ಮುಟ್ಟಿದರೆ ಲೋಳೆ ಅಂದೆನಿಸುವ ತಕ್ಷಣ ತಂಪನೆಯ ಅನುಭವ ನೀಡುವ ಲೋಳೆಸರ ಸೌಂದರ‌್ಯ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಆಯುರ್ವೇದದಲ್ಲಿ ಬೇಡಿಕೆಯಿರುವ ಲೋಳೆಸರ ಗಿಡದಲ್ಲಿ ಅಮಿನೊ ಆಸಿಡ್, ವಿಟಮಿನ್‌ಗಳಾದ ಎ, ಎಫ್, ಸಿ ಮತ್ತು ಬಿ ಗಳಿರುತ್ತವೆ. ಲೋಳೆಸರದ ಎಲೆಯಲ್ಲಿ ಸಿಗುವ ಅಂಟು ರೀತಿಯ ಹೇರಳವಾದ ದ್ರವವನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟು ಗಾಯವಾದ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು, ಉರಿ ಸ್ವಲ್ಪ ಹೊತ್ತಿನಲ್ಲಿಯೇ ಕಡಿಮೆಯಾಗುತ್ತದೆ. ತ್ವಚೆಯ ನಾನಾ ಸಮಸ್ಯೆಗಳಿಗೆ ಇದು ರಾಮಬಾಣ.
ತ್ವಚೆಯ ರಕ್ಷಣೆಯಲ್ಲಿ ಲೋಳೆಸರ ಅತ್ಯಂತ ಉಪಕಾರಿ. ಮುಖದ ಮೇಲೆ ನೆರಿಗೆ, ಕಪ್ಪು ಕಲೆ, ಮೊಡವೆ ಕಾಣಿಸಿಕೊಂಡಲ್ಲಿ ಲೋಳೆಸರದ ಜೆಲ್‌ನ್ನು ಒಂದು ತಿಂಗಳವರೆಗೆ ಹಚ್ಚುತ್ತಾ ಬಂದರೆ ಕಲೆ, ಸುಕ್ಕುಗುಟ್ಟುವಿಕೆ ಮಾಯವಾಗಿ ಹೊಸ ಕಾಂತಿ ಬರುತ್ತದೆ.
ಒಣ ಚರ್ಮದವರಿಗೆ ಲೋಳೆಸರದ ಜೆಲ್ ಉತ್ತಮ. ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟ ನಂತರ ಮುಖ ತೊಳೆದುಕೊಂಡು ಆಮೇಲೆ ಮೇಕಪ್ ಮಾಡಿಕೊಳ್ಳಬೇಕು.
ಪುರುಷರು ಶೇವ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗಾಯಗಳಾದರೆ ಲೋಳೆಸರವನ್ನು ಹಚ್ಚಿಕೊಂಡರೆ ನೋವು, ಗಾಯ, ರಕ್ತ ಬರುವುದು ನಿಲ್ಲುತ್ತದೆ.
ಚಳಿಗಾಲದಲ್ಲಿ ಚರ್ಮ ಒಡೆಯುವುದು, ಒಣಗುವುದು ಸಾಮಾನ್ಯ. ಆಗ ಲೋಳೆಸರದ ದ್ರವವನ್ನು ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆದರೆ ಮುಖ ಕಾಂತಿಯುಕ್ತವಾಗುತ್ತದೆ.
ದೇಹದಲ್ಲಿ ಕೊಬ್ಬು ಸಂಗ್ರಹವಾದಾಗ ಇಲ್ಲವೇ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಭಾಗದಲ್ಲಿ ಗೆರೆಗಳು ಉಂಟಾದರೆ ಆ ಭಾಗದಲ್ಲಿ ನಿತ್ಯವೂ ಲೋಳೆಸರದ ರಸ ಹಚ್ಚಿದರೆ ಕೆಲ ದಿನಗಳಲ್ಲಿ ಗೆರೆಗಳು ಮಾಯವಾಗುತ್ತದೆ.
ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ತಿಂದರೆ ಸಮಸ್ಯೆ ಕಡಿಮೆಯಾಗುತ್ತದೆ.
1.ಕೂದಲ ಆರೈಕೆ: ಲೋಳೆಸರದ ರಸವನ್ನು ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿಕೊಂಡು 10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಇದರಿಂದ ಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದು ನಿಂತು, ಬೆಳವಣಿಗೆ ಹೆಚ್ಚಿ ಕೂದಲಿಗೆ ಹೊಳಪು ನೀಡುತ್ತದೆ.
2.ಮುಖದ ಕಾಂತಿ: ಲೋಳೆಸರದ ರಸವನ್ನು ಮುಖಕ್ಕೆ ವಾರಕ್ಕೊಂದು ಬಾರಿ ಹಚ್ಚಿ 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
3.ಚರ್ಮರೋಗ: ಒಣ ಚರ್ಮ ಇದ್ದವರು ಲೋಳೆಸರದ ರಸವನ್ನು ಅರಿಶಿನದ ಜೊತೆ ಸೇರಿಸಿ ದಿನಕ್ಕೆರಡು ಬಾರಿ ಹಚ್ಚಬೇಕು; 1/2 ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
4.ಸುಟ್ಟ ಗಾಯ: ಸುಟ್ಟಗಾಯಕ್ಕೆ ತಕ್ಷಣ ಲೋಳೆಸರವನ್ನು ಹಚ್ಚುವುದರಿಂದ ಉರಿ ಬೇಗ ಕಡಿಮೆಯಾಗುತ್ತದೆ.
5.ಕೈಕಾಲು ಉರಿ: ಮಧುಮೇಹ ರೋಗಿಗಳಲ್ಲಿ ಲೋಳೆಸರದ ರಸವನ್ನು ಪಾದಗಳಿಗೆ ಹಾಗೂ ಅಂಗೈಗೆ ಹಚ್ಚಿಕೊಂಡಲ್ಲಿ ಉರಿ ನಿವಾರಣೆಯಾಗುತ್ತದೆ. ಶೀತ ಉಂಟಾಗುವ ಸಂಭವವಿರುವುದರಿಂದ, ಇದನ್ನು ರಾತ್ರಿಯ ಬದಲು ಮಧ್ಯಾಹ್ನದ ವೇಳೆ ಹಚ್ಚುವುದು ಸೂಕ್ತ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ