ಸುಭೀಕ್ಷವಾಗಿರುವ 'ಶೃಂಗೇರಿ' :-
ಈ ಕತೆಯನ್ನು ಮನೆಯಲ್ಲಿ ಕೇಳಿದ್ದು, ಹಾಗೂ ಸ್ವಲ್ಪ ಓದಿದ್ದೆ. ಹೆಚ್ಚುಕಡಿಮೆ ಕಥೆ ಹೀಗೆ ಇದೆ. ಸ್ವಲ್ಪ ವ್ಯತ್ಯಾಸವಿರಬಹುದು. ಒಳ್ಳೆಯ ಕಥೆ ಓದಿ.
ಇದು ರಾಮಾಯಣ ಕಾಲದಲ್ಲಿ ನಡೆದದ್ದು. ಅಯೋಧ್ಯಾ ಪತಿ ದಶರಥ ಮಹಾರಾಜನಿಗೆ, ಕೌಸಲ್ಯೆ, ಸುಮಿತ್ರೆ, ಕೈಕೆಯಿ,ಎಂಬ ಮೂರು ಪತ್ನಿಯರು. ಇವರಲ್ಲಿ ಕೌಸಲ್ಯೆಗೆ ಶ್ರೀರಾಮಚಂದ್ರ ,ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಘ್ನರು ಮತ್ತು ಕೈಕೇಯಿಗೆ ಭರತ. ಇವರು ಮಕ್ಕಳು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರೆಲ್ಲರಿಗಿಂತ ಮೊದಲು ದಶರಥ ಮತ್ತು ಕೌಸಲ್ಯೆಗೆ ಒಬ್ಬ ಮಗಳು ಇದ್ದಳು. ಇವಳ ಹೆಸರು ಶಾಂತ. ಇವಳು ನೋಡಲು ರೂಪವಂತೆ ,ವಿದ್ಯಾವಂತೆ ,ಗುಣವಂತೆ, ಹಾಗೂ ಸಕಲ ವಿದ್ಯಾ ಪಾರಂಗತೆ, ಯುದ್ಧ ಶಸ್ತ್ರ ಕಲೆಯನ್ನು ಕಲಿತಿದ್ದಳು. ಇಂಥ ಮಗಳಿದ್ದರೂ ಸಹ ದಶರಥನಿಗೆ ಏನೋ ಒಂದು ಚಿಂತೆ ಮನಸ್ಸಿನಲ್ಲಿ ಕಾಡುತ್ತಿತ್ತು. ರಾಜ್ಯಕ್ಕೆ ವಾರಸುದಾರರಿಲ್ಲ, ವಂಶೋದ್ಧಾರಕ ಗಂಡು ಮಗು ಬೇಕು ಎಂಬುದು ದಶರಥನ ಕೊರಗು. ಇದು ಮಗಳು ಶಾಂತಳಿಗೂ ತಿಳಿದಿತ್ತು. ತಾನು ಎಷ್ಟೇ ವಿದ್ಯಾವಂತೆ, ಬುದ್ಧಿವಂತೆಯಾದರೂ, ತಂದೆಗೆ ಇದು ಮುಖ್ಯವಲ್ಲ ತಾನು ಹೆಣ್ಣು ಮಗಳು, ರಾಜ್ಯಕ್ಕೆ ವಾರಸದಾರ ಮಗ ಬೇಕು. ಇದು ತಂದೆಗೆ ಬಹಳ ಮುಖ್ಯ ಎಂಬುದನ್ನು ಅರಿತಿದ್ದಳು.
ದಶರಥನು ಚಿಂತೆಯಿಂದ ಹೊರಬರಬೇಕೆಂದು, ಕುಲಗುರುಗಳಾದ ವಸಿಷ್ಟ ಮಹರ್ಷಿ ಗಳಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿ ಇದಕ್ಕೆ ಪರಿಹಾರವೇನು? ಎಂದು ಕೇಳಿದಾಗ, ವಸಿಷ್ಠರು ಪುತ್ರಕಾಮೇಷ್ಟಿ ಯಾಗ ಮಾಡಬೇಕೆಂದು ಅದನ್ನು ಋಷ್ಯಶೃಂಗ ಮುನಿಗಳು ಮಾಡಬೇಕೆಂದು ಹೇಳಿದರು. ಋಷ್ಯಶೃಂಗ ಮುನಿಗಳು ಇವರಿಗೆ 'ಮಳೆ' ಮುನಿಗಳು ಎಂಬ ಹೆಸರು ಇತ್ತು. ಏಕೆಂದರೆ, ಋಷ್ಯಶೃಂಗರು ಇರುವ ಸುತ್ತಮುತ್ತ ಅಂದರೆ ಅದೆಷ್ಟೋ ದೂರದ ತನಕವೂ ಮಳೆ ,ಬೆಳೆಗೆ ಕೊರತೆಯಿರುವುದಿಲ್ಲ ಮತ್ತೆ ಯಾವುದೇ ಅವಘಡಗಳು ಸಂಭವಿಸುವುದಿಲ್ಲ. ಇಂಥದೊಂದು ವರ ಅವರಿಗೆ ಇತ್ತು.
'ಋಷ್ಯಶೃಂಗ'. ಮುನಿಗಳ ಹಿನ್ನೆಲೆ:- ವಿಭಾಂಡಕ ಮಹರ್ಷಿಗಳು. ಕಶ್ಯಪ ಬ್ರಹ್ಮನ ಮಗ .ಇವರು ಪರಮೇಶ್ವರನಿಂದ 'ವರ' ಪಡೆಯಬೇಕೆಂದು ಘೋರ ತಪಸ್ಸನ್ನು ಆಚರಿಸುತ್ತಾರೆ. ಸಹಸ್ರಾರು ವರ್ಷಗಳ ಅವರ ತಪಸ್ಸಿನ ಫಲದ ಪ್ರಖರತೆ ಮತ್ತು ಅವರ ಶಿರಸ್ಸಿ ನಿಂದ ಬಂದ ತಪೋ ಜ್ವಾಲೆ ಪ್ರಕರವಾಗಿ ಬೆಳಗುತ್ತಾ ಲೋಕವನ್ನು ಆವರಿಸತೊಡಗಿತು. ಇದರಿಂದ ದೇವತೆಗಳು ಹೆದರಿ ಅವರ ತಪಸ್ಸು ಭಂಗ ಮಾಡಲು ದೇವೇಂದ್ರನ ಆಣತಿಯಂತೆ ' ಅಪ್ಸರೆ' ಊರ್ವಶಿಯನ್ನು ಅವರ ತಪಸ್ಸು ಕೆಡಿಸಲು ಕಳಿಸುತ್ತಾರೆ. ಆದರೆ 'ವಿಭಾಂಡಕರು' ಶಿಖರಗಳ ಮಧ್ಯೆ ಇದ್ದುದರಿಂದ, ಶಿಖರದ ಎತ್ತರಕ್ಕೆ ಹೋಗಲು ಅವರ ತಪಸ್ಸಿನ ಪ್ರಖರತೆ ಅವಳನ್ನು ತಡೆಯುತ್ತದೆ. ಹೀಗಾಗಿ ಊರ್ವಶಿಗೆ ಮೇಲೆ ಹೋಗಲು ಸಾಧ್ಯವಾಗಲಿಲ್ಲ. ಅವಳು ತುಂಗಾನದಿಯ ದಡದಲ್ಲಿ ಕುಳಿತು ಅವರಿಗಾಗಿ ಕಾಯುತ್ತಾ ಸಮಯ ಕಳೆಯುತ್ತಾಳೆ. ನಿತ್ಯದಂತೆ ಸ್ನಾನದ ಸಮಯಕ್ಕೆ ವಿಭಾಂಡಕರು ನದಿಗೆ ಬರುತ್ತಾರೆ. ಊರ್ವಶಿ ಆ ಸಮಯದಲ್ಲಿ ನದಿಯಲ್ಲಿ ಮೋಹಕವಾಗಿ ಜಲಕ್ರೀಡೆಯಾಡುತ್ತಿದ್ದಳು. ಇದನ್ನು ನೋಡಿದ ಮಹರ್ಷಿಗಳಿಗೆ ಒಂದು ಕ್ಷಣ ಮನಸ್ಸು ವಿಚಲಿತವಾಗುತ್ತದೆ. ಇದರ ಪರಿಣಾಮ ಅವರಿಂದ ವೀರ್ಯಸ್ಖಲನ ಗೊಂಡು ನದಿಯಲ್ಲಿ ಸೇರುತ್ತದೆ. ಅಪ್ಸರೆ ತನ್ನ ಕೆಲಸ ಮುಗಿಯಿತೆಂದು ಅವಳು ದೇವಲೋಕಕ್ಕೆ ಹೋದಳು. ಆ ಸಮಯಕ್ಕೆ ನೀರಡಿಕೆ ದಾಹದಿಂದ ಒಂದು ,'ಜಿಂಕೆ' ಅಲ್ಲಿಗೆ ಬರುತ್ತದೆ. ಅದು ನದಿಯ ನೀರು ಕುಡಿದಾಗ, ಅದರ ಮೂಲಕ ವಿಭಾಂಡಕ ಮಹರ್ಷಿಗಳ ರೇತಸ್ಸು ಅದರ ಹೊಟ್ಟೆ ಸೇರುತ್ತದೆ. ಜಿಂಕೆ ಗರ್ಭಧರಿಸಿ ದಿನ ತುಂಬಿದ ಮೇಲೆ ಒಂದು ಶುಭ ಮುಹೂರ್ತದಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತದೆ. ಪ್ರಾಣಿ ಸಹಜ ದಂತೆ ಅದು ಹೊರಟುಹೋಗುತ್ತದೆ.
ವಿಭಾಂಡಕರು ನಿತ್ಯದಂತೆ ಸ್ನಾನ ಮಾಡಲು ನದಿಗೆ ಬಂದಾಗ ನದೀತೀರದಲ್ಲಿ, ಮಗು ಅಳುತ್ತಿರುವ ಧ್ವನಿ ಕೇಳಿ, ಆದರ ಬಳಿ ಬಂದಾಗ, ಅವರ ದಿವ್ಯ ದೃಷ್ಟಿಗೆ ತಾವೇ ಮಗುವಿನ ತಂದೆ ಎಂದು ತಿಳಿಯುತ್ತದೆ. ಮಗು 'ಜಿಂಕೆ'ಯ ಗರ್ಭದಿಂದ ಬಂದ ಕಾರಣ, ಮತ್ತು ಮಗುವಿನ ಹಣೆಯ ಮೇಲೆ ಜಿಂಕೆಯಂತೆ ಶೃಂಗ ವಿರುತ್ತದೆ. ಹೀಗಾಗಿ ಋಷಿಮೂಲ, ಹಾಗೂ' ಶೃಂಗ 'ವಿರುವ ಕಾರಣ ಮಗುವಿಗೆ 'ಋಷ್ಯಶೃಂಗ' ನೆಂದು ನಾಮಕರಣ ಮಾಡುತ್ತಾರೆ. ವಿಭಾಂಡಕ ಮಹರ್ಷಿಗಳಿಗೆ
ತಪಸ್ಸು ಕೆಡಿಸಲು ಬಂದವಳ ಮೇಲೆ ಬಹಳ ಕೋಪ ಬರುತ್ತದೆ. ತಪಸ್ಸು ಕೆಡಿಸಿದ್ದಲ್ಲದೆ, ಮಗುವಿಗೆ ಜನ್ಮ ನೀಡಲು ಕಾರಣಳಾಗಿ ಅದನ್ನು ಹಾಗೆ ಬಿಟ್ಟು ಹೋದ ಕಾರಣ ಸ್ತ್ರೀ ಸಂಕುಲದ ಮೇಲೆ ಅವರಿಗೆ ಕೋಪ ಬಂದು ಮಗುವಿಗೆ ಸ್ತ್ರೀಯರ ನೆರಳೇ ಬೀಳಬಾರದೆಂದು, ಗಿರಿಗಳ ಸುತ್ತ ತಮ್ಮ ತಪಃಶಕ್ತಿಯಿಂದ ಬಂಧನ ಮಾಡಿ ಮಗುವನ್ನು ತಾವೇ ಆರೈಕೆ ಮಾಡಿ ಬೆಳೆಸುತ್ತಾರೆ.
ವಿಭಾಂಡಕ ಮಹರ್ಷಿಗಳ ಮಗ, ಕಶ್ಯಪ ಬ್ರಹ್ಮನ ಮೊಮ್ಮಗ ಋಷ್ಯಶೃಂಗರು ಸಕಲ ವಿದ್ಯಾ ಪಾರಂಗತರು. ದೇವ ವಾಣಿಯಂತೆ ಶೃಂಗೇರಿ ಸಮೀಪದ ಬೆಟ್ಟದ ಕೆಳಗೆ ಚಂದ್ರಮೌಳೇಶ್ವರ ನನ್ನು ಕುರಿತು ತಪಸ್ಸು ಆಚರಿಸುತ್ತಾರೆ. ಪರಮೇಶ್ವರ ಪ್ರತ್ಯಕ್ಷನಾದಾಗ, 'ನಾನು ನಿನ್ನಲ್ಲಿ ಐಕ್ಯನಾಗಬೇಕು' ಎಂದು ಕೇಳುವ ಬರದಲ್ಲಿ 'ನೀನು ನನ್ನಲ್ಲಿ ಐಕ್ಯ ನಾಗಬೇಕು' ಎಂದು ಕೇಳಿದಾಗ ಶಿವನು 'ತಥಾಸ್ತು' ಎಂದು ವರ ಕೊಡುತ್ತಾನೆ. ಮುಂದೆ ' ಚಂದ್ರಮೌಳೇಶ್ವರನು' ಋಷ್ಯಶೃಂಗ ಮಹರ್ಷಿಯಲ್ಲಿ ಐಕ್ಯನಾಗುತ್ತಾನೆ. ಋಷ್ಯಶೃಂಗರು ಮೋಡಗಳನ್ನು ಆಕರ್ಷಿಸಿ ಮಳೆ ಬರಿಸುವ ವಿಶಿಷ್ಟ ಶಕ್ತಿಯನ್ನು ಪಡೆದಿದ್ದರು. ಶಿವನಲ್ಲಿ ವರ ಕೇಳುವಾಗ ಆದ ಮಾತಿನ ವ್ಯತ್ಯಾಸದಿಂದಾಗಿ ಈ ಪ್ರದೇಶಕ್ಕೆ 'ಕಗ್ಗ' ಎಂಬ ಹೆಸರು ಬಂದಿತು. ಮುಂದೆ ಇದು 'ಕಿಗ್ಗ' ಎಂದಾಯಿತು. ಇದು ಋಷ್ಯಶೃಂಗ ಮಹರ್ಷಿಗಳ ಹಿನ್ನೆಲೆ.
,ಅಯೋಧ್ಯಾ ಪತಿ ದಶರಥ ಮಹಾರಾಜನಿಗೆ ಗಂಡು ಮಕ್ಕಳಿಲ್ಲದ ಕಾರಣ ಪುತ್ರಕಾಮೇಷ್ಠಿಯಾಗ ಮಾಡಬೇಕೆಂದು ಕುಲಗುರುಗಳು ಹೇಳಿದಾಗ ಋಷ್ಯಶೃಂಗರೇ ಯಾಗ ಮಾಡಬೇಕು. ಆದರೆ ಋಷ್ಯಶೃಂಗರು ವಿವಾಹಿತರಲ್ಲ ಹೀಗಿರುವಾಗ ಯಾಗವನ್ನು ಮಾಡುವಂತಿಲ್ಲ. ಈ ಚಿಂತೆಯಲ್ಲಿ ಮುಳುಗಿರುವ ತಂದೆಯ ಹತ್ತಿರ ಬಂದ ಮಗಳು :ಶಾಂತ' ಅಪ್ಪಾಜಿ ನಾನು ಋಷ್ಯಶೃಂಗರನ್ನು ಮದುವೆಯಾಗುವೆ ಎಂದಳು. ಈ ಮಾತನ್ನು ಕೇಳಿ ದಶರಥನು ಹೌಹಾರಿದನು.
ತಾಯಿ ಕೌಸಲ್ಯ ಚಡಪಡಿಸಿದಳು. ಆದರೆ ಮಗಳು ಶಾಂತ ಮಾತ್ರ ನಿರ್ಧಾರದ ಧ್ವನಿಯಲ್ಲಿ ಹೇಳಿದ್ದಳು. ದಶರಥನ ಒಳಮನಸ್ಸು ಇದಕ್ಕೆ ಒಪ್ಪಿತ್ತು. ಆದರೆ ಋಷ್ಯಶೃಂಗರು ಹುಟ್ಟಿದಾಗಿನಿಂದ ಇಂದಿನ ತನಕವೂ ಸ್ತ್ರೀಯರ ಮುಖವನ್ನೇ ನೋಡಿಲ್ಲ. ಅಲ್ಲದೆ ಮಹಾ ತಪಃಶಕ್ತಿ ಉಳ್ಳವರು. ಆ ಬೆಟ್ಟ-ಗುಡ್ಡಗಳ ನಡುವೆ ಅವರನ್ನು ಕಾಣಲು ಕೆಲವು ಮಹಿಳೆಯರು ಹೋದವರು ತಿರುಗಿ ಬಂದ ಉದಾಹರಣೆಯೇ ಇರಲಿಲ್ಲ. ಹೀಗಿರುವಾಗ ಇವರ ಹತ್ತಿರ ಹೋಗುವುದೆಂದು, ಆಗುವುದೆಂದು, ಎಂದು ಮತ್ತೆ ಚಿಂತೆ ಶುರುವಾಯಿತು.
ಒಮ್ಮೆ ವಿಭಾಂಡಕ ಮಹರ್ಷಿಗಳು, ಋಷ್ಯಶೃಂಗರ ನ್ನು ಬಿಟ್ಟು ಸ್ವಲ್ಪ ದಿನಗಳಿಗೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೀರ್ಥಯಾತ್ರೆ ಹೊರಟರು. ಇಂತಹ ಒಂದು ಅವಕಾಶವನ್ನು ದಶರಥನು ಬಳಸಿಕೊಂಡು ಅನೇಕ ಸ್ತ್ರೀಯರನ್ನು ಶೃಂಗಗಿರಿ ಪ್ರದೇಶಗಳ ಹತ್ತಿರ ಸಂಚರಿಸಲು ಬಿಟ್ಟನು. ಋಷ್ಯಶೃಂಗರು ಒಮ್ಮೊಮ್ಮೆ ಇವರನ್ನು ಕಾಣುವಂತಾಯಿತು. ಇದುವರೆಗೂ ನೋಡಿರದ ಸ್ತ್ರೀ ಮುಖವನ್ನು ನೋಡಿದಾಗ ಅವರಲ್ಲಿ ಏನೋ ಅಪ್ಯಾಯತೆ ಮೂಡಿತು. ಮತ್ತೆ ಕೆಲವು ದಿನಗಳಲ್ಲಿ ಹಣ್ಣು-ಹಂಪಲು ತಿಂಡಿ ಗಳನ್ನು ಕೊಡಲು ಬರುತ್ತಿದ್ದರು. ಈ ಸಮಯ ಸಾಧಿಸಿ ದಶರಥನು ಮಗಳು ಶಾಂತಾಳ ಸಮೇತ ಅವರನ್ನು
ನೋಡಲು ಬಂದನು. ಇದೇ ತರಹ ಒಂದೆರಡು ಸಲಹ ರಾಜನೇ ಸ್ವತಹ ಬಂದು ಅವರಿಗೆ ಏನಾದರೂ ಅನುಕೂಲತೆಗಳು ಬೇಕಿದ್ದರೆ ತಿಳಿಸಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದನು. ಹಾಗೆಯೇ ಒಂದು ದಿನ, ನಿಮ್ಮ ಸೇವೆ ಮಾಡಲು ನನ್ನ ಮಗಳನ್ನು ಇಲ್ಲಿ ಬಿಡುತ್ತೇನೆ ಎಂದನು. ಈ ರೀತಿಯಾಗಿ ಸೇವೆಗೆ ನಿಂತ ಮಗಳು ಶಾಂತಾ ಋಷ್ಯಶೃಂಗರ ಸೇವೆಯಲ್ಲೇ ನಿರತಳಾದಳು. ಕೆಲವೇ ದಿನಗಳಲ್ಲಿ ಋಷ್ಯಶೃಂಗರಿಗೆ ಶಾಂತಾಳ ನಿಷ್ಕಲ್ಮಶ ಸೇವೆ ನೋಡಿ ಬಹಳ ಸಂತೋಷವಾಯಿತು. ಅರಮನೆಯಲ್ಲಿ ಹುಟ್ಟಿ ಬೆಳೆದವವಳಾದರೂ ಋಷಿಮುನಿಗಳ ಪರ್ಣಕುಟೀರಕ್ಕೆ ತಕ್ಕಂತೆ, ಅವರ ಅನುಷ್ಠಾನಗಳಿಗೆ ಹೊಂದಿಕೆಯಾಗುವಂತೆ ನಡೆದುಕೊಂಡುದನ್ನು ಬಹಳವಾಗಿ ಮೆಚ್ಚಿಕೊಂಡರು.
ಮತ್ತೆ ದಶರಥನು ಋಶ್ಯ ಶೃಂಗ ರಿದ್ದಲ್ಲಿಗೆ ಬಂದು, ನನ್ನ ಮಗಳ ಸೇವೆಯಲ್ಲಿ ಏನಾದರೂ ಲೋಪವಾಯಿತೇ ಎಂದು ವಿನಮ್ರತೆಯಿಂದ ಕೇಳಿದನು. ಋಷ್ಯಶೃಂಗರು "ಮಹಾರಾಜ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸೇವೆ ಮಾಡಿದ್ದಾಳೆ. ನಮ್ಮ ಮನಸ್ಸಿಗೆ ಸಮಾಧಾನ ತಂದಿದೆ. ನೀವು ನನ್ನಲ್ಲಿ ಏನು ವರ ಬೇಕು ಕೇಳಿಕೊಳ್ಳಬಹುದು" ಎಂದರು. ದಶರಥನ ಮಹರ್ಷಿಗಳೇ ನನ್ನ ಮಗಳು ಶಾಂತಾಳನ್ನು ನೀವು ವಿವಾಹ ಮಾಡಿಕೊಂಡು ನಮ್ಮ ಅರಮನೆಯಲ್ಲಿ ಪುತ್ರಕಾಮೇಷ್ಟಿ ಯಾಗವನ್ನು ನಡೆಸಿಕೊಡಬೇಕು. ಹಾಗೂ ಈ ಸುತ್ತಮುತ್ತ ಪ್ರದೇಶಗಳಲ್ಲಿ ಅಂದರೆ ನಲವತ್ತು ಗಾವುಗ ದೂರದವರೆಗೂ ಅತಿವೃಷ್ಟಿ-ಅನಾವೃಷ್ಟಿ ಎಂದೆಂದಿಗೂ ಆಗಬಾರದು ಸುಭೀಕ್ಷ ವಾಗಿರಬೇಕು. ಎಂದು ಎರಡು ವರಗಳನ್ನು ಕೇಳಿದನು. ರಾಜಕುಮಾರಿ ಶಾಂತ ಋಷ್ಯಶೃಂಗ ಮಹರ್ಷಿಗಳ ಮನಸ್ಸನ್ನು ಗೆದ್ದಿದ್ದಳು.ಮಹರ್ಷಿಗಳ ಆಶಯದಂತೆ ಋಷ್ಯಾ ಶ್ರಮದಲ್ಲಿ ಸರಳವಾಗಿ ಶಾಂತ ಮತ್ತು ಋಷ್ಯಶೃಂಗ ಮಹರ್ಷಿಗಳ ವಿವಾಹವನ್ನು. ಅರಮನೆಯ ಸ್ವಲ್ಪ ಪರಿವಾರದೊಂದಿಗೆ ಬಂದು ದಶರಥ ಮಹಾರಾಜನು ನೆರವೇರಿಸಿದನು . ದಂಪತಿ ಸಮೇತ ಅರಮನೆಗೆ ಬಂದು ಪುತ್ರಕಾಮೇಷ್ಠಿಯಾಗವನ್ನು ಪೂರೈಸಿದರು. ಆನಂತರ ರಾಮ,ಲಕ್ಷಣ ಶತ್ರುಘ್ನ, ಭರತ ಜನಿಸಿದರು,
ದಶರಥನ ಆಸೆಯು ನೆರವೇರಿತು. ಶಾಂತಾಳ ಮನಸ್ಸಿಗೂ ತೃಪ್ತಿತಯಾಯಿತು.
ಋಷ್ಯಶೃಂಗ ಮುನಿಗಳ ವಿವಾಹವೂ ನೆರವೇರಿತು. ಶೃಂಗೇರಿ ಹತ್ತಿರ ಕಿಗ್ಗ ದಲ್ಲಿರುವ ಋಷ್ಯಶೃಂಗ ಮುನಿಗಳ ದೇವಸ್ಥಾನದಲ್ಲಿ ಇರುವ ಶಿವಲಿಂಗವು ಋಷ್ಯಶೃಂಗರ ಆಶಯದಂತೆ, ಚಂದ್ರಮೌಳೇಶ್ವರನೇ ಋಷ್ಯಶೃಂಗ ರಲ್ಲಿ ಐಕ್ಯವಾಗುತ್ತಾನೆ. ಋಷ್ಯಶೃಂಗರು ಜಿಂಕೆಯ ಗರ್ಭದಲ್ಲಿ ಜನಿಸಿದ್ದರಿಂದ ಜಿಂಕೆ ಮೈಮೇಲೆ ಚಿತ್ತಾರವಿರುವಂತೆ. ಅಂದರೆ ಅಲ್ಲಿರುವ ಲಿಂಗವು, ಎಲ್ಲಾ ಕಡೆ ಇರುವ ಲಿಂಗಗಳಂತೆ ನುಣುಪಾಗಿರದೆ, ಒಂತರಾ ತರಬರಕಲಾಗಿದೆ. ಪಕ್ಕದಲ್ಲಿ ಶಾಂತಾಅಮ್ಮನವರ ಗುಡಿಯು ಇದೆ. ಮತ್ತು ದಶರಥ ಕೇಳಿದಂತೆ ಶೃಂಗೇರಿ ಸುತ್ತಮುತ್ತ 40 ಗಾವುಗದಷ್ಣು ಎಂದರೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ, ಚಿಕ್ಕಮಂಗಳೂರು ಸೇರಿದಂತೆ(ಇರಬಹುದು) ಸುತ್ತಮುತ್ತಲ ವರೆಗೆ ಆಗುತ್ತದೆ. ಇದುವರೆಗೂ ಇಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎಂದೂ ಆಗಿಲ್ಲ. ಋಷ್ಯಶೃಂಗ ಮಹರ್ಷಿಗಳ ಆಶೀರ್ವಾದದ ವರದಿಂದ ಮಳೆ-ಬೆಳೆ, ನೀರಿಗೂ ಕೊರತೆಯಾಗಿಲ್ಲ ಎಂಬುದು ಬಹಳಷ್ಟು ಜನರ ಮನಸ್ಸಿನಲ್ಲಿ ಇಂದಿಗೂ ಬೇರೂರಿದೆ.
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣ ನಯನಜಂ ವಾ ಮಾನಸಂ ವಾಪರಾಧಂ !
ವಿಹಿತಮವಿಹಿತಂ ನಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ!
ಕರುಣಾಸಾಗರ ಮಹಾದೇವನಾದ ಶಂಭುವೇ, ಕೈ ಕಾಲು, ಮಾತು, ದೇಹ ಕರ್ಮಗಳಿಂದಾಗಲಿ - ಕಿವಿ, ಕಣ್ಣು ಮನಸ್ಸಿನಿಂದಾಗಲೀ, ತಿಳಿದೋ ತಿಳಿಯದೆಯೋ ನಾನು ಮಾಡಿದ ಎಲ್ಲಾ ಅಪರಾಧಗಳನ್ನು ಕ್ಷಮಿಸು.
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ