ಸಾಂಪ್ರದಾಯಿಕ ಹಾಗೂ ಔಷಧಿ ಮೌಲ್ಯಗಳಿರುವ ಕಾಡುಗೆರು ಮರ ಕೇವಲ ಕಾಡುಗಳಲ್ಲಿ ಮಾತ್ರವೇ ಕಂಡು ಬರುವ ವೃಕ್ಷವಾಗಿದೆ. ಅನಕಾರ್ಡಿಎಸಿಯೇ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಸೆಮಿಕಾರ್ಪಸ್ ಅನಕಾರ್ಡಿಯಮ್ ಸಂಸ್ಕ್ರುತದಲ್ಲಿ ಅಗ್ನಿಮುಖ ಆಹ್ವಲ ಅಂತಸತ್ವ ಎಂದು ಕರೆಯುವ ಈ ವೃಕ್ಷವನ್ನು ಕನ್ನಡದಲ್ಲಿ ಕಾಡುಗೆರು ಗುಡ್ಡೆಗೆರು ಕಾಡುಗೋಡುಂಬೆಮರ ಎಂದರೆ ಆಂಗ್ಲಭಾಷೆಯಲ್ಲಿ ಇಂಡಿಯನ್ ನಟ್ ಟ್ರಿ ಮಾರ್ಕಿಂಗ್ ನಟ್ ಟ್ರಿ ದೊಬಿ ನಟ್ ಟ್ರಿ ಮಲಕಾಬಿನ್ ಮರೆನಿನಟ್ ವಾರ್ನೆಸ್ಟ್ ಟ್ರಿ ಮುಂತಾದ ಹೆಸರುಗಳಿವೆ. ಈ ವೃಕ್ಷದ ಮೂಲ ಭಾರತವೇ ಆಗಿದ್ದು ಭಾರತ ಮಲೇಷಿಯಾ ಚೀನಾ ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.
ಮಧ್ಯಮ ಪ್ರಮಾಣದ ಕಾಡುಗಳಲ್ಲಿ ಕಂಡುಬರುವ ಕಾಡುಗೆರುಮರ ಒರಿಯಂಟಲ್ ಕ್ಯಾಶುನೆಟ್ ಜಾತಿಗೆ ಸೇರಿದ ವೃಕ್ಷವಾಗಿದ್ದು ಸುಮಾರು 45 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಮರವಾಗಿದ್ದು ಮಾಸಲು ಬಿಳಿ ಬಣ್ಣದ ತೊಗಟೆಗಳಿಂದ ಕೂಡಿದ್ದು 30 ಸೆಂಟಿಮೀಟರ್ ಉದ್ದ ಹಾಗೂ 18 ಸೆಂಟಿಮೀಟರ್ ಅಗಲವಾದ ಅಂಡಾಕಾರದ ದೊಡ್ಡ ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ. ಮೇ ಹಾಗೂ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಬಿಳಿಯ 5 ದಳಗಳಿಂದ ಕುಡಿದ ಪುಟ್ಟದಾದ ನಕ್ಷತ್ರಾಕಾರದ ಹೂವುಗಳಿರುತ್ತವೆ. ಡಿಸೆಂಬರ್ ಮಾರ್ಚ್ ತಿಂಗಳ ಅವಧಿಯಲ್ಲಿ ಹಣ್ಣುಗಳಾಗುತ್ತವೆ. ಹಣ್ಣಿನ ಕೆಳಭಾಗದಲ್ಲಿ ಕಪ್ಪು ಬೀಜಗಳಿರುತ್ತವೆ. ಫೆನಾಲಿಕ್ ಸ್ಟಿರಾಲ್ಸ್ ಗ್ಲೈಕೋಸೈಡ್ಸ್ ಸ್ಟ್ಯಾನಿನ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ಕಾಡುಗೆರುಮರದ ಹಣ್ಣು ಬೀಜಗಳು ಹಾಗೂ ಮರದ ಅಂಟನ್ನು ಆಯುರ್ವೇದ ಸಾಂಪ್ರದಾಯಿಕ ಹೋಮಿಯೋಪತಿ ಯುನಾನಿ ಹಾಗೂ ಸಿಧ್ದವೈದ್ಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ.
ಹಿಂದಿನ ಕಾಲದಲ್ಲಿ ಅಗಸರು ಬಟ್ಟೆ ಗುರುತಿಸಲು ಈ ಮರದ ಹಣ್ಣುಗಳನ್ನು ಬಳಸುತ್ತಿದ್ದರಿಂದ ಈ ಮರವನ್ನು ಧೋಬಿನೇಟ್ ಟ್ರಿ ಎಂದು ಕೂಡ ಕರೆಯುತ್ತಿದ್ದರು ಇದರ ಹಣ್ಣು ಹಾಗೂ ಬೀಜಗಳಿಂದ ತಯಾರಾದ ಬಣ್ಣವೂ ಜಲನಿರೋಧಕ ಗುಣಗಳಿಂದ ಕೂಡಿದ್ದು ಅಗಸರು ಅಲ್ಲದೆ ಇಂದಿಗೂ ಚುನಾವಣೆಗಳಲ್ಲಿ ಬೆರಳಿಗೆ ಹಾಕಲಾಗುವ ಬಣ್ಣವನ್ನು ಈ ಮರದ ಹಣ್ಣು ಹಾಗೂ ಬೀಜಗಳಿಂದ ತಯಾರಿಸಲಾಗುತ್ತದೆ. ಆಯುರ್ವೇದದಲ್ಲಿ ಕಫ ನಿವಾರಿಸಲು ಬಳಸುವ ಈ ಕಾಡುಗೆರನ್ನು ಲೈಂಗಿಕ ಶಕ್ತಿ ಹೆಚ್ಚಿಸಲು ಹೃದಯ ಉಸಿರಾಟದ ತೊಂದರೆ ಕ್ಯಾನ್ಸರ್ ರಕ್ತದೊತ್ತಡ ನರಗಳ ಅಸ್ವಸ್ಥತೆಗಳ ಜೊತೆಗೆ ಮಹಿಳೆಯರಿಗೆ ಜನನ ನಿಯಂತ್ರಣಕ್ಕಾಗಿಯೂ ಸಹ ಬಳಸಲಾಗುತ್ತದೆ.
ಇದರ ಹಣ್ಣು ತಿನ್ನುವುದರಿಂದ ಕಾಮೋತ್ತೇಜನ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದರ ಬೀಜಗಳಿಂದ ತಯಾರಿಸಲಾಗುವ ಎಣ್ಣೆಯನ್ನು ಮಂಡಿ ಹಾಗೂ ಬೆನ್ನುನೋವು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದರ ಗಂಭೀರವಾದ ಅಡ್ಡಪರಿಣಾಮ ಇಲ್ಲದಿದ್ದರೂ ಕೂಡ ಶುದ್ಧಿಕರಣಗೊಳಿಸದ ಇದರ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುವುದು ಹಲವರಿಗೆ ಅಲರ್ಜಿ ಹಾಗೂ ಮೈಮೇಲೆ ದೊಡ್ಡ ದೊಡ್ಡ ಗುಳ್ಳೆಗಳು ಹಾಗೂ ಗಾಯಗಳನ್ನು ಮಾಡುತ್ತದೆ. ವೈದ್ಯರ ಸಲಹೆಯ ಹೊರತು ಇದರ ಉತ್ಪನ್ನಗಳನ್ನು ಬಳಸುವಂತಿಲ್ಲ ಮೂತ್ರಪಿಂಡದ ಸಮಸ್ಯೆ ಇರುವವರು ಉಷ್ಣ ಹಾಗೂ ಪಿತ್ತಪ್ರಧಾನ ಶರೀರದವರು ಗರ್ಭಿಣಿ ಹಾಗೂ ಸ್ತನ್ಯಪಾನ ಮಾಡಿಸುವ ಸ್ತ್ರೀಯರು ಇವುಗಳನ್ನು ಬಳಸುವಂತಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ