ನ ಮುಂದಿನ ದಿನಗಳು ಬಹಳ ಕಷ್ಟಕರವಾಗಿರುತ್ತದೆ. ನೋವಿನಿಂದ ತುಂಬಿರುವ ವ್ಯಾಧಿ ಬರುತ್ತದೆ. ಇದರಿಂದಾಗಿ ನನ್ನ ಕಿವಿ ಕೇಳುವುದಿಲ್ಲ. ಕಣ್ಣು ಕಾಣುವುದಿಲ್ಲ. ರೋಗಗ್ರಸ್ತ ಶರೀರದಲ್ಲಿ ದುರ್ಗಂಧ ಬರುವುದರ ಜೊತೆಗೆ ಹುಳಗಳು ಆಗುತ್ತವೆ. ಆದ್ದರಿಂದ ನಾನು ಆಶ್ರಮವನ್ನು ಬಿಟ್ಟು ಕಾಶಿಗೆ ಹೋಗಿ ಉಳಿದ ಕಾಲವನ್ನು ಕಳೆಯಲು ಇಚ್ಚಿಸಿದ್ದೇನೆ. ಪ್ರಾರಬ್ಧ ಕರ್ಮಗಳು ಕಳೆದ ನಂತರ ಬರುತ್ತೇನೆ. ನಿಮ್ಮಲ್ಲಿ ಯಾರು ನನ್ನ ಜೊತೆ ಬರುತ್ತೀರಿ ಎಂದು ಕೇಳಿದರು.
ಈ ಮಾತನ್ನೆಲ್ಲ ಕೇಳಿದ ಶಿಷ್ಯರೆಲ್ಲ ತುಟಿ ಪಿಟಕ್ಕೆನ್ನದೆ ಕುಳಿತಿದ್ದರು. ಶಿಷ್ಯ ಗೋಪಿನಾಥ ಮುಂದೆ ಬಂದು, ಗುರುಗಳೇ ನೀವು ಎಲ್ಲಿ ಹೋಗುತ್ತೀರೋ, ಅಲ್ಲಿಗೆಲ್ಲಾ ನಿಮ್ಮ ಜೊತೆ ನಾನು ಬರುತ್ತೇನೆ. ನೀವು ಯಾವುದೇ ಸ್ಥಿತಿಯಲ್ಲಿ ಇರಲಿ, ಆಗಲೂ ನಿಮ್ಮ ಜೊತೆಯೇ ಇದ್ದು ನಿಮ್ಮ ಸೇವೆ ಮಾಡುತ್ತೇನೆ. ಆಗ ಗುರುಗಳು ಗೋಪಿನಾಥ ನೋಡು, ಈ ಕಾಯಿಲೆಯಿಂದ ನನ್ನ ಕಣ್ಣು ಕುರುಡಾಗುತ್ತದೆ, ಕಿವಿ ಕೇಳುವುದಿಲ್ಲ, ರೋಗಗ್ರಸ್ತ ಶರೀರದಿಂದ ನನ್ನ ಜೊತೆ ಇರಬೇಕೆಂದರೆ, ಅಸಹ್ಯವನ್ನು ಸಹಿಸಿಕೊಳ್ಳಬೇಕಾಗುತ್ತದೆ. ತುಂಬಾ ಯೋಚನೆ ಮಾಡಿ ಹೇಳು ಎಂದರು. ಇದಕ್ಕೆ ಗೋಪಿನಾಥ, ಗುರುದೇವ ನಾನು ಎಲ್ಲಾ ಕಷ್ಟಗಳನ್ನು ಸಹಿಸಲು ಸಿದ್ಧನಿದ್ದೇನೆ. ನಿಮ್ಮ ಜೊತೆ ಇರಲು ಅನುಮತಿ ಮಾತ್ರ ಕೊಡಿ ಎಂದು ವಿನಮ್ರವಾಗಿ ಪ್ರಾರ್ಥಿಸಿದನು. ಮರುದಿನ ಗುರು ಮತ್ತು ಶಿಷ್ಯ ಇಬ್ಬರು ಕಾಶಿಗೆ ಹೋಗಿ ಒಂದು ಸ್ಥಳದಲ್ಲಿ ವಾಸಿಸುತ್ತಾರೆ.
ಗುರುಗಳು ಹೇಳಿದಂತೆ ಕೆಲವು ಕಾಲ ಕಳೆಯುತ್ತಿದ್ದ ಹಾಗೆ, ಅವರಿಗೆ ಕುಷ್ಟರೋಗ ಬಂದು, ಕಿವಿಯೂ ಕೇಳದೆ, ಕಣ್ಣು ಕಾಣದೇ, ರಗಳೆ, ಕಿರಿಕಿರಿ ಮಾಡುವುದು, ವಿಚಿತ್ರವಾಗಿ ಕೂಗುವುದು ಎಲ್ಲಾ ಶುರುವಾಯಿತು.
ಶಿಷ್ಯ ಸ್ವಲ್ಪವೂ ಕೋಪ ಮಾಡಿಕೊಳ್ಳದೆ, ಹಗಲು-ರಾತ್ರಿಯೆನ್ನದೆ ಪ್ರೀತಿಯಿಂದ ಅವರ ಸೇವೆ ಮಾಡುತ್ತಿದ್ದನು. ಅವರ ಕೊಳೆ ಬಟ್ಟೆ ಒಗೆದು, ಗಾಯಗಳನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿಸಿ, ಬಟ್ಟೆ ಹಾಕುವುದು, ಆಹಾರ ತಿನ್ನಿಸುವುದು ಎಲ್ಲವನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ಇಷ್ಟಾದರೂ ಗುರುಗಳು ಅವನ ಮೇಲೆ ಸಿಡಿ ಗುಟ್ಟುತ್ತಿದ್ದರು. ಶಿಷ್ಯ ಪ್ರತಿಕ್ರಿಯಸದೆ ಸಂತೋಷದಿಂದ ಗುರು ಸೇವೆ ಮಾಡುತ್ತಿದ್ದನು.
ಗುರುಗಳ ಸೇವೆ ಮಾಡುತ್ತಾ ಹಲವು ಕಾಲವೇ ಕಳೆದುಹೋಯಿತು. ಅವನಲ್ಲಿದ್ದ ಅಲ್ಪಸ್ವಲ್ಪ ಇಚ್ಛೆಗಳು ನಾಶವಾದವು. ಅಲೌಕಿಕ ಜ್ಞಾನ ಅವನಿಗೆ ಬಂದಿತು. ಇದರಿಂದ ಅವನ ಮನಸ್ಸು ಮತ್ತಷ್ಟು ಹಗುರವಾಯಿತು. ಅವನ ದೇಹ ತೇಜೋಮಯವಾಗಿತ್ತು. ಗುರುಗಳು ಹೇಳಿದಂತೆ ನಡೆದರೆ ಜೀವನದಲ್ಲಿ ಯಾವ ಕಷ್ಟಗಳು ಬರುವುದಿಲ್ಲ ಎಂಬ ಅರಿವು ಅವನಿಗಾಗತೊಡಗಿತು. ಹೀಗೆ ಗುರುಸೇವೆ ಮಾಡುತ್ತಾ ವರ್ಷಗಳೇ ಉರುಳಿದವು. ಇವನ ಗುರು ಸೇವೆ ಕಂಡು ಮೆಚ್ಚಿದ ಪರಮೇಶ್ವರನು ಅವನೆದುರು ಪ್ರತ್ಯಕ್ಷನಾಗಿ, ಬಾಲಕ ಕಾಶಿ ವಿಶ್ವನಾಥನ ದರ್ಶನಕ್ಕಾಗಿ ಜನರು ಎಲ್ಲೆಲ್ಲಿಂದಲೋ ಕಾಶಿಗೆ ಬರುತ್ತಾರೆ. ಆದರೆ ನೀನು ಕರೆಯದೆ ಸ್ವಯಂ ನಿನ್ನ ಮುಂದೆ ನಾನೇ ಬಂದಿದ್ದೇನೆ. ನಿನ್ನ ಗುರುಗಳ ಹೃದಯದಲ್ಲಿ ನಾನು ಸೋಹನ್ ಸ್ವರೂಪದಲ್ಲಿ ವಾಸಮಾಡುತ್ತೇನೆ. ಆದ್ದರಿಂದ ನೀನು ಮಾಡುವ ಗುರುಸೇವೆ ನನಗೆ ತಲುಪುತ್ತದೆ. ನಾನು ಇದರಿಂದ ಬಹಳ ಸಂತುಷ್ಟನಾಗಿದ್ದೇನೆ ಏನು ವರ ಬೇಕು ಕೇಳು ಎಂದನು.
ಗೋಪಿನಾಥ ನಮ್ರನಾಗಿ ಪರಮೇಶ್ವರ ನೀವು ಸಂತುಷ್ಟರಾಗಿರುವುದೇ ನನಗೆ ಸಾಕು ನನಗೆ ಇನ್ನೇನು ಬೇಡ ಎಂದನು. ಶಿವನು ಇಲ್ಲ ನೀನು ಏನಾದರೂ ಒಂದು ವರ ಕೇಳಲೇಬೇಕು ಎಂದಾಗ, ಅವನು ಹೇ ಮಹಾದೇವ, ನೀವು ಸಂತೋಷದಿಂದ ಹೀಗೆ ಹೇಳುತ್ತಿರುವುದೇ ನನ್ನ ಭಾಗ್ಯವಾಗಿದೆ. ಆದರೆ ನನ್ನ ಗುರುಗಳ ಅನುಮತಿಯಿಲ್ಲದೆ ನಾನು ನಿಮ್ಮನ್ನು ಏನು ಕೇಳಲಾರೆ ಎಂದನು.
ಆಗ ಶಿವನು ಸರಿ ನೀನು ಹೋಗಿ ನಿನ್ನ ಗುರುಗಳನ್ನೇ ಕೇಳಿ ಬಾ ಎಂದನು. ಶಿಷ್ಯನು ಗುರುಗಳ ಬಳಿ ಬಂದು 'ಹೇ ಗುರುದೇವ ನಿಮ್ಮ ಕೃಪೆಯಿಂದ ಪರಮೇಶ್ವರನು ನನ್ನ ಮೇಲೆ ಕರುಣೆತೋರಿ ವರ ಕೊಡಲು ಇಚ್ಚಿಸಿದ್ದಾರೆ. ನೀವು ಆಙ್ಞೆ ಮಾಡಿದರೆ ನಿಮ್ಮ ರೋಗ ವಾಸಿಯಾಗಿ ಅಂಧತ್ವ, ಕಿವುಡುತನ ದೂರವಾಗಲಿ ಎಂಬ ವರ ಕೇಳಬಹುದೇ? ಎಂದು ಕೇಳಿದನು,
ಇದನ್ನು ಕೇಳಿದ ಗುರುಗಳಿಗೆ ಬಹಳ ಸಿಟ್ಟು ಬಂದು ಗೋಪಿನಾಥ ನಿನಗೆ ನನ್ನ ಸೇವೆ ಮಾಡಲು ಕಷ್ಟವಾಗಿದೆ. ಆದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ನೋಡುತ್ತಿರುವೆ. ಇದಕ್ಕಾಗಿ ಅವರಲ್ಲಿ ಭಿಕ್ಷೆ ಬೇಡ ಬೇಕೆಂದಿರುವೆಯಾ?
ಇದಕ್ಕಾಗಿ ಶಿವನು ನಿನಗೆ ವರ ನೀಡುವನು. ಇದರಿಂದ ನನ್ನ ಪ್ರಾರಬ್ಧಕರ್ಮ ನಾಶವಾಗುವುದೇ? ದೂರ ಹೋಗು ಇಲ್ಲಿಂದ, ನಾನು ಮೊದಲೇ ಹೇಳಿದ್ದೆ ನನ್ನ ಜೊತೆ ಬರ ಬೇಡವೆಂದು, ನೀನೇ ಹಟಮಾಡಿ ಬಂದಿರುವೆ ತೊಲಗಿಲ್ಲಿಂದ ಎಂದು ಕೋಪದಿಂದ ಹೇಳಿದರು. ಇದನ್ನು ಕೇಳುತ್ತಿದ್ದಂತೆ ಗೋಪಿನಾಥ ಶಿವನ ಹತ್ತಿರ ಓಡಿಬಂದು, ಹೇ ಪರಮೇಶ್ವರ ನನಗೆ ಯಾವ ವರವನ್ನು ಕೊಡಬೇಡ ಎಂದನು. ಶಿವನು ಮತ್ತಷ್ಟು ಸಂತುಷ್ಟನಾಗಿ, ನೀನು ಗುರುಗಳ ಸೇವೆ ಅಷ್ಟೊಂದು ಮಾಡುತ್ತಿದ್ದರೂ ಗುರುಗಳೇ ಏಕೆ ಸಿಟ್ಟಾಗುತ್ತಾರೆ ಎಂದು ಕೇಳಿದಾಗ, ಶಿಷ್ಯನಿಗೆ ಇದು ಸರಿ ಅನಿಸುವುದಿಲ್ಲ, ಅವನು ಶಿವನಿಗೆ, ಎಲ್ಲಕ್ಕಿಂತ ಗುರುಕೃಪೆಯೊಂದೇ, ಶಿಷ್ಯನಿಗೆ ಒಳಿತನ್ನು ಮಾಡುವುದು ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ.
ಈ ಹುಡುಗನ ಭಕ್ತಿಯನ್ನು ಶಿವನು ವಿಷ್ಣುವಿಗೆ ಹೇಳಿ ಶಿಷ್ಯನ ಗುರುಭಕ್ತಿಯ ವರ್ಣನೆ ಮಾಡುತ್ತಾನೆ. ಇದನ್ನು ಕೇಳಿದ ವಿಷ್ಣು ತಾನು ಶಿಷ್ಯನನ್ನು ಪರೀಕ್ಷಿಸಲು ಬರುತ್ತಾನೆ. ಶಿವನು ಕೇಳಿದಂತೆ, ವಿಷ್ಣು ಶಿಷ್ಯನಿಗೆ ವರವನ್ನು ಕೇಳುವಂತೆ ಹೇಳುತ್ತಾನೆ. ಆಗ ಶಿಷ್ಯರು ಭಗವಂತನ ಪಾದಗಳನ್ನು ಹಿಡಿದು, ಹೇ ಭಗವಂತ ಗುರು ಕೃಪೆಯಿಂದಲೇ ನನಗೆ ಪರಮೇಶ್ವರ ಹಾಗೂ ನಿಮ್ಮ ದರ್ಶನವಾಗಿದೆ. ಹೀಗಿರುವಾಗ, ಸತತವಾಗಿ ಗುರುಚರಣಗಳ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ಯಾವತ್ತಿಗೂ ಮಾಡುವಂತೆ ನನಗೆ ಅನುಗ್ರಹಿಸಿರಿ ಇದಕ್ಕಿಂತ ಹೊರತಾಗಿ ನನಗೆ ಇನ್ನೇನು ಬೇಡ ಎಂದನು. ಮಹಾವಿಷ್ಣುವು ಪ್ರಸನ್ನನಾಗಿ ಅವನಿಗೆ ಆಶೀರ್ವಾದ ಮಾಡಿದನು. ಈ ವಿಷಯ ಗುರುಗಳಿಗೆ ತಿಳಿದು ಅವರು ಸಂತೋಷಗೊಂಡು ಶಿಷ್ಯನನ್ನು ಅಪ್ಪಿಕೊಂಡರು. ಶಿಷ್ಯನಿಗೆ ಆಶೀರ್ವಾದ ಮಾಡುತ್ತಾ, ವತ್ಸ ನೀನು ಎಲ್ಲಾ ಶಿಷ್ಯರಿಗಿಂತ ಸರ್ವಶ್ರೇಷ್ಠ ಶಿಷ್ಯನಾಗಿರುವೆ ನಿನಗೆ ಎಲ್ಲಾ ಸಿದ್ಧಿಗಳು ಪ್ರಾಪ್ತವಾಗುತ್ತದೆ. ಋದ್ಧಿ -ಸಿದ್ಧಿಯು ನಿನ್ನ ಹೃದಯದಲ್ಲಿ ವಾಸ ಮಾಡುವನು ಎಂದು ಆಶೀರ್ವಾದ ಮಾಡಿದರು. ಆಗ ಶಿಷ್ಯನು ಗುರುವರ್ಯ ಋದ್ಧಿ-ಸಿದ್ಧಿ ಗಳೆಲ್ಲವೂ ನಿಮ್ಮ ಚರಣಗಳಲ್ಲಿ ಇದೆ ನೀವು ನನ್ನನ್ನು ಅನುಗಾಲವು ಆನಂದಾವಸ್ಥೆಯಲ್ಲಿ ಇರುವಂತೆ ಆಶೀರ್ವಾದ ಮಾಡಿರಿ ಎಂದು ಬೇಡುತ್ತಾನೆ. ಆ ಕ್ಷಣವೇ ಗುರುಗಳಿಗೆ ಬಂದ ರೋಗವೆಲ್ಲವು ಶಾಶ್ವತವಾಗಿ ತೊಲಗಿ ಮೊದಲಿನಂತೆ ಕಾಂತಿಯುಕ್ತರಾಗುತ್ತಾರೆ. ಈ ರೀತಿಯಲ್ಲಿ ಗುರುಗಳು ಶಿಷ್ಯನ ,'ಸತ್ವಪರೀಕ್ಷೆ' ಮಾಡಿ ಅವನಿಗೆ ಬ್ರಹ್ಮವಿದ್ಯೆಯ ಖಜಾನೆಯನ್ನೇ ತೆರೆದು ಕೊಡುತ್ತಾರೆ.
"ಅಖಂಡ ಮಂಡಲಾಕಾರಂ, ವ್ಯಾಪ್ತಂ ಏನ ಚರಾಚರಂ !
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ !
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ