ಪ್ರಯಾಣದ ವೇಳೆ ವಾಂತಿ ಮಾಡಿಕೊಳ್ಳುವುದು ನಿಮಗಷ್ಟೇ ಅಲ್ಲ, ನಮ್ಮ ಹಿಂದೆ, ಮುಂದೆ ಕೂತವರಿಗೂ ಕಿರಿಕಿರಿ. ಮುಂದಿನ ಸೀಟಿನಲ್ಲಿ ಕೂತ ವ್ಯಕ್ತಿ ವಾಂತಿ ಮಾಡಿಕೊಂಡರೆ ಕೆಲವೊಮ್ಮೆ ಹಿಂದಿನ ಸೀಟಿನವರಿಗೂ ಅದರ ಅನುಭವ ಆಗುವುದುಂಟು. ಇಂಥ ಕಿರಿಕಿರಿಯ ವಾಂತಿಯಿಂದ ಬಚಾವಾಗಲೆಂದೇ ಒಂದಷ್ಟು ಟಿಪ್ಸ್‌ಗಳನ್ನು ಇಲ್ಲಿ ಕೊಡಲಾಗಿದೆ.
- ನೀವು ಪ್ರಯಾಣಕ್ಕೆ ಆಯ್ದುಕೊಳ್ಳುವ ವಾಹನ, ಸೀಟು ಕಿರಿಕಿರಿಯೆನಿಸದಂತಿರಲಿ. ಆದಷ್ಟು ಪ್ರಯಾಣದ ವೇಳೆ ರಿಲ್ಯಾಕ್ಸ್ ಆಗಿ ಕುಳಿತುಕೊಳ್ಳಿ. ದೀರ್ಘ ಪ್ರಯಾಣದ ವೇಳೆ ನಿಮ್ಮ ದೇಹಕ್ಕೆ ಹೆಚ್ಚು ದಣಿವಾಗದಂತೆ ನೋಡಿಕೊಳ್ಳಿ.
- ಅಲರ್ಜಿಯ ಸಮಸ್ಯೆ ಇರುವವರು ಆದಷ್ಟು ಮುನ್ನೆಚ್ಚರಿಕೆ ವಹಿಸುವುದು ಒಳಿತು.
- ವಾಂತಿಯ ಲಕ್ಷಣ ಕಂಡು ಬಂದ ಕೂಡಲೇ ತಾಜಾ ನಿಂಬೆ ಹಣ್ಣನ್ನು ತುಂಡರಿಸಿ ಅದರ ಪರಿಮಳವನ್ನು ಆಘ್ರಾಣಿಸಿ. ಅಥವಾ ಪ್ರಯಾಣದ ವೇಳೆ ಲಿಂಬೆ ನೀರನ್ನು ಬಾಟಲಿಯಲ್ಲಿಟ್ಟುಕೊಳ್ಳಿ. ವಾಂತಿಯ ಸೂಚನೆ ಸಿಕ್ಕ ತಕ್ಷಣ ಸೇವಿಸಿ.
- ವಾಂತಿ ಸಮಸ್ಯೆ ಇರುವವರು ಪ್ರಯಾಣಕ್ಕೆ ಬಸ್‌ಗಿಂತ ರೈಲನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ. ಗುಂಡಿಗಳಿಂದ ಕೂಡಿದ ಅಥವಾ ಘಾಟ್‌ನಂಥ ತಿರುವಿನ ರಸ್ತೆಯ ಪ್ರಯಾಣದ ವೇಳೆ ಹೆಚ್ಚಿನವರಿಗೆ ವಾಂತಿಯ ಲಕ್ಷಣ ಕಾಣಿಸಿಕೊಳ್ಳುತ್ತದೆ. ರೈಲು ಪ್ರಯಾಣದಲ್ಲಿ ಇಂಥ ಸಮಸ್ಯೆಗಳಿರುವುದಿಲ್ಲ.
- ಪ್ರಯಾಣಕ್ಕೂ ಮುನ್ನ ಮಿತಿಮೀರಿ ತಿನ್ನಬೇಡಿ. ಜಂಕ್ ಆಹಾರಗಳನ್ನೂ ಸೇವಿಸಬೇಡಿ. ಸಾಧ್ಯವಾದಷ್ಟು ಪ್ರಯಾಣಕ್ಕೆ ಎರಡು ಗಂಟೆ ಮೊದಲು ಊಟ ಮುಗಿಸಿ. ಇದು ತಿಂದ ಆಹಾರ ಜೀರ್ಣವಾಗಲು ಒಂದಷ್ಟು ಅವಕಾಶ ಮಾಡಿಕೊಡುತ್ತದೆ.
- ದೂರದ ಪ್ರಯಾಣ ಮಾಡುತ್ತಿದ್ದರೆ ವೈದ್ಯರ ಸಲಹೆ
ಪಡೆದು ವಾಂತಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾತ್ರೆ ತೆಗೆದುಕೊಳ್ಳಿ.
- ಕೆಲವು ವಾಹನಗಳಲ್ಲಿ ಹಿಮ್ಮುಖ ಸೀಟುಗಳಿರುತ್ತವೆ. ಅನೇಕರಿಗೆ ಇಂಥ ಸೀಟುಗಳಲ್ಲಿ ಕೂತರೆ ಕಿರಿಕಿರಿ ಆಗಿ ವಾಂತಿ ಆಗುವುದುಂಟು. ಇಂಥವರು ಆದಷ್ಟು ಈ ರೀತಿಯ ಸೀಟುಗಳಲ್ಲಿ ಕೂರದಿರುವುದೇ ಒಳಿತು.
- ಶುಂಠಿ ಮತ್ತು ಜೇನುತುಪ್ಪ ವಾಂತಿಯನ್ನು ನಿಯಂತ್ರಿಸುವ ಅತ್ಯುತ್ತಮ ಮನೆ ಮದ್ದಾಗಿದೆ. ಸಾಧ್ಯವಿದ್ದರೆ ಶುಂಠಿ ಮಿಶ್ರಿತ ಚಹಾವನ್ನು ಸೇವಿಸಬಹುದು. ಇದಕ್ಕೆ ಜೇನುತುಪ್ಪವನ್ನೂ ಸೇರಿಸಬಹುದು. ಇದು ಸಾಧ್ಯವಾಗದಿದ್ದರೆ ಸಣ್ಣದೊಂದು ಶುಂಠಿ ಚೂರನ್ನು ಬ್ಯಾಗಿನಲ್ಲಿಟ್ಟುಕೊಳ್ಳಿ. ಪ್ರಯಾಣದ ವೇಳೆ ಇದನ್ನು ಬಾಯಿಗೆ ಹಾಕಿಕೊಳ್ಳಿ.
- ಪ್ರಯಾಣದ ವೇಳೆ ಏನೋ ಕಿರಿಕಿರಿ ಅನಿಸುತ್ತದೆಯಾ? ಕಣ್ಣು ಮುಚ್ಚಿ ನಿದ್ರಿಸಲು ಪ್ರಯತ್ನಿಸಿ. ಇದರಿಂದ ವಾಂತಿಯನ್ನು ನಿಯಂತ್ರಿಸಬಹುದು.
- ಪ್ರಯಾಣದ ಮೊದಲು ಹೊಟ್ಟೆತುಂಬ ಮಾಂಸಾಹಾರ ಸೇವಿಸುವುದು ಒಳ್ಳೆಯದಲ್ಲ. ಯಾಕೆಂದರೆ ಮಾಂಸಾಹಾರ ಜೀರ್ಣವಾಗಲು 72 ಗಂಟೆ ಬೇಕಾಗುತ್ತದೆ.
- ಆದಷ್ಟು ಶುದ್ಧ ನೀರು, ಶುದ್ಧ ಆಹಾರ ಸೇವಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ